ಸರಕಾರಿ ಸೇವೆಗಳನ್ನು ವ್ಯವಸ್ಥಿತವಾಗಿ ಜನರಿಗೆ ತಲುಪಿಸಿ: ಕಡಬ ತಾಲೂಕಿನ ಅಲಂಕಾರಿನಲ್ಲಿ ಡಿಸಿ ಗ್ರಾಮ ವಾಸ್ತವ್ಯ

Update: 2022-06-18 16:50 GMT

ಮಂಗಳೂರು: ಪಿಂಚಣಿ ಸವಲತ್ತುಗಳನ್ನು 72 ಗಂಟೆಯೊಳಗೆ ಫಲಾನುವಿಭಗಳಿಗೆ ನೀಡಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.  ಅಧಿಕಾರಿಗಳಿಗೆ ಸೂಚಿಸಿದರು.

ಕಡಬ ತಾಲೂಕಿನ ಅಲಂಕಾರ್ ಗ್ರಾಮದಲ್ಲಿ ಶನಿವಾರ ನಡೆದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸರಕಾರಿ ಸೇವೆಗಳನ್ನು ಸುಲಭವಾಗಿ ಜನರಿಗೆ ತಲುಪುವಂತೆ ಮಾಡಬೇಕು. ಎಲ್ಲಾ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ಸರಿಪಡಿಸಬಹುದಾದ ಸಮಸ್ಯೆಗಳನ್ನು ಗ್ರಾಮ ವಾಸ್ತವ್ಯದ ಸ್ಥಳದಲ್ಲೇ ತಕ್ಷಣ ಪರಿಹರಿಸಿ ಕೊಡಲಾಗುವುದು. ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು ಕೋವಿಡ್ ಮುನ್ನೆಚ್ಚರಿಕಾ ಲಸಿಕೆಯನ್ನು ವಿತರಿಸಲು ವಿಶೇಷ ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ವಸತಿ ಮತ್ತು ಭೂರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪಟ್ಟಿ ತಯಾರಿಸಿ ಅವರಿಗೆ ಭೂಮಿ ನೀಡುವ ಕೆಲಸವನ್ನು ಗ್ರಾಪಂ ವ್ಯಾಪ್ತಿಯಲ್ಲಿ ಮಾಡಬೇಕು ಎಂದು ಡಿಸಿ ಸೂಚಿಸಿದರು.

ಎಂಡೋ ಸಲ್ಫಾನ್ ಪೀಡಿತರಿಗೆ ಆಧಾರ್ ಕಾರ್ಡ್, ಅಂಗವೈಕಲ್ಯ ಕಾರ್ಡ್ ಮತ್ತು ಅವರಿಗೆ ತಿಂಗಳಿಗೆ ನೀಡುವ ಪಿಂಚಣಿಗಳ ವರದಿಯನ್ನು ವಾರದೊಳಗೆ ಸಲ್ಲಿಸಬೇಕು ಎಂದು ಡಿಸಿ ತಾಕೀತು ಮಾಡಿದರು.

ಸಭೆಯಲ್ಲಿ ಸಚಿವ ಎಸ್.ಅಂಗಾರ, ಗ್ರಾಪಂ ಅಧ್ಯಕ್ಷ ಸದಾನಂದ ಆಚಾರ್ಯ, ಉಪಾಧ್ಯಕ್ಷೆ ರೂಪಾಶ್ರೀ, ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ತಾಪಂ ಇಒ ನವೀನ್ ಭಂಡಾರಿ, ಭೂದಾಖಲೆಗಳ ಅಧಿಕಾರಿ ನಿರಂಜನ್, ಪ್ರಾಥಮಿಕ ಕೃಷಿ ಪತ್ತಿನ ಕ್ರೆಡಿಟ್ ಸಹಕಾರಿ ಸಂಘದ ಅಧ್ಯಕ್ಷ ಧರ್ಮಪಾಲ ರಾವ್, ಉಪಾಧ್ಯಕ್ಷ ಪ್ರದೀಪ್ ರೈ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News