×
Ad

ನಾನು ಡ್ರಗ್ಸ್ ಸೇವನೆ ಮಾಡಿಲ್ಲ: ಸಿದ್ಧಾಂತ್ ಕಪೂರ್

Update: 2022-06-14 18:10 IST

ಬೆಂಗಳೂರು, ಜೂ.14: ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್ ಅವರ ಪುತ್ರ ಸಿದ್ಧಾಂತ್ ಕಪೂರ್, ತಾನೂ ಡ್ರಗ್ಸ್ ಸೇವನೆ ಮಾಡಿಲ್ಲ ಎಂದೇ ವಾದಿಸುತ್ತಿದ್ದಾರೆ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ರಾತ್ರಿ ಠಾಣೆ ಜಾಮೀನು ಮೇರೆಗೆ ಬಿಡುಗಡೆ ಆದ ಸಿದ್ದಾಂತ್ ಕಪೂರ್, ಮಂಗಳವಾರ ಪುನಃ ಹಲಸೂರು ಠಾಣಾ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದರು.

ಈ ಸಂದರ್ಭದಲ್ಲಿ  'ಕಾರ್ಯಕ್ರಮದಲ್ಲಿ ಡ್ರಗ್ಸ್ ಸೇವನೆ ಮಾಡಿಲ್ಲ. ಡ್ರಗ್ಸ್ ಹೇಗೆ ಬಂತು ಎಂಬುದರ ಬಗ್ಗೆಯೂ ನನಗೆ ಗೊತ್ತಿಲ್ಲ. ಪಾರ್ಟಿಯಲ್ಲಿದ್ದ ಸ್ನೇಹಿತರು ನೀರಿನಲ್ಲಿ ಅಥವಾ ಸಿಗರೇಟ್‍ನಲ್ಲಿ ಡ್ರಗ್ಸ್ ಮಿಶ್ರಣ ಮಾಡಿ ನನಗೆ ಕೊಟ್ಟಿದ್ದಾರೆ. ಇದನ್ನು ತಿಳಿಯದೇ ನೀರು ಕುಡಿದು ಸಿಗರೇಟ್ ಸೇವನೆ ಮಾಡಿದ್ದೆ ಅಷ್ಟೇ' ಎಂದು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮತ್ತೊಂದೆಡೆ ರೇವ್ ಪಾರ್ಟಿ ಆಯೋಜಕರು ಸೇರಿ ಹೊಟೇಲ್ ಮಾಲಕರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಈವೆಂಟ್ ಕಂಪೆನಿಗಳಾಗಿರುವ ಇಂಡಿವೈಬ್, ಎಲ್‍ಎ ಪ್ರೊಡಕ್ಷನ್ ಪ್ರತಿನಿಧಿಗಳು ಠಾಣೆಗೆ ಹಾಜರಾಗುವ ಸಾಧ್ಯತೆಯಿದೆ. 

ಸಿದ್ದಾಂತ್ ಸೇರಿದಂತೆ ಐವರನ್ನು ಬಂಧಿಸಿದ್ದ ಪೊಲೀಸರು ಒಟ್ಟು ಐದು ಮೊಬೈಲ್ ಜಪ್ತಿ ಮಾಡಿದ್ದಾರೆ. ಇದನ್ನು ರಿಟ್ರೈವ್ ಮಾಡಲು ಎಫ್‍ಎಸ್‍ಎಲ್‍ಗೆ(ವಿಧಿವಿಜ್ಞಾನ ಪ್ರಯೋಗಾಲಯ) ಕಳುಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್, ಪ್ರಕರಣ ಸಂಬಂಧ ತನಿಖೆ ಮುಂದುವರೆಸಲಾಗಿದ್ದು, ಯಾರು ಡ್ರಗ್ಸ್ ಸೇವನೆ ಮತ್ತು ಮಾರಾಟ ಮಾಡಿದ್ದಾರೆ ಎನ್ನುವ ಕುರಿತು ತನಿಖೆ ಮುಂದುವರೆಸಲಾಗಿದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News