VIDEO- ಪರಿಷ್ಕೃತ ಪಠ್ಯ ವಾಪಸ್ಸಿಗೆ ಒತ್ತಾಯಿಸಿ ಒಂದಾದ ಕರ್ನಾಟಕ

Update: 2022-06-18 18:19 GMT

ಬೆಂಗಳೂರು, ಜೂ.18: ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಸಿದ್ಧಪಡಿಸಿರುವ ವಿವಾದಿತ ಪರಿಷ್ಕೃತ ಪಠ್ಯ ಪುಸ್ತಕಗಳನ್ನು ರಾಜ್ಯ ಸರಕಾರ ಈ ಕೂಡಲೇ ವಾಪಸ್ಸು ಪಡೆಯಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳಿಗೆ ಆಗ್ರಹಿಸಿ ನಡೆಸಿದ ಬೃಹತ್ ಹೋರಾಟದಲ್ಲಿ ಕರ್ನಾಟಕದ ಮೂಲೆ ಮೂಲೆಗಳಿಂದ ಚಿಂತಕರು, ಸಾಹಿತಿಗಳು, ಹೋರಾಟಗಾರರು, ಸಂಘ ಸಂಸ್ಥೆಗಳ ಪ್ರಮುಖರು, ವಿವಿಧ ಪಕ್ಷದ ನಾಯಕರು ಪಾಲ್ಗೊಂಡು ಧ್ವನಿಗೂಡಿಸಿದರು.

ಶನಿವಾರ ಇಲ್ಲಿನ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದ ಮುಂಭಾಗ ವಿಶ್ವಮಾನವ, ಕ್ರಾಂತಿಕಾರಿ, ಮಹಾಕವಿ ಕುವೆಂಪು ಹೋರಾಟ ಸಮಿತಿ, ಕರ್ನಾಟಕ ಭೀಮ ಸೇನೆ, ರಾಜ್ಯ ಒಕ್ಕಗಲಿಗರ ಸಂಘ, ಸಿಐಟಿಯು, ದಲಿತ ಹಕ್ಕುಗಳ ಸಮಿತಿ, ಅಲೆಮಾರಿ ಬುಡಕಟ್ಟು ಮಹಾಸಭಾ, ಕೆಆರ್‍ಎಸ್ ಪಕ್ಷ, ದಲಿತ ಸಂಘರ್ಷ ಸಮಿತಿ, ಭೀಮ್ ಆರ್ಮಿ, ಎಸ್‍ಡಿಪಿಐ, ಜೆಡಿಎಸ್, ಕಾಂಗ್ರೆಸ್ ಪಕ್ಷ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಮೊದಲಾದ ಸಂಘಟನೆಗಳ ನೇತೃತ್ವದಲ್ಲಿ ಸಾವಿರಾರು ಹೋರಾಟಗಾರರು ಫ್ರೀಡಂ ಪಾರ್ಕ್ ಮೈದಾನದವರೆಗೂ ಕಾಲ್ನಡಿಗೆ ಜಾಥಾ ನಡೆಸಿದರು.

ವಿವಾದಿತ ಪಠ್ಯಪುಸ್ತಕ ಹಿಂಪಡೆಯಬೇಕು ಮತ್ತು ನಾಡಗೀತೆ, ನಾಡಧ್ವಜ, ಕುವೆಂಪು ಅವರಿಗೆ ಅವಮಾನಿಸಿದ ರೋಹಿತ್ ಚಕ್ರತೀರ್ಥ ಅವರನ್ನು ಬಂಧಿಸಬೇಕು. ಅಷ್ಟೇ ಅಲ್ಲದೆ, ಪಠ್ಯಪುಸ್ತಕವನ್ನು ಕೇಸರಿಕರಣಗೊಳಿಸಲಾಗಿದೆ, ನಾಡಿನ ಗಣ್ಯರನ್ನು ಅವಮಾನಿಸಲಾಗಿದೆ ಎಂದು ಹೋರಾಟಗಾರರು ಘೋಷಣೆ ಕೂಗಿ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಕಾಲ್ನಡಿಗೆ ಜಾಥಾ ಬಳಿಕ ಫ್ರೀಡಂ ಪಾರ್ಕ್‍ನಲ್ಲಿ ಸಮಾವೇಶಗೊಂಡ ನಾಡಿನ ಹಿರಿಯ ಸಾಹಿತಿಗಳು, ವಿವಿಧ ಮಠಗಳ ಸ್ವಾಮೀಜಿಗಳು, ವಿವಿಧ ಸಂಘಟನೆಗಳ ಮುಖಂಡರು, ಪ್ರಗತಿಪರ ಹೋರಾಟಗಾರರು ಮತ್ತು ಶಿಕ್ಷಣ ತಜ್ಞರು, ಪಠ್ಯ ಪರಿಷ್ಕರಣೆ ವಿಚಾರದಲ್ಲಿ ರಾಜ್ಯದ ನಾಡು ನುಡಿಯ ಅಂತಃಸತ್ವಕ್ಕೆ ಧಕ್ಕೆ ತಂದ ಆರೋಪ ಹಾಲಿ ಸಮಿತಿ ಮೇಲಿದೆ. ಸಮಸಮಾಜದ ನಿರ್ಮಾಣಕ್ಕೆ ಬದ್ಧರಾಗಬೇಕಾಗಿರುವ ಮಕ್ಕಳ ಮನಸ್ಸಿನ ಮೇಲೆ ವರ್ಣಭೇದ ನೀತಿ ಹೇರಿಕೆಯಾಗಬಾರದು. ಹೀಗಾಗಿ, ಈ ಕೂಡಲೇ ಪರಿಷ್ಕøತ ಪಠ್ಯ ವಾಸಪ್ಸು ಪಡೆಯಲು ಸರಕಾರ ಮುಂದಾಗಲಿ ಎಂದು ಹೇಳಿದರು.

ಪ್ರಮುಖವಾಗಿ ಸಮಾವೇಶದ ನೇತೃತ್ವವಹಿಸಿ ತಮ್ಮ ಅಭಿಪ್ರಾಯ ಮಂಡಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಪರಿಷ್ಕøತ ಪಠ್ಯಪುಸ್ತಕಗಳ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ಇದೆ. ಅಲ್ಲದೆ, ಈ ಹೋರಾಟ ತಾರ್ಕಿಕ ಅಂತ್ಯಕ್ಕೆ ತಲುಪಬೇಕು ಎಂದು ತಿಳಿಸಿದರು. 

ಹೋರಾಟ ಸಮಿತಿ ಯಾವುದೇ ಸಂದರ್ಭದಲ್ಲಿ ಕರೆದರೂ ಪ್ರತಿಭಟನೆಗೆ ಬರಲು ನಾನು ಸಿದ್ಧ ಎಂದ ಅವರು, ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ವಿಚಾರದಲ್ಲಿ ಗೋಕಾಕ್ ಚಳವಳಿ ಒಂದು ಮಾದರಿ. ಆಗ ವರನಟ ರಾಜಕುಮಾರ್ ಹೋರಾಟವನ್ನು ಮುನ್ನಡೆಸಿದ್ದರು. ಈಗ ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಈ ಹೋರಾಟವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಹಳ್ಳಿ, ಹಳ್ಳಿಗೂ ಹೋರಾಟ ಕೊಂಡೊಯ್ಯುತ್ತೇವೆ. ಸರಕಾರ ತಕ್ಷಣ ಪರಿಷ್ಕೃತ ಪಠ್ಯಪುಸ್ತಕಗಳನ್ನು ವಾಪಸ್ ಪಡೆಯಬೇಕು. ಇಲ್ಲವಾದರೆ 2024ರ ಚುನಾವಣೆಯ ಬಳಿಕ ಈ ಪಠ್ಯಪುಸ್ತಕಗಳನ್ನು ಕಿತ್ತೆಸೆಯಲಾಗುವುದು ಘೋಷಿಸಿದರು.

ಕೆಟ್ಟ ಸಂಸ್ಕೃತಿಯ ಹುಟ್ಟನ್ನು ಪ್ರಾರಂಭದಲ್ಲೇ ಚಿವುಟಬೇಕು, ಉತ್ತಮ ಸಮಾಜದ ಕಟ್ಟುವಿಕೆ ನಮ್ಮೆಲ್ಲರ ಧ್ಯೇಯ ಎಂದ ಅವರು, ಕಾಂಗ್ರೆಸ್ ಪಕ್ಷವೂ ಇದರ ವಿರುದ್ಧ ನಿರಂತರ ಹೋರಾಟ ಮಾಡುವ ಜೊತೆಗೆ, ಜನರಿಗೂ ಸತ್ಯವನ್ನು ತಿಳಿಸುವ ಕೆಲಸ ಮಾಡಲಿದೆ ಎಂದರು.

ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ನಾಡು, ನುಡಿ, ಮಣ್ಣಿಗಾಗಿ ದುಡಿದ ಅನೇಕರು ಇನ್ನೂ ಬದುಕಿದ್ದೇವೆ. ಹೀಗಿರುವಾಗ, ಸರಕಾರಿ ಶಾಲೆಗಳು ಆರೆಸ್ಸೆಸ್ ಪಡಸಾಲೆ ಮಾಡಿಕೊಂಡಿದ್ದೀರಾ? ಎಂದು ಪ್ರಶ್ನೆ ಮಾಡಿದರು.

ಜಾತಿ, ಧರ್ಮ ಎಲ್ಲವನ್ನೂ ಮರೆತು ಎಲ್ಲರೂ ಪಠ್ಯಪರಿಷ್ಕರಣೆಯನ್ನು ವಿರೋಧಿಸಬೇಕಿದೆ. ನೈತಿಕತೆ ಇಲ್ಲದ ಶಿಕ್ಷಣ ಯಾಕೆ ಬೇಕು ಎಂದ ಅವರು, ರಾಷ್ಟ್ರಕವಿಗೆ ಅವಮಾನ ಮಾಡಿದವರನ್ನು ಇನ್ನೂ ಯಾಕೆ ಬಂಧಿಸಿಲ್ಲ. ನಾಡಗೀತೆಗೆ ಅವಮಾನ ಮಾಡಿದಾಗಲೇ ರೋಹಿತ್ ಚಕ್ರತೀರ್ಥನನ್ನು ಬಂಧಿಸಬೇಕಿತ್ತು. ಬೇರೆಯವರಿಗೆ ಸುಮೊಟೊ ಕೇಸ್ ಹಾಕುವ ಪೊಲೀಸರು, ಈತನ ವಿರುದ್ಧ ಕ್ರಮ ಏಕೆ ಕೈಗೊಂಡಿಲ್ಲ ಎಂದು ಕೇಳಿದರು.

ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ನಿಷ್ಕ್ರಿಯವಾಗಿವೆ. ಸಂಸ್ಕøತಿ ಬಗ್ಗೆ ಅವರ ಬಳಿ ಪಾಠ ಕೇಳುವ ಅವಶ್ಯಕತೆ ಇಲ್ಲ. ಸಂಸ್ಕøತಿಯನ್ನು ಕೊಟ್ಟವರು ನಾವು. ಈ ದೇಶದ ಸಂಸ್ಕೃತಿಗೆ ಮೂಲಪುರುಷರು ನಾವು. ಅವರು ಹೊರಗಡೆಯಿಂದ ಬಂದವರು. ಹೀಗಾಗಿ ಹೊರಗಡೆ ಮಾತನ್ನೇ ಆಡುತ್ತಾರೆ. ರೋಹಿತ್ ಚಕ್ರತೀರ್ಥನ ಬಂಧನವನ್ನು ಮಾಡಿಸದೆ ಬಿಡುವುದಿಲ್ಲ ಎಂದು ತಿಳಿಸಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹೀಂ ಮಾತನಾಡಿ, ಎನ್‍ಆರ್ಸಿ ಮಾಡುವಾಗಲೇ ಜನಾಕ್ರೋಶದ ಬಗ್ಗೆ ನಾವು ಈ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದೆ. ಆದರೆ, ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈಗ ಅವರಿಗೆ ಬಿಸಿ ಮುಟ್ಟಿಸುತ್ತಿದ್ದೇವೆ. ಮುಂದೆ, ಕುವೆಂಪು, ಬಸವಣ್ಣ ಅವರ ಸಿದ್ಧಾಂತ ಇರುವ ಸರಕಾರ ಬರಲಿದ್ದು, ಆಗ ಎಲ್ಲವನ್ನೂ ಕಿತ್ತುಹಾಕುತ್ತೇವೆ ಎಂದು ಹೇಳಿದರು.

ಸಮಾವೇಶದಲ್ಲಿ ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಅಧ್ಯಕ್ಷ ಜಿ.ಬಿ.ಪಾಟೀಲ, ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಪೀಠದ ನಂಜಾವಧೂತ ಸ್ವಾಮೀಜಿ, ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್, ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಸಂಗೀತ ನಿರ್ದೇಶಕ ಹಂಸಲೇಖ, ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಹಿರಿಯ ನ್ಯಾಯವಾದಿಗಳಾದ ಸಿ.ಎಚ್.ಹನುಮಂತರಾಯ, ಸಿ.ಎಸ್.ದ್ವಾರಕಾನಾಥ್, ಮುಖ್ಯಮಂತ್ರಿ ಚಂದ್ರು, ಅಕ್ಕೈ ಪದ್ಮಶಾಲಿ, ಶಾಸಕ ಕೃಷ್ಣಪ್ಪ, ಶಿವರಾಮೇಗೌಡ, ಪ್ರವೀಣ್ ಶೆಟ್ಟಿ, ಸಾ.ರಾ.ಗೋವಿಂದು ಸೇರಿದಂತೆ ಹಲವಾರು ಮುಖಂಡರಿದ್ದರು.

‘ಶೇ.3ರಷ್ಟು ಮಂದಿ ಹೇಳಿದ್ದು ಓದಲು ತಯಾರಿಲ್ಲ’

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಲ್ಲಿಗೆ ಬಂದು ಪರಿಷ್ಕøತ ಪಠ್ಯ ವಿತರಿಸುವುದಿಲ್ಲ ಎಂದು ಭರವಸೆ ಕೊಟ್ಟರೆ ಸರಿ. ಇಲ್ಲವೆಂದರೆ ನಾವು ಮುಖ್ಯಮಂತ್ರಿ ಮನೆ ಮುಂದೆ ಹೋರಾಟ ಮಾಡುತ್ತೇವೆ. 
ಶಿಕ್ಷಣಕ್ಕೆ ಜನಿವಾರ ಹಾಕಬೇಡಿ. ನಾವು ಬ್ರಾಹ್ಮಣರ ವಿರೋಧಿ ಅಲ್ಲ. ಆದರೆ, ಶೇ.97 ರಷ್ಟಿರುವ ನಾವು ಶೇ.3 ರಷ್ಟಿರುವವರು ಹೇಳಿದ್ದನ್ನು ಓದಲು ತಯಾರಿಲ್ಲ. ಬಸವಣ್ಣರಿಗೆ ಅವಮಾನ ಮಾಡಿದ ನೀವು ಬದುಕಲು ಯೋಗ್ಯರಲ್ಲ ಎಂದು ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿದರು.


ಪರಿಷ್ಕೃತ ಪಠ್ಯಪುಸ್ತಕದ ಪ್ರತಿ ಹರಿದು ಎಸೆದ ಡಿಕೆಶಿ

ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ವತಿಯಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಷಣ ಮುಗಿಸಿದ ಬಳಿಕ ಪರಿಷ್ಕøತ ಪಠ್ಯಪುಸ್ತಕದ ಪ್ರತಿಯೊಂದನ್ನು ಹರಿದು ಎಸೆದು ಆಕ್ರೋಶ ಹೊರಹಾಕಿದರು.

500 ಮಂದಿ ಸಹಿ ಹಾಕಿ ನಿರ್ಣಯ ಮಂಡನೆ

ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ನೇತೃತ್ವದಲ್ಲಿ ಎಚ್.ಡಿ.ದೇವೇಗೌಡ, ಡಿ.ಕೆ. ಶಿವಕುಮಾರ್, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಹಾಗೂ ವಿವಿಧ ಮಠಾಧೀಶರು, ಸಾಹಿತಿಗಳು ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಹಕ್ಕೊತ್ತಾಯ ನಿರ್ಣಯ ಮಂಡಿಸಿ ಸಹಿ ಮಾಡಿದರು. 

ಪ್ರಮುಖ ಬೇಡಿಕೆಗಳು:

* ಪ್ರೊ. ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ರೂಪಿಸಿದ್ದ ಹಳೆಯ ಪಠ್ಯಪುಸ್ತಕಗಳನ್ನು ಮುಂದುವರಿಸಬೇಕು.
* ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ರೂಪಿಸಿರುವ ಪರಿಷ್ಕೃತ ಪಠ್ಯಪುಸ್ತಕಗಳನ್ನು ತಕ್ಷಣ ವಾಪಸ್ ಪಡೆಯಬೇಕು.
* ನಾಡಗೀತೆ, ನಾಡ ಬಾವುಟ ಮತ್ತು ಕುವೆಂಪು ಅವರಿಗೆ ಅವಮಾನ ಮಾಡಿರುವ ರೋಹಿತ್ ಚಕ್ರತೀರ್ಥ ವಿರುದ್ಧ ದೇಶದ್ರೋಹ, ನಾಡದ್ರೋಹ ಆರೋಪದಡಿ ಮೊಕದ್ದಮೆ ದಾಖಲಿಸಿ, ಬಂಧಿಸಬೇಕು.

* ಪಠ್ಯಪುಸ್ತಕಗಳ ಪರಿಷ್ಕರಣೆ ವಿವಾದಕ್ಕೆ ಕಾರಣರಾದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಂದ ತಕ್ಷಣ ರಾಜೀನಾಮೆ ಪಡೆಯಬೇಕು.

10 ದಿನಗಳ ಗಡುವು

ರಾಜ್ಯ ಸರಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಲು ಹತ್ತು ದಿನಗಳ ಗಡುವು ನೀಡಲು ನಿರ್ಧರಿಸಲಾಗಿದೆ. ಹತ್ತು ದಿನಗಳ ಬಳಿಕ ಮುಂದಿನ ಹೋರಾಟ ಕೈಗೊಳ್ಳುವುದಾಗಿ ಸಮಿತಿ ಅಧ್ಯಕ್ಷ ಜಿ.ಬಿ. ಪಾಟೀಲ ಸಮಾವೇಶದಲ್ಲಿ ಘೋಷಿಸಿದರು.

ಸರಕಾರದ ನಡೆಗೆ ಆಕ್ರೋಶ

ಹಕ್ಕೊತ್ತಾಯದ ನಿರ್ಣಯದ ಪ್ರತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವೀಕರಿಸಬೇಕೆಂಬ ಆಗ್ರಹವನ್ನು ತಳ್ಳಿಹಾಕಿರುವ ಸರಕಾರದ ನಡೆಗೆ ಆಕ್ರೋಶ ಹೊರಹಾಕಲಾಯಿತು.

ಮುಖ್ಯಮಂತ್ರಿಯವರೇ ಸ್ಥಳಕ್ಕೆ ಬಂದು ಮನವಿಪತ್ರ ಸ್ವೀಕರಿಸಬೇಕು. ಪೊಲೀಸ್ ಅಧಿಕಾರಿಗಳ ಮೂಲಕ ಶುಕ್ರವಾರವೇ ಸರಕಾರದ ಗಮನಕ್ಕೆ ತರಲಾಗಿದೆ. ಆದರೆ, ಮುಖ್ಯಮಂತ್ರಿ ಗೈರಾಗುವ ಮೂಲಕ ನಿರ್ಲಕ್ಷ್ಯ ವಹಿಸಿದ್ದು, ಅವರು ಸ್ಪಂದಿಸದಿದ್ದರೆ, ಹೋರಾಟ ಮುಂದಿನ ದಿನಗಳಲ್ಲಿ ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News