ಬೆಂಗಳೂರಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣ; ಬಾಲಿವುಡ್ ನಟ ಸಿದ್ದಾಂತ್ ಕಪೂರ್ ಜಾಮೀನಿನ ಮೇಲೆ ಬಿಡುಗಡೆ
Update: 2022-06-14 08:21 IST
ಬೆಂಗಳೂರು: ಬಾಲಿವುಡ್ ನಟ ಸಿದ್ದಾಂತ್ ಕಪೂರ್ ನನ್ನು ಸೋಮವಾರ ತಡರಾತ್ರಿ ಜಾಮೀನಿನ ಮೇರೆಗೆ ಬಿಡುಗಡೆ ಮಾಡಲಾಗಿದೆ. ರವಿವಾರ ರಾತ್ರಿ ಬೆಂಗಳೂರಿನ ಹೋಟೆಲ್‍ನಲ್ಲಿ ಪಾರ್ಟಿಯೊಂದರಲ್ಲಿ ಮಾದಕ ವಸ್ತು ಸೇವಿಸಿದ ಆರೋಪದಲ್ಲಿ ಸಿದ್ದಾಂತ್ ಸೇರಿ ಐದು ಮಂದಿಯನ್ನು ಬಂಧಿಸಲಾಗಿತ್ತು.
ಪ್ರಕರಣದ ಸಂಬಂಧ ಬಂಧಿತರಾಗಿದ್ದ ಇತರ ನಾಲ್ಕು ಮಂದಿಯನ್ನು ಕೂಡಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಿದ್ದಾಂತ್ ಕಪೂರ್ ಹಾಗೂ ನಾಲ್ವರು ಇತರ ಆರೋಪಿಗಳು ಪೊಲೀಸರು ಕರೆದಾಗ ವಿಚಾರಣೆಗೆ ಹಾಜರಾಗುವರು ಎಂದು ಬೆಂಗಳೂರು ಪೂರ್ವ ಎಸಿಪಿ ಭೀಮಾ ಶಂಕರ್ ಗುಲ್ಲೆದ್ ತಿಳಿಸಿದ್ದಾರೆ.
"ಸಿದ್ದಾಂತ್ ಕಪೂರ್ ಮಾದಕ ವಸ್ತು ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. ನಾವು ಅವರನ್ನು ಈಗಾಗಲೇ ಬಂಧಿಸಿದ್ದು, ವಿಧಿವಿಧಾನಗಳನ್ನು ಅನುಸರಿಸಲಾಗುತ್ತಿದೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು" ಎಂದು ಗುಲ್ಲೆದ್ ಈ ಮುನ್ನ ಹೇಳಿಕೆ ನೀಡಿದ್ದರು.