ಕಾಂಗ್ರೆಸ್ ನಾಯಕಿ ಶೈಲಜಾ ಮನೆಗೆ ದಾಳಿ ಪ್ರಕರಣ; ವಿಕ್ರಮ ಟಿವಿ ನಿರೂಪಕಿ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲು

Update: 2022-06-19 16:17 GMT

ಪುತ್ತೂರು: ರಾಜ್ಯ ಮಹಿಳಾ ಕಾಂಗ್ರೆಸ್ ನಾಯಕಿ, ಪುತ್ತೂರಿನ ವಕೀಲೆ ಶೈಲಜಾ ಅಮರನಾಥ ಅವರ ಮನೆಯ ಗಾಜು ಒಡೆದು, ಮಡ್ ಆಯಿಲ್ ಸುರಿದು ದಾಳಿ, ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ವಿಕ್ರಮ ಯೂ ಟ್ಯೂಬ್ ಚಾನೆಲ್ ನಿರೂಪಕಿ ಮುಮ್ತಾಸ್ ಮತ್ತು ಅಪರಿಚಿತ ಮೂವರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಲಬ್ ಹೌಸ್ ನಲ್ಲಿ ನಿಂದನೆ ಮಾಡಿದ್ದಾರೆ ಎಂದು ಪ್ರಚಾರಗೊಂಡ ಹಿನ್ನೆಲೆಯಲ್ಲಿ ಶೈಲಜಾ ಅಮರನಾಥ ವಿರುದ್ಧ ಪುತ್ತೂರು ಠಾಣೆಯಲ್ಲಿ ದೂರು ದಾಖಲಾಗಿತ್ತು.

ನಂತರ ಶೈಲಜಾ ಮನೆಗೆ ದಾಳಿ ನಡೆದಿದ್ದು, ಇದೀಗ ವಿಕ್ರಮ ಯೂ ಟ್ಯೂಬ್ ಚಾನೆಲ್ ನಿರೂಪಕಿ ಸುಳ್ಯ ಮೂಲದ ಮುಮ್ತಾಸ್ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ : 50/2022 ಕಲಂ 505 ( 2) , 509 ಜೊತೆಗೆ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಶೈಲಜಾ ಅಮರನಾಥ ಗೌಡ ಬಪ್ಪಳಿಗೆ ಅವರು ನೀಡಿದ ದೂರಿನಲ್ಲಿ ವಿಕ್ರಮ ಯೂ ಟೂಬ್ ಚಾನಲ್‍ನವರು ದೇವರ ವಿಚಾರದಲ್ಲಿ ಎಡಿಟ್ ಆಡಿಯೋ ಮತ್ತು ವಿಡಿಯೋ ಮಾಡಿ ನನ್ನ ಫೋನ್ ನಂಬರ್ ಹಾಗೂ ಭಾವಚಿತ್ರವನ್ನು ಬಳಸಿ ತಪ್ಪು ಸಂದೇಶವನ್ನು ಜೂ. 17ರಂದು ರವಾನೆ ಮಾಡಿದ್ದು, ಈ ಕಾರಣದಿಂದ ನನಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಆರೋಪಿಸಿದ್ದಾರೆ. 

ಜೂ.18ರಂದು ಸಂಜೆ ತನ್ನ ಮನೆಗೆ ಕಲ್ಲು ಬಿಸಾಡಿ ಕಿಟಕಿ ಗಾಜು ಪುಡಿ ಮಾಡಿ ಮಡ್ ಆಯಿಲ್ ಚೆಲ್ಲಿ, ಅಪೀಸಿನ ಮೇಲೆ ಶ್ರದ್ಧಾಂಜಲಿ ಫೋಟೊವನ್ನು ಅಂಟಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕೃತ್ಯಕ್ಕೆ ವಿಕ್ರಮ ಯೂ ಟೂಬ್ ಚಾನಲ್ ನ ನಿರೂಪಕಿ ಎಂ.ಎಸ್ ಮುಮ್ತಾಸ್ ಕಾರಣ ಆಗಿದ್ದು ಆಕೆಯ ವಿರುದ್ಧ ಹಾಗೂ ಆ ಚಾನಲ್ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕಾಗಿ ದೂರಿನಲ್ಲಿ ತಿಳಿಸಲಾಗಿದೆ.

ಮನೆಗೆ ಹಾನಿ 30 ಸಾವಿರ ರೂ. ನಷ್ಟ

ಶೈಲಜಾ ಅಮರನಾಥ ಅವರ ಪುತ್ತೂರು ನಗರದ ಬಪ್ಪಳಿಗೆ ಎಂಬಲ್ಲಿರುವ ಮನೆಗೆ ಬೈಕ್‍ನಲ್ಲಿ ಬಂದ ಮೂವರು ಅಪರಿಚಿತರು ಮನೆಯ ಕಿಟಿಕಿಗಳಿಗೆ ಕಲ್ಲು ಎಸೆದು, ಮಡ್ ಆಯಿಲ್ ಕಿಟಕಿಗೆ ಚೆಲ್ಲಿದ ಪ್ರಕರಣಕ್ಕೆ ಸಂಬಂಧಿಸಿ ಸುಮಾರು 30 ಸಾವಿರ ರೂ. ನಷ್ಟವುಂಟಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಶೈಲಜಾ  ಅವರು ತಿಳಿಸಿದ್ದಾರೆ.

ಜೂ. 18ರಂದು ಸಂಜೆ ಮನೆಯಲ್ಲಿದ್ದ ವೇಳೆ ಬೈಕ್‍ನಲ್ಲಿ ಬಂದ ಅಪರಿಚಿತರು ಮನೆಯ ಕಿಟಕಿಗಳಿಗೆ ಕಲ್ಲು ಬಿಸಾಡಿ ಕಿಟಕಿಯ ಗಾಜುಗಳನ್ನು ಪುಡಿ ಮಾಡಿದ್ದಲ್ಲದೆ ಮಡ್ ಆಯಿಲ್ ಅನ್ನು ಕಿಟಕಿಗೆ ಚೆಲ್ಲಿ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿ ಮೂವರು ಅಪರಿಚಿತರನ್ನು ಪತ್ತೆ ಮಾಡಿ ಅವರ ವಿರದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಶೈಲಜಾ ಅಮರನಾಥ್ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News