×
Ad

ಮಂಗಳೂರು; ಪೊಲೀಸ್ ಅಧಿಕಾರಿಗಳ ಜತೆ ಸಭೆ: ಜಂಟಿ ಸಭೆಗೆ ಮುಸ್ಲಿಂ ಮುಖಂಡರ ಆಗ್ರಹ

Update: 2022-06-13 16:35 IST

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಶಾಂತಿ, ಸೌಹಾರ್ದತೆ ಯನ್ನು ಕಾಪಾಡುವ ನಿಟ್ಟಿನಲ್ಲಿ ಮುಖಂಡರನ್ನು ಕರೆಸಿ ಮಂಗಳೂರು ಪೊಲೀಸರು ಸಭೆ ನಡೆಸಿರುವುದು ಸಮುದಾಯದಲ್ಲಿ ವಿಶ್ವಾಸವನ್ನು ಹೆಚ್ಚಿಸಿದೆ. ಜಿಲ್ಲೆಯಲ್ಲಿ ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಎರಡೂ ಸಮುದಾಯಗಳ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರನ್ನು ಒಳಗೊಂಡ ಜಂಟಿ ಸಭೆ ನಡೆಸಲು ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸಲಾಗಿದೆ ಎಂದು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಮುಸ್ಲಿಂ ಧಾರ್ಮಿಕ ಮುಖಂಡರು ಅಭಿಪ್ರಾಯಿಸಿದ್ದಾರೆ.

ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಮುಸ್ಲಿಂ ಧಾರ್ಮಿಕ ಮುಖಂಡರ ಸಭೆಯನ್ನು ಇಂದು ಕರೆಯಲಾಗಿತ್ತು.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಸಂದೇಶಗಳು, ಒಂದು ಸಮುದಾಯವನ್ನು ತಪ್ಪು ದಾರಿಗೆ ಎಳೆಯುವ ರೀತಿಯಲ್ಲಿ ಹೇಳಿಕೆಗಳನ್ನು ಯಾರದ್ದೋ ಹೆಸರಿನಲ್ಲಿ ಇನ್ಯಾರೋ ನೀಡುತ್ತಿರುವುದು ಬೆಳಕಿಗೆ ಬಂದಿದೆ. ದೇಶದ ಕೆಲವು ಭಾಗಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿಯೂ ದೊಡ್ಡ ಮಟ್ಟದ ಪ್ರತಿಭಟನೆ ಮಾಡಬೇಕು. ಇಲ್ಲಿ ನಡೆಯುವ ಪ್ರತಿಭಟನೆ ಬೇರೆ ಕಡೆಗಳಿಗೆ ಎಚ್ಚರಿಕೆಯ ಸಂದೇಶ ನೀಡುವಂತಿರಬೇಕು ಎಂಬ ರೀತಿಯಲ್ಲಿ ಕೆಲವು ಗುಂಪುಗಳಲ್ಲಿ ಸಂದೇಶ ಹರಿದಾಡುತ್ತಿದ್ದು, ಮುಸ್ಲಿಂ ಸಮುದಾಯದ ಧಾರ್ಮಿಕ ಹಾಗೂ ಇತರ ಮುಖಂಡರು ಆತಂಕ ವ್ಯಕ್ತಪಡಿಸಿದ್ದರು.

ಆ ಹಿನ್ನೆಲೆಯಲ್ಲಿ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಧಾರ್ಮಿಕ ಹಾಗೂ ಇತರ ಮುಖಂಡರನ್ನು ಕರೆಸಿ ಸಭೆ ನಡೆಸಲಾಗಿದೆ. ಹಿಜಾಬ್, ಆಝಾನ್ ಮೊದಲಾದ ವಿಷಯಗಳ ಕುರಿತಂತೆ ಚರ್ಚೆ ನಡೆದಿದ್ದು, ಸ್ವಯಂ ಪ್ರೇರಿತರಾಗಿ ಎಲ್ಲರೂ ಶಾಂತಿ ಕಾಪಾಡಲು ಸಹಕರಿಸಿರುವ ಕುರಿತಂತೆ ಸಭೆಯಲ್ಲಿ ಮುಖಂಡರಿಗೆ ಅಭಿನಂದನೆ ಸಲ್ಲಿಸಲಾಗಿದೆ ಎಂದು ಸಭೆಯ ಬಳಿಕ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪತ್ರಕರ್ತರಿಗೆ ಮಾಹಿತಿ ನೀಡಿದರು.

ಮೂಡಬಿದ್ರೆ, ಮುಲ್ಕಿ, ಬಜ್ಪೆ, ಕೊಣಾಜೆ ಸೇರಿದಂತೆ ಎಲ್ಲಾ ಠಾಣಾ ವ್ಯಾಪ್ತಿಯ 50ಕ್ಕೂ ಅಧಿಕ ಮುಖಂಡರು ಭಾಗವಹಿಸಿದ್ದರು. ಹೆಚ್ಚಿನ ಸಂಪರ್ಕ ಸಭೆ ಮಾಡಬೇಕು. ಯಾವುದೇ ಸಮಸ್ಯೆಯನ್ನು ಹಿಡಿದು ಠಾಣೆಗೆ ಹೋದಾಗ ತ್ವರಿತವಾಗಿ ಸ್ಪಂದಿಸಬೇಕು. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಬೇಕು. ಗೊಂದಲದ ಸಂದರ್ಭ ಸಮುದಾಯ ಧಾರ್ಮಿಕ ಮುಖಂಡರನ್ನು ಕರೆಸಿ ಇಲಾಖೆಯ ಸೂಚನೆಗಳನ್ನು ಸಮುದಾಯಕ್ಕೆ ತಲುಪುವಂತೆ ಮಾಡಬೇಕು ಎಂದು ಮುಖಂಡರು ಸಭೆಯಲ್ಲಿ ಗಮನಕ್ಕೆ ತಂದಿದ್ದಾರೆ.

ಸಾಕಷ್ಟು ವಾಟ್ಸಾಪ್ ಗ್ರೂಪ್‌ಗಳು ಹಾಗೂ ಚಾಟ್‌ಗಳ ಮೇಲೆ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸ್ ಇಲಾಖೆ ಈಗಾಗಲೇ ನಿಗಾ ಇರಿಸಿದೆ. ಎಲ್ಲೋ ಕುಳಿತು ಕಳುಹಿಸಿರುವ ಸಂದೇಶಗಳಿಗೆ ಪ್ರತಿಕ್ರಿಯಿಸುವುದು, ನಗರದ ಹೆಸರಿಟ್ಟು ನಕಲಿ ಐಡಿ ಮೂಲಕ ಕೋಮು ಭಾವನೆ ಕೆರಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಪ್ರವಾದಿಯವರಿಗೆ ಅವಮಾನದ ಹಿನ್ನೆಲೆಯಲ್ಲಿ ಕೆಲವು ಸಂದೇಶಗಳನ್ನು ಹರಡಿ ಸಮಾಜದಲ್ಲಿ ಶಾಂತಿ ಕದಡುವ, ಭಾವನೆಗಳನ್ನು ಕೆರಳಿಸುವ ಪ್ರಯತ್ನಗಳಿಗೆ ಮುಂದಾಗಿರುವವರಿಗೆ ಸೊಪ್ಪು ಹಾಕದಂತೆ ಸಭೆಯಲ್ಲಿ ಮನವಿ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದರು.

ಎಡಿಜಿಪಿ ಬಂದಾಗ ಠಾಣಾ ಮಟ್ಟದಲ್ಲಿ ಯುವಕರ ಸಮಿತಿ ರಚನೆಗೆ ಸೂಚನೆ ನೀಡಿದ್ದು, ಈ ಬಗ್ಗೆ ಪ್ರಕ್ರಿಯೆಗಳು ನಡೆಯುತ್ತಿವೆ. ಈ ಸಮಿತಿಯ ಮೂಲಕ ಯುವಕರನ್ನೂ ಒಳಗೊಂಡು ಸಭೆಗಳನ್ನು ನಡೆಸಿ ಸಮಾಜದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಡಿಸಿಪಿ ಹರಿರಾಂ ಶಂಕರ್, ದಿನೇಶ್ ಕುಮಾರ್, ಎಸಿಪಿಗಳಾದ ಗೀತಾ, ಪಿ.ಎ. ಹೆಗಡೆ, ಮಂಗಳೂರು ನಗರ ವ್ಯಾಪ್ತಿಯ ಮಸೀದಿ ಜಮಾಅತ್‌ ಗಳ ಪದಾಧಿಕಾರಿಗಳು, ಧರ್ಮಗುರುಗಳು ಭಾಗವಹಿಸಿದ್ದರು.

"ಮಂಗಳೂರಿನ ಧಾರ್ಮಿಕ ಮುಖಂಡರಿಂದ ಪ್ರತಿಭಟನೆಗೆ ನಿರ್ಧಾರ, 2022ರಲ್ಲಿ ಯಾವುದೇ ಒಂದು ಪ್ರಮುಖ ಪ್ರತಿಭಟನೆ ನಡೆದಿರದ ಕಾರಣ ಎಲ್ಲಾ ಧಾರ್ಮಿಕ ಮುಖಂಡರು ಬೃಹತ್ ಪ್ರತಿಭಟನೆಗೆ ನಿರ್ಧರಿಸಿದ್ದಾರೆ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬಗ್ಗೆ ಸಭೆಯಲ್ಲಿ ನಡೆದ ಚರ್ಚೆಯ ವೇಳೆ, ಅಂತಹ ಯಾವುದೇ ನಿರ್ಧಾರ ಆಗಿಲ್ಲ, ಕರೆ ನೀಡಿಲ್ಲ.  ಆಂತರಿಕ ಚರ್ಚೆಯೂ ನಡೆದಿಲ್ಲ ಎಂದು ಎಲ್ಲಾ ಧಾರ್ಮಿಕ ಮುಖಂಡರು ಸ್ಪಷ್ಟಪಡಿಸಿದ್ದಾರೆ"

- ಎನ್. ಶಶಿಕುಮಾರ್, ಪೊಲೀಸ್ ಆಯುಕ್ತರು, ಮಂಗಳೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News