ಜೋಪಾನ ಮಕ್ಕಳಿವರು

Update: 2022-06-20 05:20 GMT

ಮಗುವಿನ ಬಗೆಗೆ ಒಂದು ಸಣ್ಣ ಗಮನಿಸುವಿಕೆ ಕೂಡ ಅದಕ್ಕೆ ಖುಷಿ ನೀಡುತ್ತದೆ. ತನ್ಮೂಲಕ ಅದು ತನ್ನನ್ನೇ ಗೌರವಿಸಿಕೊಳ್ಳುತ್ತದೆ. ಆತ್ಮವಿಶ್ವಾಸ ಬೆಳೆಸಿಕೊಳ್ಳುತ್ತದೆ. ನಮ್ಮ ನಿರ್ಲಕ್ಷ, ಅವಮಾನಗಳಿಂದ ಕೀಳರಿಮೆ ಬೆಳೆಸಿಕೊಂಡು ಕುಗ್ಗಿ ಹೋಗುತ್ತದೆ. ಮಗುವಿನೊಂದಿಗೆ ತೊಡಗಿಕೊಳ್ಳುವಾಗ ನಮ್ಮ ಮಾತು, ನಡವಳಿಕೆ ಎಲ್ಲವೂ ಗಾಜಿನೊಂದಿಗೆ ವ್ಯವಹರಿಸುವಷ್ಟೇ ಸೂಕ್ಷ್ಮವಾಗಿರಬೇಕು. ಗಾಜಿನ ಮೇಲೆ ನಾವಿಡುವ ಕೈಬೆರಳೂ ಗುರುತಾಗಿ ಉಳಿದುಬಿಡುತ್ತದೆ!

ಆ ಹುಡುಗ ಅಂದಿನ ರಾತ್ರಿಯೆಲ್ಲಾ ನಿದ್ದೆ ಮಾಡಿರಲಿಲ್ಲ. ಅತ್ತು ಸುಸ್ತಾಗಿದ್ದರೂ ಬಿಕ್ಕುತ್ತಲೇ ಇದ್ದ. ಅವನ ತಾಯಿ ಕೂಡ ಮಗನ ನೋವು ನೋಡಿ ಸಂಕಟಗೊಂಡಿದ್ದಳು. ತಮ್ಮ ತಪ್ಪೇ ಇಲ್ಲದೆ ನೋವು ಅನುಭವಿಸಬೇಕಾದ ಬಗೆಗೆ ತಪ್ತಗೊಂಡಿದ್ದಳು. ನಡೆದದ್ದೇನು ದೊಡ್ಡ ವಿಷಯವಲ್ಲ. ತುಂಬಾ ಸಣ್ಣ ವಿಷಯವೇ. ಆದರೆ 8-9 ವರ್ಷದ ಮಗುವಿನ ಪಾಲಿಗೆ ಅದು ದೊಡ್ಡ ವಿಷಯವೇ. ಮಕ್ಕಳ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಬೇಕೆಂದು ನಿರ್ಧರಿಸಿದ್ದ ಕೆಲ ಸಂಘಟಕರು ಪ್ರತಿಭಾವಂತ ಮಕ್ಕಳನ್ನು ಕಾರ್ಯಕ್ರಮ ಉದ್ಘಾಟನೆ, ಅಧ್ಯಕ್ಷತೆ, ಮುಖ್ಯ ಅತಿಥಿ ಸ್ಥಾನಕ್ಕೆ ಆಯ್ಕೆ ಮಾಡಿದ್ದರು. ಕಾರ್ಯಕ್ರಮ ನಿರ್ವಹಣೆಯನ್ನೂ ಮಕ್ಕಳಿಂದಲೇ ಮಾಡಿಸಬೇಕೆಂದು ಸ್ವಾಗತ, ವಂದನಾರ್ಪಣೆ, ಪರಿಚಯ, ನಿರೂಪಣೆಗಳಿಗೂ ಮಕ್ಕಳನ್ನು ಆಯ್ಕೆ ಮಾಡಿದ್ದರು. ತಿದ್ದಿ ತೀಡಿ ಅಭ್ಯಾಸ ಮಾಡಿಸಿದ್ದರಿಂದ ನಿರೀಕ್ಷೆಯಂತೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿತು. ಕೊನೆಗೆ ಕಾರ್ಯಕ್ರಮ ನಡೆಸಿ ಕೊಟ್ಟ ಎಲ್ಲ ಮಕ್ಕಳಿಗೂ ನೆನಪಿನ ಕಾಣಿಕೆ ನೀಡಲಾಯಿತು. ಅದು ಹೇಗೋ ಸ್ವಾಗತವನ್ನು ಸೊಗಸಾಗಿ ಮಾಡಿಕೊಟ್ಟಿದ್ದ ಆ ಪುಟ್ಟ ಹುಡುಗನಿಗೆ ನೆನಪಿನ ಕಾಣಿಕೆ ನೀಡಲೇ ಇಲ್ಲ. ಬೇಕೆಂದು ತಪ್ಪಿಸಿದ್ದಲ್ಲವಾದರೂ ಪರಿಚಿತರು, ಕಾರ್ಯಕ್ರಮ ವೀಕ್ಷಿಸಲು ಆಗಮಿಸಿದ್ದವರು ಆ ಹುಡುಗನನ್ನು ‘‘ನಿನಗೇನೂ ಕೊಡಲಿಲ್ವ? ಯಾಕೆ? ಬೇರೆಯವರಿಗೆಲ್ಲ ಕೊಟ್ಟರಲ್ಲ?’’ ಎಂದು ಕೇಳಿದಾಗ, ಮೊದಲೇ ಪೆಚ್ಚಾಗಿದ್ದ ಆ ಹುಡುಗ ಮತ್ತಷ್ಟು ಘಾಸಿಗೊಂಡು, ಅಂತೂ ಹೇಗೋ ಯಾರೋ ವಿಷಯವನ್ನು ಸಂಘಟಕರ ಕಿವಿಗೆ ತಲುಪಿಸಿದ್ದರು ‘‘ನೆನಪಿನ ಕಾಣಿಕೆ ಖಾಲಿಯಾಯಿತು. ‘ಜುಜುಬಿ’ ಸ್ವಾಗತಕ್ಕೆ ಏನೂ ಕೊಡ್ಬೇಕಂತಿಲ್ಲ. ವೇದಿಕೆಯಲ್ಲಿ ಅವಕಾಶ ಕೊಟ್ಟಿದ್ದೇ ಹೆಚ್ಚು. ಅದರಲ್ಲೊಂದು ಜಾಮಿಟ್ರಿ ಬಾಕ್ಸಿತ್ತು ಅಷ್ಟೇ. ಅವರ್ಗೇನು ಅಂತಹ ನೂರಾರು ಬಾಕ್ಸ್ ತೊಗೊಳ್ಳೋ ಶಕ್ತಿ ಇದೆ ಬಿಡಿ’’ ಎಂದು ಉಡಾಫೆಯಿಂದ ಮಾತನಾಡಿದರು.

ನಿಜ. ಆ ಹುಡುಗನ ತಂದೆ- ತಾಯಿಗೆ ಅಂತಹ ನೂರಲ್ಲ, ಸಾವಿರಾರು ಜಾಮಿಟ್ರಿ ಬಾಕ್ಸ್ ಕೊಡಿಸುವ ಶಕ್ತಿ ಇತ್ತು, ಆದರೆ ಪ್ರಶ್ನೆ ಅದಲ್ಲ. ಎಲ್ಲರ ಮುಂದೆ ಆ ಮಗುವಿಗೆ ಆದ ಅವಮಾನ ದೊಡ್ಡದಾಗಿತ್ತು. ತಾನು ನಿರ್ವಹಿಸಿದ ಜವಾಬ್ದಾರಿಗೆ ವೇದಿಕೆಯ ಮೇಲೆ ತೆಗೆದುಕೊಳ್ಳುವ ಆ ಕಿರು ಕಾಣಿಕೆ ಮಗುವಿಗೆ ಮಹತ್ವದ್ದಾಗಿತ್ತು. ಮಿಕ್ಕ ತನ್ನೆಲ್ಲಾ ಗೆಳೆಯ ಗೆಳತಿಯರಿಗೆ ನೀಡಿ ತನಗೆ ಮಾತ್ರ ನೀಡಲಿಲ್ಲ. ತಾನೇನು ತಪ್ಪುಮಾಡಿದೆ? ಎಂಬ ಪ್ರಶ್ನೆ ಮಗುವಿನದು.

ಮಗುವಿನ ಮನಸ್ಸನ್ನು, ತನ್ಮೂಲಕ ಕುಟುಂಬದವರ ಮನವನ್ನೂ ನೋಯಿಸಿದ್ದೆವೆಂಬ ಕನಿಷ್ಠ ಕಾಳಜಿಯೂ ಇಲ್ಲದ ಸಂಘಟಕರು, ತಾವು ನಡೆಸಿಕೊಟ್ಟ ವಿಶಿಷ್ಟ ಕಾರ್ಯಕ್ರಮದ ಗರಿಷ್ಠ ಪ್ರಚಾರ ಪಡೆಯುವ ಗಡಿಬಿಡಿಯಲ್ಲಿದ್ದರು.

ಮತ್ತೊಂದು ಘಟನೆ. ದೊಡ್ಡದೊಂದು ಕಾರ್ಯಕ್ರಮ. ಅಂಧ ಬಡ ಹುಡುಗನ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡುವುದಾಗಿ ಹೇಳಿ ಕರೆಸಲಾಗಿತ್ತು. ತನ್ನ ಸರದಿ ಈಗ ಬರಬಹುದು ಆಗ ಬರಬಹುದು ಎಂದು ಬೆಳಗ್ಗೆಯಿಂದಲೇ ಕಾದು ಕುಳಿತ ಹುಡುಗನ ಸರದಿ ರಾತ್ರಿ ಕಾರ್ಯಕ್ರಮ ಮುಗಿಯುವ ಹಂತ ಬಂದರೂ ಬರಲೇ ಇಲ್ಲ. ಸಂಘಟಕರೂ ‘‘ಈಗ ಅವಕಾಶ ಕೊಡ್ತೀವಿ, ಮತ್ತೆ ಕೊಡ್ತೀವಿ’’ ಎಂದು ಹೇಳಿ ಕೊನೆಗೂ ಅವಕಾಶ ಕೊಡಲೇ ಇಲ್ಲ. ಅವರಿಗದರ ನೆನಪೂ ಇಲ್ಲ. ಅವರಿಗದೊಂದು ದೊಡ್ಡ ವಿಷಯವೂ ಅಲ್ಲ.

ಸಿಟ್ಟುಗೊಂಡಿದ್ದ ಹುಡುಗನ ತಾಯಿ ಸಂಘಟಕರ ಬಳಿ ಹೋಗಿ ‘‘ಅವಕಾಶ ಕೊಡ್ತೀವಿ ಅಂತ ಹೇಳಿ ಬೆಳಗ್ಗೆಯಿಂದ ರಾತ್ರಿವರೆಗೂ ಕಾಯಿಸಿದ್ದೀರಿ. ಅವನು ಮಧ್ಯಾಹ್ನ ಊಟಕ್ಕೂ ಬರದೇ ಕಾದಿದ್ದಾನೆ. ಅವನೊಬ್ಬ ಅಂಧ ಹುಡುಗ ಎಂದು ತಿಳಿದೂ ಹೀಗೆ ನಡೆದುಕೊಂಡಿರಲ್ಲ?’’ ಎಂದು ಪ್ರಶ್ನಿಸಿದಾಗ ನಗರದಿಂದ ಆಗಮಿಸಿದ್ದ ಗಣ್ಯರ ರಾತ್ರಿ ಪಾರ್ಟಿಯ ಗಡಿಬಿಡಿಯಲ್ಲಿದ್ದ ಸಂಘಟಕರು ನಿರ್ಲಕ್ಷದಿಂದ ‘‘ಇನ್ನೊಂದು ಸಲ ಇನ್ನೂ ದೊಡ್ಡ ಕಾರ್ಯಕ್ರಮದಲ್ಲಿ ಅವಕಾಶ ಕೊಡೋಣ ಬಿಡಿ. ನಮಗೆ ಮರೆತು ಹೋಗುತ್ತೆ. ಆಗಾಗ ಬಂದು ನೆನಪಿಸ್ತಾ ಇರಿ. ಮುಂದೆ ನಾವು ಕಾರ್ಯಕ್ರಮ ಮಾಡಿದಾಗ ಕರೆದು ಕೊಂಡು ಬನ್ನಿ’’ ಎಂದು ಹೇಳಿ ಕೈ ತೊಳೆದುಕೊಂಡರು. ಅವರಿಗೆ ತಾವು ಮಾಡಿದ್ದು ತಪ್ಪುಎಂದು ಅನ್ನಿಸಲೇ ಇಲ್ಲ! ಒಂದು ಸಣ್ಣ ಕ್ಷಮೆ ಕೇಳಿದ್ದರೂ ಆ ಹುಡುಗನ ದೃಷ್ಟಿಯಲ್ಲಿ ಅವರು ದೊಡ್ಡವರಾಗುತ್ತಿದ್ದರು. ಆದರೆ ಇಂತಹ ಮಾತುಗಳಾಡಿ ಆ ಹುಡುಗನ ಮನಸ್ಸಿನಲ್ಲಿ ಶಾಶ್ವತವಾದ ನೋವು ಉಳಿಸಿಬಿಟ್ಟಿದ್ದರು. ಮತ್ತೆಂದೂ ಅವರ ಬಳಿ ಅವಕಾಶಕ್ಕಾಗಿ ಆ ಹುಡುಗ ಹೋಗಲಿಲ್ಲ.

ಅದೊಂದು ಐದು ವರ್ಷದೊಳಗಿನ ಪುಟಾಣಿ ಮಕ್ಕಳ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ, ಸಂಜೆ 5ಕ್ಕೆ ಪ್ರಾರಂಭವಾಗಬೇಕಿದ್ದು, ಮಿಕ್ಕೆಲ್ಲಾ ಅತಿಥಿಗಳು ಆಗಮಿಸಿದ್ದರೂ ಗಣ್ಯಾತಿಗಣ್ಯ ಅತಿಥಿಯೊಬ್ಬರ ಆಗಮನಕ್ಕಾಗಿ ಕಾದು, ಅವರು ಎರಡು ಗಂಟೆ ತಡವಾಗಿ ಬಂದ ನಂತರ ಕಾರ್ಯಕ್ರಮ ಆರಂಭವಾಯಿತು. ತಾವು ಮಾಡುವ ನೃತ್ಯ, ಏಕಪಾತ್ರಾಭಿನಯ ಇತ್ಯಾದಿ ಕಾರ್ಯಕ್ರಮಕ್ಕಾಗಿ ಮಧ್ಯಾಹ್ನದ 3 ಗಂಟೆಯಿಂದಲೇ ಗಡಿಬಿಡಿಯಿಂದ ತಯಾರಿ ಅಲಂಕಾರ ನಡೆಸಿದ್ದ ಮಕ್ಕಳು ಸಭಾ ಕಾರ್ಯಕ್ರಮ ಮುಗಿದು ರಾತ್ರಿ 8:30ಕ್ಕೆ ಪ್ರದರ್ಶನ ನೀಡುವ ವೇಳೆಗೆ ಬಸವಳಿದು ಹೋಗಿದ್ದರು.

ಮಧ್ಯಾಹ್ನದ ಊಟ ನಿದ್ದೆ ಸರಿಯಿಲ್ಲದೆ ಸುಸ್ತು ಮತ್ತು ಬಯಲಿನ ಕೊರೆವ ಚಳಿಯಲ್ಲಿ, ಹೊಸ ಬಟ್ಟೆ-ಅಲಂಕಾರಗಳ ಭಾರ ಹೇರಿಕೊಂಡು, ಅಳುತ್ತಾ ಪಿರಿಪಿರಿ ಮಾಡುತ್ತಾ ‘ಹೇಗೋ’ ಕಾರ್ಯಕ್ರಮ ನೀಡಿ ಮುಗಿಸಿದ್ದರು. ಪುಟ್ಟ ಪುಟ್ಟ ಮಕ್ಕಳಾದ್ದರಿಂದ ಬೇಗ ಕಾರ್ಯಕ್ರಮ ಪ್ರಾರಂಭಿಸಿ ಬೇಗ ಮುಗಿಸಬೇಕೆಂಬ ಉದ್ದೇಶದಿಂದ ಶಾಲಾ ವ್ಯವಸ್ಥಾಪಕರು ಗಣ್ಯಾತಿಗಣ್ಯ ಅತಿಥಿಗಾಗಿ ಕಾದು ಕುಳಿತು ಪೋಷಕರು-ಮಕ್ಕಳ ನಿಂದೆಗೆ ಗುರಿಯಾಗಿದ್ದರು. ಆದರೆ ಆ ಅತಿಥಿಗೆ, ತನ್ನಿಂದ ನೂರಾರು ಮಕ್ಕಳಿಗೆ ಪೋಷಕರಿಗೆ ತೊಂದರೆಯಾಯಿತೆಂಬ ಪಶ್ಚಾತ್ತಾಪ ಕಿಂಚಿತ್ತೂ ಇರಲಿಲ್ಲ.

ಈ ಮೂರೂ ಘಟನೆಗಳಲ್ಲಿ ತಪ್ಪು-ಸರಿಗಳ ಪ್ರಶ್ನೆ ಇಲ್ಲ. ಏಕೆಂದರೆ ಸೂಕ್ಷ್ಮತೆ ಇಲ್ಲದ ವ್ಯಕ್ತಿಗಳಿಗೆ ಮಕ್ಕಳ ವಿಷಯದಲ್ಲಿ ತಾವು ತಪ್ಪು ಮಾಡಿದ್ದೇವೆಂಬ ಸಣ್ಣ ಪಶ್ಚಾತ್ತಾಪವೂ ಇರುವುದಿಲ್ಲ. ಇನ್ನು ಕ್ಷಮೆ ಕೇಳುವ ಮಾತು ದೂರವೇ ಉಳಿಯಿತು! ಆದರೆ ಇಂತಹ ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ ಮತ್ತೆ ಮತ್ತೆ ಸಂಕಟ, ನೋವಿಗೀಡಾಗ ಬೇಕಾದ ಪ್ರಸಂಗ ಮಕ್ಕಳಿಗೆ ಬರುತ್ತಲೇ ಇರುತ್ತದೆ. ತಮಗರಿವಿಲ್ಲದೆ, ತಮ್ಮ ಉಡಾಫೆ ವರ್ತನೆಯಿಂದ, ಮಕ್ಕಳಿಗೆ ನೋವು ಕೊಡುತ್ತಿದ್ದೇವೆಂಬ ಸಣ್ಣ ಅರಿವೂ ಅವರಿಗಿರುವುದಿಲ್ಲ. ‘‘ದೇವರೇ, ಅವರೇನು ಮಾಡುತ್ತಿದ್ದಾರೆಂಬ ಅರಿವು ಅವರಿಗಿಲ್ಲ ಅವರನ್ನು ಕ್ಷಮಿಸು’’ ಎಂದು ನೊಂದ ಮಕ್ಕಳ ಪರವಾಗಿ ಕೇಳಿಕೊಳ್ಳಬಹುದಷ್ಟೇ!

ಎಷ್ಟೋ ಬಾರಿ ನಾವು ಮಕ್ಕಳನ್ನು ವ್ಯಕ್ತಿಗಳೆಂದು ಭಾವಿಸುವುದೇ ಇಲ್ಲ. ಅವರಿಗೂ ಮನಸ್ಸಿದೆ, ಭಾವನೆಗಳಿವೆ, ನೋವು-ನಲಿವುಗಳಿವೆ ಎಂದು ಅರಿಯಲು ಪ್ರಯತ್ನಿಸದೆ ನಮ್ಮದೇ ದೊಡ್ಡವರ ಪ್ರಪಂಚದಲ್ಲಿ ಮುಳುಗಿರುತ್ತೇವೆ. ಮಗುವಿನ ಮನಸ್ಸು ಅತ್ಯಂತ ಸೂಕ್ಷ್ಮವೂ ಸಂವೇದನಾಶೀಲವೂ ಆಗಿರುತ್ತದೆ. ಅದು ತನ್ನ ಸುತ್ತಮುತ್ತಲ ಘಟನೆ ಅವಮಾನ ಅನುಭವಗಳಿಗೆ ನಮಗಿಂತಲೂ ತೀವ್ರವಾಗಿ ಸ್ಪಂದಿಸುತ್ತಿರುತ್ತದೆ. ತನಗಾಗುವ ಅವಮಾನ, ನಾವು ತೋರುವ ನಿರ್ಲಕ್ಷದಿಂದ ಮಗುವಿನ ಮನಸ್ಸು ಮುದುಡಿ ಹೋಗುತ್ತದೆ. ಮತ್ತೆ ಅದನ್ನು ಅರಳಿಸುವುದು ಕಷ್ಟದ ಕೆಲಸ.

ಮಗುವಿನ ಬಗೆಗೆ ಒಂದು ಸಣ್ಣ ಗಮನಿಸುವಿಕೆ ಕೂಡ ಅದಕ್ಕೆ ಖುಷಿ ನೀಡುತ್ತದೆ. ತನ್ಮೂಲಕ ಅದು ತನ್ನನ್ನೇ ಗೌರವಿಸಿಕೊಳ್ಳುತ್ತದೆ. ಆತ್ಮವಿಶ್ವಾಸ ಬೆಳೆಸಿಕೊಳ್ಳುತ್ತದೆ. ನಮ್ಮ ನಿರ್ಲಕ್ಷ, ಅವಮಾನಗಳಿಂದ ಕೀಳರಿಮೆ ಬೆಳೆಸಿಕೊಂಡು ಕುಗ್ಗಿ ಹೋಗುತ್ತದೆ. ಮಗುವಿನೊಂದಿಗೆ ತೊಡಗಿಕೊಳ್ಳುವಾಗ ನಮ್ಮ ಮಾತು, ನಡವಳಿಕೆ ಎಲ್ಲವೂ ಗಾಜಿನೊಂದಿಗೆ ವ್ಯವಹರಿಸುವಷ್ಟೇ ಸೂಕ್ಷ್ಮವಾಗಿರಬೇಕು. ಗಾಜಿನ ಮೇಲೆ ನಾವಿಡುವ ಕೈಬೆರಳೂ ಗುರುತಾಗಿ ಉಳಿದುಬಿಡುತ್ತದೆ! ನಮಗಾದ ನೋವು, ಅವಮಾನಗಳನ್ನು ಹಿರಿಯರಾದ ನಾವು ಕಾಲಕ್ರಮೇಣ ಮರೆತು ಬಿಡುತ್ತೇವೆ. ಆದರೆ ಮಗು ತನಗಾಗುವ ಪ್ರತಿಯೊಂದು ಅನುಭವದ ಸುತ್ತಲೇ ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳುವುದರಿಂದ, ತನಗಾದ ಕಹಿ ಅನುಭವಗಳಿಂದ ಋಣಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳುತ್ತದೆ. ವ್ಯಕ್ತಿಗಳ ಬಗೆಗೆ, ಸಮಾಜದ ಬಗೆಗೆ, ತನ್ನದೇ ಆದ ನಿಲುವು ರೂಪಿಸಿಕೊಳ್ಳುತ್ತದೆ. ಅದನ್ನು ಮತ್ತೆ ಬದಲಿಸುವುದು ಅಸಾಧ್ಯ. ಒಮ್ಮೆ ಮಗುವಿನ ನಂಬಿಕೆ ಕಳೆದುಕೊಂಡರೆ ಅದನ್ನು ಮತ್ತೆ ಪಡೆಯಲೂ ಸಾಧ್ಯವಿಲ್ಲ.

ಅಪ್ಪಹೇಳುತ್ತಿರುತ್ತಾರೆ, ‘‘ಯಾವುದೇ ಮಗುವಿಗೆ ಮೊದಲ ಬಾರಿಗೆ ಯಾವುದೇ ಹಣ್ಣನ್ನು ತಿನ್ನಿಸುವುದಿದ್ದರೆ, ಮೊದಲು ನೀವು ರುಚಿ ನೋಡಿ, ಅದು ಹುಳಿ, ಕಹಿ, ಸಪ್ಪೆಯಿದ್ದರೆ ಕೊಡಬೇಡಿ. ರುಚಿಯಾದ ಉತ್ತಮ ಗುಣಮಟ್ಟದ ಸಿಹಿಯಾದ ಹಣ್ಣನ್ನು ಮಾತ್ರ ನೀಡಿ. ಏಕೆಂದರೆ ಮೊದಲ ಬಾರಿಗೆ ಹುಳಿಯಾದ ಮಾವಿನಹಣ್ಣು ನೀಡಿದರೆ ಮಾವಿನ ಹಣ್ಣೆಂದರೆ ಹುಳಿ ಎಂದು ಭಾವಿಸಿ ಮಗು ಅದನ್ನು ಮುಂದೆ ಎಂದೂ ತಿನ್ನುವ ಗೋಜಿಗೇ ಹೋಗದಿರಬಹುದು’’ ಎಂದು. ನಿಜ. ಮಗುವಿನ ಮನಸ್ಸಿನ ಮೇಲಾಗುವ ಪ್ರಥಮ ದಾಖಲೆ ಶಾಶ್ವತವಾದದ್ದು. ಅಂತಹ ದಾಖಲೆ ಉಳಿಸುವಲ್ಲಿ ನಮ್ಮ ನಡವಳಿಕೆ ಸೂಕ್ಷ್ಮವಾಗಿರಬೇಕಲ್ಲವೇ?

Writer - ರೂಪ ಹಾಸನ

contributor

Editor - ರೂಪ ಹಾಸನ

contributor

Similar News