ಹಾರಾಡಿ ರೈಲ್ವೇ ಸೇತುವೆ ಬಳಿ ರಸ್ತೆ ಅಭಿವೃದ್ಧಿಗೆ ಕ್ರಮ: ಜೀವಂಧರ್ ಜೈನ್

Update: 2022-06-15 13:29 GMT

ಪುತ್ತೂರು: ನಗರ ವ್ಯಾಪ್ತಿಯಲ್ಲಿನ ಜನತೆಯ ಬಹುದಿನ ಬೇಡಿಕೆಯಾದ ಹಾರಾಡಿ ರೈಲ್ವೇ ಸೇತುವೆ ಬಳಿಯಿಂದ ರೈಲ್ವೇ ನಿಲ್ದಾಣದ ವರೆಗಿನ ರಸ್ತೆ ಅಭಿವೃದ್ಧಿಗೆ ಈಗಾಗಲೇ ರೈಲ್ವೇ ಇಲಾಖೆ ನಗರಸಭೆಗೆ ನಿರಾಪೇಕ್ಷಣಾ ಪತ್ರ ನೀಡಿದೆ. ಈ ಭಾಗದ ಸದಸ್ಯರ ಬೇಡಿಕೆಯಂತೆ ಈ ರಸ್ತೆ ಅಭಿವೃದ್ಧಿಗೆ ಒಂದು ಕೋಟಿ ಬೇರೆ ಬೇರೆ ಅನುದಾನ ಹಾಗೂ ಉಳಿಕೆ ಮೊತ್ತದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್ ತಿಳಿಸಿದರು. 

ನಗರಸಭಾ ಸಾಮಾನ್ಯ ಸಭೆಯು ಬುಧವಾರ ನಗರಸಭಾ ಸಭಾಂಗಣದಲ್ಲಿ ಅಧ್ಯಕ್ಷ ಕೆ. ಜೀವಂಧರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 

ನಗರಸಭಾ ವ್ಯಾಪ್ತಿಯಲ್ಲಿರುವ ಬಹುತೇಕ ಉದ್ದಿಮೆದಾರರು ಪವಾನಗಿ ಇಲ್ಲದೆ ಉದ್ದಿಮೆ ನಡೆಸುತ್ತಿದ್ದಾರೆ. ಅಲ್ಲದೆ ಉದ್ದಿಮೆದಾರರು ನವೀಕರಣ ಮಾಡದೇ ಇದ್ದು, ಈ ನಿಟ್ಟಿನಲ್ಲಿ ನಗರಸಭೆ ವತಿಯಿಂದ ಮುಂದಿನ ದಿನಗಳಲ್ಲಿ ಉದ್ದಿಮೆ ಪರವಾನಿಗೆ ಸಹಿತ ನವೀಕರಣದ ಕುರಿತು ಸರ್ವೆ ಕಾರ್ಯ ಮಾಡಲಾಗುವುದು ಎಂದು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ತಿಳಿಸಿದ್ದಾರೆ.

ನಗರಸಭಾ ವ್ಯಾಪ್ತಿಯ ಮುರದಿಂದ ಸಂಪ್ಯ ಬೈಪಾಸ್ ರಸ್ತೆಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಪರ್ಮನೆಂಟ್ ಪರವಾನಗಿ ನೀಡಬಾರದು ಎಂದು ಲೋಕೋಪಯೋಗಿ ಇಲಾಖೆಯಿಂದ ಆಕ್ಷೇಪವಿದ್ದು, ನಗರಸಭೆ ಪ್ರಸ್ತುತ ಯಾರಿಗೂ ಪರವಾನಗಿ ನೀಡುತ್ತಿಲ್ಲ. ಎಂದು ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು.

ನಗರದ ಮಯೂರ ಥಿಯೇಟರ್ ಬಳಿ ನೂತನ ವೃತ್ತ ನಿರ್ಮಾಣದ ಕುರಿತು ಯೋಜನೆಯಿದ್ದು, ನಗರಸಭೆ ಹಾಗೂ ಪುಡಾ ಜಂಟಿಯಾಗಿ ಅಂದಾಜುಪಟ್ಟಿ ತಯಾರಿಸಿದೆ. ಈ ಕುರಿತು ಪುಡಾ ನಗರಸಭೆಗೆ ನೀಡಬೇಕಾದ ಪಾವತಿ ಏನಿದೆ ಅದನ್ನು ನೀಡುವ ಕುರಿತು ಒಪ್ಪಿಕೊಂಡಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ನಗರೋತ್ಥಾನ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಈಗಾಗಲೇ 30 ಕೋಟಿ ಅನುದಾನ ಬಂದಿದ್ದು, ಈ ಪೈಕಿ ಅಮೃತ ನಗರ ಯೋಜನೆಗೆ ಮೂರು ಕೋಟಿ ಇಡಲಾಗಿದೆ ಎಂದು ತಿಳಿಸಲಾಯಿತು.

ನಗರವನ್ನು ಪ್ಲಾಸ್ಟಿಕ್‍ಮುಕ್ತ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ವಾರ್ಡ್ ಸದಸ್ಯರ ಸಲಹೆ ಮೇರೆಗೆ ಯೋಜನೆಯನ್ನು ಕೈಗೊಳ್ಳಲು ಏನು ಮಾಡಬಹುದು ಎಂಬುದನ್ನು ಮೊದಲು ಚರ್ಚಿಸಬೇಕಾಗಿದೆ. ಆದರೆ ದಂಡ ಪ್ರಯೋಗ ಬೇಡ, ಪ್ಲಾಸ್ಟಿಕ್ ಬಳಕೆಗೆ ಪರ್ಯಾಯವಾಗಿ ಏನು ಮಾಡಬಹುದು ಎಂಬುದರ ಕುರಿತು ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು. ಈ ಕುರಿತು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕೆಲಸ ಶಾಲಾ-ಕಾಲೇಜುಗಳಿಂದ ಹಾಗೂ ಪೋಷಕರಿಂದಲೂ ಆಗಬೇಕು. ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ಸಭಾ ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್.ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ, ಪೌರಾಯುಕ್ತ ಮಧು ಎಸ್.ಮನೋಹರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News