×
Ad

ಪರಿಷ್ಕೃತ ಪಠ್ಯ ಹಿಂದಕ್ಕೆ ಪಡೆಯದಿದ್ದರೆ ಶಾಂತಿ ಕದಡಿ ಹೋಗುತ್ತದೆ: ಟಿ.ಎ.ನಾರಾಯಣಗೌಡ

Update: 2022-06-17 18:50 IST

ಬೆಂಗಳೂರು, ಜೂ.17: ಒಂದು ವೇಳೆ ಸರಕಾರ ಕೂಡಲೇ ಪರಿಷ್ಕೃತ ಪಠ್ಯಗಳನ್ನು ಹಿಂದಕ್ಕೆ ಪಡೆಯದಿದ್ದರೆ ಪರಿಸ್ಥಿತಿ ಕೈಮೀರಿ ಹೋಗುವುದು ಖಚಿತ. ಇಡೀ ರಾಜ್ಯದ ಶಾಂತಿ ಕದಡಿ ಹೋಗುತ್ತದೆ. ಅದರ ಹೊಣೆಯನ್ನು ಸರಕಾರವೇ ಹೊರಬೇಕಾಗುತ್ತದೆ. ಜನರನ್ನು ಎದುರು ಹಾಕಿಕೊಂಡ ಸರಕಾರಗಳು ಉಳಿಯುವುದಿಲ್ಲ. ಇದನ್ನು ಮರೆಯಬೇಡಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಅಸ್ಮಿತೆಗೆ ಧಕ್ಕೆ ತಂದಿರುವ ಪರಿಷ್ಕೃತ ಪಠ್ಯವನ್ನು ಹಿಂದಕ್ಕೆ ಪಡೆಯಲು ಮೇಲಿಂದ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ವಿನಂತಿಸಿದ್ದೇನೆ. ಆದರೆ, ಅವರು ಯಾರದೋ ಒತ್ತಡದಿಂದ ಸುಮ್ಮನಿದ್ದಾರೆ ಎನಿಸುತ್ತಿದೆ. ಇನ್ನು ತಡಮಾಡುವುದು ಸರಿಯಲ್ಲ. ಕೂಡಲೇ ಪರಿಷ್ಕೃತ ಪಠ್ಯ ಹಿಂದಕ್ಕೆ ಪಡೆಯಿರಿ ಎಂದು ಅವರು ಆಗ್ರಹಿಸಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಹಲವಾರು ಮಂದಿ ಮಹಾಮಹಿಮರಿಗೆ, ದಾರ್ಶನಿಕರಿಗೆ ಅಪಮಾನಗಳಾಗಿವೆ. ಮಕ್ಕಳಿಗೆ ನಾವು ಈ ವಿಷವುಣಿಸುವುದು ಬೇಡ. ಸ್ವತಃ ಶಿಕ್ಷಣ ಸಚಿವರೇ ತಪ್ಪುಗಳು ಆಗಿದೆ ಎಂದು ಒಪ್ಪಿಕೊಂಡಿದ್ದಾರೆ. ಆಗಿರುವುದು ತಪ್ಪುಗಳಲ್ಲ, ಪ್ರಮಾದಗಳು. ಈ ಪಠ್ಯ ಬೇಡವೇ ಬೇಡ ಎಂದು ನಾರಾಯಣಗೌಡ ಒತ್ತಾಯಿಸಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಆಗಿರುವ ವಿಕೃತಿಗಳ ವಿರುದ್ಧ ಇಡೀ ನಾಡಿನ ಸಾಹಿತಿಗಳು, ಶಿಕ್ಷಣ ತಜ್ಞರು, ಮಠಾಧೀಶರು, ಬುದ್ಧಿಜೀವಿಗಳು, ಹೋರಾಟಗಾರರು ಧ್ವನಿ ಎತ್ತಿದ್ದಾರೆ. ಆಗಿರುವ ಪ್ರಮಾದಗಳನ್ನು ಎತ್ತಿ ತೋರಿಸಿದ್ದಾರೆ. ಇನ್ನು ತಡ ಮಾಡುವುದರಲ್ಲಿ ಅರ್ಥವಿಲ್ಲ. ಪಠ್ಯ ಹಿಂದಕ್ಕೆ ಪಡೆಯಲಿ ಎಂದು ಅವರು ಹೇಳಿದ್ದಾರೆ.

ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಪರಿಷ್ಕೃತ ಪಠ್ಯವನ್ನು ಹಿಂದಕ್ಕೆ ಪಡೆಯಲು ಮನವಿ ಮಾಡಿದ್ದೆ, ಈ ಕುರಿತು ಪರಿಶೀಲನೆ ನಡೆಸುವ ಭರವಸೆ ನೀಡಿದ್ದರು. ಆದರೆ ಕಾಣದ ಶಕ್ತಿಗಳು ಅವರ ಕೈಗಳನ್ನು ಕಟ್ಟಿಹಾಕಿವೆಯೇನೋ ಅನಿಸುತ್ತದೆ. ಸಮಸ್ಯೆ ಬಿಗಡಾಯಿಸುವುದಕ್ಕೆ ಮುನ್ನ ಮುಖ್ಯಮಂತ್ರಿ ಕ್ರಮ ಕೈಗೊಳ್ಳಬೇಕು ಎಂದು ನಾರಾಯಣಗೌಡ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಜನರ ಅಹವಾಲಿಗೆ ಕಿವಿಗೊಡಬೇಕು, ಪ್ರಜಾಪ್ರಭುತ್ವದಲ್ಲಿ ಜನರೇ ದೊರೆಗಳು. ಸಂವಿಧಾನೇತರ ಶಕ್ತಿಗಳು ಸರಕಾರವನ್ನು ನಿಯಂತ್ರಿಸಬಾರದು. ನಾಡಿನಾದ್ಯಂತ ಪ್ರಜ್ಞಾವಂತ ಜನರು ಬೀದಿಗಿಳಿದು ಹೋರಾಡುತ್ತಿದ್ದಾರೆ. ಅವರ ಧ್ವನಿಯನ್ನು ಸರಕಾರ ಗುರುತಿಸಬೇಕು. ಮಾನ್ಯತೆ ನೀಡಬೇಕು ಎಂದು ಅವರು ಹೇಳಿದ್ದಾರೆ.

ಬಸವಣ್ಣ, ಅಲ್ಲಮಪ್ರಭು, ವಾಲ್ಮೀಕಿ, ಕನಕದಾಸ, ಪುರಂದರದಾಸ, ಶಂಕರಾಚಾರ್ಯ, ಶಿಶುನಾಳ ಶರೀಫ, ಕುವೆಂಪು ಮೊದಲುಗೊಂಡು ಕರ್ನಾಟಕದ ದಾರ್ಶನಿಕರು, ಸಂತರಿಗೆ ಪರಿಷ್ಕೃತ ಪಠ್ಯದಲ್ಲಿ ಅಪಮಾನಿಸಲಾಗಿದೆ. ಕನ್ನಡತನ, ಕನ್ನಡಾಭಿಮಾನಕ್ಕೆ ಕುತ್ತು ತರಲಾಗಿದೆ. ಇದನ್ನು ಒಪ್ಪಿಕೊಳ್ಳುವುದು ಸಾಧ್ಯವೇ ಇಲ್ಲ ಎಂದು ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶ ಇಂದು ಹಲವಾರು ಬಗೆಯ ಸಂಕಟ, ಸಂಘರ್ಷಗಳಲ್ಲಿ ಬೆಂದುಹೋಗುತ್ತಿದೆ. ಪಠ್ಯಪುಸ್ತಕ ಪರಿಷ್ಕರಣೆಯ ಹೆಸರಿನಲ್ಲಿ ಸರಕಾರ ನಮ್ಮ ನಾಡಿನಲ್ಲಿ ಹೊಸದೊಂದು ಸಂಘರ್ಷದ ವಾತಾವರಣವನ್ನು ಮೈಮೇಲೆ ಎಳೆದುಕೊಳ್ಳುತ್ತಿದೆ. ಸರಕಾರದ ಒಣಹಟ, ಪ್ರತಿಷ್ಠೆಗೆ ರಾಜ್ಯ ಬೇಯುವುದು ಬೇಡ ಎಂದು ಅವರು ಹೇಳಿದ್ದಾರೆ.

ರಾಜ್ಯದ ಸರ್ವ ಧರ್ಮ, ಜಾತಿ, ಸಮುದಾಯಗಳ ಜನರು ಅನ್ಯೋನ್ಯವಾಗಿ ಶಾಂತಿಯಿಂದ ಬದುಕುತ್ತಿದ್ದಾರೆ. ಅವರ ಸಮುದಾಯಗಳ ಮಹಾಮಹಿಮರಿಗೆ ಅಪಮಾನವೆಸಗುವ ಮೂಲಕ ಸಂಘರ್ಷದ ವಾತಾವರಣ ನಿರ್ಮಿಸಲಾಗಿದೆ. ಸರಕಾರ ವಿವೇಕದಿಂದ ವರ್ತಿಸಿ ಪರಿಷ್ಕೃತ ಪಠ್ಯ ಹಿಂದಕ್ಕೆ ಪಡೆಯಲಿ ಎಂದು ನಾರಾಯಣಗೌಡ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News