×
Ad

ರೈತರನ್ನು ಬಲಿ ಕೊಟ್ಟಾಯಿತು, ಈಗ ಸೈನಿಕರ ಸರದಿಯೇ?: ಅಗ್ನಿಪಥ್ ಯೋಜನೆ ವಿರುದ್ಧ ಸಿದ್ದರಾಮಯ್ಯ ಕಿಡಿ

Update: 2022-06-17 11:22 IST

ಬೆಂಗಳೂರು, ಜೂ.17: ಅಗ್ನಿಪಥ್ ಯೋಜನೆಯನ್ನು ಕೂಡಲೇ ರದ್ದುಪಡಿಸಿ ಈಗಿನ ಸೇನಾ ನೇಮಕಾತಿ ಯೋಜನೆಯಡಿಯಲ್ಲಿಯೇ ಸೈನಿಕರ ನೇಮಕಾತಿ ನಡೆಯಬೇಕು ಎಂದು ಒತ್ತಾಯಿಸಿರುವ ರಾಜ್ಯ ವಿಪಕ್ಷ ನಾಯಕ ಸಿದ್ದರಾಮಯ್ಯ, ರೈತರನ್ನು ಬಲಿಗೊಟ್ಟಾಯಿತು, ಈಗ ಸೈನಿಕರ ಸರದಿಯೇ? ಎಂದು ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ, "ದೇಶದ ಯುವಜನರನ್ನು ನಿರುದ್ಯೋಗದ ಕೂಪಕ್ಕೆ ತಳ್ಳುವ ಮತ್ತು ದೇಶದ ಭದ್ರತೆಗೆ ಅಪಾಯಕಾರಿಯಾಗಬಲ್ಲ ಅಗ್ನಿಪಥ್ ಎಂಬ ಯೋಜನೆಯನ್ನು ಕೇಂದ್ರದ ಬಿಜೆಪಿ ಸರಕಾರ ತಕ್ಷಣ ರದ್ದುಪಡಿಸಿ ಈಗಿನ ಸೇನಾ ನೇಮಕಾತಿ ಯೋಜನೆಯಡಿಯಲ್ಲಿಯೇ ಸೈನಿಕರ ನೇಮಕಾತಿ ನಡೆಯಬೇಕು. ರೈತರನ್ನು ಬಲಿಗೊಟ್ಟಾಯಿತು, ಈಗ ಸೈನಿಕರ ಸರದಿಯೇ?" ಎಂದು ಪ್ರಶ್ನಿಸಿದ್ದಾರೆ.

ವರ್ಷಕ್ಕೆ ಎರಡು ಕೋಟಿ ಉದ್ಯೋಗದ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರೇ, ಉದ್ಯೋಗಾವಕಾಶದ ಬಾಗಿಲುಗಳನ್ನು ಒಂದೊಂದಾಗಿ ಮುಚ್ಚುತ್ತಾ ಇರುವ ನಿಮಗೆ ಪ್ರತಿವರ್ಷ ಎರಡು ಕೋಟಿ ನಿರುದ್ಯೋಗಿಗಳನ್ನು ಸೃಷ್ಟಿಸುವ ಗುಪ್ತಾ ಅಜೆಂಡಾ ಏನಾದರೂ ಇದೆಯೇ? ಎಂದು ವ್ಯಂಗ್ಯವಾಡಿದ್ದಾರೆ.

ಉದ್ಯೋಗದ ಅಭದ್ರತೆ, ಭವಿಷ್ಯದ ಬಗೆಗಿನ ಭಯ ಮತ್ತು ವೃತ್ತಿ ಬಗೆಗಿನ ಅತೃಪ್ತಿಯನ್ನು ಹುಟ್ಟುಹಾಕಲಿರುವ ಅಗ್ನಿಪಥ್ ಯೋಜನೆಯಡಿ ನೇಮಕಗೊಂಡ ಸೈನಿಕರು ತಮ್ಮ ವೃತ್ತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಲು ಸಾಧ್ಯವೇ? ಶತ್ರುಗಳ ಜೊತೆ ಕಾದಾಡಲಿರುವ ಸೈನಿಕರ ಈ ಮನಸ್ಥಿತಿ ಅಪಾಯಕಾರಿಯಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ದೇಶಕ್ಕಾಗಿ ಪ್ರಾಣತ್ಯಾಗ ಮಾಡಲು ಸಿದ್ಧರಾಗುವ ಸೈನಿಕರಿಗೆ ಉದ್ಯೋಗದ ಭದ್ರತೆ, ನ್ಯಾಯಬದ್ಧ ಸಂಬಳ, ಪಿಂಚಣಿ ಮತ್ತಿತರ ಸೌಲಭ್ಯಗಳನ್ನು ಒದಗಿಸಲಾಗದಷ್ಟು ಕೇಂದ್ರದ ಬಿಜೆಪಿ ಸರಕಾರ ದಿವಾಳಿಯಾಗಿದೆಯೇ? ನಿಮ್ಮ ದಿವಾಳಿತನ ಮುಚ್ಚಿಡಲು ದೇಶದ ಭದ್ರತೆಯ ಜೊತೆ ಚೆಲ್ಲಾಟವಾಡಲು ಹೋಗಬೇಡಿ ಪ್ರಧಾನಿಗೆ ಕಿವಿಮಾತು ಹೇಳಿದ್ದಾರೆ.

ಸೈನಿಕರ ಅನ್ನ ಕಸಿಯಲು ಹೊರಟಿರುವ ಈ ದೇಶದ್ರೋಹಿ, ಜನವಿರೋಧಿ ಬಿಜೆಪಿ ಸರಕಾರ ಮುಂದಿನ ದಿನಗಳಲ್ಲಿ ಇತರ ಸರಕಾರಿ ಉದ್ಯೋಗಗಳ ಮೇಲೆಯೂ ಸವಾರಿ ಮಾಡಲು ಹೊರಡುವುದು ಖಚಿತ. ಎಚ್ಚೆತ್ತುಕೊಳ್ಳಲು ಇದು ಸಕಾಲ ಎಂದಿರುವ ಸಿದ್ದರಾಮಯ್ಯ, ರೈತರ ಬದುಕು ನಾಶ ಮಾಡಲು ಕರಾಳ ಕೃಷಿ ಕಾಯ್ದೆಗಳನ್ನು ತಂದಿದ್ದ ಕೇಂದ್ರದ ಬಿಜೆಪಿ ಸರಕಾರಕ್ಕೆ ದೇಶದ ಜನ ಪಾಠ ಕಲಿಸಿದ್ದಾರೆ. ಈಗ ಯುವಜನರ ಬದುಕು ನಾಶದ ಜೊತೆಯಲ್ಲಿ ಸೈನಿಕರ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವವರಿಗೂ ಪಾಠ ಕಲಿಸಲು ದೇಶದ ಜನತೆ ಮುಂದಾಗಬೇಕು ಎಂದು ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News