×
Ad

VIDEO- ಈ.ಡಿ ಕಚೇರಿಗೆ ಮುತ್ತಿಗೆಗೆ ಯತ್ನಿಸಿದ ಕಾಂಗ್ರೆಸ್ ನಾಯಕರು ಸೇರಿ ಹಲವರು ಪೊಲೀಸ್ ವಶಕ್ಕೆ

Update: 2022-06-13 17:43 IST

ಬೆಂಗಳೂರು, ಜೂ. 13: ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರಿಗೆ ‘ಜಾರಿ ನಿರ್ದೇಶನಾಲಯ'(ಇಡಿ) ನೋಟಿಸ್ ನೀಡಿರುವುದನ್ನು ಖಂಡಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶಾಂತಿನಗರದಲ್ಲಿನ ಇಡಿ ಕಚೇರಿಗೆ ಮುತ್ತಿಗೆ ಹಾಕಿ, ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಇಲ್ಲಿನ ಲಾಲ್‍ಬಾಗ್ ಗೇಟ್‍ನಿಂದ ಶಾಂತಿನಗರದ ಟಿಟಿಎಂಸಿ ಬಳಿಯ ಇಡಿ ಕಚೇರಿಗೆ ಕಾಲ್ನಡಿ ಮೆರವಣಿಗೆ ನಡೆಸಿದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಶಾಂತಿನಗರ ಬಸ್ ನಿಲ್ದಾಣದ ಸಿಗ್ನಲ್ ಬಳಿ ಪೊಲೀಸರು ತಡೆದರು. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ವಾಗ್ವಾದ ನಡೆಯಿತು.

ಪೊಲೀಸರು ಕೈ ನಾಯಕರು-ಕಾರ್ಯಕರ್ತರಿಗೆ ತಡೆ ಒಡ್ಡಿದರು. ಮುತ್ತಿಗೆ ಹಾಕಲು ಯತ್ನಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಶಾಸಕರಾದ ಪ್ರಿಯಾಂಕ್ ಖರ್ಗೆ, ಎನ್.ಎ.ಹಾರಿಸ್ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾದರು.

ಈ ವೇಳೆ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹಾರಿಸ್ ನಲಪಾಡ್ ಸೇರಿದಂತೆ ಹಲವು ಕಾರ್ಯಕರ್ತರು ಪ್ರತಿರೋಧ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಕಾರ್ಯಕರ್ತರು ಕೇಂದ್ರ ಬಿಜೆಪಿ ಸರಕಾರ, ಪ್ರಧಾನಿ ಮೋದಿ ವಿರುದ್ಧ ಹಾಗೂ ಜಾರಿ ನಿರ್ದೇಶನಾಲಯ ಸೇರಿದಂತೆ ಸಂವಿಧಾನಿಕ ಸಂಸ್ಥೆಗಳ ದುರ್ಬಳಕೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಬಂಡೆಗಳಂತೆ ಅವರ ಜೊತೆಗಿದ್ದೇವೆ: ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಒಬ್ಬಂಟಿಗರಲ್ಲ, ಅವರ ಜೊತೆ ಪಕ್ಷದ ಕೋಟ್ಯಂತರ ಕಾರ್ಯಕರ್ತರಿದ್ದಾರೆ. ಎಲ್ಲರ ಹಕ್ಕುಗಳನ್ನು ಕಿತ್ತುಕೊಳ್ಳಲು ಅಥವಾ ಹತ್ತಿಕ್ಕಲು ಸಾಧ್ಯವಿಲ್ಲ. ಮೋದಿ ಅವರೇ, ಸಂವಿಧಾನ ವಿರೋಧಿ ನಡೆಯನ್ನು ಬಿಡಿ. 2015ರಲ್ಲಿ ಮುಕ್ತಾಯವಾದ ಕೇಸಿಗೆ ಮರುಚಾಲನೆ ನೀಡಿದ ನಿಮ್ಮ ದ್ವೇಷ ರಾಜಕಾರಣಕ್ಕೆ ನಮ್ಮ ಧಿಕ್ಕಾರವಿದೆ. ನಾವೆಲ್ಲ ಕಲ್ಲು ಬಂಡೆಗಳಂತೆ ಸೋನಿಯಾ, ರಾಹುಲ್ ಜೊತೆಗಿದ್ದು, ಅನ್ಯಾಯವನ್ನು ಖಂಡಿಸುತ್ತೇವೆ' ಎಂದು ತಿಳಿಸಿದರು.

ಸಂಚಾರ ದಟ್ಟಣೆ: ಕಾಂಗ್ರೆಸ್ ಪ್ರತಿಭಟನೆಯಿಂದ ಡಬಲ್ ರೋಡ್, ಹೊಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು, ಸಾರ್ವಜನಿಕ ಪ್ರಯಾಣಿಕರು ಅಕ್ಷರಶಃ ಪರದಾಡುವಂತಾಯಿತು. ಸುಮಾರು ಮೂರ್ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಆ ಪ್ರದೇಶದ ಸುತ್ತಮುತ್ತ ರಸ್ತೆಗಳಲ್ಲಿ ವಾಹನ ಸಂಚಾರ ಬಂದ್ ಆಗಿತ್ತು. ಪೊಲೀಸರು ಪರ್ಯಾಯ ವ್ಯವಸ್ಥೆ ಕಲ್ಪಿಸಿದರೂ ಅಲ್ಲಿಯೂ ವಾಹನಗಳ ತೆವಳುತ್ತ ಸಾಗುತ್ತಿದ್ದ ಹಿನ್ನೆಲೆಯಲ್ಲಿ ಸವಾರರು ಕಿರಿಕಿರಿ ಅನುಭವಿಸುವಂತಾಯಿತು. 

‘ದೇಶದ ಆರ್ಥಿಕ ದುಸ್ಥಿತಿ, ಬೆಲೆ ಏರಿಕೆ, ಚೀನಾ ಅತಿಕ್ರಮಣ, ಕಾಶ್ಮೀರ ಪಂಡಿತರ ಹತ್ಯೆ ಮುಂತಾದ ಕೇಂದ್ರ ಸರಕಾರದ ಸಾಲು-ಸಾಲು ವೈಫಲ್ಯಗಳಿಂದ ಗಮನ ಬೇರೆಡೆ ಸೆಳೆಯುವುದು ಕೇಂದ್ರ ಸರಕಾರಕ್ಕೆ ಅನಿವಾರ್ಯ. ಹಾಗಾಗಿ ಪತ್ರಿಕೆಗಳ ಹೆಡ್ ಲೈನ್ ಬದಲಿಸಲು ರಾಹುಲ್ ಗಾಂಧಿ ಅವರ ವಿರುದ್ಧ ‘ಇಡಿ ಮೋರ್ಚಾ'ವನ್ನ ಮುಂದೆ ಬಿಟ್ಟಿದೆ'

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News