''ಬ್ರಿಟಿಷರ ಲಾಠಿ, ಗುಂಡಿಗೆ ಹೆದರದ ಕಾಂಗ್ರೆಸ್, ನಿಮ್ಮ ಸರಕಾರಕ್ಕೆ ಹೆದರುತ್ತಾ?''

Update: 2022-06-13 10:51 GMT

ಬೆಂಗಳೂರು: ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಸರ್ಕಾರದ ಎಲ್ಲ ಸ್ವತಂತ್ರ ಸಂಸ್ಥೆಗಳನ್ನು ಅವರ ಕೈಗೊಂಬೆಗಳಾಗಿ ಮಾಡಿಕೊಳ್ಳುತ್ತಿದ್ದಾರೆ. ಅದು ರಿಸರ್ವ್‌ ಬ್ಯಾಂಕ್‌, ಸಿಎಜಿ, ಸಿಬಿಐ, ಇಡಿ, ಎನ್‌.ಎಸ್‌.ಎಸ್‌.ಒ ಇವು ಯಾವುದೇ ಇರಬಹುದು. ಈ ಎಲ್ಲ ಸಂಸ್ಥೆಗಳು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿಕೊಂಡಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಈ.ಡಿ ಹಾಗೂ ಆದಾಯ ತೆರಿಗೆ ಇಲಾಖೆಗಳನ್ನು ವಿರೋಧ ಪಕ್ಷದವರ ಮೇಲೆ ಛೂ ಬಿಡುವ ಕೆಲಸ ಮಾಡುತ್ತಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಯಾವತ್ತೂ ಕೂಡ ಸ್ವಾಯತ್ತ ಸಂಸ್ಥೆಗಳನ್ನು ಈ ರೀತಿ ದುರುಪಯೋಗ ಮಾಡಿಕೊಂಡ ಉದಾಹರಣೆಗಳಿಲ್ಲ. 

ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರಿಗೆ ಈ.ಡಿ ನೋಟಿಸ್‌ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಬಿಜೆಪಿಯ ದ್ವೇಷ ರಾಜಕಾರಣ ಖಂಡಿಸಿ ಕೆಪಿಸಿಸಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮಾತನಾಡಿದರು.

ಈ.ಡಿ, ಸಿಬಿಐ, ಐ.ಟಿ ಈ ಎಲ್ಲಾ ಸಂಸ್ಥೆಗಳು ಮೋದಿ ಅವರಿಗೆ ವಿರುದ್ಧವಾಗಿರುವವರ ಮೇಲೆ ದಾಳಿ ಮಾಡಬೇಕು, ಅವರ ಮೇಲೆ ಮೊಕದ್ದಮೆಗಳನ್ನು ಹಾಕಬೇಕಿದೆ. ಇಂದು ದೇಶದ ಪ್ರಗತಿಯ ಅಂಕಿ ಅಂಶಗಳು ಯಾರಿಗೂ ಸಿಗಬಾರದು ಎಂದು ಎನ್‌.ಎಸ್‌.ಎಸ್‌.ಒ ಅನ್ನು ನಿಷ್ಕ್ರಿಯಗೊಳಿಸಿದ್ದಾರೆ. ಯೋಜನಾ ಆಯೋಗವನ್ನು ತೆಗೆದು ಹಾಕಿ ತಮಗೆ ಬೇಕಾದಂತೆ ಕುಣಿಯುವ ನೀತಿ ಆಯೋಗವನ್ನು ರಚನೆ ಮಾಡಿದ್ದಾರೆ. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಮೇಲೆ ಸಂವಿಧಾನದ ಎಲ್ಲ ಸಂಸ್ಥೆಗಳನ್ನು ತಮ್ಮ ಕೈಗೊಂಬೆ ಮಾಡಿಕೊಂಡು, ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕಿಡಿಗಾರಿದರು. 

ರಾಹುಲ್‌ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ಮೇಲೆ ಇ.ಡಿ ಯನ್ನು ಛೂ ಬಿಟ್ಟು, ಅದರ ಮೂಲಕ ಸಮನ್ಸ್‌ ನೀಡಿ, ಸುಳ್ಳು ಮೊಕದ್ದಮೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಅವರನ್ನು ಹೆದರಿಸುವ ಕೆಲಸವನ್ನು ಮೋದಿ ಅವರು ಮಾಡುತ್ತಿದ್ದಾರೆ. ಇದಕ್ಕಾಗಿ ಇಡೀ ದೇಶದಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ, ಈ ಪ್ರತಿಭಟನೆ ನಮ್ಮ ನಾಯಕರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಲು ಮಾಡುತ್ತಿರುವುದು. ಕಾನೂನನ್ನು ತಮಗೆ ಬೇಕಾದಂತೆ ಬಳಕೆ ಮಾಡಲು ಬರಲ್ಲ. ನ್ಯಾಯ ಎಲ್ಲರಿಗೂ ಒಂದೇ ಆಗಿರಬೇಕು ಎಂದರು.

ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ದೇಶದ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಲು ಹುಟ್ಟಿಕೊಂಡ ಪತ್ರಿಕೆ. 1925 ರಲ್ಲಿ ಆರಂಭವಾದ ಆರ್‌.ಎಸ್‌.ಎಸ್‌ ನ ಹೆಡಗೆವಾರ್, ಗೋಲ್ವಾಲ್ಕರ್‌ ಅವರು ಯಾವತ್ತಾದರೂ ಸ್ವತಂತ್ರ ಹೋರಾಟದಲ್ಲಿ ಭಾಗಿಯಾಗಿದ್ದಾರ? ನಿಮಗೆ ಯಾವ ನೈತಿಕತೆ ಇದೆ? 1942 ರ ಕ್ವಿಟ್‌ ಇಂಡಿಯಾ ಚಳವಳಿ ಸಂದರ್ಭದಲ್ಲಿ ಆರ್‌.ಎಸ್‌.ಎಸ್‌ ನ ಗೋಲ್ವಾಲ್ಕರ್‌ ಹಾಗೂ ಇತರೆ ನಾಯಕರು ಬ್ರಿಟಿಷರ ಜೊತೆ ಸೇರಿ ಸಂಚು ಮಾಡಿ ಕ್ವಿಟ್‌ ಇಂಡಿಯಾ ಚಳವಳಿಯನ್ನು ಹತ್ತಿಕ್ಕಲು ಪ್ರಯತ್ನ ಮಾಡಿದ್ದರು. ದೇಶಕ್ಕೆ ಸ್ವತಂತ್ರ ತಂದು ಕೊಡಲು ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಜೊತೆಯಾಗಿ ಕಾಂಗ್ರೆಸ್‌ ನ ಅನೇಕ ನಾಯಕರು ತ್ಯಾಗ, ಬಲಿದಾನ ಮಾಡಿದ್ದಾರೆ. ಬಿಜೆಪಿಗೆ ತ್ಯಾಗದ ಅರ್ಥ ಗೊತ್ತಾ? ಬಿಜೆಪಿ, ಆರ್‌.ಎಸ್‌.ಎಸ್‌ ನೀವು ಎಂದಾದರೂ ತ್ಯಾಗ ಮಾಡಿದ್ದೀರ? ನೀವು ನಮಗೆ ದೇಶಭಕ್ತಿ ಹೇಳಿಕೊಡಲು ಬರ್ತೀರ? ನಿಮಗೆ ನಾಚಿಕೆಯಾಗಲ್ವ? ಎಂದು ಪ್ರಶ್ನಿಸಿದರು. 

''ನರೇಂದ್ರ ಮೋದಿ ಅವರಿಗೆ ರಾಜ್ಯದ ಗುತ್ತಿಗೆದಾರರ ಸಂಘದವರು ಬಿಜೆಪಿ ಸರ್ಕಾರ 40% ಕಮಿಷನ್ ಕೇಳುತ್ತಿದೆ ಎಂದು ಪತ್ರ ಬರೆದಿದ್ದರು, ಈ ಭ್ರಷ್ಟರ ಮೇಲೆ ಇಡಿ ಛೂ ಬಿಟ್ಟಿದ್ದೀರ ಮೋದಿಜೀ? ಯಾರ ಮೇಲಾದರೂ ಕೇಸ್‌ ಹಾಕಿದ್ದೀರ? ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರೇನು ಲೂಟಿ ಹೊಡೆದಿದ್ದಾರ? ಮೋದಿ ಅವರು ನಾ ಖಾವೂಂಗಾ, ನಾ ಖಾನೆದೂಂಗ ಅನ್ನೋದು ಬರೀ ಸುಳ್ಳು. ದೇಶದ ಸ್ವಾತಂತ್ರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಟ್ರಸ್ಟಿಗಳ ಮೇಲೆ ಇ.ಡಿ ಛೂ ಬಿಟ್ಟಿದೀರಲ ನಾಚಿಕೆಯಾಗಲ್ವ ನಿಮಗೆ? ಇ.ಡಿ ಮೂಲಕ ಕಾಂಗ್ರೆಸ್‌ ನಾಯಕರನ್ನು ಹೆದರಿಸಬಹುದು ಎಂದುಕೊಂಡಿದ್ದರೆ ಅದು ಸಾಧ್ಯವಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರ ಗುಂಡಿಗೆ, ಲಾಠಿ ಏಟಿಗೆ ಹೆದರದ ಕಾಂಗ್ರೆಸ್‌ ಕಾರ್ಯಕರ್ತರು ನಿಮ್ಮ ಸರ್ಕಾರಕ್ಕೆ ಹೆದರುತ್ತಾರ?'' ಎಂದು ಸಿದ್ದರಾಮಯ್ಯ  ಪ್ರಶ್ನಿಸಿದರು

''ಇಂದು ಸಾಂಕೇತಿಕವಾಗಿ ಮುಷ್ಕರ ಆರಂಭವಾಗಿದೆ. ಕಾಂಗ್ರೆಸ್‌ ನ ಕೋಟ್ಯಂತರ ಕಾರ್ಯಕರ್ತರು ಬೀದಿಗೆ ಇಳಿದು ಸರ್ಕಾರ ನಡೆಯದಂತೆ ಹೋರಾಟ ಮಾಡುತ್ತಾರೆ, ಎಲ್ಲ ಸರ್ಕಾರಿ ಕಚೇರಿಗಳನ್ನು ಬಂದ್‌ ಮಾಡಬೇಕಾಗುತ್ತದೆ. ಇಂದು ಇಡಿ ಮುತ್ತಿಗೆ ಹಾಕುತ್ತಿದ್ದೇವೆ, ಈ ಹೋರಾಟ ನಿರಂತರವಾಗಿ ನಡೆಯುತ್ತದೆ. ಈಗಾಗಲೇ ಅನೇಕ ಜನರ ಮೇಲೆ ಇ.ಡಿ ದಾಳಿ ಮಾಡಿಸಿದ್ದಾರೆ ಮತ್ತು ಇನ್ನೂ ಯಾರ ಮೇಲೆ ದಾಳಿಗೆ ಬಿಡೋದು ಎಂದು ಹುಡುಕುತ್ತಾ ಇದ್ದಾರೆ. ನಮಗೆ ಸಂವಿಧಾನ, ಸುಪ್ರೀಂ ಕೋರ್ಟ್‌, ಹೈ ಕೋರ್ಟ್‌ ಇದೆ. ಅಲ್ಲಿ ನ್ಯಾಯ ಕೇಳುತ್ತೇವೆ. ನರೇಂದ್ರ ಮೋದಿ ಅವರೇ ಕಾಂಗ್ರೆಸ್‌ ನವರನ್ನು ಹೆದರಿಸುವ ಹುಚ್ಚು ಸಾಹಸ ಬಿಡಿ, ಇಲ್ಲದಿದ್ದರೆ ನಿಮಗೆ ಕಾಂಗ್ರೆಸ್‌ ಕಾರ್ಯಕರ್ತರು ತಕ್ಕ ಶಾಸ್ತಿ ಮಾಡುತ್ತಾರೆ ಎಂಬ ಎಚ್ಚರಿಕೆ ನೀಡಲು ಬಯಸುತ್ತೇನೆ. ದೇಶದ ಆರ್ಥಿಕತೆ ಪಾತಾಳಕ್ಕಿಳಿದಿದೆ, ಭ್ರಷ್ಟಾಚಾರ ಮುಗಿಲು ಮುಟ್ಟಿದೆ, ಇದನ್ನು ಮುಚ್ಚಿಡಲು ಇ.ಡಿ ಮುಂದೆಬಿಟ್ಟು ನಮ್ಮನ್ನು ಬೆದರಿಸುತ್ತೀರ ಮೋದಿ ಅವರೇ? ನೀವು ಶಾಶ್ವತವಾಗಿ ಅಧಿಕಾರದಲ್ಲಿ ಗೂಟ ಹೊಡೆದುಕೊಂಡ ಕೂರಲು ಆಗಲ್ಲ, ಇದಕ್ಕೆ ಅವಕಾಶವನ್ನು ನಾವು ಕೊಡಲ್ಲ. ಕಾಂಗ್ರೆಸ್‌ ಪಕ್ಷ ಮತ್ತೆ ಅಧಿಕಾರಕ್ಕೆ ಬಂದು ದೇಶದ ಕಾನೂನು, ಸಂವಿಧಾನವನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತದೆ'' ಎಂದು ಭವಿಷ್ಯ ನುಡಿದರು. 

''ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರು ಒಬ್ಬಂಟಿಗರಲ್ಲ, ಅವರ ಜೊತೆ ಪಕ್ಷದ ಕೋಟ್ಯಂತರ ಕಾರ್ಯಕರ್ತರು ಇದ್ದಾರೆ. ಎಲ್ಲರ ಹಕ್ಕುಗಳನ್ನು ಕಿತ್ತುಕೊಳ್ಳಲು ಅಥವಾ ಹತ್ತಿಕ್ಕಲು ನಿಮ್ಮಿಂದ ಸಾಧ್ಯವಿಲ್ಲ. ನರೇಂದ್ರ ಮೋದಿ ಅವರೇ, ನಿಮ್ಮ ಸಂವಿಧಾನ ವಿರೋಧಿ ನಡೆಯನ್ನು ಬಿಡಿ. 2015 ರಲ್ಲಿ ಮುಕ್ತಾಯವಾದ ಕೇಸಿಗೆ ಮರು ಚಾಲನೆ ನೀಡಿದ ನಿಮ್ಮ ದ್ವೇಷ ರಾಜಕಾರಣಕ್ಕೆ ನಮ್ಮ ಧಿಕ್ಕಾರವಿದೆ. ನಾವೆಲ್ಲ ಕಲ್ಲು ಬಂಡೆಗಳಂತೆ ರಾಹುಲ್‌ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ಜೊತೆ ನಿಲ್ಲೋಣ. ಈ ಅನ್ಯಾಯವನ್ನು ಖಂಡಿಸೋಣ'' ಎಂದು ಕಾರ್ಯಕರ್ತರಿಗೆ ಸಿದ್ದರಾಮಯ್ಯ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News