ನರೋಡಾ ಗಾಮ್ ಹತ್ಯಾಕಾಂಡ ಆರೋಪಿಗೆ ಹರಿದ್ವಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಮತಿಸಿದ ನ್ಯಾಯಾಲಯ

Update: 2022-06-15 14:25 GMT

ಹೊಸದಿಲ್ಲಿ: ಗುಜರಾತ್‍ನಲ್ಲಿ 2002ರ ಹಿಂಸಾಚಾರದ ವೇಳೆ ನಡೆದಿದ್ದ ನರೋಡಾ ಗಾಮ್ ಹತ್ಯಾಕಾಂಡ ಪ್ರಕರಣದ ಆರೋಪಿಗಳಲ್ಲೊಬ್ಬನಾಗಿರುವ ಫುಲಾಭಾಯಿ ವ್ಯಾಸ್ ಎಂಬಾತನಿಗೆ ಗುಜರಾತ್‍ನಿಂದ ಹರಿದ್ವಾರಕ್ಕೆ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅಹ್ಮದಾಬಾದ್ ವಿಶೇಷ ನ್ಯಾಯಾಲಯ ಅನುಮತಿಸಿದೆ ಎಂದು ವರದಿಯಾಗಿದೆ.

2008ರಲ್ಲಿ ತನಗೆ ಜಾಮೀನು ಮಂಜೂರುಗೊಳಿಸುವಾಗ ವಿಧಿಸಲಾಗಿದ್ದ ಷರತ್ತನ್ನು ಮಾರ್ಪಡಿಸುವಂತೆ ಕೋರಿ ವ್ಯಾಸ್ ಅರ್ಜಿ ಸಲ್ಲಿಸಿದ್ದ. ಈ ಷರತ್ತಿನ ಪ್ರಕಾರ ಆತ ಗುಜರಾತ್ ತೊರೆಯುವ ಹಾಗಿಲ್ಲ ಹಾಗೂ ರಾಜ್ಯದಿಂದ ಹೊರಗೆ ಹೋಗಬೇಕಿದ್ದರೆ ನ್ಯಾಯಾಲಯದ ಅನುಮತಿಯನ್ನು ಪಡೆಯಬೇಕಿದೆ.

ಫೆಬ್ರವರಿ 28., 2002 ರಂದು ನಡೆದ ನರೋಡಾ ಗಾಮ್ ಹತ್ಯಾಕಾಂಡ ಪ್ರಕರಣದ  84 ಆರೋಪಿಗಳಲ್ಲಿ ವ್ಯಾಸ್ ಒಬ್ಬನಾಗಿದ್ದಾನೆ.

ಹರಿದ್ವಾರದಲ್ಲಿ  ಆಲ್ ವಲ್ರ್ಡ್ ಗಾಯತ್ರಿ ಪರಿವಾರ್ ಎಂಬ ಸಂಘಟನೆ ಆಯೋಜಿಸುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಾಮೀನು ಷರತ್ತುಗಳ ಮಾರ್ಪಾಡಿಗೆ ಆತ ಕೋರಿದ್ದನಲ್ಲದೆ ಈ ಸಂಘಟನೆಯ ಅಜೀವ ಸದಸ್ಯತ್ವವನ್ನು ತಾನು ಹೊಂದಿರುವುದಾಗಿ ತಿಳಿಸಿದ್ದ.

ಇದೇ ಉದ್ದೇಶಕ್ಕೆ ಹಿಂದೆ ಆತನಿಗೆ 20 ಬಾರಿ ಅನುಮತಿ ನೀಡಲಾಗಿತ್ತು ಎಂದೂ ನ್ಯಾಯಾಲಯಕ್ಕೆ ತಿಳಿಸಲಾಯಿತು ಎನ್ನಲಾಗಿದೆ. ಆತನಿಗೆ ಅನುಮತಿ ನೀಡುವ ಕುರಿತಂತೆ ವಿಶೇಷ ಸಾರ್ವಜನಿಕ ಅಭಿಯೋಜಕರು ಯಾವುದೇ ಆಕ್ಷೇಪಣೆ ಸೂಚಿಸದೆ  ವಿಚಾರವನ್ನು ನ್ಯಾಯಾಲಯದ ತೀರ್ಮಾನಕ್ಕೆ ಬಿಟ್ಟಿದ್ದರು.

ಹರಿದ್ವಾರದಲ್ಲಿನ ಕಾರ್ಯಕ್ರಮದಲ್ಲಿ ಆತ ಭಾಗವಹಿಸುವಂತಾಗಲು ಜುಲೈ 1ರಿಂದ ಆರು ತಿಂಗಳ ಕಾಲ ಆತನ ಜಾಮೀನು ಷರತ್ತಿಗೆ ವಿನಾಯಿತಿ ನೀಡುವ ಆದೇಶವನ್ನು ಸಿಟ್ ನ್ಯಾಯಾಧೀಶ ಶುಭದಾ ಬಕ್ಷಿ ನೀಡಿದರು.

ತೆರಳುವ 24 ಗಂಟೆ ಮುನ್ನ ಹಾಗೂ ವಾಪಸ್ ಬಂದ 48 ಗಂಟೆಗಳಿಗೆ ಮುನ್ನ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಆತನಿಗೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News