×
Ad

ದ್ವಿತೀಯ ಪಿಯುಸಿ ಫಲಿತಾಂಶ: ರಾಜ್ಯಕ್ಕೆ ಎರಡನೆ ಸ್ಥಾನ ಪಡೆದ ಇಲ್ಹಾಮ್ ಗೆ ಸೈಕಾಲಜಿಸ್ಟ್ ಆಗುವಾಸೆ

Update: 2022-06-18 15:30 IST

ಮಂಗಳೂರು : ‘‘ನನಗೆ ಮೊದಲಿನಿಂದಲೂ ಸೈಕಾಲಜಿಸ್ಟ್ ಆಗುವ ಆಸೆ. ನಾನು ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ದುಕೊಳ್ಳಲು ಕೂಡಾ ಅದೇ ಕಾರಣವಾಗಿತ್ತು. ಮುಂದೆ ಬಿಎಸ್ಸಿ ಕ್ಲಿನಿಕಲ್ ಸೈಕಾಲಜಿಯಲ್ಲಿ ಅಧ್ಯಯನ ಮಾಡಬೇಕೆಂದಿರುವೆ.’’

ಇದು ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ 597 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿರುವ, ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ಇಲ್ಹಾಮ್ ಆಸೆ.

ವೃತ್ತಿಯಲ್ಲಿ ಸೂಪರ್ ಮಾರುಕಟ್ಟೆ ಮ್ಯಾನೇಜರ್ ಆಗಿರುವ ರಫೀಕ್ ಹಾಗೂ ಗೃಹಿಣಿ ಮೊಯ್ಝತುಲ್ ಕುಬ್ರಾ ದಂಪತಿ ಪುತ್ರಿಯಾಗಿರುವ ಇಲ್ಹಾಂ ತನ್ನ ಪೋಷಕರ ಜತೆ ತನ್ನ ಸಾಧನೆಯ ಬಗ್ಗೆ ಸಂತಸ ಹಂಚಿಕೊಂಡರು.

‘‘ಶೇ. ೯೫ಕ್ಕಿಂತ ಅಧಿಕ ಅಂಕ ಗಳಿಸುವ ನಿರೀಕ್ಷೆ ಇತ್ತು. ಅದಕ್ಕಿಂತಲೂ ಹೆಚ್ಚಿನ ಅಂಕ ದೊರಕಿರುವುದು ಖುಷಿ ನೀಡಿದೆ. ತರಗತಿಗೆ ಗೈರಾಗದೆ, ಉಪನ್ಯಾಸಕರ ಪಾಠ ಪ್ರವಚನಗಳ ಬಗ್ಗೆ ಹೆಚ್ಚು ಗಮನ ಕೊಟ್ಟು ಆಲಿಸಿದ್ದಲ್ಲದೆ, ನನ್ನ ಶ್ರಮವನ್ನು ಸಂಪೂರ್ಣವಾಗಿ ನೀಡಿದ್ದೇನೆ. ಪ್ರತಿಯೊಂದು ವಿಷಯದಲ್ಲೂ ಕಾಲೇಜಿನ ಉಪನ್ಯಾಸಕರು ಹೆಚ್ಚಿನ ಪ್ರೋತ್ಸಾಹ, ಪ್ರೇರಣೆ ನೀಡಿರುವುದೇ ಈ ಅಂಕಗಳನ್ನು ಗಳಿಸಲು ಸಾಧ್ಯವಾಗಿದೆ’’ ಎಂದು ಇಲ್ಹಾಮ್  ಹೇಳಿಕೊಂಡಿದ್ದಾರೆ.

‘‘ಸ್ವ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಿದ್ದೆ. ದಿನದಲ್ಲಿ ಕನಿಷ್ಠ ಮೂರು ಗಂಟೆಯನ್ನು ಓದಿಗಾಗಿ ಮೀಸಲಿಡುತ್ತಿದ್ದೆ. ಜತೆಗೆ ನನಗೆ ಸಾಹಸಮಯ ಕಾದಂಬರಿಗಳನ್ನು ಓದುವುದೆಂದರೆ ಇಷ್ಟ. ಪೇಯ್ಟಿಂಗ್ ನನ್ನ ಹವ್ಯಾಸ. ನಾನು ಯಾವುದೇ ರೀತಿಯ ಕೋಚಿಂಗ್ ಅಥವಾ ಟ್ಯೂಶನ್‌ಗೆ ಹೋಗಿರಲಿಲ್ಲ. ನನ್ನ ಗುರಿ ಇಂಜಿನಿಯರಿಂಗ್ ಅಥವಾ ಇತರ ಯಾವುದೇ ಕ್ಷೇತ್ರ ಆಗಿರದ ಕಾರಣ ಇತರ ಪೂರಕ ಪರೀಕ್ಷೆಗಳ ಬಗ್ಗೆಯೂ ನಾನು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಪಿಯುಸಿಯ ಬೋರ್ಡ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದು ಮಾತ್ರ ನನ್ನ ಗುರಿಯಾಗಿತ್ತು’’ ಎಂದು ಇಲ್ಹಾಮ್ ಅಭಿಪ್ರಾಯಿಸಿದ್ದಾರೆ.

‘‘ಮಗಳು ಬಾಲ್ಯದಿಂದಲೂ ಕಲಿಕೆಯಲ್ಲಿ ಚುರುಕಾಗಿದ್ದ ಕಾರಣ, ಆಕೆ ದ್ವಿತೀಯ ಪಿಯುಸಿಯಲ್ಲಿಯೂ ಉತ್ತಮ ಅಂಕ ಪಡೆಯುವ ನಿರೀಕ್ಷೆ ಇತ್ತು. ಆಕೆ ಸ್ವ ಅಧ್ಯಯನಕ್ಕೆ ಹೆಚ್ಚು ಒತ್ತು, ಆಸಕ್ತಿ ವಹಿಸಿದವಳು. ಇಂಜಿನಿಯರಿಂಗ್ ಬಗ್ಗೆ ನಾವು ಮಾತನಾಡಿದ್ದರೂ ಆಕೆಗೆ ಆಸಕ್ತಿ ಸೈಕಾಲಜಿ ಬಗ್ಗೆ ಇದ್ದ ಕಾರಣ ನಾವು ಆಕೆಗೆ ಪ್ರೋತ್ಸಾಹ ನೀಡಿದ್ದೇವೆ. ಆಕೆ ಪ್ರಾಮಾಣಿಕವಾಗಿ ಶ್ರಮ ವಹಿಸಿದ್ದಾಳೆ. ಸಂತ ಅಲೋಶಿಯಸ್ ಕಾಲೇಜಿನ ಎಲ್ಲಾ ಉಪನ್ಯಾಸಕರು ಪ್ರೋತ್ಸಾಹ ನೀಡಿದ್ದರಿಂದ ಆಕೆ ಉತ್ತಮ ಅಂಕ ಪಡೆಯುವಲ್ಲಿ ಸಹಕಾರಿಯಾಯಿತು’’ ಎಂದು ಇಲ್ಹಾಮ್ ರ ಪೋಷಕರು ಪ್ರತಿಕ್ರಿಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News