ಧೈರ್ಯವಂತರಾಗಿದ್ದ ಪ್ರಧಾನಿ ಮೋದಿ ಬಾಲ್ಯದಲ್ಲಿ ಮೊಸಳೆ ಹಿಡಿದು ಮನೆಗೆ ತಂದಿದ್ದರು: ಪಠ್ಯಪುಸ್ತಕದಲ್ಲಿ ಉಲ್ಲೇಖ

Update: 2022-06-20 08:44 GMT

ಕೊಯಂಬತ್ತೂರು: ಪ್ರಧಾನಿ ನರೇಂದ್ರ ಮೋದಿಯವರ ಬಾಲ್ಯಕಾಲದ ಸಾಹಸಗಳ ಕುರಿತು ಒಂದನೇ ತರಗತಿಯ ಪಠ್ಯಪುಸ್ತಕದಲ್ಲಿ ಉಲ್ಲೇಖಿಸಿದ್ದು ಸದ್ಯ ಸಾಮಾಜಿಕ ತಾಣದಲ್ಲಿ ಸುದ್ದಿಯಾಗಿದೆ. 2019ರಲ್ಲಿ ಪ್ರಧಾನಿ ಮೋದಿ ಡಿಸ್ಕವರಿ ಚಾನೆಲ್‌ ನ ಮ್ಯಾನ್‌ ವರ್ಸಸ್‌ ವೈಲ್ಡ್‌ ಕಾರ್ಯಕ್ರಮದಲ್ಲಿ ಬೇರ್‌ ಗ್ರಿಲ್ಸ್‌ ರೊಂದಿಗೆ ಭಾಗವಹಿಸಿದ್ದ ಸಂದರ್ಭದಲ್ಲಿ ತಾನು ಬಾಲ್ಯದಲ್ಲಿ ಮೊಸಳೆ ಮರಿಯನ್ನು ಹಿಡಿದು ಮನೆಗೆ ತಂದ ಕುರಿತು ಹೇಳಿದ್ದರು. 

"ನಾನು ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭ ಮೊಸಳೆ ಮರಿಯೊಂದನ್ನು ನೋಡಿದೆ. ಅದನ್ನು ಹಿಡಿದು ಮನೆಗೆ ತಂದಾಗ, ಹೀಗೆ ಮಾಡುವುದು ಸರಿಯಲ್ಲ ಅದನ್ನು ಮರಳಿ ಕೆರೆಗೆ ಬಿಡು ಎಂದು ಅಮ್ಮ ಹೇಳಿದ್ದರು. ಅದರಂತೆ ನಾನು ಕೆರೆಯಲ್ಲಿ ಮೊಸಳೆ ಮರಿಯನ್ನು ಬಿಟ್ಟಿದ್ದೆ" ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಆ ಸಂದರ್ಭದಲ್ಲೇ ಸಾಮಾಜಿಕ ತಾಣದಲ್ಲಿ ವ್ಯಂಗ್ಯಕ್ಕೆ ಗುರಿಯಾಗಿತ್ತು.

ಸದ್ಯ ತಮಿಳುನಾಡಿನ ಪಠ್ಯಪುಸ್ತಕ ಪ್ರಕಾಶಕರೋರ್ವರು ಈ ಘಟನೆಯನ್ನು ಒಂದನೇ ತರಗತಿಯ ಪಠ್ಯದಲ್ಲಿ ಸೇರಿಸಿದ್ದಾರೆ ಎಂದು etvbharat ವರದಿ ಮಾಡಿದೆ. ಬ್ಯಾರಿ ಓಬ್ರಿಯನ್ ಮತ್ತು ಫೈರ್‌ಫ್ಲೈ ಪ್ರಕಾಶನಗಳ 1 ನೇ ತರಗತಿಯ ಮೌಲ್ಯ ಶಿಕ್ಷಣದ ಪುಸ್ತಕವು ಮೊಸಳೆಯ ಭಾಗವನ್ನು ಅಳವಡಿಸಿ ಮೋದಿ ತನ್ನ ಬಾಲ್ಯದಲ್ಲಿ ಎಷ್ಟು 'ಧೈರ್ಯವಂತರಾಗಿದ್ದರು' ಎಂಬುವುದನ್ನು ತಿಳಿಹೇಳಿದೆ.

ಘಟನೆಯನ್ನು ಉಲ್ಲೇಖಿಸಿ, ಶಾಲೆಯ ಪಠ್ಯಪುಸ್ತಕವು "ನರೇಂದ್ರ ದಾಮೋದರ ದಾಸ್ ಮೋದಿ ಅವರು ಭಾರತದ 14 ನೇ ಮತ್ತು ಪ್ರಸ್ತುತ ಪ್ರಧಾನಿಯಾಗಿದ್ದಾರೆ. ಅವರು ತಮ್ಮ ಬಾಲ್ಯದಲ್ಲಿ ಎಷ್ಟು ಧೈರ್ಯಶಾಲಿಯಾಗಿದ್ದರು ಎಂದರೆ ಒಮ್ಮೆ ಅವರು ಮೊಸಳೆಯನ್ನು ಹಿಡಿದು ಮನೆಗೆ ತಂದಿದ್ದರು" ಎಂದು ಪ್ರಧಾನಿಯ ಫೋಟೊದೊಂದಿಗೆ ಉಲ್ಲೇಖಿಸಲಾಗಿದೆ. ಪ್ರಧಾನಿ ಸಂಪೂರ್ಣ ದೇಶದ ʼವೀಕ್ಷಕರಾಗಿದ್ದಾರೆʼ ಎಂದೂ ಅದು ಸೇರಿಸಿದೆ.

ಪ್ರಧಾನಿ ಮೋದಿಯವರ ಬಾಲ್ಯ ಕಥೆಗಳನ್ನು ಒಳಗೊಂಡಿರುವ ಪುಸ್ತಕವು ಇದು ಮೊದಲನೆಯದಲ್ಲ. ರಾನಡೆ ಪ್ರಕಾಶನ ಮತ್ತು ಬ್ಲೂ ಸ್ನೇಲ್ ಅನಿಮೇಷನ್‌ನ 'ಬಾಲ್ ನರೇಂದ್ರ - ಚೈಲ್ಡ್‌ಹುಡ್ ಸ್ಟೋರೀಸ್ ಆಫ್ ನರೇಂದ್ರ ಮೋದಿ' ಎಂಬ ಕಾಮಿಕ್ ಪುಸ್ತಕವು ಪ್ರಧಾನಿ ಎಷ್ಟು 'ಧೈರ್ಯವಂತರು' ಎಂದು ವಿವರಿಸುವ ಕಥೆಗಳ ಪಟ್ಟಿಯನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News