ದೇಶದಲ್ಲಿ ತುರ್ತು ಪರಿಸ್ಥಿತಿಗೂ ಮೀರಿದ ಹೀನಾಯ ಸ್ಥಿತಿ: ಡಿಕೆಶಿ ಆಕ್ರೋಶ
ಬೆಂಗಳೂರು, ಜೂ.14: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರನ್ನು ಇ.ಡಿ. ವಿಚಾರಣಗೆ ಒಳಪಡಿಸಿರುವುದನ್ನು ಖಂಡಿಸಿ ದಿಲ್ಲಿಯಲ್ಲಿ ಕಾಂಗ್ರೆಸ್ ನಾಯಕರನ್ನು ಬಂಧಿಸಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ನೀಚ ರಾಜಕಾರಣ ಹಿಂದೆಂದೂ ಕಂಡಿಲ್ಲ. ಇದು ತುರ್ತು ಪರಿಸ್ಥಿತಿಗೂ ಮೀರಿದ ಹೀನಾಯ ಸ್ಥಿತಿ ನಾವಿದನ್ನು ಖಂಡಿಸುತ್ತೇವೆ. ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಹೊಸ ಸಂಪ್ರದಾಯ ಆರಂಭಿಸುತ್ತಿದ್ದು, ಇದೇನು ತುರ್ತು ಪರಿಸ್ಥಿತಿಯೇ? ಇದು ಪ್ರಜಾಪ್ರಭುತ್ವದ ಸರ್ಕಾರವೇ? ಪ್ರತಿಭಟನೆ ಮಾಡುವುದು ನಮ್ಮ ಹಕ್ಕು. ಇ.ಡಿ. ಅಧಿಕಾರಿಗಳು ನನ್ನನ್ನು ಕರೆದುಕೊಂಡು ಹೋದಾಗ ಸಾವಿರಾರು ಜನ ನ್ಯಾಶನಲ್ ಕಾಲೇಜಿನಿಂದ ಫ್ರೀಡಂ ಪಾರ್ಕ್ ವರೆಗೂ ಮೆರವಣಿಗೆ ಬಂದಿದ್ದರು. ಆಗ ಯಾರಾದರೂ ಗಲಾಟೆ ಮಾಡಿದ್ದರಾ? ಅವರ ನೋವು, ದುಃಖ, ಬೇಸರವನ್ನು ವ್ಯಕ್ತಪಡಿಸಿದರು. ಇಡೀ ದೇಶದುದ್ದಗಲಕ್ಕೂ ನಮ್ಮ ನಾಯಕರು ತಮಗಾಗುತ್ತಿರುವ ಅನ್ಯಾಯವನ್ನು ಪ್ರಶ್ನಿಸುತ್ತಿದ್ದಾರೆ. ಪ್ರತಿಭಟನೆ ಮಾಡುವುದು ನಮ್ಮ ಹಕ್ಕು ಎಂದು ಹೇಳಿದ್ದಾರೆ.
ನಿನ್ನೆ ಪ್ರತಿಭಟನೆ ಆರಂಭವಾಗುವ ಮುನ್ನವೇ ನಮ್ಮ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಅವರನ್ನು ಬಂಧಿಸಲು ಪ್ರಯತ್ನಿಸಿದ್ದರು. ಅವರು ಪ್ರತಿಭಟನೆಗೆ ಹೋಗುವ ಮುನ್ನವೇ ವಶಕ್ಕೆ ಪಡೆಯಲು ಯತ್ನಿಸಿದರು. ಇಂದು ನಮ್ಮ ಪಾಲಿಗೆ ಪಕ್ಷದ ಕಚೇರಿ ಮನೆ, ದೇವಾಲಯ ಇದ್ದಂತೆ. ನಮ್ಮ ನಾಯಕರು ಎಐಸಿಸಿ ಕಚೇರಿಗೆ ಹೋದರೆ, ಅಲ್ಲೇ ಅವರನ್ನು ಬಂಧಿಸುತ್ತೇನೆ ಎಂದರೆ ಇದು ಅನ್ಯಾಯವಲ್ಲವೇ? ನಮ್ಮ ನಾಯಕರು ಯಾವ ಅಪರಾಧ ಮಾಡಿದ್ದಾರೆ?
ಇಂತಹ ನೀಚ ರಾಜಕಾರಣ ಹಿಂದೆಂದೂ ಕಂಡಿಲ್ಲ. ಇದು ತುರ್ತು ಪರಿಸ್ಥಿತಿಗೂ ಮೀರಿದ ಹೀನಾಯ ಸ್ಥಿತಿ. ನಾವಿದನ್ನು ಖಂಡಿಸುತ್ತೇವೆ. ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.
ನಮ್ಮ ನಾಯಕರು ತಪ್ಪು ಮಾಡಿಲ್ಲ. ದೇಶದ ಸ್ವಾತಂತ್ರ್ಯ ಹೋರಾಟ ಸಮಯದಲ್ಲಿ ನೆಹರೂ, ತಿಲಕರು ಹಾಗೂ ವಲ್ಲಭಬಾಯಿ ಪಟೇಲರು ಸೇರಿ ಆರಂಭಿಸಿದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಉಳಿಸಿಕೊಂಡು ಬಂದಿದ್ದೇವೆ. ಇದು ಖಾಸಗಿ ಆಸ್ತಿಯಲ್ಲ, ದೇಶದ ಆಸ್ತಿ. ನಮ್ಮ ನಾಯಕರು ಕೇವಲ ಟ್ರಸ್ಟಿಯಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಈಗ ಟ್ರಸ್ಟಿಯಾಗಿದ್ದಾರೆ. ಅವರೇನು ಅದರ ಆಸ್ತಿಯನ್ನೆಲ್ಲಾ ಬರೆದುಕೊಂಡು ಬಂದಿದ್ದಾರಾ? ನೆಹರೂ ಕುಟುಂಬದವರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದು, ಇದಕ್ಕೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಹೆದರುವುದಿಲ್ಲ ಎಂದರು.
ತಪ್ಪು ಮಾಡಿಲ್ಲ ಎಂದಾದರೆ ವಿಚಾರಣೆ ಎದುರಿಸಬೇಕಲ್ಲವೇ ಎಂಬ ಬಿಜೆಪಿ ವಾದದ ಬಗ್ಗೆ ಕೇಳಿದ ಪ್ರಶ್ನೆಗೆ, ‘ರಾಹುಲ್ ಗಾಂಧಿ ಅವರನ್ನು 10 ಗಂಟೆಗಳ ಕಾಲ ವಿಚಾರಣೆ ನಡೆಸುವ ಅಗತ್ಯ ಏನಿದೆ? ಎಲ್ಲ ವಿವರಗಳನ್ನು ಚುನಾವಣೆ ಅಫಿಡವಿಟ್ ನಲ್ಲಿ ನೀಡಿರಲಿಲ್ಲವೇ? ನಾನೇನು ಮಾಡಿದ್ದೆ ಎಂದು ನನ್ನನ್ನು 10 ದಿನ ವಿಚಾರಣೆ ಮಾಡಿದ್ದರು? ನಾನು ಇನ್ನು ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿಲ್ಲ. ಯಾವ ರೀತಿ ಕಿರುಕುಳ ನೀಡಿದ್ದಾರೆ ಎಂಬುದು ನನಗಷ್ಟೇ ಗೊತ್ತಿದೆ. ಬಿಜೆಪಿ ನಾಯಕರ ಮನೆ ಮೇಲೆ ದಾಳಿ ಆದಾಗ ಎಷ್ಟು ಹಣ ಸಿಕ್ಕವು? ಅವರ ವಿರುದ್ಧ ಪ್ರಕರಣ ಯಾಕೆ ಇಡಿಗೆ ಹೋಗಿಲ್ಲ?’ ಎಂದು ಪ್ರಶ್ನಿಸಿದರು.