ರದ್ದುಗೊಂಡ 66ಎ ವಿಧಿಯ ಅಂಶಗಳನ್ನೇ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಮಂಡಿಸಿದ ಭಾರತ

Update: 2022-06-13 06:23 GMT

66ಎ ಪರಿಚ್ಛೇದವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತಾದರೂ ಅದು ಮಾತ್ರ ಹೋಗಲಿಲ್ಲ. ರದ್ದುಗೊಂಡ ಬಳಿಕವೂ, ವಿವಿಧ ಪೊಲೀಸ್ ಠಾಣೆಗಳಲ್ಲಿ ಮಾತ್ರವಲ್ಲ, ದೇಶಾದ್ಯಂತದ ವಿವಿಧ ವಿಚಾರಣಾ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಮೊಕದ್ದಮೆಗಳಲ್ಲೂ ಅದನ್ನು ಪ್ರಸ್ತಾಪಿಸಲಾಗಿದೆ ಎನ್ನುವುದು ಕಳೆದ ವರ್ಷ ವರದಿಯಾಗಿದೆ. ಇದು ಆಘಾತಕಾರಿ ಎಂಬುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

66ಎಗೆ ಮರುಜೀವ

ಮಾಹಿತಿ ತಂತ್ರಜ್ಞಾನ ಕಾಯ್ದೆಯ 66ಎ ವಿಧಿಯ ಮೂರು ಉಪ ವಿಭಾಗಗಳು ಮತ್ತು ಭಾರತೀಯ ನಿಯೋಗ ಮಂಡಿಸಿರುವ ಪ್ರಸ್ತಾವಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ.

ಇಲ್ಲಿರುವ ವ್ಯತ್ಯಾಸ ಒಂದೇ. 66ಎ ಪರಿಚ್ಛೇದದಲ್ಲಿ ಇಂಥ ಅಪರಾಧಗಳಿಗೆ ನಿರ್ದಿಷ್ಟ ಶಿಕ್ಷೆಯನ್ನು ವಿಧಿಸಲಾಗಿದೆ; ಭಾರತೀಯ ನಿಯೋಗದ ಪ್ರಸ್ತಾವದಲ್ಲಿ ಅವಿಲ್ಲ. 66ಎ ಪರಿಚ್ಛೇದವನ್ನು ಸುಪ್ರೀಂ ಕೋರ್ಟ್ ತೆಗೆದು ಹಾಕಿದ್ದರೂ, ಅದನ್ನು ಮರಳಿ ತರಲು ಸರಕಾರವು ನಿರಂತರವಾಗಿ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ನಿಖಿಲ್ ಪಾಹ್ವ ಹೇಳುತ್ತಾರೆ.

‘‘66ಎ ವಿಧಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಬಳಿಕವೂ, ಸರಕಾರವು ಈ ವಿಧಿಯನ್ನು ಇನ್ನೊಂದು ರೂಪದಲ್ಲಿ ಮರಳಿ ತರಲು ಬಯಸಿದೆ ಎಂಬುದಾಗಿ ವಿವಿಧ ಸಚಿವಾಲಯಗಳ ಮೂಲಗಳು ತಿಳಿಸಿವೆ ಎಂಬುದಾಗಿ 2015ರಲ್ಲಿ ಮಾಧ್ಯಮ ಗಳು ವರದಿ ಮಾಡಿದ್ದವು. ಇದನ್ನು ನಾವು ಮರೆತಿದ್ದೇವೆ’’ ಎಂದು ಹೇಳಿದರು.

‘‘ಈ ಕಾನೂನನ್ನು ಮರಳಿ ತರುವ ಉದ್ದೇಶ ಸರಕಾರಕ್ಕೆ ಹಿಂದಿನಿಂದಲೂ ಇದೆ’’ ಎಂದು ಪಾಹ್ವ ನುಡಿದರು. ‘‘ಮಾಹಿತಿ ತಂತ್ರಜ್ಞಾನ ಕಾಯ್ದೆಯ 66ಎ ವಿಧಿಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ ಮಾತ್ರಕ್ಕೆ ಸರಕಾರವು ಅದನ್ನು ಇನ್ನೊಂದು ರೂಪದಲ್ಲಿ ಮರಳಿ ತರಬಾರದೆಂದೇನೂ ಇಲ್ಲ. ಈ ಪ್ರಸ್ತಾವವು ಆ ಉದ್ದೇಶದ ಸೂಚನೆಯಾಗಿದೆ’’ ಎಂದರು

ಭಾರತೀಯ ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲಿದ್ದ ಅತ್ಯಂತ ವಿವಾದಾಸ್ಪದ 66ಎ ವಿಧಿಯನ್ನು 2015ರಲ್ಲಿ ಸುಪ್ರೀಂ ಕೋರ್ಟ್ ತೆಗೆದು ಹಾಕಿತ್ತು. ಈ ವಿಧಿ ಅಸಾಂವಿಧಾನಿಕ ಎಂಬುದಾಗಿ ಅಂದು ನ್ಯಾಯಾಲಯ ಹೇಳಿತ್ತು. ಈಗ ವಿಯೆನ್ನಾದಲ್ಲಿ ನಡೆಯುತ್ತಿರುವ ಸೈಬರ್‌ಕ್ರೈಮ್ ಕುರಿತ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಿರುವ ಭಾರತೀಯ ನಿಯೋಗವೊಂದು ಬಹುತೇಕ 66ಎ ವಿಧಿಯಂತೆಯೇ ಇರುವ ಕ್ರಮಗಳನ್ನು ಬಳಕೆಗೆ ತರಬೇಕೆಂಬ ಪ್ರಸ್ತಾವವನ್ನು ಮುಂದಿಟ್ಟಿದೆ.

‘ಕ್ರಿಮಿನಲ್ ಉದ್ದೇಶಗಳಿಗಾಗಿ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನಗಳ ಬಳಕೆಯನ್ನು ತಡೆಯುವ’ ಉದ್ದೇಶದ ವಿಶ್ವಸಂಸ್ಥೆಯ ಪ್ರಸ್ತಾಪಿತ ಒಪ್ಪಂದದ ಬಗ್ಗೆ ಚರ್ಚಿಸುವುದಕ್ಕಾಗಿ ವಿಶ್ವಸಂಸ್ಥೆಯ ಅಡ್ ಹಾಕ್ (ಹಂಗಾಮಿ) ಸಮಿತಿಯ ಎರಡನೇ ಅಧಿವೇಶನವನ್ನು ಕರೆಯಲಾಗಿತ್ತು.

ಗೃಹ, ವಿದೇಶ ವ್ಯವಹಾರಗಳು ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಗಳ ಅಧಿಕಾರಿಗಳನ್ನು ಒಳಗೊಂಡಿರುವ ಭಾರತೀಯ ನಿಯೋಗವು ತನ್ನ ಪ್ರಸ್ತಾವವನ್ನು ಮೇ 12ರಂದು ಕಳುಹಿಸಿತ್ತು. ಬುಧವಾರ ವಿಯೆನ್ನಾದಲ್ಲಿ ನಡೆದ ಸಮ್ಮೇಳನದಲ್ಲಿ ಅದನ್ನು ಮಂಡಿಸಿತು. ಆದರೆ, ಈ ಪ್ರಸ್ತಾವದ ಕೆಲವು ಅಂಶಗಳನ್ನು ಐಟಿ ಕಾಯ್ದೆಯ 66ಎ ವಿಧಿಯಿಂದ ನೇರವಾಗಿ ಎತ್ತಿದಂತಿದೆ. 66ಎ ವಿಧಿಯಲ್ಲಿದ್ದ ಪದಗಳನ್ನೇ ಪ್ರಸ್ತಾವದಲ್ಲೂ ಬಳಸಲಾಗಿದೆ.

ಆದರೆ, ಭಾರತೀಯ ಸಂವಿಧಾನದ 19(1)(ಎ) ವಿಧಿಯಡಿಯಲ್ಲಿ ಖಾತರಿಪಡಿಸಲಾದ ವಾಕ್‌ಸ್ವಾತಂತ್ರ ವನ್ನು ಉಲ್ಲಂಘಿಸುತ್ತದೆ ಎಂಬ ಕಾರಣಕ್ಕಾಗಿ ಆ ವಿಧಿಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು.

ಭಾರತೀಯ ನಿಯೋಗದ ವಿಯೆನ್ನಾ ಪ್ರಸ್ತಾವದಲ್ಲಿ 13 ಪರಿಚ್ಛೇದಗಳಿವೆ. ಆ ಪೈಕಿ ‘‘ಸಂವಹನ ಸೇವೆ ಮುಂತಾದವುಗಳ ಮೂಲಕ ಕಳುಹಿಸ ಲಾಗುವ ನಿಂದನಾತ್ಮಕ ಸಂದೇಶಗಳಿಗೆ’’ ಸಂಬಂಧಿಸಿದ ಉಪವಿಭಾಗ 4(ಡಿ)ಯು ಬಹುತೇಕ 66ಎ ಪರಿಚ್ಛೇದದ ಪಡಿಯಚ್ಚಾಗಿದೆ.

‘‘ಒಟ್ಟಾರೆ ನಿಂದನಾತ್ಮಕವಾಗಿರುವ’’ ಅಥವಾ ‘‘ಬೆದರಿಕೆಯ ಸ್ವರೂಪದ’’ ಮಾಹಿತಿ ಯನ್ನು ಅಪರಾಧವನ್ನಾಗಿಸಲು ದೇಶವೊಂದು ‘‘ಶಾಸನಾತ್ಮಕ ಕ್ರಮ’’ಗಳನ್ನು ತೆಗೆದು ಕೊಳ್ಳಬೇಕು ಎಂಬುದಾಗಿ ಭಾರತ ಸಲ್ಲಿಸಿರುವ ಪ್ರಸ್ತಾವವು ಶಿಫಾರಸು ಮಾಡುತ್ತದೆ.

ಅದೇ ರೀತಿ, ‘‘ಸಂಕಟ, ತೊಂದರೆ, ಅಪಾಯ, ಅವಮಾನ, ಗಾಯ, ಕ್ರಿಮಿನಲ್ ಬೆದರಿಕೆ, ದ್ವೇಷ, ವೈರತ್ವ ಅಥವಾ ಕೆಟ್ಟ ಭಾವನೆಯನ್ನು’’ ಉಂಟು ಮಾಡುವ ಉದ್ದೇಶ ಕ್ಕಾಗಿ ‘‘ತಪ್ಪು’’ ಮಾಹಿತಿಯನ್ನು ಕಳುಹಿಸುವುದಕ್ಕೂ ಇದು ಅನ್ವಯಿಸುತ್ತದೆ.

ಕೊನೆಯದಾಗಿ, ‘‘ಇಂಥ ಸಂದೇಶಗಳ ಮೂಲದ ಕುರಿತಂತೆ ಸಂದೇಶವನ್ನು ಸ್ವೀಕರಿಸುವವರನ್ನು ತಪ್ಪು ದಾರಿಗೆಳೆಯುವ ಅಥವಾ ವಂಚಿಸುವ ಅಥವಾ ಅವರಿಗೆ ಅನನುಕೂಲ ಉಂಟು ಮಾಡುವ ಉದ್ದೇಶದಿಂದ’’ ಕಳುಹಿಸುವ ಯಾವುದೇ ಇಲೆಕ್ಟ್ರಾನಿಕ್ ಸಂವಹನವನ್ನು ಕಾನೂನಿನಡಿ ಶಿಕ್ಷಿಸಬೇಕು ಎಂಬುದಾಗಿ ಭಾರತದ ಪ್ರಸ್ತಾವ ಹೇಳುತ್ತದೆ. ಈ ಪ್ರಸ್ತಾವದಿಂದ ಡಿಜಿಟಲ್ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ.

 ‘‘ ‘ಸಾರಾಸಗಟು ನಿಂದನಾತ್ಮಕ’ ಮುಂತಾದ ಪದಗಳು ಅಸ್ಪಷ್ಟವಾಗಿವೆ ಮತ್ತು ಅದನ್ನು ತನಗೆ ಬೇಕಾದಂತೆ ಅರ್ಥೈಸಲು ಸರಕಾರಕ್ಕೆ ಅಧಿಕಾರ ನೀಡುತ್ತದೆ. ಆ ಮೂಲಕ ಸರಕಾರವು ಅದನ್ನು ದುರುಪಯೋಗಗೊಳಿಸಬಹುದು. 66ಎ ಪರಿಚ್ಛೇದ ಜಾರಿಯಲ್ಲಿದ್ದಾಗ ಯುಪಿಎ ಸರಕಾರ ಹಾಗೆ ಮಾಡಿತ್ತು’’ ಎಂದು ಡಿಜಿಟಲ್ ಕಾರ್ಯಕರ್ತ ಹಾಗೂ ‘ಸೇವ್ ದ ಇಂಟರ್ನೆಟ್’ನ ಸಹಸಂಸ್ಥಾಪಕ ನಿಖಿಲ್ ಪಾಹ್ವ ThePrint ನೊಂದಿಗೆ ಮಾತನಾಡುತ್ತಾ ಹೇಳಿದರು.

66ಎ ಪರಿಚ್ಛೇದದಿಂದಾಗಿ ವಿವಿಧ ನಾಯಕರನ್ನು ಟೀಕಿಸುವ ತಮ್ಮ ಸಂದೇಶ ಗಳಿಗಾಗಿ ಹಲವಾರು ಕಲಾವಿದರು, ಪತ್ರಕರ್ತರು ಮತ್ತು ವಿದ್ಯಾರ್ಥಿಗಳು ಜೈಲಿಗೆ ಹೋಗಬೇಕಾಯಿತು.

ಇಲ್ಲಿ ಇನ್ನೊಂದು ವಿಷಯವನ್ನು ಗಮನಿಸಬೇಕು. 66ಎ ಪರಿಚ್ಛೇದವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತಾದರೂ ಅದು ಮಾತ್ರ ಹೋಗಲಿಲ್ಲ. ರದ್ದುಗೊಂಡ ಬಳಿಕವೂ, ವಿವಿಧ ಪೊಲೀಸ್ ಠಾಣೆಗಳಲ್ಲಿ ಮಾತ್ರವಲ್ಲ, ದೇಶಾದ್ಯಂತದ ವಿವಿಧ ವಿಚಾರಣಾ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಮೊಕದ್ದಮೆಗಳಲ್ಲೂ ಅದನ್ನು ಪ್ರಸ್ತಾಪಿಸಲಾಗಿದೆ ಎನ್ನುವುದು ಕಳೆದ ವರ್ಷ ವರದಿಯಾಗಿದೆ. ಇದು ಆಘಾತಕಾರಿ ಎಂಬುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಬಳಿಕ, ಕೇಂದ್ರ ಸರಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ವೊಂದನ್ನು ಬರೆದು 2015ರ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುವಂತೆ ಸೂಚಿಸಿತು.

ಕೃಪೆ: The Print

Writer - ಅನುಪ್ರಿಯಾ ಚಟರ್ಜಿ

contributor

Editor - ಅನುಪ್ರಿಯಾ ಚಟರ್ಜಿ

contributor

Similar News