ಆ ಗಂಡಿಗೆ ಸಮಯ ಬಂದಾಗ ಉತ್ತರ ಕೊಡುತ್ತೇನೆ: ಅಶ್ವತ್ಥ ನಾರಾಯಣ ವಿರುದ್ಧ ಡಿಕೆಶಿ ಕಿಡಿ
ಬೆಂಗಳೂರು, ಜೂ.14: ಉನ್ನತ ಶಿಕ್ಷಣ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥನಾರಾಯಣ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವಿನ ವಾಗ್ವಾದ ಮತ್ತೆ ಜೋರಾಗಿದೆ. "ಆ ಗಂಡಿಗೆ ಸಮಯ ಬಂದಾಗ ಉತ್ತರ ಕೊಡುತ್ತೇನೆ" ಎಂದು ಡಿಕೆಶಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, ನಿನ್ನೆಯ ಪಾದಯಾತ್ರೆ ತಿಹಾರ್ ಜೈಲಿಗೆ ಹೋಗುತ್ತೆ ಎಂಬ ಸಚಿವ ಅಶ್ವತ್ಥ್ ನಾರಾಯಣ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರು ದೇಶದಲ್ಲೇ ಅತ್ಯಂತ ಭ್ರಷ್ಟ ಶಿಕ್ಷಣ ಸಚಿವ. ಉಪಕುಲಪತಿಗಳಿಂದ ಪ್ರತಿ ಹುದ್ದೆ ನೇಮಕಾತಿಗೂ ಹಣ ಪಡೆದಿದ್ದಾರೆ. ಬೇರೆ ವಿಚಾರದಲ್ಲಿ ಹಣ ಪಡೆದದ್ದು, ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಹಣ ಪಡೆದಿದ್ದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸುಮ್ಮನೆ ಇದ್ದಾರೆ. ಆತ ಏನಾದರೂ ಹೇಳಲಿ, ಮಾತನಾಡಲಿ. ಆ ಗಂಡಿಗೆ ಈಗ ಉತ್ತರ ಕೊಡುವುದಿಲ್ಲ. ಸಮಯ ಬಂದಾಗ ಕೊಡುತ್ತೇನೆ’ ಎಂದು ಹೇಳಿದರು.
ಕಾಂಗ್ರೆಸ್ ನವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಬಿಜೆಪಿ ರಾಷ್ಟ್ರೀರ ಉಪಾಧ್ಯಕ್ಷ ಸಿ.ಟಿ.ರವಿ ಅವರ ಹೇಳಿಕೆ ಕುರಿತು ಕೇಳಿದಾಗ, ‘ಯಾರು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಜನಕ್ಕೆ ಗೊತ್ತಾಗುತ್ತಿಲ್ಲವೇ?’ ಎಂದು ಪ್ರಶ್ನಿಸಿದರು.