ಪಥ ತಪ್ಪಿದ ‘ಅಗ್ನಿಪಥ’

Update: 2022-06-19 07:13 GMT

ಯುವ ಜನಸಂಖ್ಯೆಯು ಭಾರತದ ಭವ್ಯ ಭವಿಷ್ಯದ ಆಶಾಕಿರಣವಾಗಬೇಕಾಗಿತ್ತು. ಆದರೆ ಯುವಜನತೆಯನ್ನು ಹತಾಶೆ ಕಾಡುತ್ತಿರುವುದು ಸ್ಪಷ್ಟವಾಗಿದೆ. ಅವರಿಗೆ ತಾವು ಬಯಸಿದ ಅಥವಾ ತರಬೇತಿ ಪಡೆದ ಕೆಲಸಗಳು ಸಿಗುತ್ತಿಲ್ಲ. ಬೇಡಿಕೆ ತುಂಬಾ ಹೆಚ್ಚಾಗಿದೆ ಮತ್ತು ಅವಕಾಶಗಳು ಅತ್ಯಲ್ಪವಾಗಿವೆ. ಅಗ್ನಿಪಥ್ ಯೋಜನೆಯ ವಿರುದ್ಧ ಬಿಹಾರ ಮತ್ತು ಉತ್ತರ ಭಾರತದ ಹಲವು ರಾಜ್ಯಗಳು ಸಿಡಿದೇಳಲು ಕಾರಣ ಇದು.

ಮೋದಿ ಸರಕಾರದ ನೂತನ ‘ಅಗ್ನಿಪಥ್’ ಯೋಜನೆಗೆ ಬಿಹಾರದಲ್ಲಿ ಯಾಕೆ ಅತಿ ಹೆಚ್ಚಿನ ಆಕ್ರೋಶ ವ್ಯಕ್ತವಾಗಿದೆ ಎನ್ನುವುದನ್ನು ತಿಳಿಯಬೇಕಾದರೆ, ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಬೆಳಗ್ಗಿನ ನಡಿಗೆಗೆ ಹೋಗಬೇಕು. 1970ರ ದಶಕದ ಆರಂಭದಲ್ಲಿ ‘ಜೆಪಿ ಚಳವಳಿ’ಯು ಇಲ್ಲೇ ಹುಟ್ಟಿಕೊಂಡಿತು. ಇಂದಿರಾ ಗಾಂಧಿಯ ಸರ್ವಾಧಿಕಾರಿ ಆಳ್ವಿಕೆಯ ವಿರುದ್ಧದ ವಿದ್ಯಾರ್ಥಿಗಳು ಮತ್ತು ಯುವಜನರ ಪ್ರಬಲ ಹೋರಾಟದ ನೇತೃತ್ವವನ್ನು ಜಯಪ್ರಕಾಶ ನಾರಾಯಣರು ವಹಿಸಿದರು. ಈ ವಿಶಾಲ ಮೈದಾನವು ಇಂದಿನ ಯುವ ಭಾರತದ ಎರಡು ಭಿನ್ನ ಸತ್ಯಗಳಿಗೆ- ಭರವಸೆ ಮತ್ತು ನಿರಾಶೆ- ಕನ್ನಡಿ ಹಿಡಿಯುತ್ತದೆ.

ಭಾರತವು ಹೊಂದಿರುವ ಅಗಾಧ ಯುವ ಜನಸಂಖ್ಯೆ ಮತ್ತು ಅದು ಹೊಂದಿರುವ ರಚನಾತ್ಮಕತೆಯು ಭರವಸೆಯನ್ನು ಸೃಷ್ಟಿಸುತ್ತದೆ. ಇತ್ತೀಚೆಗೆ ನಾನು ಪಾಟ್ನಾಗೆ ಭೇಟಿ ನೀಡಿದ್ದೆ. ಪ್ರತೀ ಬೆಳಗ್ಗೆ ಅಲ್ಲಿ ನೂರಾರು ಬಾಲಕರು ಮತ್ತು ಬಾಲಕಿಯರು ಕಠಿಣ ದೈಹಿಕ ಕಸರತ್ತುಗಳನ್ನು ನಡೆಸುವುದನ್ನು ನಾನು ನೋಡಿದೆ. ಅವರಿಗೆ ತರಬೇತಿ ನೀಡುವವರಿದ್ದರು. ಆ ತರಬೇತಿದಾರರನ್ನು ಡಝನ್‌ಗಟ್ಟಳೆ ತರಬೇತಿ ಸಂಸ್ಥೆಗಳು ನೇಮಿಸಿದ್ದವು. ಈ ಯುವಜನರಿಗೆ ಸೇನೆಯಲ್ಲಿ, ತಪ್ಪಿದರೆ ಬಿಎಸ್‌ಎಫ್, ಸಿಆರ್‌ಪಿಎಫ್, ರೈಲ್ವೆ ಪೊಲೀಸ್ ಮತ್ತು ರಾಜ್ಯ ಪೊಲೀಸ್ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವ ಭರವಸೆಯನ್ನು ಈ ತರಬೇತಿ ಸಂಸ್ಥೆಗಳು ನೀಡುತ್ತಿವೆ.

 ಬಿಹಾರದಲ್ಲಿ ಉದ್ಯೋಗಕ್ಕಾಗಿ ಜನರು ಹಾಹಾಕಾರ ಪಡುತ್ತಿರುವುದನ್ನೂ ನಾವು ನೋಡುತ್ತಿದ್ದೇವೆ. ಹೆಚ್ಚಿನ ರೈಲು ನಿಲ್ದಾಣಗಳು ಕೋಚಿಂಗ್ ಕೇಂದ್ರಗಳಾಗಿಯೂ ಕೆಲಸ ಮಾಡುತ್ತಿವೆ. ಅಲ್ಲಿ ಸಾವಿರಾರು ಯುವಜನರು ಐಎಎಸ್ ಸೇರಿದಂತೆ ಕೆಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಹುದ್ದೆಗಳಿಗಾಗಿ ನಡೆಯುವ ಪ್ರವೇಶ ಪರೀಕ್ಷೆಗಳಿಗಾಗಿ ತರಬೇತಿ ಪಡೆಯುತ್ತಾರೆ. ಇಂತಹ ಪರಿಸ್ಥಿತಿಯನ್ನು ನಾವು ದಕ್ಷಿಣ ಮತ್ತು ಪಶ್ಚಿಮ ಭಾರತದಲ್ಲಿ ಹೆಚ್ಚಾಗಿ ಕಾಣುವುದಿಲ್ಲ. ಯಾಕೆಂದರೆ ಈ ರಾಜ್ಯಗಳ ಆರ್ಥಿಕತೆಗಳು ಬಿಹಾರಕ್ಕೆ ಹೋಲಿಸಿದರೆ ಹೆಚ್ಚು ಬಲಿಷ್ಠವಾಗಿವೆ. ಅಲ್ಲಿ ಸಶಸ್ತ್ರ ಪಡೆಗಳು ಮತ್ತು ಸರಕಾರಿ ಇಲಾಖೆಗಳ ಉದ್ಯೋಗಗಳನ್ನು ಹೊರತುಪಡಿಸಿ ಖಾಸಗಿ ವಲಯದಲ್ಲಿ ಉದ್ಯೋಗಾವಕಾಶಗಳು ಲಭ್ಯವಿವೆ.

ಯುವ ಜನಸಂಖ್ಯೆಯು ಭಾರತದ ಭವ್ಯ ಭವಿಷ್ಯದ ಆಶಾಕಿರಣವಾಗಬೇಕಾಗಿತ್ತು. ಆದರೆ ಯುವಜನತೆಯನ್ನು ಹತಾಶೆ ಕಾಡುತ್ತಿರುವುದು ಸ್ಪಷ್ಟವಾಗಿದೆ. ಅವರಿಗೆ ತಾವು ಬಯಸಿದ ಅಥವಾ ತರಬೇತಿ ಪಡೆದ ಕೆಲಸಗಳು ಸಿಗುತ್ತಿಲ್ಲ. ಬೇಡಿಕೆ ತುಂಬಾ ಹೆಚ್ಚಾಗಿದೆ ಮತ್ತು ಅವಕಾಶಗಳು ಅತ್ಯಲ್ಪವಾಗಿವೆ. ಅಗ್ನಿಪಥ್ ಯೋಜನೆಯ ವಿರುದ್ಧ ಬಿಹಾರ ಮತ್ತು ಉತ್ತರ ಭಾರತದ ಹಲವು ರಾಜ್ಯಗಳು ಸಿಡಿದೇಳಲು ಕಾರಣ ಇದು.

ಭಾರತೀಯ ಸೇನೆಯು ಕಳೆದ ಎರಡು ವರ್ಷಗಳಿಂದ ನೇಮಕಾತಿಯನ್ನು ನಿಲ್ಲಿಸಿರುವುದೂ ಯುವಜನರ ಆಕ್ರೋಶಕ್ಕೆ ಒಂದು ಕಾರಣವಾಗಿದೆ. ಆದರೆ, ಅವರ ಆಕ್ರೋಶಕ್ಕೆ ದೊಡ್ಡ ಕಾರಣ ಸ್ವತಃ ಅಗ್ನಿಪಥ ಯೋಜನೆಯ ಅಂಶಗಳೇ.

ಮೊದಲನೆಯದು, ನೇಮಕಾತಿ ಸಂಖ್ಯೆಯನ್ನು ಸಶಸ್ತ್ರ ಪಡೆಗಳು ಹೆಚ್ಚಿಸಿಲ್ಲ. 17.5ರಿಂದ 21 ವರ್ಷ ಪ್ರಾಯದ ಸುಮಾರು 45,000 ಯುವಕರನ್ನು ಮಾತ್ರ ನೇಮಕ ಮಾಡಿಕೊಳ್ಳಲಾಗುತ್ತದೆ. ಆದರೆ, ಆಕಾಂಕ್ಷಿಗಳು ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ಆಕರ್ಷಕ ಹೆಸರಿನೊಂದಿಗೆ ಬಂದ ಯೋಜನೆಯು ಆಕಾಂಕ್ಷಿಗಳ ನಿರೀಕ್ಷೆಯ ಮಟ್ಟವನ್ನು ತಲುಪಲು ವಿಫಲವಾದಾಗ ಆಕ್ರೋಶ ಸ್ಫೋಟಗೊಂಡಿತು.

ಎರಡನೆಯದು, ಸೇನೆ, ನೌಕಾಪಡೆ ಮತ್ತು ವಾಯುಪಡೆಯನ್ನು ಸೇರಲು ಬಯಸಿದ್ದ ಆಕಾಂಕ್ಷಿಗಳನ್ನು ಮತ್ತಷ್ಟು ನಿರಾಶೆಗೊಳಿಸಿದ ಅಂಶವೆಂದರೆ, ಹೀಗೆ ನೇಮಕಾತಿಗೊಂಡವರ ಪೈಕಿಯೂ ಕೇವಲ ಶೇ.25 ಮಾತ್ರ ಸಶಸ್ತ್ರ ಪಡೆಗಳಲ್ಲಿ ಮುಂದುವರಿಯುತ್ತಾರೆ. ಉಳಿದ ಶೇ. 75 ನಾಲ್ಕು ವರ್ಷಗಳ ಸೇವೆಯ ಬಳಿಕ ನಿವೃತ್ತಿಗೊಳ್ಳುತ್ತಾರೆ. ಅವರಿಗೆ ಯಾವುದೇ ಶ್ರೇಣಿ ಮತ್ತು ಪಿಂಚಣಿಯಿಲ್ಲ. ಹಾಗಾಗಿ, ಪ್ರತಿಭಟನಾಕಾರರು ಕೇಳುವ ಪ್ರಶ್ನೆ ಸರಿಯಾಗಿಯೇ ಇದೆ: ‘‘ನಾಲ್ಕು ವರ್ಷಗಳ ಬಳಿಕ ಮುಕ್ಕಾಲು ಪಾಲು ಮಂದಿ ನಿರುದ್ಯೋಗಿಗಳಾಗುತ್ತಾರಾದರೆ, ಅವರಿಗೆ ‘ಅಗ್ನಿವೀರರು’ ಎಂಬ ಆಕರ್ಷಕ ಹೆಸರನ್ನು ಸರಕಾರ ಯಾಕೆ ನೀಡಿದೆ?’’

ಮೂರನೆಯದು, ಈ ಪ್ರಶ್ನೆಗೆ ಯೋಜನೆಯ ಸಮರ್ಥಕರು ನೀಡುವ ಉತ್ತರವೆಂದರೆ, ಹೀಗೆ ನಿವೃತ್ತಿಗೊಳ್ಳುವವರು ತಮ್ಮ ಶಿಕ್ಷಣವನ್ನು ಮುಂದುವರಿಸಲು ಅಥವಾ ಇತರ ಕೆಲಸಗಳನ್ನು ಹುಡುಕಲು ಅರ್ಹರಾಗಿರುತ್ತಾರೆ ಹಾಗೂ ಅದುವರೆಗೆ ಅವರು 10 ಲಕ್ಷ ರೂಪಾಯಿ ಸಂಪಾದಿಸಿರುತ್ತಾರೆ. ಆದರೆ ಇಂತಹ ವಾದವನ್ನು ಮುಂದಿಡುವವರು ಸಾಮಾಜಿಕ ವಾಸ್ತವವೊಂದನ್ನು ಅರ್ಥಮಾಡಿಕೊಳ್ಳಲು ವಿಫಲರಾಗುತ್ತಾರೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶವು ಅಭ್ಯರ್ಥಿಗಳಿಗೆ, ಮುಖ್ಯವಾಗಿ ಗ್ರಾಮೀಣ ಭಾರತದಲ್ಲಿ ಅಗಾಧ ಸಾಮಾಜಿಕ ಪ್ರತಿಷ್ಠೆಯನ್ನು ತರುತ್ತದೆ. ವಾಸ್ತವವಾಗಿ, ಸೇನೆಯಲ್ಲಿ ಸೇವೆ ಸಲ್ಲಿಸಲು ಮುಂದಾಗುವವರ ಪೈಕಿ ಹೆಚ್ಚಿನವರು ಕೃಷಿ ಹಿನ್ನೆಲೆಯಿಂದ ಬಂದವರು. 1965ರ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಭಾರತದ ಎರಡನೇ ಪ್ರಧಾನಿ ಲಾಲ್‌ಬಹಾದುರ್ ಶಾಸ್ತ್ರಿ ಜನಪ್ರಿಯಗೊಳಿಸಿದ ‘ಜೈ ಜವಾನ್-ಜೈ ಕಿಸಾನ್’ ಘೋಷಣೆ ಗ್ರಾಮೀಣ ಭಾರತದಲ್ಲಿ ಈಗಲೂ ಮಾರ್ದನಿಸುತ್ತಿದೆ. ಹಾಗಾಗಿ, ಆಯ್ಕೆಗೊಂಡ ಬಳಿಕ ‘ಅಗ್ನಿವೀರ’ ಎಂಬುದಾಗಿ ಕರೆಯಲ್ಪಡುವುದು ಮತ್ತು ನಾಲ್ಕು ವರ್ಷಗಳ ಬಳಿಕ ತಿರಸ್ಕರಿಸಲ್ಪಡುವುದು ಗೌರವದ ಅಥವಾ ಪ್ರತಿಷ್ಠೆಯ ವಿಷಯವೇನೂ ಆಗಿರುವುದಿಲ್ಲ. ವಾಸ್ತವವಾಗಿ ಅದು ಭ್ರಮನಿರಸನಕ್ಕೆ ಕಾರಣವಾಗುತ್ತದೆ. ಅದೂ ಅಲ್ಲದೆ, ನಾಲ್ಕು ವರ್ಷಗಳ ಬಳಿಕ ವಾಪಸ್ ಬರುವ ಶೇ. 75 ಮಂದಿ ಪ್ರಯೋಜನಕ್ಕೆ ಬಾರದವರು ಎಂಬುದಾಗಿ ಅವರ ಕುಟುಂಬಗಳು, ಸಮುದಾಯಗಳು ಮತ್ತು ಗ್ರಾಮಗಳ ಜನರು ಭಾವಿಸುತ್ತಾರೆ.

ನಾಲ್ಕನೆಯದು, ನಿರುದ್ಯೋಗ ಸಮಸ್ಯೆಯ ಜೊತೆಗೆ ಸಿಕ್ಕಿದ ಉದ್ಯೋಗಕ್ಕೂ ಭದ್ರತೆ ಇಲ್ಲದಿರುವುದು ಭಾರತದ ವಾಸ್ತವ. ಉದ್ಯೋಗ ಸಿಗುವುದು ಕಷ್ಟ ಮಾತ್ರವಲ್ಲ, ಸಿಗುವ ಹೆಚ್ಚಿನ ಕೆಲಸಗಳು ಗುತ್ತಿಗೆ ಆಧಾರಿತವಾಗಿರುತ್ತವೆ. ಅಂತಹ ಕೆಲಸಗಳಿಗೆ ಯಾವುದೇ ಭದ್ರತೆಯಾಗಲಿ, ಸಾಮಾಜಿಕ ಭದ್ರತೆ (ಪಿಂಚಣಿ ಮುಂತಾದವು)ಯಾಗಲಿ ಇರುವುದಿಲ್ಲ. ಒಂದು ಕಾಲದಲ್ಲಿ ಶಾಲಾ ಶಿಕ್ಷಕರ ಕೆಲಸವನ್ನು ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಂತ ಗೌರವದಿಂದ ಕಾಣಲಾಗುತ್ತಿತ್ತು. ಇದಕ್ಕೆ ಒಂದು ಕಾರಣವೆಂದರೆ, ಓರ್ವ ಶಿಕ್ಷಕ ಅಥವಾ ಶಿಕ್ಷಕಿ ತನ್ನ ಬದುಕಿನ ಕನಿಷ್ಠ 30-40 ವರ್ಷಗಳ ಕಾಲ ಶಿಕ್ಷಕ ಅಥವಾ ಶಿಕ್ಷಕಿಯಾಗಿರುತ್ತಾರೆ ಹಾಗೂ ಗ್ರಾಮೀಣ ಸಮುದಾಯದ ಅವಿಭಾಜ್ಯ ಅಂಗವಾಗಿರುತ್ತಾರೆ. ಆದರೆ, ಈಗ ಶಿಕ್ಷಕರನ್ನು ಸರಕಾರಿ ಮತ್ತು ಖಾಸಗಿ ಶಾಲೆಗಳೆರಡರಲ್ಲೂ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಿಸಲಾಗುತ್ತದೆ. ಹೆಚ್ಚಿನವರಿಗೆ ಕರುಣಾಜನಕವೆನ್ನುವಷ್ಟು ಕಡಿಮೆ ಸಂಬಳವನ್ನು ನೀಡಲಾಗುತ್ತಿದೆ. ಕೆಲಸಗಳನ್ನು ಗುತ್ತಿಗೆ ಆಧಾರದಲ್ಲಿ ನೀಡುವುದು ಮತ್ತು ಅನೌಪಚಾರಿಕಗೊಳಿಸುವುದು ಈಗ ಭಾರತದ ಸಾಮಾನ್ಯ ಪದ್ಧತಿಯಾಗಿದೆ.

ಅಗ್ನಿವೀರರು ಕೂಡ ಇಂತಹ ಕಿರು ಅವಧಿಯ ಗುತ್ತಿಗೆ ಆಧಾರಿತ ಕೆಲಸದ ಬಲಿಪಶುಗಳಾದರೆ ಅವರು ಎರಡು ಪರಿಣಾಮಗಳನ್ನು ಎದುರಿಸುತ್ತಾರೆ. ಒಂದು, ಹೀಗೆ ಹೊರಬೀಳುವ ಶೇ. 75 ಅಗ್ನಿವೀರರಲ್ಲಿ ಸಶಸ್ತ್ರ ಪಡೆಗಳ ಬಗ್ಗೆ ಮತ್ತೆ ಯಾವುದೇ ಗೌರವ ಭಾವನೆಯಿರುವುದಿಲ್ಲ. ಎರಡನೆಯದಾಗಿ, ಹೆಚ್ಚಿನ ಅಗ್ನಿವೀರರು ಬರುವುದು ಬಡ ಮತ್ತು ಗ್ರಾಮೀಣ ಸಮುದಾಯಗಳಿಂದ. ಇನ್ನು ಮುಂದೆ ‘ಭಾರತೀಯ ಸೇನೆ’ಯ ಬಗ್ಗೆ ಬಡ ಮತ್ತು ಗ್ರಾಮೀಣ ಸಮುದಾಯಗಳು ಹೊಂದಿರುವ ಭಾವನೆಗಳು ನಿಧಾನವಾಗಿ ಬದಲಾಗುತ್ತವೆ. (ಮೆಟ್ರೋಪಾಲಿಟನ್ ಮೇಲ್ವರ್ಗಗಳು ತಮ್ಮ ಮಕ್ಕಳನ್ನು ಸೈನಿಕರಾಗಿ ಸೇವೆ ಸಲ್ಲಿಸಲು ಎಂದೂ ಕಳುಹಿಸುವುದಿಲ್ಲ).

ನೂತನ ಯೋಜನೆಯ ಉದ್ದೇಶಗಳನ್ನು ತಿಳಿಯಪಡಿಸುವಲ್ಲಿ ಮೋದಿ ಸರಕಾರವು ವಿಫಲವಾಗಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಈಗ ಅದು ಈ ಪ್ರಯತ್ನಗಳನ್ನು ಮಾಡುತ್ತಿದೆ. ರಾಜ್ಯ ಸರಕಾರಗಳು, ಸಶಸ್ತ್ರ ಪಡೆಗಳ ಅನುಭವಿಗಳು ಮತ್ತು ಯುವ ಗುಂಪುಗಳೊಂದಿಗೆ (ತರಬೇತಿ ಸಂಸ್ಥೆ ಮುಂತಾದುವುಗಳು) ಮೊದಲೇ ಸಮಾಲೋಚನೆ ಮಾಡಿದ್ದರೆ ಹಾಗೂ ಹಂತ ಹಂತವಾಗಿ ಅನುಷ್ಠಾನಕ್ಕೆ ತಂದಿದ್ದರೆ ಅದನ್ನು ಸ್ವೀಕರಿಸಲು ಸಮಾಜವು ಸಿದ್ಧಗೊಳ್ಳುತ್ತಿತ್ತು. ಆದರೆ, ಸಂಬಂಧಪಡುವವರೊಂದಿಗೆ ಸಮಾಲೋಚನೆ ನಡೆಸುವ ಪ್ರಕ್ರಿಯೆಯಲ್ಲಿ ಮೋದಿ ಸರಕಾರಕ್ಕೆ ನಂಬಿಕೆಯೇ ಇಲ್ಲ. ಇದನ್ನು ದೇಶ ಕಳೆದ ವರ್ಷದ ರೈತರ ಚಳವಳಿಯಲ್ಲೂ ನೋಡಿದೆ. ಅಂತಿಮವಾಗಿ ಕೃಷಿ ಕಾಯ್ದೆಗಳನ್ನು ಸರಕಾರ ಹಿಂದಕ್ಕೆ ಪಡೆದುಕೊಳ್ಳಬೇಕಾಯಿತು.

ಕೃಪೆ: www.ndtv.com 

Writer - ಸುಧೀಂದ್ರ ಕುಲಕರ್ಣಿ

contributor

Editor - ಸುಧೀಂದ್ರ ಕುಲಕರ್ಣಿ

contributor

Similar News