ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಶೀಘ್ರ ವರದಿಗೆ ಆಯೋಗಕ್ಕೆ ಶ್ರೀಗಳ ಮನವಿ

Update: 2022-06-14 13:47 GMT

ಬೆಂಗಳೂರು, ಜೂ.14: ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ 2ಎಗೆ ಸೇರಿಸುವ ಸಂಬಂಧ ಆದಷ್ಟು ಶೀಘ್ರ ವರದಿ ನೀಡುವಂತೆ ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳ ನೇತೃತ್ವದ ನಿಯೋಗ ರಾಜ್ಯದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಮಾಡಿದೆ.

ಮಂಗಳವಾರ ಬೆಳಗ್ಗೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರನ್ನು ಶ್ರೀಗಳ ನೇತೃತ್ವದ ನಿಯೋಗ ಭೇಟಿ ಮಾಡಿ ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-2 ಎಗೆ ಸೇರಿಸುವ ಬಗ್ಗೆ ಕಾಲಮಿತಿಯಲ್ಲಿ ವರದಿ ನೀಡುವಂತೆ ಮನವಿ ಮಾಡಿದರು. 

ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ವಚನಾನಂದ ಶ್ರೀಗಳು, ಆದಷ್ಟು ತ್ವರಿತವಾಗಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಎಂಬುದು ನಮ್ಮ ಮನವಿಯಾಗಿದೆ. ಇದಕ್ಕೆ ಆಯೋಗದ ಅಧ್ಯಕ್ಷರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ವರದಿ ಕೊಟ್ಟ ಮೇಲೆ ಸರಕಾರ ಅದನ್ನು ಒಪ್ಪಿಕೊಳ್ಳಬೇಕು. ಯಾವುದೇ ಗೊಂದಲ ಇಲ್ಲದೆ ಇರುವಂತಹ ಕಾನೂನಾತ್ಮಕವಾಗಿರುವ ವರದಿಯನ್ನು ಆಯೋಗ ಸಲ್ಲಿಸಲಿದೆ ಎಂಬ ವಿಶ್ವಾಸ ತಮ್ಮದು ಎಂದರು. ವಚನಾನಂದಶ್ರೀಗಳ ನೇತೃತ್ವದ ಈ ನಿಯೋಗದಲ್ಲಿ ಪಂಚಮಸಾಲಿ ಮಠಾಧಿಪತಿಗಳ ಒಕ್ಕೂಟದ ಸ್ವಾಮೀಜಿಗಳು, ಜಮಖಂಡಿ ಪೀಠದ ಡಾ. ಮಹದೇವಶಿವಾಚಾರ್ಯ ಶ್ರೀಗಳು, ಸಮುದಾಯದ ಮುಖಂಡರುಗಳಾದ ಬಿ.ಸಿ. ಉಮಾಪತಿ, ನಾಗನಗೌಡ, ಬಿ.ಎಸ್. ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.      

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News