ರಾಷ್ಟ್ರಪತಿ ಚುನಾವಣೆಗೆ ಮಹಾತ್ಮ ಗಾಂಧಿ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಹೆಸರು ಸೂಚಿಸಿದ ಎಡಪಕ್ಷಗಳು

Update: 2022-06-15 07:37 GMT
ಗೋಪಾಲ ಕೃಷ್ಣ ಗಾಂಧಿ, Photo:PTI

ಹೊಸದಿಲ್ಲಿ: ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಎಡಪಕ್ಷಗಳು ಮಹಾತ್ಮ ಗಾಂಧಿ ಅವರ ಮೊಮ್ಮಗ ಗೋಪಾಲ ಕೃಷ್ಣ ಗಾಂಧಿ ಅವರ ಹೆಸರನ್ನು ಸೂಚಿಸಿವೆ.  ಗಾಂಧಿ ಅವರು ಈ ಬಗ್ಗೆ ಯೋಚಿಸಲು ಕಾಲಾವಕಾಶ ಕೋರಿದ್ದಾರೆ ಎಂದು India Today ವರದಿ ಮಾಡಿದೆ.

ಮಂಗಳವಾರ ಶರದ್ ಪವಾರ್ ಅವರನ್ನು ಭೇಟಿಯಾದ ಎಡಪಕ್ಷಗಳು ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲರ ಹೆಸರನ್ನು ಸೂಚಿಸಿವೆ ಎಂದು ಮೂಲಗಳು ತಿಳಿಸಿವೆ. ಇಂದು ನಡೆಯಲಿರುವ ಮಮತಾ ಬ್ಯಾನರ್ಜಿ ನೇತೃತ್ವದ ಪ್ರತಿಪಕ್ಷಗಳ  ಸಭೆಯಲ್ಲಿ ಗಾಂಧಿ ಹೆಸರು ಪ್ರಸ್ತಾಪವಾಗುವ ಸಾಧ್ಯತೆ ಇದೆ.

India Today ಜೊತೆ ಮಾತನಾಡಿದ ಗೋಪಾಲಕೃಷ್ಣ ಗಾಂಧಿ, "ನನ್ನ ಹೆಸರಿನ  ಕುರಿತು ಒಮ್ಮತ ಮೂಡಿದರೆ ರಾಷ್ಟ್ರಪತಿ ಅಭ್ಯರ್ಥಿಯಾಗಲು ಒಪ್ಪುತ್ತೀರಾ ಎಂದು ನನ್ನನ್ನು ಕೇಳಲಾಗಿದೆ. ಈ ಮಹತ್ವದ ಸಲಹೆಯ ಬಗ್ಗೆ ಯೋಚಿಸಲು ನನಗೆ ಸ್ವಲ್ಪ ಸಮಯ ಬೇಕು ಎಂದು ನಾನು ಹೇಳಿದ್ದೇನೆ. ಇದಕ್ಕೆ ಸಂಬಂಧಿಸಿ ಎಲ್ಲರೊಂದಿಗೆ ಸಮಾಲೋಚನೆಗಳು ನಡೆಯುತ್ತಿವೆ. ಈ ಸಮಯದಲ್ಲಿ ಹೆಚ್ಚಿನದನ್ನು ಹೇಳುವುದು ಅವಸರವಾಗುತ್ತದೆ"  ಎಂದು ಹೇಳಿದರು.

2017 ರಲ್ಲಿ ಭಾರತದ ಉಪರಾಷ್ಟ್ರಪತಿ ಹುದ್ದೆಗೆ ಗಾಂಧಿಯವರು ವಿರೋಧ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿದ್ದರು.  ಆದರೆ ಚುನಾವಣೆಯಲ್ಲಿ ಎಂ. ವೆಂಕಯ್ಯ ನಾಯ್ಡು ವಿರುದ್ಧ ಸೋತಿದ್ದರು.

77 ವರ್ಷದ ಮಾಜಿ ಅಧಿಕಾರಿ ದಕ್ಷಿಣ ಆಫ್ರಿಕಾ ಹಾಗೂ  ಶ್ರೀಲಂಕಾಕ್ಕೆ ಭಾರತದ ಹೈ ಕಮಿಷನರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಮಹಾತ್ಮಾ ಗಾಂಧಿ ಹಾಗೂ  ಸಿ. ರಾಜಗೋಪಾಲಾಚಾರಿಯವರ ಮೊಮ್ಮಗ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರಪತಿ ಅಭ್ಯರ್ಥಿಯ ಆಯ್ಕೆಯ ಬಗ್ಗೆ ಚರ್ಚಿಸಲು ಹೊಸದಿಲ್ಲಿಯಲ್ಲಿ ಬುಧವಾರ ವಿವಿಧ ವಿರೋಧ ಪಕ್ಷಗಳ ಸಭೆಯನ್ನು ಕರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News