×
Ad

ರಾಷ್ಟ್ರೀಯ ಮಿಲಿಟರಿ ಶಾಲೆಗಳಲ್ಲಿ ಬಾಲಕಿಯರಿಗೂ ಪ್ರವೇಶ: ರಾಷ್ಟ್ರಪತಿ ರಾಮನಾಥ್ ಕೋವಿಂದ್

Update: 2022-06-13 21:26 IST

ಬೆಂಗಳೂರು, ಜೂ. 13: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ದೇಶದಲ್ಲಿರುವ ಎಲ್ಲ ರಾಷ್ಟ್ರೀಯ ಮಿಲಿಟರಿ ಶಾಲೆಗಳಲ್ಲಿ ಬಾಲಕಿಯರಿಗೂ ಪ್ರವೇಶ ಅವಕಾಶ ಸಿಗಲಿದೆ. ಆ ಮೂಲಕ ಹೆಣ್ಣು ಮಕ್ಕಳಿಗಾಗಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ದ್ವಾರಗಳು ತೆರೆಯಲ್ಪಡುತ್ತಿವೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು.

ಸೋಮವಾರ ನಗರದಲ್ಲಿರುವ ಬೆಂಗಳೂರು ರಾಷ್ಟ್ರೀಯ ಮಿಲಿಟರಿ ಶಾಲೆಯ 75ನೇ ವರ್ಷಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ವೋಚ್ಚ ಕಮಾಂಡರ್ ಆಗಿ, ಯುದ್ಧದ ಸನ್ನಿವೇಶಗಳನ್ನು ಎದುರಿಸುವುದು ಸೇರಿದಂತೆ ಸಶಸ್ತ್ರ ಪಡೆಗಳಲ್ಲಿ ಹೆಚ್ಚುತ್ತಿರುವ ಮಹಿಳೆಯರ ಸಂಖ್ಯೆಯನ್ನು ನೋಡಲು ನನಗೆ ಸಂತೋಷವಾಗುತ್ತಿದೆ ಎಂದರು.

ಇತ್ತೀಚೆಗೆ, ಕ್ಯಾಪ್ಟನ್ ಅಭಿಲಾಷ್ ಬರಾಕ್ ಅವರು ಸೇನಾ ವಿಮಾನ ದಳಕ್ಕೆ ಯುದ್ಧ ಏವಿಯೇಟರ್ ಆಗಿ ಸೇರಿದ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ. ಈ ಪ್ರತಿಷ್ಠಿತ ಶಾಲೆಗೆ ಸೇರುವ ಬಾಲಕಿಯರು ರಾಷ್ಟ್ರವನ್ನು ರಕ್ಷಿಸುವಲ್ಲಿ ಕೊಡುಗೆ ನೀಡುತ್ತಾರೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ ಎಂದು ರಾಷ್ಟ್ರಪತಿ ಹೇಳಿದರು.

ಶಾಲೆಯ 75ನೆ ವರ್ಷಾಚರಣೆಯು ದೇಶದಾದ್ಯಂತ ‘ಆಜಾದಿ ಕಾ ಅಮೃತ್ ಮಹೋತ್ಸವ’ವನ್ನು ಆಚರಿಸುವುದರೊಂದಿಗೆ ಹೊಂದಿಕೆಯಾಗುತ್ತಿರುವುದು ಸಂತೋಷದ ವಿಚಾರ. ಈ ಶಾಲೆಯ ಕೆಡೆಟ್‍ಗಳು ಹಾಗೂ ಸಿಬ್ಬಂದಿಗಳು ‘ಸೈಕ್ಲಿಂಗ್ ಎಕ್ಸ್ಪೆಡಿಶನ್ ಕಮ್ ಪ್ರೇರಣೆ ಅಭಿಯಾನ’ದಡಿ 1800 ಕಿ.ಮೀ. ಕ್ರಮಿಸಿ, ಸಶಸ್ತ್ರ ಪಡೆಗಳಿಗೆ ಸೇರಲು ಜನರನ್ನು ಪ್ರೇರೇಪಿಸಿದರು ಮತ್ತು ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ಪುದುಚೇರಿಯ ಹಳ್ಳಿಗಳಲ್ಲಿ ಭಾರತದ ಸ್ವಾತಂತ್ರ್ಯ ಚಳವಳಿಯ ಕಥೆಗಳನ್ನು ನಿರೂಪಿಸಿದರು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

1946ರಲ್ಲಿ ಸ್ಥಾಪನೆಯಾದ ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಶಾಲೆಯು ಇಂದು ಬಹಳ ದೂರ ಸಾಗಿದೆ ಮತ್ತು ದೇಶದ ಅತ್ಯುತ್ತಮ ಬೋರ್ಡಿಂಗ್ ಶಾಲೆಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ. ಆಧುನಿಕ ಕರ್ನಾಟಕವನ್ನು ಒಳಗೊಂಡಿರುವ ಈ ಪ್ರದೇಶವು ಶತಮಾನಗಳಿಂದಲೂ ಆಧ್ಯಾತ್ಮಿಕತೆ, ಕಲೆ, ವಾಸ್ತುಶಿಲ್ಪ, ವಿಜ್ಞಾನ, ಶಿಕ್ಷಣ ಮತ್ತು ಶೌರ್ಯದ ಅತ್ಯುನ್ನತ ಉದಾಹರಣೆಗಳನ್ನು ಹೊಂದಿದೆ ಎಂದು ರಾಷ್ಟ್ರಪತಿ ಹೇಳಿದರು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಕೊಡುಗೆಯನ್ನು ಭಾರತೀಯರು ಎಂದೆಂದಿಗೂ ಗೌರವಿಸುತ್ತಾರೆ. ಈ ಮಣ್ಣಿನ ಮಗನಾಗಿದ್ದ ಕಾರ್ಯಪ್ಪ ನಮ್ಮ ದೇಶದ ಸೈನ್ಯದ ಮೊದಲ ಕಮಾಂಡರ್-ಇನ್-ಚೀಫ್ ಮತ್ತು ಭಾರತೀಯ ಸೈನ್ಯದಲ್ಲಿ ಅತ್ಯುನ್ನತ ಶ್ರೇಣಿಯ ಫೀಲ್ಡ್ ಮಾರ್ಷಲ್ ಹುದ್ದೆಯೊಂದಿಗೆ ಗೌರವಿಸಲ್ಪಟ್ಟ ಇಬ್ಬರು ಜನರಲ್‍ಗಳಲ್ಲಿ ಒಬ್ಬರು ಎಂದು ಅವರು ಸ್ಮರಿಸಿದರು.

ಕಳೆದ ವರ್ಷ ಮಡಿಕೇರಿಯಲ್ಲಿ ಕರ್ನಾಟಕದ ಮತ್ತೊಬ್ಬ ಮಹಾನ್ ಪುತ್ರನಿಗೆ ಅರ್ಪಿಸಲಾದ ಜನರಲ್ ತಿಮ್ಮಯ್ಯ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಿದ್ದು ನನ್ನ ಸೌಭಾಗ್ಯ. ಕರ್ನಾಟಕದ ಈ ಇಬ್ಬರೂ ಮಹಾನ್ ಜನರಲ್‍ಗಳು ನಮ್ಮ ಇಬ್ಬರು ಅತ್ಯುತ್ತಮ ಮಿಲಿಟರಿ ಕಮಾಂಡರ್‍ಗಳಾಗಿ ಎಂದೆಂದಿಗೂ ನೆನಪಿನಲ್ಲಿ ಉಳಿಯುತ್ತಾರೆ ಎಂದು ರಾಮನಾಥ್ ಕೋವಿಂದ್ ಬಣ್ಣಿಸಿದರು.

ಕರ್ನಾಟಕ ಆಧುನಿಕ ಶಿಕ್ಷಣ ಮತ್ತು ತಂತ್ರಜ್ಞಾನದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ. ಇತ್ತೀಚಿನ ‘ಭಾರತದ ಆವಿಷ್ಕಾರ ಸೂಚ್ಯಂಕ’ದಲ್ಲಿ ಕರ್ನಾಟಕವು ಎಲ್ಲ ರಾಜ್ಯಗಳಲ್ಲಿ ಅಗ್ರಸ್ಥಾನ ಪಡೆದಿದೆ. ಬೆಂಗಳೂರು ಜಾಗತಿಕವಾಗಿ ಹೋಲಿಸಬಹುದಾದ ಕಲಿಕೆ, ತಂತ್ರಜ್ಞಾನ ಮತ್ತು ಉದ್ಯಮದ ಕೇಂದ್ರವಾಗಿ ಹೊರಹೊಮ್ಮಿದೆ. ಇತ್ತೀಚಿನ ವರದಿಯೊಂದರಲ್ಲಿ, 2021 ರಲ್ಲಿ ವಿಶ್ವದಾದ್ಯಂತದ ಅಗ್ರ ಐದು ಸಾಹಸೋದ್ಯಮ-ಬಂಡವಾಳ-ನಿಧಿ-ಹಬ್‍ಗಳಲ್ಲಿ ಬೆಂಗಳೂರು ಸ್ಥಾನ ಪಡೆದಿದೆ ಎಂದು ರಾಮನಾಥ್ ಕೋವಿಂದ್ ಹೇಳಿದರು.

ರಾಷ್ಟ್ರೀಯ ಮಿಲಿಟರಿ ಶಾಲೆಗಳು ನಿಜವಾಗಿಯೂ ರಾಷ್ಟ್ರೀಯ ಸ್ವರೂಪವನ್ನು ಹೊಂದಿವೆ. ಪ್ರಸ್ತುತ, 23 ರಾಜ್ಯಗಳ ಕೆಡೆಟ್‍ಗಳು ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದಿಂದ ಕೇರಳದವರೆಗೆ, ಇಲ್ಲಿನ ಕೆಡೆಡ್‍ಗಳು ನಮ್ಮ ‘ವೈವಿಧ್ಯತೆಯಲ್ಲಿ ಏಕತೆಯನ್ನು’ ಪ್ರತಿನಿಧಿಸುತ್ತಾರೆ. ಕೆಡೆಟ್‍ಗಳಿಗೆ ತಮ್ಮ ಸಹಪಾಠಿಗಳಿಗೆ ಅವರವರ ಸಂಸ್ಕøತಿ, ಭಾಷೆ ಮತ್ತು ಸಂಪ್ರದಾಯಗಳನ್ನು ಕಲಿಯಲು ಮತ್ತು ಪ್ರಶಂಸಿಸಲು ಈ ಅಂತರ್-ಮಿಶ್ರಣವು ಸಹಾಯ ಮಾಡಿದೆ ಎಂದು ಅವರು ತಿಳಿಸಿದರು.

ಈ ಸಮಾರಂಭದಲ್ಲಿ ರಾಮನಾಥ ಕೋವಿಂದ್ ಅವರ ಪತ್ನಿ ಸವಿತಾ ಕೋವಿಂದ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಎನ್.ಎ.ಹಾರೀಸ್, ಸೇನಾ ಅಧಿಕಾರಿಗಳು ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News