×
Ad

ರಾಜ್ಯಸಭೆ ಚುನಾವಣೆ; ಜೆಡಿಎಸ್ ನಾಯಕರಿಂದ ಕಾಂಗ್ರೆಸ್ ವಿರುದ್ಧ ಅನಗತ್ಯ ಟೀಕೆ: ಡಾ.ಕೆ.ರಹ್ಮಾನ್ ಖಾನ್

Update: 2022-06-14 20:16 IST

ಬೆಂಗಳೂರು, ಜೂ.14: ರಾಜ್ಯಸಭೆ ಚುನಾವಣೆಯಲ್ಲಿ ನಾಲ್ಕನೆ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮನ್ಸೂರ್ ಅಲಿ ಖಾನ್ ಅವರನ್ನು ಕಾಂಗ್ರೆಸ್ ‘ಹರಕೆಯ ಕುರಿ’ ಮಾಡಿದೆ ಎಂದು ಜೆಡಿಎಸ್ ನಾಯಕರು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಸೂಚನೆಯಂತೆ ಮೇ 27ರಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಜೊತೆ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ನಾವು ಸುದೀರ್ಘವಾಗಿ ಚರ್ಚೆ ನಡೆಸಿದ್ದೆವು ಎಂದು ಕೇಂದ್ರದ ಮಾಜಿ ಸಚಿವ ಡಾ.ಕೆ.ರಹ್ಮಾನ್ ಖಾನ್ ಹೇಳಿದರು.

ಮಂಗಳವಾರ ನಗರದಲ್ಲಿರುವ ಸಾಲಾರ್ ಪಬ್ಲಿಕೇಷನ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮನ್ಸೂರ್ ಅಲಿ ಖಾನ್ ಯುವಕ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದು, ಆತನನ್ನು ಗೆಲ್ಲಿಸಲು ಸಹಕಾರ ನೀಡುವಂತೆ ಮನವಿ ಮಾಡಲಾಗಿತ್ತು. ಈ ವೇಳೆ, ನಮ್ಮ ಪಕ್ಷದಿಂದಲೂ ಬಿ.ಎಂ.ಫಾರೂಕ್ ಹಾಗೂ ಕುಪೇಂದ್ರ ರೆಡ್ಡಿ ಆಕಾಂಕ್ಷಿಯಾಗಿದ್ದು, ಮುಖಂಡರ ಸಭೆ ಬಳಿಕ ತೀರ್ಮಾನ ಕೈಗೊಳ್ಳುವುದಾಗಿ ನಮಗೆ ದೇವೇಗೌಡ ತಿಳಿಸಿದ್ದರು ಎಂದರು. 

ಇದಾದ ಬಳಿಕ ನಾವು ಸತತವಾಗಿ ಅವರ ಸಂಪರ್ಕದಲ್ಲಿದ್ದೆವು. ಆದರೆ, ಅವರಿಂದ ಯಾವುದೆ ಪ್ರತಿಕ್ರಿಯೆ ಬಾರದೆ ಇದ್ದಾಗ ಮೇ 30ರಂದು ಮನ್ಸೂರ್ ಅಲಿ ಖಾನ್ ನಾಮಪತ್ರ ಸಲ್ಲಿಕೆ ಮಾಡಿದರು. ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಮನ್ಸೂರ್ ಅಲಿ ಖಾನ್ ನಾಮಪತ್ರ ಸಲ್ಲಿಕೆ ಮಾಡಿದ್ದು ಎಂದು ಜೆಡಿಎಸ್ ನಾಯಕರು ಮಾಡುತ್ತಿರುವ ಆಪಾದನೆ ಸತ್ಯಕ್ಕೆ ದೂರವಾದದ್ದು. ಚುನಾವಣೆಯಲ್ಲಿ ಬೆಂಬಲ ಕೋರಿ ಎಚ್.ಡಿ.ಕುಮಾರಸ್ವಾಮಿ ಜೊತೆಯೂ ನಾವು ಚರ್ಚೆ ನಡೆಸಿದ್ದೆವು. ಆದರೆ, ಯಾವುದೆ ಪ್ರಯೋಜನವಾಗಲಿಲ್ಲ. ಕಾಂಗ್ರೆಸ್ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಕರೆಯಲಾಗುತ್ತಿದೆ. ಯಾರು ನಿಜವಾಗಿಯೂ ಬಿ ಟೀಂ ಆಗಿ ಕೆಲಸ ಮಾಡಿದರು ಎಂಬುದು ಸ್ಪಷ್ಟವಾಗಿದೆ ಎಂದು ರಹ್ಮಾನ್ ಖಾನ್ ಕಿಡಿಗಾರಿದರು.

ಕಾಂಗ್ರೆಸ್ ಪಕ್ಷದಿಂದ ಮೊದಲ ಅಭ್ಯರ್ಥಿಯಾಗಿ ಜೈರಾಮ್ ರಮೇಶ್ ಕಣಕ್ಕಿಳಿಸುವ ಕುರಿತು ಮೊದಲೆ ತೀರ್ಮಾನವಾಗಿತ್ತು. ಹೆಚ್ಚುವರಿ ಮತಗಳು ಲಭ್ಯವಿದ್ದ ಕಾರಣ, ನಮಗೆ ಅವಕಾಶ ಸಿಕ್ಕಿತು. ಜಾತ್ಯತೀತ ಪಕ್ಷಗಳ ಹೊಂದಾಣಿಕೆಯಿಂದ ನಾಲ್ಕನೆ ಸ್ಥಾನ ಗೆಲ್ಲಬಹುದು ಎಂಬುದು ನಮ್ಮ ನಿರೀಕ್ಷೆಯಾಗಿತ್ತು. ಅಗತ್ಯವಿದ್ದಲ್ಲಿ ನಾವು ಮನ್ಸೂರ್ ಅಲಿ ಖಾನ್ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಸಿದ್ಧವಾಗಿದ್ದೆವು ಎಂದು ಅವರು ಹೇಳಿದರು.

ಬಿ.ಎಂ.ಫಾರೂಕ್ ಅಥವಾ ಸಿ.ಎಂ.ಇಬ್ರಾಹೀಂ ಅವರನ್ನು ಜೆಡಿಎಸ್ ಕಣಕ್ಕಿಳಿಸಬಹುದಿತ್ತು. ಅವರು ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಹಾಕಿದ್ದರೆ ನಾವು ನಾಮಪತ್ರ ಹಿಂಪಡೆಯಲು ಸಿದ್ಧವಾಗಿದ್ದೆವು. ನಮ್ಮ ಜಾತ್ಯತೀತತೆ ಬಗ್ಗೆ ಜೆಡಿಎಸ್ ನಾಯಕರು ಪ್ರಶ್ನೆ ಎತ್ತುತ್ತಿದ್ದಾರೆ. ಆದರೆ, ನಮ್ಮ ರಾಜ್ಯದಲ್ಲಿ ಧರಂಸಿಂಗ್ ಜೊತೆ ರಚಿಸಿದ್ದ ಸರಕಾರ ಪತನಗೊಳಿಸಿ, ಬಿಜೆಪಿ ಅಧಿಕಾರಕ್ಕೆ ಬರಲು ಜೆಡಿಎಸ್ ಕಾರಣವಲ್ಲವೇ? ಅಂದು ಅವರು ಬಿಜೆಪಿ ಜೊತೆ ಹೋಗದೆ ಇದ್ದಿದ್ದರೆ ಇವತ್ತು ಬಿಜೆಪಿಯವರು ಅಧಿಕಾರದಲ್ಲಿ ಇರುತ್ತಿದ್ರಾ? ಎಂದು ರಹ್ಮಾನ್ ಖಾನ್ ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷ ಮಾತ್ರ ಮುಸ್ಲಿಮ್ ಅಭ್ಯರ್ಥಿಗಳಿಗೆ ಅವಕಾಶ ನೀಡುತ್ತಿದೆ. ನನಗೆ ನಾಲ್ಕು ಬಾರಿ ರಾಜ್ಯಸಭೆಗೆ ಅವಕಾಶ ನೀಡಿದ್ದು ಕಾಂಗ್ರೆಸ್. ಸಿ.ಎಂ.ಇಬ್ರಾಹೀಂಗೆ ವಿಧಾನಪರಿಷತ್ ವಿರೋಧ ಪಕ್ಷದ ನಾಯಕನ ಸ್ಥಾನಮಾನ ನೀಡಿದ್ದರೆ, ಆಗಲೂ ಇವರು ಕಾಂಗ್ರೆಸ್ ವಿರುದ್ಧ ಇಂತಹ ಹೇಳಿಕೆಗಳನ್ನು ನೀಡುತ್ತಿದ್ರಾ? ಎಂದು ಅವರು ಹೇಳಿದರು. 

ನ್ಯಾಷನಲ್ ಹೆರಾಲ್ಡ್ ಕೇಸ್ ವಿಚಾರ ತುಂಬಾ ಹಳೆಯದ್ದು. ಆದರೂ ಜಾರಿ ನಿರ್ದೇಶನಾಲಯ ಕಾಂಗ್ರೆಸ್ ನಾಯಕರಿಗೆ ಕಿರುಕುಳ ನೀಡುತ್ತಿದೆ. ಈಡಿ ಮೂಲಕ ಕಾಂಗ್ರೆಸ್ ನಾಯಕರಿಗೆ ಕಿರುಕುಳ ನೀಡುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದು ರಹ್ಮಾನ್ ಖಾನ್ ದೂರಿದರು.

ಬಿಜೆಪಿ ನಾಯಕ ಸುಬ್ರಹ್ಮಣ್ಯಂಸ್ವಾಮಿ ದಾಖಲಿಸಿದ್ದ ಈ ಪ್ರಕರಣ 2012ರಿಂದಲೂ ಸುಪ್ರೀಂಕೋರ್ಟ್‍ನಲ್ಲಿ ನಡೆಯುತ್ತಿದೆ. ಆದಾಯ ತೆರಿಗೆ ಇಲಾಖೆಯೂ ಪರಿಶೀಲಿಸಿದೆ. ಇದರಲ್ಲಿ ತಾಂತ್ರಿಕ ಸಮಸ್ಯೆಯಷ್ಟೇ ಇದೆ. ಯಂಗ್ ಇಂಡಿಯಾ ಕಂಪನಿಯು ಒಂದು ಚಾರ್ಟೆಡ್ ಕಂಪನಿಯಾಗಿದ್ದು, ಸೋನಿಯಾಗಾಂಧಿ ಅಥವಾ ರಾಹುಲ್ ಗಾಂಧಿ ಇದರ ಮಾಲಕರಲ್ಲ. ನಾವು ಈಡಿಯ ವಿಚಾರಣೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿಲ್ಲ. ಸಾಂವಿಧಾನಿಕ ಸಂಸ್ಥೆಗಳನ್ನು ಕೇಂದ್ರ ಸರಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂಬುದು ನಮ್ಮ ಆಪಾದನೆ ಎಂದು ಅವರು ಹೇಳಿದರು.

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮನ್ಸೂರ್ ಅಲಿ ಖಾನ್ ಮಾತನಾಡಿ, ಸಿ.ಎಂ.ಇಬ್ರಾಹೀಂ ಹಿರಿಯ ನಾಯಕರು. ಆದರೆ, ಅವರು ಇತ್ತೀಚೆಗೆ ನನ್ನ ಹಾಗೂ ಪಕ್ಷದ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ. ರಾಜ್ಯಸಭೆ ಚುನಾವಣೆಯಲ್ಲಿ ನನಗೆ ರಾಜ್ಯ ನಾಯಕರು ಟಿಕೆಟ್ ಕೊಟ್ಟಿದ್ದಲ್ಲ, ಹೈಕಮಾಂಡ್ ಸೂಚನೆಯಂತೆ ನಾನು ಸ್ಪರ್ಧಿಸಿದ್ದು ಎಂದರು.

ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಜೆಡಿಎಸ್‍ನವರು ಬೆಂಬಲಿಸಬಹುದು ಎಂಬ ವಿಶ್ವಾಸವಿತ್ತು. ಆದರೆ, ನಮ್ಮ ನಂಬಿಕೆ ಹುಸಿಯಾಯಿತು. ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲಲು ಅಗತ್ಯ ಮತಗಳು ಲಭ್ಯ ಇಲ್ಲದಿದ್ದರೂ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಏಕೆ ಎಂದು ಹಲವರು ಪ್ರಶ್ನಿಸಿದ್ದಾರೆ. ಆದರೆ, 2016ರಲ್ಲಿ ದೇವೇಗೌಡರು ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅವರ ಬಳಿ ಸಂಖ್ಯಾಬಲ ಇತ್ತೆ, 2018ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರ ಬಳಿ ಸಂಖ್ಯಾಬಲ ಇತ್ತೆ ಎಂದು ಅವರು ಪ್ರಶ್ನಿಸಿದರು.

ಕೇಂದ್ರ ಸರಕಾರ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ನಮ್ಮ ರಾಜ್ಯ, ದಿಲ್ಲಿ ಹಾಗೂ ದೇಶದ ಇತರ ಭಾಗಗಳಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಸಂಸದರು, ಶಾಸಕರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಇದನ್ನು ನಾವು ವಿರೋಧಿಸಬಾರದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News