×
Ad

ಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿ ನಾಯಕರನ್ನು ಚಿವುಟಿ ಹಾಕುವ ಪ್ರಯತ್ನ ನಡೆಯುತ್ತಿದೆ: ಡಿ.ಕೆ.ಶಿವಕುಮಾರ್

Update: 2022-06-13 22:45 IST

ಬೆಂಗಳೂರು, ಜೂ.13: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ನಾನು ಸೇರಿ ಹಲವರು ವಿದ್ಯಾರ್ಥಿ ನಾಯಕರಾಗಿ ಗುರುತಿಸಿಕೊಂಡಿದ್ದೆವು. ಆದರೆ, ಈಗ ನಾಯಕರನ್ನು ಚಿವುಟಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ಸೋಮವಾರ ಬೆಂಗಳೂರು ವಿವಿ ಜ್ಞಾನಭಾರತಿ ವಿದ್ಯಾರ್ಥಿಗಳ ಜತೆ ಮಾತುಕತೆ ನಡೆಸಿದ ಡಿಕೆಶಿ ಅವರು, ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಕಾರಣಕ್ಕೆ ಅವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ, ಜಾತಿ ನಿಂದನೆ ಮಾಡಿರುವುದನ್ನು ನಾನು ವಿಡಿಯೋಗಳಲ್ಲಿ ಗಮನಿಸಿದ್ದೇನೆ. ಇದೆಲ್ಲವನ್ನು ನೋಡಿಕೊಂಡು ಕೂಡಲು ಸಾಧ್ಯವಾಗಲಿಲ್ಲ. ಹೀಗಾಗಿ, ಇಲ್ಲಿನ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಅವರ ನೋವು, ಸತ್ಯ ತಿಳಿಯಲು ಬಂದಿದ್ದೇನೆ ಎಂದು ತಿಳಿಸಿದರು.

ಈ ವಿವಿಯ ಘನತೆ ಗೌರವವನ್ನು ನಾವು ಕಾಪಾಡಬೇಕಾಗಿದೆ. ನೀವು ಯಾವುದೇ ಒಂದು ಪಕ್ಷ ಅಥವಾ ಸಂಘಟನೆಗೆ ಬೆಂಬಲಿಸಿ ಹೋರಾಟ ಮಾಡಿಲ್ಲ. ನೀವು ಈ ವಯಸ್ಸಿನಲ್ಲಿ ನಿಮ್ಮ ಹಕ್ಕನ್ನು ರಕ್ಷಿಸಿ ಕೊಳ್ಳದಿದ್ದರೆ ಯಾವ ವಯಸ್ಸಿನಲ್ಲಿ ರಕ್ಷಿಸಿಕೊಳ್ಳಲು ಸಾಧ್ಯ? ಇದು ವಿದ್ಯಾರ್ಥಿಗಳ ಶಕ್ತಿಯಾಗಿದ್ದು, ಇದು ದೇಶದ ಶಕ್ತಿಯಾಗಿದೆ. ಈ ವಿಚಾರ ಆ ಸಚಿವರ ತಲೆಯಲ್ಲಿ ಇಲ್ಲ ಎಂದು ಹೇಳಿದರು.

ಎಂಇಪಿ ವಿಚಾರವಾಗಿ ನಿಮ್ಮ ಅಭಿಪ್ರಾಯಗಳನ್ನು ತಿಳಿದುಕೊಂಡಿದ್ದೇನೆ. ಪಠ್ಯಪುಸ್ತಕ ಪರಿಷ್ಕರಣೆ ಮೂಲಕ ನಮ್ಮ ಸಂಸ್ಕøತಿ, ಇತಿಹಾಸ, ಪರಂಪರೆ ಎಲ್ಲವನ್ನು ತಿರುಚಲಾಗುತ್ತಿದೆ. ಬುದ್ಧ, ಬಸವಣ್ಣ, ಅಂಬೇಡ್ಕರ್, ವಾಲ್ಮೀಕಿ, ಕಾಳಿದಾಸ, ಕನಕದಾಸ, ನಾರಾಯಣ ಗುರುಗಳ ಪಠ್ಯ ಬದಲಾವಣೆ ಮಾಡಲಾಗಿದೆ. ಇದಕ್ಕೆ ನಾವು ನೀವು ಅವಕಾಶ ನೀಡಬಾರದು ಎಂದರು. 

ಈ ವಿಚಾರವಾಗಿ ಶೀಘ್ರವೇ ಸಭೆ ಕರೆದು ಹಳ್ಳಿಯಿಂದ ರಾಜ್ಯಮಟ್ಟದವರೆಗೆ ಹೋರಾಟ ಮಾಡಬೇಕಾಗಿದೆ. ಈ ವಿಚಾರವಾಗಿ ಯಾರು ಹೋರಾಟ ಮಾಡಿದರೂ ನೀವು ಪಕ್ಷಾತೀತವಾಗಿ ಬೆಂಬಲ ನೀಡಿ, ಇತಿಹಾಸ ಉಳಿಸಬೇಕು. ಆ ಮೂಲಕ ನಮ್ಮ ಸಂವಿಧಾನವನ್ನು ಉಳಿಸಿಕೊಳ್ಳಿ ಎಂದು ಕರೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News