ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ವಜಾಕ್ಕೆ ಆಗ್ರಹ

Update: 2022-06-20 11:49 GMT

ಮಂಗಳೂರು : ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ರವರು ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣವನ್ನು ದುರುವ್ಯವಹಾರ ಮಾಡಿದ್ದು ಅವರನ್ನು ವಜಾಗೊಳಿಸಿ ಖರೀದಿಯ ಸಂಬಂಧ ಪಟ್ಟು ಎಲ್ಲಾ ದಾಖಲೆ ಪತ್ರಗಳನ್ನು ತನಿಖೆಗೊಳಪಡಿಸಬೇಕೆಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ದ.ಕ. ಜಿಲ್ಲಾ ಸಮ್ಮೇಳನವು ನಿರ್ಣಯ ಅಂಗೀಕರಿಸಿದೆ.

ಕೊರೋನಾ ಲಾಕ್‌ಡೌನ್ ಪರಿಹಾರ ಬಾಕಿ ಇರುವ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕೂಡಲೇ ಪಾವತಿಸ ಬೇಕು, ೨೦೦೭ ರಿಂದ ನೋಂದಾಯಿತರಾಗಿರುವ ಎಲ್ಲಾ ನಮೂನೆಯ ಕಟ್ಟಡ ಕಾರ್ಮಿಕರಿಗೆ ಟೂಲ್ ಕಿಟ್ ವಿತರಿಸಬೇಕು, ಬಾಕಿ ಇರುವ ಅರ್ಜಿದಾರರ ಎಲ್ಲಾ ಸವಲತ್ತುಗಳನ್ನು ಕೂಡಲೇ ವಿಲೇವಾರಿ ಮಾಡಬೇಕೆಂದು ಒತ್ತಾಯಿ ಜುಲೈ 7ರಂದು ಸಹಾಯಕ ಕಾರ್ಮಿಕ ಆಯುಕತಿರ ಕಚೇರಿಯ ಮುಂದುಗಡೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಫೆಡರೇಶನ್ ಪ್ರಕಟನೆಯಲ್ಲಿ ತಿಳಿಸಿದೆ.

ಸಮ್ಮೇಳನವು  ಬಿ.ಮಾಧವ ವೇದಿಕೆ, ಸಿಐಟಿಯು ಸಭಾಂಗಣ, ಬೋಳಾರ, ಮಂಗಳೂರು ಇಲ್ಲಿ ವಸಂತ ಆಚಾರಿಯವರ ಅಧ್ಯಕ್ಷತೆಯಲ್ಲಿ ಜರಗಿತು. ಸಮ್ಮೇಳನವನ್ನು ಉದ್ಘಾಟಿಸಿದ ಫೆಡರೇಶನ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್, ಯಾವುದೇ ಕೈಗಾರಿಕೆಗಳು ನಶಿಸಿ ಹೋದರೂ ಕಟ್ಟಡ ಕೈಗಾರಿಕೆ ರಂಗ ಶಾಶ್ವತವಾಗಿ ಕೆಲಸ ನಿರ್ವಹಿಸುತ್ತದೆ. ಆದರೆ ಆಳುವ ವರ್ಗಗಳು ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಯನ್ನು ತನಗೆ ಬೇಕಾದ ಹಾಗೆ ಉಪಯೋಗಿಸಿಕೊಂಡು ಲಾಭಕೋರ ನೀತಿಗಳನ್ನು ಅಳವಡಿಸಿ ಕಟ್ಟಡ ಕಾರ್ಮಿಕರನ್ನು ನಿರುದ್ಯೋಗದತ್ತ ತಳ್ಳುತ್ತಿವೆ. ಕಟ್ಟಡ ಕಾರ್ಮಿಕ ಸಂಘಟನೆಗಳು ಈ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕಾಗಿದೆ ಎಂದು ಅವರು ಹೇಳಿದರು.

ಅತಿಥಿಯಾಗಿ ಭಾಗವಹಿಸಿದ ಸಿಐಟಿಯುನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್‌ರವರು ಕೇಂದ್ರ ಮತುತಿ ರಾಜ್ಯ ಸರಕಾರಗಳು ಉದಾರೀಕರಣ ನೀತಿಗಳನ್ನು ವೇಗವಾಗಿ ಜಾರಿಗೊಳಿಸುತ್ತಿದೆ. ಕಾರ್ಮಿಕ ನೀತಿಗಳನ್ನು ಮಾಲೀಕರ ಪರವಾಗಿ ಸಂಹಿತೆಯಾಗಿ ಪರಿವರ್ತಿಸುತಿತಿದೆ. ಸಾರ್ವಜನಿಕ ಬಂಡವಾಳವನ್ನು ಖಾಸಗೀಕರಣಗೊಳಿಸಿ ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುತ್ತಿದೆ ಎಂದು ಆರೋಪಿಸಿದರು.

ಸಮ್ಮೇಳನದ ಕರಡು ವರದಿಯನ್ನು ಪ್ರಧಾನ ಕಾರ್ಯದರ್ಶಿ ಯು.ಜಯಂತ ನಾಯ್ಕ್,  ಲೆಕ್ಕಪತ್ರವನ್ನು ಕೋಶಾಧಿಕಾರಿ ರವಿಚಂದ್ರ ಕೊಂಚಾಡಿ ಮಂಡಿಸಿದರು.

ಸಮ್ಮೇಳನವು ವಸಂತ ಆಚಾರಿ ಅಧ್ಯಕ್ಷರಾಗಿ, ಯೋಗೀಶ್ ಜಪ್ಪಿನಮೊಗರು ಪ್ರಧಾನ ಕಾರ್ಯದರ್ಶಿಯಾಗಿ, ರವಿಚಂದ್ರ ಕೊಂಚಾಡಿ ಕೋಶಾಧಿಕಾರಿಯಾಗಿರುವ ೧೯ ಮಂದಿಯ ಪದಾಧಿಕಾರಿ ಹಾಗೂ ೧೯ ಮಂದಿಯ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಿತು. ಸಮ್ಮೇಳನದ ಸಮಾರೋಪ ಭಾಷಣವನ್ನು ಸಿಐಟಿಯುನ ಜಿಲ್ಲಾ ಅಧ್ಯಕ್ಷರಾದ ಜೆ.ಬಾಲಕೃಷ್ಣ ಶೆಟ್ಟಿಯವರು ಮಾಡಿದರು. ಪ್ರಾರಂಭದಲ್ಲಿ ಯು.ಜಯಂತ ನಾಯ್ಕ್ ಸ್ವಾಗತಿಸಿ, ಕೊನೆಯಲ್ಲಿ ಯೋಗೀಶ್ ಜಪ್ಪಿನಮೊಗರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News