ಬಿಟ್ಟೆನೆಂದರೂ ಬಿಡದೀ ಮಾಯೆ!

Update: 2022-06-15 11:12 GMT

ಅತಿಥಿಯಾಗಿ ನಮ್ಮ ಬಾಳನ್ನು ಹೊಕ್ಕ ಈ ಮಾಯಾವಿ, ಈಗ ನಮ್ಮ ಬದುಕಿನ ಮಾಲಕನಾಗಲು ಹೊರಟಿದ್ದಾನೆ. ಎಚ್ಚೆತ್ತುಕೊಳ್ಳೋಣ. ಮೊಬೈಲ್‌ನ ಬಳಕೆಯನ್ನು ಸೀಮಿತಗೊಳಿಸಿ, ಮಿಕ್ಕುಳಿದ ಸಮಯವನ್ನು ಬದುಕಿಗೊಂದು ಅರ್ಥ ಕೊಡಲು ಪರಿಶ್ರಮ ಪಡೋಣ!

ಇನ್ನೂ ನೆನಪಿದೆ... ಸಣ್ಣ ಪೆಟ್ಟಿಗೆಯಂತಿದ್ದ ಆ ವಸ್ತು ಮನೆಗೆ ಕಾಲಿಟ್ಟ ಆ ದಿನ. ಇಡೀ ದಿನ ಶಾಲೆಯಲ್ಲಿ ಪಾಠ ಕೇಳಲಾರದೆ, ಹೊಸ ಅತಿಥಿಯ ಬಗ್ಗೆ ಕಲ್ಪಿಸುತ್ತಾ ದಿನ ದೂಡಿದ್ದೂ ನೆನಪಿದೆ. ಸಂಜೆಯ ‘ಲಾಂಗ್ ಬೆಲ್’ ಕೇಳಿಸಿದೊಡನೆ, ಮನೆಯ ಕಡೆ ‘ಹುಸೈನ್ ಬೋಲ್ಟ್’ನನ್ನೂ ಮೀರಿಸುವಂತೆ ಓಡಿ, ಆಗಮಿಸಿದ್ದ ಹೊಸ ನೆಂಟನ ದರ್ಶನ ಮಾಡಿ, ಮೊದಲ ಬಾರಿ ಸ್ಪರ್ಶಿಸಿದ ಆ ಅನುಭವ ಇನ್ನೂ ಮನ ಪಟಲದಲ್ಲಿ ಭದ್ರವಾಗಿ ನೆಲೆಯೂರಿದೆ... ನಿಮಗೆ ಅತಿಥಿಯ ಪರಿಚಯ ಇನ್ನೂ ಸಿಗಲಿಲ್ಲ ಅನ್ನಿಸುತ್ತೆ! ಕಪ್ಪುಬಿಳುಪಿನ ಪರದೆ, ದೊಡ್ಡ ದೊಡ್ಡ ಬಟನ್, ‘ಸ್ನೇಕ್ ಗೇಮ್’, ‘ಕ್ಲಾಸಿಕ್ ನೋಕಿಯಾ ಟೋನ್’.. ನೆನಪಾಯ್ತಾ ? ನೋಕಿಯಾ 1100..! ಹೇಗೆ ತಾನೇ ಮರೆಯಲು ಸಾಧ್ಯ ಹೇಳಿ??? ‘ರಿಂಗ್ ಟೋನ್ ಸೆಟ್ಟಿಂಗ್ಸ್’ಗಳನ್ನೇ ಮ್ಯೂಸಿಕ್ ಪ್ಲೇಯರ್‌ನಂತೆ ಬಳಸಿ, ಕೇಳಿದ ಟೋನ್ ಗಳನ್ನು ಪದೇ-ಪದೇ ಕೇಳುತ್ತಾ ಸಂತೋಷ ಪಡುತ್ತಿದ್ದ ಕ್ಷಣಗಳನ್ನು ಮೆಲುಕು ಹಾಕಿದರೆ, ಮುಖದ ಮೇಲೊಂದು ನಗು ಮಿಂಚಿ ಮಾಯವಾಗುತ್ತದೆ. ಬಿಡುವಿದ್ದರೆ, ಆ ಕಾಲದಲ್ಲಿ ಬಳಕೆಯಲ್ಲಿದ್ದ ಟೋನ್ ಗಳನ್ನೂ ಪುನಃ ಕೇಳಿ ನೋಡಿ ಈಗಲೂ ಒಂದು ಮಿಂಚಿನ ಸಂಚಾರದ ಅನುಭವವಾಗುತ್ತದೆ. ಎವರ್‌ಗ್ರೀನ್!

ಒಂದಾನೊಂದು ಕಾಲದಲ್ಲಿ ಮನೆಗೆ ಅತಿಥಿಯಾಗಿ ಬಂದ ಈ ಮೊಬೈಲ್ ಫೋನ್ ಎಂಬ ಆಗಂತುಕ, ಈಗ ನಮ್ಮಲ್ಲೇ ಒಬ್ಬನಾಗಿದ್ದಾನೆ. ಮನೆಯವರಲ್ಲಿ ಒಂದು ದಿನ ಮಾತನಾಡದೆ ಇರಬಹುದೇನೋ, ಆದರೆ ಈ ಜಂಗಮನಿಂದ ಅರೆಕ್ಷಣ ದೂರ ಇರಲಾರೆವು. ಆತ್ಮೀಯರನ್ನು ಸ್ಪರ್ಶಿಸುತ್ತೆವೆಯೋ ಇಲ್ಲವೋ, ಆದರೆ ಮೊಬೈಲ್ ಫೋನ್‌ನ ಮೈಯನ್ನು 5 ನಿಮಿಷಗಳಿಗೊಮ್ಮೆ ಸವರದೆ ಇರಲಾರೆವು. ಬೆಳಗ್ಗೆ ಕಣ್ತೆರೆಯುತ್ತಲೇ ಫೋನ್ ಸ್ಕ್ರೀನ್ ನೋಡುತ್ತಲೇ ಏಳುತ್ತೇವೆ!

ಒಂದು ಕಾಲದಲ್ಲಿ ಮಾತಾಡಲು ಮಾತ್ರ ಬಳಕೆಯಾಗುತ್ತಿದ್ದ ಈ ಸಾಧನ, ಈಗ ನಮ್ಮ ಬದುಕನ್ನೇ ನಿಯಂತ್ರಿಸುವ ಮಟ್ಟಿಗೆ ಬಂದಿದೆ ಎಂದರೆ ತಪ್ಪಾಗಲಾರದು. ನನ್ನ ಒಬ್ಬ ಗೆಳೆಯನಿದ್ದಾನೆ. ಮೊಬೈಲ್ ಕೈಯಲ್ಲಿದ್ದರೆ, ಮತ್ಯಾವುದರ ಪರಿವೆ ಇರುವುದಿಲ್ಲ ಈ ಅಸಾಮಿಗೆ! ಊಟ ಮಾಡುವಾಗಲೂ ಫೋನ್, ಶೌಚಕ್ಕೆ ಹೋದಾಗಲೂ ಫೋನ್! ಫೋನ್ ಹಿಡಿದು, ಒಂದೇ ಭಂಗಿಯಲ್ಲಿ ಗಂಟೆಗಟ್ಟಲೆ ಕಳೆಯಬಲ್ಲ ಅತಿಮಾನುಷ ಶಕ್ತಿ ಇದೆ ಇವನಲ್ಲಿ! ಎಷ್ಟು ಅರಚಿ ಕರೆದರೂ, ಬಾಗಿಲು ಬಡಿದರೂ ಅವನಿಗೆ ಕೇಳಿಸದು.

ಇತ್ತೀಚೆಗೆ ನನ್ನೊಬ್ಬ ಜೂನಿಯರ್ ಜೊತೆ ಹರಟುತ್ತಾ ಕೂತಿದ್ದೆ. ಹೀಗೆ ಮಾತಾಡುತ್ತಾ ಅವನು ಹೇಳಿದ ವಿಚಾರ ಕೇಳಿ ನಗು ಬಂತು. ಕೆಲ ದಿನಗಳ ಹಿಂದೆ ಅವನ ರೂಂಮೇಟ್ಸ್ ಪರಸ್ಪರ ಜಗಳವಾಡಿ, ಮಾತುಕತೆಗೆ ತಿಲಾಂಜಲಿ ಇಟ್ಟಿದ್ದರಂತೆ. ತಿಂಗಳುರುಳಿದೆ. ಮಾತಿಲ್ಲ..ಕಥೆಯಿಲ್ಲ.. ಬರೀ ಮೌನ! ಇತ್ಯರ್ಥ ಮಾಡಿಕೊಳ್ಳುವುದಕ್ಕೂ ಯಾರೊಬ್ಬನೂ ಮುಂದೆ ಬರುತ್ತಿಲ್ಲ. ಯಾಕೆ ಗೊತ್ತೆ? ಇವರಿಬ್ಬರ ಜೀವನದ ಖಾಲಿಯಾದ ಜಾಗವನ್ನು ‘ಸ್ಮಾರ್ಟ್ ಫೋನ್’ ಎಂಬಾತ ತುಂಬಿದ್ದಾನೆ. ದಿನ ಪೂರ್ತಿ ಫೋನ್ ಒಳಗೇ ಬಂಧಿಯಾಗಿ, ಮುರಿದು ಬಿದ್ದ ಗೆಳೆತನಕ್ಕೆ ತೇಪೆ ಹಚ್ಚುವುದಕ್ಕೂ ಇವರ ಬಳಿ ಸಮಯವಿಲ್ಲ! ಇವೆಲ್ಲ ಕೇಳಿದಾಗ, ಸ್ಮಾರ್ಟ್ ಪೋನ್ ನಮ್ಮ ಬಂಧು ಮಿತ್ರರ ಜಾಗವನ್ನು ಕಬಳಿಸುತ್ತಿದೆಯೇ? ಅನ್ನುವ ಪ್ರಶ್ನೆ ಕಾಡುತ್ತದೆ.

ದಶಕಗಳ ಹಿಂದೆ ‘Just a Need’ ಆಗಿದ್ದ ಈ ಆಗಂತುಕ, ಈಗ ಹಲವರ ‘ಅಡಿಕ್ಷನ್’ ಆಗಿಬಿಟ್ಟಿದ್ದಾನೆ. ಡಿಜಿಟಲ್ ಯುಗದಲ್ಲಿ ಕೈಯಲ್ಲೊಂದು ಸ್ಮಾರ್ಟ್ ಫೋನ್ ಇದ್ದರೆ, ಜಗತ್ತು ಅಂಗೈಯಲ್ಲಿದ್ದಂತೆ! ಡಿಜಿಟಲ್ ಎಂಬ ಸಾಗರದಲ್ಲಿ ಸಾಗುತ್ತಿರುವ ನಾವಿಕರು ನಾವು..! ಹಣಕಾಸು, ಖರೀದಿ, ಮನೋರಂಜನೆ ಎಲ್ಲವೂ ಫೋನ್‌ನೊಳಗೆ ಹುದುಗಿರುವ ಅಪ್ಲಿಕೇಶನ್ಸ್ ನಿಂದ ಸಾಧ್ಯ! ಬೆರಳ ತುದಿಯ ಆಟ!! ಒಂದು ಕ್ಷಣ ಯೋಚಿಸಿ, ಕೈಯಲ್ಲಿರುವ ಫೋನ್ ತಟಕ್ಕನೆ ಮಾಯವಾಗಿಬಿಟ್ಟರೆ?! ಭೂಕಂಪನದ ಅನುಭವ ಗ್ಯಾರಂಟಿ !

ಒಮ್ಮೆ ಟೈಮ್ ಟ್ರಾವೆಲ್ ಮಾಡೋಣ ಬನ್ನಿ.. 10 ವರ್ಷಗಳ ಹಿಂದೆ. ಆಗ ಬೆರಳುಗಳಲ್ಲಿ ಮಾತಾಡದೆ, ಬಾಯಲ್ಲೇ ಮಾತನಾಡುತ್ತಿದ್ದೆವು..! ಕ್ಷಣಗಳನ್ನು ಫೋನ್‌ನಲ್ಲಿ ಸೆರೆಹಿಡಿಯದೆ, ಮನದಲ್ಲೇ ಚಿತ್ರಿಸುತ್ತಿದ್ದೆವು..! ಮೊಬೈಲ್ ಗೇಮ್‌ನಲ್ಲಿ ಮುಳುಗದೆ, ಮೈದಾನದಲ್ಲಿ ಬೆವರಿಳಿಯುವಂತೆ ಆಡುತ್ತಿದ್ದೆವು.. ! ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹರಟದೆ, ಪ್ರತೀ ಸಂಜೆ ಸ್ನೇಹಿತರೊಡಗೂಡಿ ಮನಬಿಚ್ಚಿ ಹರಟುತ್ತಿದ್ದೆವು..! ಈಗ ಕಾಲ ಎಷ್ಟು ಬದಲಾಗಿದೆ ಅಲ್ವಾ ?! ಓಡುತ್ತಿರುವ ಬದುಕಿನಲ್ಲಿ ಇಷ್ಟೊಂದು ಬದಲಾವಣೆ ಆಗಬಹುದೆಂದು ಕನಸಿನಲ್ಲೂ ಊಹಿಸಿರಲಿಲ್ಲ.

ತಂತ್ರಜ್ಞಾನವು ನಮ್ಮ ಸಮಸ್ಯೆಗಳನ್ನು ದೂರ ಮಾಡಲು ವಿಕಾಸಗೊಳ್ಳುತ್ತಿದೆಯಾದರೂ, ಇದರ ವಿಪರೀತ ಅವಲಂಬನೆಯ ಪ್ರಭಾವದಿಂದಾಗಿ ಹೊಸ ಸಮಸ್ಯೆಗಳು ಜನ್ಮ ತಾಳುತ್ತಿದೆ ! ಸಂಜೆಯ ಹೊತ್ತು ಆಫೀಸ್‌ನ ಪ್ರಾಂಗಣದಲ್ಲಿ ಸುತ್ತಾಡುವುದು ನನ್ನ ಅಭ್ಯಾಸಗಳಲ್ಲೊಂದು. ನನ್ನ ಹಾಗೆ ಅದೆಷ್ಟೋ ಮಂದಿ ಹೀಗೆ ಅಡ್ಡಾಡುತ್ತಿರುತ್ತಾರೆ. ಕೆಲವರು ಮರದ ಕೆಳಗೆ ಪ್ರತಿಷ್ಠಾಪಿಸಿರುವ ಕಲ್ಲು ಬೆಂಚಿನ ಮೇಲೆ ಆಸೀನರಾಗಿರುತ್ತಾರೆ. ಅಡ್ಡಾಡುವವರು ಹಾಗೂ ಬೆಂಚಿನ ಮೇಲೆ ಕುಳಿತವರ ನಡುವೆ ಏನೋ ಒಂದು ಸಾಮ್ಯತೆ ಇರುವುದನ್ನು ನಾನು ಗಮನಿಸಿದ್ದೇನೆ. ಅದೇನಪ್ಪಾ ಅಂದ್ರೆ, ಇವರು ಯಾರೂ ಆ ಇಳಿಸಂಜೆಯ ಪ್ರಕೃತಿಯ ವೈಭವಕ್ಕೆ ತಲೆಬಾಗದೆ, ಸ್ಮಾರ್ಟ್ ಫೋನ್‌ಗೆ ಸಲಾಂ ಹೊಡೆಯುತ್ತಿರುತ್ತಾರೆ. ವೀಳ್ಯದೆಲೆಗೆ ಸುಣ್ಣ ಹಚ್ಚುವಂತೆ, ಮೊಬೈಲ್ ಸ್ಕ್ರೀನ್ ಉಜ್ಜುತ್ತಾ, ಒಳಗೊಳಗೇ ನಗುತ್ತಾ ಕಾಲಕಳೆಯುತ್ತಿರುತ್ತಾರೆ. ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದರ ಪರಿವೆ ಇಲ್ಲದೆ, ಫೋನ್‌ನೊಳಗೊಂದು ಲೋಕವ ಸೃಷ್ಟಿಸಿ, ಅದರೊಳಗೇ ಬದುಕುವ ಜೀವಂತ ಶವಗಳು ನಮ್ಮ ನಿಮ್ಮ ಮಧ್ಯೆ ಅವೆೆಷ್ಟೋ ಇವೆ.

ಮೊನ್ನೆ ಆಫೀಸ್‌ಗೆ ಹೋಗುತ್ತಿರುವ ವೇಳೆ, ಉದ್ಯೋಗಿಗಳನ್ನು ಒಯ್ಯುತ್ತಿದ್ದ ಬಸ್ ಎದುರಿಗೆ ಬಂತು. ಒಳಗಿದ್ದವರೆಲ್ಲರೂ ಕೈಯಲ್ಲೊಂದು ಮೊಬೈಲ್ ಹಿಡಿದು, ಕಿವಿಗೆ ಇಯರ್ ಫೋನ್ ತುರುಕಿ ಕೂತಿದ್ದರು. ಬಸ್ ಮುಂದೆ ದಾಟಿಹೊಗುತ್ತಿದ್ದಂತೆ, ಒಳಗಿದ್ದವರಲ್ಲಿ ಒಬ್ಬ ವಿಶೇಷವಾಗಿ ಕಂಡ! ಈತ ಉಳಿದವರಂತೆ ಮೊಬೈಲ್‌ನ ಬಂಧಿಯಾಗಿರಲಿಲ್ಲ. ಬದಲಾಗಿ ಕೈಯಲ್ಲೊಂದು ‘ಪುಸ್ತಕ’ ಹಿಡಿದು ಅದೇನೂ ಓದುವುದರಲ್ಲಿ ತಲ್ಲೀನನಾಗಿದ್ದ. ಈ ಶತಮಾನದ ಬಹು ವಿರಳ ಸನ್ನಿವೇಶ !

ಮೊನ್ನೆ ಆಫೀಸ್‌ನ ಪ್ರವೇಶ ದ್ವಾರದಲ್ಲಿ ಒಂದು ಅಪೂರ್ವ ದೃಶ್ಯ ಕಂಡೆ!!’ ಒಬ್ಬರು ಮಹಿಳೆ ರಾಕೆಟ್ ವೇಗದಲ್ಲಿ ಆಫೀಸ್‌ನ ಕಡೆ ಧಾವಿಸಿ ಬರುತ್ತಿದ್ದರು. ಕೈಯಲ್ಲಿ ಮೊಬೈಲ್ ಹಿಡಿದು, ಮೊಬೈಲ್ ಸ್ಕ್ರೀನ್‌ನಲ್ಲಿ ತೇಲುತ್ತಾ ಬರುತ್ತಿದ್ದ ಮಹಿಳೆಗೆ ಎದುರಿಗಿದ್ದ ಗಾಜಿನ ಬಾಗಿಲು ಮುಚ್ಚಿರುವ ಪರಿವೆಯೇ ಇರಲಿಲ್ಲ! ನೋಡ ನೋಡುತ್ತಿದ್ದಂತೆ ಮಹಿಳೆ ಗಾಜಿನ ಚೌಕಟ್ಟಿಗೆ ಡಿಕ್ಕಿ ಹೊಡೆದೇ ಬಿಟ್ಟರು !! ಅದ್ಯಾವ ಕೋನದಿಂದ ತೆರೆದಿರುವಂತೆ ತೋಚಿತೋ! ಪೇಚಿಗೊಳಗಾಗಿ ಅಲ್ಲಿಂದ ಕಾಲ್ಕಿತ್ತರು.

ಹೇಳಲಿಚ್ಚಿಸುವುದು ಇಷ್ಟೇ.. ಮೊಬೈಲ್ ಎಂಬ ಪೆಡಂಭೂತ ನಮ್ಮ ಬದುಕನ್ನು ಕಬಳಿಸಲಾರಂಭಿಸಿದೆ. ಐದಿಂಚಿನ ತೆರೆಯ ಒಳಗೆ ಬಂಧಿಯನ್ನಾಗಿಸಿದೆ. ಆ ಪುಟ್ಟ ಪರದೆಯಲ್ಲೇ ಎಲ್ಲವೂ ಸಿಗುವುದೆಂದು ನಂಬಿಸಿ ನಮ್ಮನ್ನು ವಶೀಕರಿಸಿಕೊಂಡಿದೆ. ಅತಿಥಿಯಾಗಿ ನಮ್ಮ ಬಾಳನ್ನು ಹೊಕ್ಕ ಈ ಮಾಯಾವಿ, ಈಗ ನಮ್ಮ ಬದುಕಿನ ಮಾಲಕನಾಗಲು ಹೊರಟಿದ್ದಾನೆ. ಎಚ್ಚೆತ್ತುಕೊಳ್ಳೋಣ. ಮೊಬೈಲ್‌ನ ಬಳಕೆಯನ್ನು ಸೀಮಿತಗೊಳಿಸಿ, ಮಿಕ್ಕುಳಿದ ಸಮಯವನ್ನು ಬದುಕಿಗೊಂದು ಅರ್ಥ ಕೊಡಲು ಪರಿಶ್ರಮ ಪಡೋಣ!

Writer - ಕಾರ್ತಿಕ್ ಕೃಷ್ಣ

contributor

Editor - ಕಾರ್ತಿಕ್ ಕೃಷ್ಣ

contributor

Similar News