ಶಾಂತಿಯುತವಾಗಿ ಪ್ರತಿಭಟನೆ ಮಾಡಿ, ಆದರೆ ನಿಲ್ಲಿಸಬೇಡಿ: ಸಶಸ್ತ್ರಪಡೆ ಆಕಾಂಕ್ಷಿಗಳಿಗೆ ಪ್ರಿಯಾಂಕಾ ಗಾಂಧಿ ಮನವಿ

Update: 2022-06-19 10:00 GMT

ಹೊಸದಿಲ್ಲಿ: ‘ಅಗ್ನಿಪಥ’ ಯೋಜನೆಯ ಬಗ್ಗೆ ಆಕ್ರೋಶಗೊಂಡಿರುವ ಪ್ರತಿಭಟನಾಕಾರರಲ್ಲಿ ಶಾಂತಿಗಾಗಿ ಮನವಿ ಮಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸಾರ್ವಜನಿಕ ಆಸ್ತಿ-ಪಾಸ್ತಿಯನ್ನು ನಾಶ ಮಾಡದಂತೆ ಒತ್ತಾಯಿಸಿದರು.

‘ಅಗ್ನಿಪಥ’ ಯೋಜನೆಯ ವಿರುದ್ಧ ಜಂತರ್ ಮಂತರ್ ನಲ್ಲಿ ರವಿವಾರ ನಡೆದ ಸತ್ಯಾಗ್ರಹದಲ್ಲಿ ಮಾತನಾಡಿದ ಪ್ರಿಯಾಂಕಾ "ಕೇಂದ್ರ ಸರಕಾರವು ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಲು ಕಾರಣವಾಗಿರುವ  ತಿಂಗಳುಗಳ ಕಾಲ ರೈತರು ನಡೆಸಿದ ಪ್ರತಿಭಟನೆಯಿಂದ ಪಾಠ ಕಲಿಯುವಂತೆ  ಸೂಚಿಸಿದರು.

 “ನಿಮ್ಮ ನೋವು ನಮಗೆ ಅರ್ಥವಾಗುತ್ತದೆ ಎಂದು  ನಾನು ಯುವಕರಿಗೆ ಹೇಳಲು ಬಯಸುತ್ತೇನೆ.. ಈ ದೇಶ ನಿಮ್ಮದು ಎಂಬುದನ್ನು ಮರೆಯಬೇಡಿ. ಈ ದೇಶದ ಆಸ್ತಿ ನಿಮ್ಮದು. ಅದನ್ನು ಹಾಳು ಮಾಡಬೇಡಿ,’’ ಎಂದು ಜಂತರ್ ಮಂತರ್‌ನಲ್ಲಿ ನಡೆದ ಕಾಂಗ್ರೆಸ್ ಸತ್ಯಾಗ್ರಹದಲ್ಲಿ ಪ್ರಿಯಾಂಕಾ ಗಾಂಧಿ ಹೇಳಿದರು.

"ಈ ಯೋಜನೆಯು ದೇಶದ ಯುವಕರನ್ನು ಕೊಲ್ಲುತ್ತದೆ, ಸೈನ್ಯವನ್ನು ಮುಗಿಸುತ್ತದೆ ... ದಯವಿಟ್ಟು ಈ ಸರಕಾರದ ಉದ್ದೇಶವನ್ನು ನೋಡಿ. ಅದನ್ನು ಉರುಳಿಸಿ, ದೇಶಕ್ಕೆ ಪ್ರಾಮಾಣಿಕವಾದ, ದೇಶದ ಆಸ್ತಿಯನ್ನು ರಕ್ಷಿಸುವ ಸರಕಾರವನ್ನು ತನ್ನಿ. ಶಾಂತಿಯುತ ಪ್ರತಿಭಟನೆ ನಡೆಸುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ.  ಆದರೆ ಪ್ರತಿಭಟನೆ  ನಿಲ್ಲಿಸಬೇಡಿ''  ಎಂದು ಸಶಸ್ತ್ರ ಪಡೆ ಆಕಾಂಕ್ಷಿಗಳಿಗೆ ಪ್ರಿಯಾಂಕಾ ಟ್ವೀಟ್  ಮೂಲಕ ಆಗ್ರಹಿಸಿದ್ದಾರೆ.

‘ಅಗ್ನಿಪಥ’ ಯೋಜನೆ ಹಿಂಪಡೆಯಲು ಸರ್ಕಾರವನ್ನು ಒತ್ತಾಯಿಸಲಾಗುವುದು: ಸಚಿನ್ ಪೈಲಟ್

ಜಂತರ್ ಮಂತರ್‌ನಲ್ಲಿ ನಡೆದ ಕಾಂಗ್ರೆಸ್ ಸತ್ಯಾಗ್ರಹದಲ್ಲಿ ಮಾತನಾಡಿದ ರಾಜಸ್ಥಾನ ಶಾಸಕ ಸಚಿನ್ ಪೈಲಟ್, ಜನರ ಬೆಂಬಲದ ಕೊರತೆ ಎದುರಿಸುತ್ತಿರುವ  ‘ಅಗ್ನಿಪಥ’ ಯೋಜನೆಯನ್ನು ಹಿಂಪಡೆಯಲು ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.

" ಅದು ಕೃಷಿ ಕಾನೂನುಗಳೇ ಆಗಿರಲಿ, ರಕ್ಷಣಾ ನೀತಿಗಳೇ ಆಗಿರಲಿ ಸರಕಾರವು ತನ್ನ ನಿರ್ಧಾರಗಳನ್ನು ದೇಶದ ಮೇಲೆ ಹೇರುತ್ತದೆ. ‘ಅಗ್ನಿಪಥ’ ಯೋಜನೆಯನ್ನು ಹಿಂತೆಗೆದುಕೊಳ್ಳಲು ಸರಕಾರವನ್ನು ಒತ್ತಾಯಿಸಲಾಗುತ್ತದೆ" ಎಂದು ಪೈಲಟ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News