ರಾಷ್ಟ್ರೀಯ ಮಿಲಿಟರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ ಅಪ್ರತಿಮ: ರಾಷ್ಟ್ರಪತಿ ರಾಮನಾಥ್ ಕೋವಿಂದ್

Update: 2022-06-13 15:05 GMT
photo credit- @rashtrapatibhvn

ಬೆಂಗಳೂರು, ಜೂ. 13: ‘ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶದ ಮಿಲಿಟರಿ ಅಧಿಕಾರಿಗಳು, ನ್ಯಾಯಾಧೀಶರು, ರಾಜಕಾರಣಿಗಳು, ಕ್ರೀಡಾಪಟುಗಳು, ಆಡಳಿತ ಸೇವೆ ಅಧಿಕಾರಿಗಳು ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ' ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದಿಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದ ರಾಷ್ಟ್ರೀಯ ಮಿಲಿಟರಿ ಶಾಲೆಯ ಅಮೃತ ಮಹೋತ್ಸವ ಆಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ‘1946ರಲ್ಲಿ ಕಿಂಗ್ ಜಾರ್ಜ್ ಈ ಶಾಲೆಯನ್ನು ಪ್ರಾರಂಭಿಸಿದರು. 2008ರಲ್ಲಿ ಇದು ರಾಷ್ಟ್ರೀಯ ಮಿಲಿಟರಿ ಶಾಲೆಯಾಗಿ ನಾಮಕರಣಗೊಂಡಿತು. ಭಾರತದ ಮೊದಲ ಕಮಾಂಡರ್ ಇನ್ ಚೀಫ್ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕೆ.ಎಂ. ಅವರು ಈ ಶಾಲೆಯ ವಿದ್ಯಾರ್ಥಿ. ಅಲ್ಲದೆ ಜನರಲ್ ತಿಮ್ಮಯ್ಯ ಅವರು ಈ ಮಣ್ಣಿನ ಮಗ' ಎಂದು ಸ್ಮರಿಸಿದರು.

‘ಕರ್ನಾಟಕ ಶೈಕ್ಷಣಿಕ ಹಾಗೂ ತಂತ್ರಜ್ಞಾನಗಳಲ್ಲಿ ಮುಂಚೂಣಿಯಲ್ಲಿದೆ. ನಾವೀನ್ಯತೆ ಸೂಚ್ಯಂಕದಲ್ಲಿ ದೇಶದಲ್ಲಿಯೇ ಕರ್ನಾಟಕ ಪ್ರಥಮ ಸ್ಥಾನ ಗಳಿಸಿದೆ. ಬಂಡವಾಳ ಹೂಡಿಕೆಯಲ್ಲಿ ಬೆಂಗಳೂರು ವಿಶ್ವದಲ್ಲಿಯೇ 5 ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಅಲಂಕರಿಸಿದೆ. ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿರುವ 23 ರಾಜ್ಯದ ವಿದ್ಯಾರ್ಥಿಗಳು ಈ ಶಾಲೆಯ ಹಳೆಯ ವಿದ್ಯಾರ್ಥಿಗಳಾಗಿದ್ದಾರೆ. ಸಮಾನತೆ, ಏಕತೆ ಸಾರುವ ಇಲ್ಲಿಯ ಶಿಕ್ಷಣ ಎಲ್ಲರಿಗೂ ಮಾದರಿಯಾಗಿದೆ' ಎಂದು ಅವರು ತಿಳಿಸಿದರು.

‘ಈ ಶಾಲೆಯಲ್ಲಿ ಕಲಿತವರು ಪರಮವೀರ ಚಕ್ರ, ವಿಶಿಷ್ಟ ಸೇವಾ ಪದಕ ಮುಂತಾದ ಮನ್ನಣೆ ಪಡೆದಿದ್ದಾರೆ. ಅವರಲ್ಲಿ ಇಲ್ಲಿ ಉಪಸ್ಥಿತರಿರುವ ಸಿ.ಎನ್.ಗೋರ್ಮಡೆ ಅವರಿಗೆ ಪರಮ ವಿಶಿಷ್ಟ ಸೇವಾ ಪದಕವನ್ನು ತಾವೇ ಪ್ರದಾನ ಮಾಡಿದ್ದೆವು' ಎಂದು ಸ್ಮರಿಸಿದ ಅವರು, ‘ಈ ಪ್ರಸ್ತುತ ವರ್ಷದಿಂದ ಬಾಲಕಿಯರಿಗೆ ಮಿಲಿಟರಿ ಶಾಲೆಯಲ್ಲಿ ಪ್ರವೇಶ ಕಲ್ಪಿಸಲು ಸಂತೋಷವಾಗುತ್ತದೆ. ಕ್ಯಾ.ಅಭಿಲಾμÁ ಬಾರಾಕ್ ಅವರು ಮೊದಲ ಮಹಿಳಾ ಅಧಿಕಾರಿಯಾಗಿ ಸೇನೆಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಮಹಿಳಾ ಸಶಕ್ತೀಕರಣದ ರೂವಾರಿಯಾಗಿದ್ದಾರೆ' ಎಂದು ತಿಳಿಸಿದರು.

‘ಈ ವರ್ಷ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಈ ಶಾಲೆಗೆ 75 ವರ್ಷ ತುಂಬಿರುವುದು ಹೆಮ್ಮೆಯ ವಿಷಯ. ಈ ಶಾಲೆಯ ವಿದ್ಯಾರ್ಥಿಗಳು ಸೈಕ್ಲಿಂಗ್ ಮೂಲಕ 1,800 ಕಿ.ಮೀ ಸಂಚರಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಅವರು ವಿವಿಧ ರಾಜ್ಯಗಳ ಹಳ್ಳಿಗಳಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಥೆಗಳನ್ನು ಜನರಿಗೆ ಹೇಳಿದ್ದಾರೆ. ಈ ಶಾಲೆಯ ಧ್ಯೇಯ ವಾಕ್ಯ ‘ಶೀಲಂ ಪರಮ ಭೂಷಣಂ’ ಅಂದರೆ ಸರ್ವರಿಗೂ ತಮ್ಮ ನಡತೆಯೇ ಭೂಷಣ ತರುವಂಥದ್ದು, ಈ ಶಾಲೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ಮುನ್ನಡೆಯಲಿ' ಎಂದು ರಾಷ್ಟ್ರಪತಿಯವರು ಹಾರೈಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಅಮೃತ ಮಹೋತ್ಸವ ಸವಿ ನೆನಪಿಗಾಗಿ ಸ್ಮರಣ ಸಂಚಿಕೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದೇಶದ ಪ್ರಥಮ ಮಹಿಳೆ ಸವಿತಾ ಕೋವಿಂದ್, ಭಾರತೀಯ ನೌಕಾಪಡೆಯ ಉಪಮುಖ್ಯಸ್ಥರು ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿ ಸಿ.ಎನ್.ಗೋರ್ಮಡೆ ಸೇರಿದಂತೆ ಇನ್ನಿತರರು ಉಪಸ್ಥಿರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News