ಏಳು ವರ್ಷ ಹಳೆಯ ಹತ್ಯೆ ಪ್ರಕರಣ: ನ್ಯಾಯಾಧೀಶರ ಪುತ್ರಿ ಸಿಬಿಐ ವಶಕ್ಕೆ

Update: 2022-06-15 13:26 GMT
(Shooter Sippy Sidhu)

ಚಂಡೀಗಢ: ಇಲ್ಲಿನ ಸೆಕ್ಟರ್ 27 ರ ಉದ್ಯಾನವನದಲ್ಲಿ ರಾಷ್ಟ್ರೀಯ ಶೂಟರ್ ಮತ್ತು ವಕೀಲ ಸುಖಮನ್‌ಪ್ರೀತ್ ಸಿಂಗ್ ಸಿಧು ಅಲಿಯಾಸ್ ಸಿಪ್ಪಿ ಸಿಧು ಅವರನ್ನು ಗುಂಡಿಕ್ಕಿ ಕೊಂದ ಸುಮಾರು ಏಳು ವರ್ಷಗಳ ನಂತರ, ಸಿಬಿಐ ಅಧಿಕಾರಿಗಳು ಬುಧವಾರ ಹಿಮಾಚಲ ಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ಸಬೀನಾ ಅವರ ಪುತ್ರಿ ಕಲ್ಯಾಣಿ ಸಿಂಗ್ ಅವರನ್ನು ಬಂಧಿಸಿದ್ದಾರೆ. ನ್ಯಾಯಮೂರ್ತಿ ಸಬೀನಾ ಅವರು ಹಿಮಾಚಲ ಪ್ರದೇಶ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ಮೃತ ಸಿಪ್ಪು ಸಿಧು ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಸ್‌ಎಸ್ ಸಿಧು ಅವರ ಮೊಮ್ಮಗರಾಗಿದ್ದಾರೆ. ಆರೋಪಿ ಕಲ್ಯಾಣಿ ಸಿಂಗ್ ಅವರನ್ನು ವಿಚಾರಣೆಗಾಗಿ ಸಿಬಿಐ ನಾಲ್ಕು ದಿನಗಳ ಕಸ್ಟಡಿಗೆ ಪಡೆದುಕೊಂಡಿದೆ ಎಂದು ವರದಿಯಾಗಿದೆ.

2015 ರ ಸೆಪ್ಟೆಂಬರ್ 20 ರಂದು ಸಿಪ್ಪಿ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಕಾರ್ಪೊರೇಟ್ ವಕೀಲರಾಗಿದ್ದ ಸಿಪ್ಪಿ ಸಿಧು ಅವರ ಮೃತದೇಹ ಚಂಡೀಗಢದ ಸೆಕ್ಟರ್ 27ರ ಉದ್ಯಾನವನದಲ್ಲಿ ಪತ್ತೆಯಾಗಿತ್ತು.  12 ಬೋರ್ ಗನ್ ಮೂಲಕ ಕೊಲೆ ಮಾಡಲಾಗಿದ್ದು, ಅದರಿಂದ ನಾಲ್ಕು ಗುಂಡುಗಳನ್ನು ಹಾರಿಸಲಾಗಿತ್ತು. ಚಂಡೀಗಢ ಪೊಲೀಸರು ಸೆಕ್ಟರ್ 26 ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದರು. ಜನವರಿ 2016 ರಲ್ಲಿ, ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು.

 ಚಂಡೀಗಢ ಆಡಳಿತದ ಕೋರಿಕೆಯ ಮೇರೆಗೆ ಸಿಬಿಐ 13 ಏಪ್ರಿಲ್ 2016 ರಂದು ಎಫ್‌ಐಆರ್ ದಾಖಲಿಸಿದೆ. "ಹೆಚ್ಚಿನ ತನಿಖೆಯ ಸಮಯದಲ್ಲಿ, ಪ್ರಕರಣದಲ್ಲಿ ಆರೋಪಿ (ಕಲ್ಯಾಣಿ ಸಿಂಗ್) ಭಾಗಿಯಾಗಿರುವುದು ಬೆಳಕಿಗೆ ಬಂದಿತು. ಅದರಂತೆ, ಅವರನ್ನು ವಿಚಾರಣೆಗೊಳಪಡಿಸಿ ಬಂಧಿಸಲಾಯಿತು" ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ. "ಆರೋಪಿಯನ್ನು ಇಂದು (ಬುಧವಾರ) ಚಂಡೀಗಢದ ವಿಶೇಷ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಮತ್ತು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ" ಎಂದು ವಕ್ತಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News