ಕೇಂದ್ರ ಸರಕಾರ ʼಅಗ್ನಿವೀರರಿಗೆʼ ಬಗೆಯುತ್ತಿರುವ ದ್ರೋಹ ಮತ್ತು ಶ್ರೀಮಂತ ಉದ್ಯಮಿಗಳಿಗೆ ಮಾಡುತ್ತಿರುವ ಸಹಾಯ

Update: 2022-06-20 15:46 GMT

ಅದು ಆಯಕಟ್ಟಿನ ಜಾಗದಲ್ಲಿ ಇರಿಸಲಾಗಿದ್ದ ಕ್ಯಾಮೆರಾದಿಂದ ಸೆರೆ ಹಿಡಿದಿದ್ದ ಅದ್ಭುತ ಭಂಗಿಯಾಗಿತ್ತು. ಅದು ಭಾರತದ ಶಕ್ತಿಶಾಲಿ ಪ್ರಧಾನಿ ತನ್ನ ತಾಯಿಯ ಪದತಲದಲ್ಲಿ ಕುಳಿತಿದ್ದ ಚಿತ್ರವಾಗಿತ್ತು. ವೃತ್ತಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದ ಚಿತ್ರವನ್ನು ನೋಡಿದಾಗ ಬೀದಿಗಳಲ್ಲಿರುವ ಅಥವಾ ಪೊಲೀಸರ ಲಾಠಿಗಳಿಂದ ಮತ್ತು ಗುಂಡುಗಳಿಂದ ಗಾಯಗೊಂಡಿದ್ದ ಹಲವಾರು ನವಯುವಕರ ತಾಯಂದಿರ ಬಗ್ಗೆ ಆಲೋಚಿಸಿದ್ದೆ. ಅವರು ಈ ಚಿತ್ರವನ್ನು ನೋಡಿದಾಗ ಅಥವಾ ‘ಅಮ್ಮ ಕೇವಲ ಪದವಲ್ಲ’ ಎಂಬ ದೇಶಕ್ಕೊಂದು ಉಪನ್ಯಾಸದಂತಿದ್ದ ಪ್ರಧಾನಿಯವರ ಸಂದೇಶವನ್ನು ಕೇಳಿದಾಗ ಅವರಿಗೆ ಏನು ಅನ್ನಿಸಿರಬಹುದು ಎಂದು ನನಗೆ ಆಶ್ಚರ್ಯವಾಗುತ್ತಿದೆ. 

ತಾಯಿಯ ಪಾದಗಳ ಬಳಿ ಆರಾಧನಾ ಭಾವದಿಂದ ಕುಳಿತಿದ್ದ ವ್ಯಕ್ತಿಯು ನಿರ್ಧರಿಸಿದ ನೀತಿಯಿಂದಾಗಿ ತಮ್ಮ ಕನಸುಗಳು ನುಚ್ಚುನೂರಾದ, ಎಂದಿಗೂ ಸಾಮಾನ್ಯ ಸೈನಿಕನಾಗಲು ಸಾಧ್ಯವಿಲ್ಲದ ತಮ್ಮ ಪುತ್ರರು, ಕೆಲವು ಪ್ರಕರಣಗಳಲ್ಲಿ ಪುತ್ರಿಯರ ಬಗ್ಗೆ ಅವರು ಕಣ್ಣೀರು ಸುರಿಸಿದರೇ? ತಮ್ಮ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯುವುದನ್ನು, ದುಬಾರಿ ತರಬೇತಿ ಕೇಂದ್ರಗಳಿಗೆ ಸೇರುವುದನ್ನು ಮತ್ತು ಅವರು ಉತ್ತಮ ಬದುಕನ್ನು ಸಾಗಿಸುವುದನ್ನು ನೋಡಲು ತಮ್ಮ ಸ್ವಂತ ಜೀವನದಲ್ಲಿ ಮಾಡಿದ ತ್ಯಾಗಗಳು ಮತ್ತು ಅನುಭವಿಸಿದ ಕಷ್ಟಗಳನ್ನು ನೆನೆಸಿಕೊಂಡರೇ? 

ಸಶಸ್ತ್ರ ಪಡೆಗಳಿಗೆ ಸೇರಲು ಅಗತ್ಯವಾದ ಕಠಿಣ ದೈಹಿಕ ಪರೀಕ್ಷೆಗಳಲ್ಲಿ ತೇರ್ಗಡೆಗೊಳ್ಳಲು ಸಜ್ಜಾಗಲು ಈ ದುಬಾರಿ ಬೆಲೆಗಳ ಕಾಲದಲ್ಲಿ ತಮ್ಮ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಒದಗಿಸಲು ತಾವು ಪಟ್ಟ ಕಷ್ಟಗಳ ಬಗ್ಗೆ ಈ ತಾಯಂದಿರು ಆಲೋಚಿಸಿದರೇ? ಸೇನೆಯನ್ನು ಸೇರುವ ತಮ್ಮ ಮಕ್ಕಳ ಆಕಾಂಕ್ಷೆಗಳನ್ನು ಈಡೇರಿಸಲು ತಾವು ಹೊತ್ತುಕೊಂಡ ಸಾಲಗಳ ಬಗ್ಗೆ ಅವರು ಯೋಚಿಸಿದರೇ? ಈ ತಾಯಂದಿರು ಭದ್ರತೆಗಾಗಿ-ತಮ್ಮ ಮಕ್ಕಳ ಉದ್ಯೋಗ ಭದ್ರತೆಗಾಗಿ, ಅವರ ಕುಟುಂಬಗಳ ಭದ್ರತೆಗಾಗಿ ಹಾತೊರೆಯುತ್ತಾರೆ ಮತ್ತು ಪ್ರತಿಭಟನೆಯಲ್ಲಿದ್ದವರ ಧ್ವನಿಗಳು ಈ ಆಶಯವನ್ನು ಪ್ರತಿಬಿಂಬಿಸುತ್ತಿವೆ. ಪ್ರತಿಭಟನೆಯಲ್ಲಿ ತೊಡಗಿರುವವರ ಸಂದರ್ಶನದ ಮೇಲೆ ಸಂದರ್ಶನಗಳು ಇದನ್ನು ಸಾಕಷ್ಟು ಸ್ಪಷ್ಟಪಡಿಸಿವೆ, ಆದರೆ ಪ್ರಧಾನಿಯ ನಂಬಿಕೆಯೇ ಬೇರೆ.

ತನ್ನ ಇತ್ತೀಚಿನ ಯುರೋಪ್ ಪ್ರವಾಸದ ಸಂದರ್ಭದಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು, ನವಭಾರತವು ಈಗ ಸುಭದ್ರ ಭವಿಷ್ಯದ ಬಗ್ಗೆ ಯೋಚಿಸುತ್ತಿಲ್ಲ, ಆದರೆ ಅದು ಅಪಾಯಗಳನ್ನು ಎದುರಿಸಲು ಸಿದ್ಧವಾಗಿದೆ. ಅದು ವಿನೂತನತೆಗೆ ಮತ್ತು ಬೆಳವಣಿಗೆಗೆ ಪೂರಕವಾಗಲು ಸಿದ್ಧವಾಗಿದೆ ಎಂದು ಹೇಳಿದ್ದರು. ಕಳೆದ ಕೆಲವು ದಿನಗಳಿಂದ ಪ್ರಧಾನಿಯವರು ಪ್ರಸ್ತಾಪಿಸುತ್ತಿರುವ ಸ್ಟಾರ್ಟ್‌ಪ್‌ಗಳು ‘ನವಭಾರತ’ದ ಪುಟ್ಟ ಶೇಕಡಾವಾರು ಪ್ರಮಾಣವಾಗಿವೆ. 

ಇಂದು ಬೀದಿಗಿಳಿದಿರುವ ಭಾರೀ ಸಂಖ್ಯೆಯ ಯುವಜನರು ತಾವು ದೇಶಕ್ಕೆ ಸೇವೆ ಸಲ್ಲಿಸುವಂತಾಗಲು ಮತ್ತು ಇದೇ ವೇಳೆ ತಮ್ಮ ಕುಟುಂಬಗಳಿಗೆ ಸ್ಥಿರವಾದ ಭವಿಷ್ಯವನ್ನು ಖಚಿತಪಡಿಸಲು ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ತಾವು ಮತ್ತು ತಮ್ಮ ಕುಟುಂಬಗಳು ಪಟ್ಟಿರುವ ಕಷ್ಟಗಳಿಂದ ದಣಿದಿದ್ದಾರೆ. ಅವರು ಪ್ರಧಾನಿಯ ‘ಅಪಾಯವನ್ನು ಎದುರಿಸುವ’ ಶ್ಲಾಘನೆಯನ್ನು ಕೇಳಲು ಅಥವಾ ಮಾತೃಪ್ರೇಮವನ್ನು ಪ್ರದರ್ಶಿಸಲು ಫೋಟೊಗಳಿಗೆ ಭಂಗಿಗಳನ್ನು ನೀಡಲು ಬಯಸುವುದಿಲ್ಲ.

ಓರ್ವ ಪ್ರಧಾನಿ ವಾಸ್ತವವನ್ನು ಇಷ್ಟೊಂದು ಮರೆಯಲು ಹೇಗೆ ಸಾಧ್ಯ? ಭಾರತವು ದಶಕಗಳಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗಿಗಳನ್ನು ಎದುರಿಸುತ್ತಿದೆ. ಯಾವುದೇ ಸರಕಾರಿ ಹುದ್ದೆಗಾಗಿ ಜಾಹೀರಾತು ಪ್ರಕಟಗೊಂಡರೆ ಲಕ್ಷಾಂತರ ಅರ್ಜಿಗಳು ಬರುತ್ತಿವೆ. ಸಶಸ್ತ್ರ ಪಡೆಗಳು ಗ್ರಾಮೀಣ ಯುವಜನರ ಮೊದಲ ಆಯ್ಕೆಯಾಗಿವೆ. ಪ್ರತಿ ವರ್ಷ ಸುಮಾರು 50,000 ದಿಂದ 60,000 ಸಿಬ್ಬಂದಿಗಳು ಸಶಸ್ತ್ರ ಪಡೆಗಳಿಂದ ನಿವೃತ್ತರಾಗುತ್ತಾರೆ ಮತ್ತು ಅಷ್ಟೇ ಸಂಖ್ಯೆಯ ಸಿಬ್ಬಂದಿಗಳನ್ನು ಹೊಸದಾಗಿ ನೇಮಿಸಿಕೊಳ್ಳಲಾಗುತ್ತದೆ. ಆದರೆ ಕಳೆದ ಕೆಲವು ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕದ ಹೆಸರಿನಲ್ಲಿ ಎಲ್ಲ ನೇಮಕಾತಿಗಳು ಸ್ಥಗಿತಗೊಂಡಿವೆ.

ಪರಿಣಾಮವಾಗಿ 2021, ಡಿಸೆಂಬರ್‌ಗೆ ಇದ್ದಂತೆ ಸೇನೆಯಲ್ಲಿ 1,04,053,ನೌಕಾಪಡೆಯಲ್ಲಿ 12,431 ಮತ್ತು ವಾಯುಪಡೆಯಲ್ಲಿ 5,471 ಸಿಬ್ಬಂದಿಗಳ ಕೊರತೆಯಿತ್ತು. ಎಂದಿನ ಕಾರ್ಯವಿಧಾನಗಳ ಮೂಲಕ ಈ ಕೊರತೆಯನ್ನು ನೀಗಿಸುವ ಬದಲು ಸರಕಾರವು ಸುರಕ್ಷಿತ ಕಾಯಂ ಉದ್ಯೋಗವನ್ನು ನಾಲ್ಕು ವರ್ಷಗಳ ಗುತ್ತಿಗೆಗೆ ಬದಲಿಸಿರುವ ‘ಅಗ್ನಿಪಥ್’ ಯೋಜನೆಯನ್ನು ತಂದಿರುವುದು ಅಶಾಂತಿ ಮತ್ತು ಹತಾಶೆಗೆ ಕಾರಣವಾಗಲಿದೆ.

ನೂತನ ಅಗ್ನಿಪಥ್ ಯೋಜನೆಯು ಶಾರ್ಟ್ ಟರ್ಮ್ ಕಮಿಷನ್ಡ್ ಅಧಿಕಾರಿಗಳಾಗಿ ನೇಮಕಗೊಂಡಿದ್ದ ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳಿಗೆ ವಿರುದ್ಧವಾಗಿದೆ.  ಶಾರ್ಟ್ ಟರ್ಮ್ ಕಮಿಷನ್‌ಗಳ ಯೋಜನೆಯನ್ನು ತಾರತಮ್ಯದ್ದು ಎಂದು ಪರಿಗಣಿಸಲಾಗಿತ್ತು. ಅದು ಮಹಿಳಾ ಅಧಿಕಾರಿಗಳಿಗೆ ಸಂಬಂಧಿಸಿದ್ದಾಗಿದ್ದರೂ ಅವರಿಗೆ ಕಾಯಂ ಉದ್ಯೋಗವನ್ನು ಒದಗಿಸುವ ಮತ್ತು ಸಶಸ್ತ್ರ ಪಡೆಗಳಲ್ಲಿ ಕಾಯಂ ಹುದ್ದೆಗಳಿಗೆ ಮಹಿಳೆಯರ ನೇಮಕಾತಿಗೆ ಬದ್ಧತೆಯನ್ನು ಸರಕಾರವು ವ್ಯಕ್ತಪಡಿಸಿತ್ತು. 

ಅಗ್ನಿಪಥ್ ಯೋಜನೆಯು ಕಾಯಂ ಸಿಬ್ಬಂದಿಗಳಾಗಿ ಸಶಸ್ತ್ರ ಪಡೆಗಳನ್ನು ಸೇರುವ ಯುವ ಮಹಿಳೆಯರ ಕನಸುಗಳನ್ನು ನುಚ್ಚುನೂರು ಮಾಡಿದೆ. ಅಗ್ನಿಪಥ ನೇಮಕಾತಿ ನಿಯಮಗಳು ಮಹಿಳೆಯರ ಪ್ರವೇಶಕ್ಕೆ ಅನುಮತಿಸುತ್ತವೆಯಾದರೂ ನಾಲ್ಕು ವರ್ಷಗಳ ಸೇವಾವಧಿಯಿಂದ ಅವರಿಗೆ ಯಾವ ಲಾಭವಾಗುತ್ತದೆ? ನಿವೃತ್ತಿಯ ಬಳಿಕ ಉದ್ಯೋಗಾವಕಾಶಗಳನ್ನು ಕಂಡುಕೊಳ್ಳುವುದು ಅವರಿಗೆ ಇನ್ನಷ್ಟು ಕಷ್ಟಕರವಾಗಲಿದೆ.

ಪೂರ್ಣ ವೇತನಗಳನ್ನು ಮತ್ತು ಹೆಚ್ಚುತ್ತಿರುವ ಪಿಂಚಣಿ ಮೊತ್ತವನ್ನು ಪಾವತಿಸಲು ಅಗತ್ಯ ಹಣಕಾಸು ಅಗತ್ಯವನ್ನು ಕಡಿಮೆ ಮಾಡುವುದು ಸ್ಪಷ್ಟವಾಗಿ ಸರಕಾರದ ಮುಖ್ಯ ಕಾಳಜಿಯಾಗಿದೆ. ಅಗ್ನಿಪಥ ಯೋಜನೆಯು ಗುತ್ತಿಗೆ ನೌಕರರೂ ಕಾಯಂ ಉದ್ಯೋಗಿಗಳಷ್ಟೇ ಸವಲತ್ತುಗಳನ್ನು ಪಡೆಯುತ್ತಾರೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯವು ತನ್ನ 2016ರ ತೀರ್ಪಿನಲ್ಲಿ ಸರಕಾರಗಳಿಗೆ ನೀಡಿದ್ದ ನಿರ್ದೇಶಕ್ಕೂ ವಿರುದ್ಧವಾಗಿದೆ.

ನವ ಉದಾರವಾದಿ ಆರ್ಥಿಕ ನೀತಿಗಳನ್ನು ಅನುಸರಿಸಿದ ಸತತ ಸರಕಾರಗಳು ಕಾರ್ಮಿಕರು ಮತ್ತು ಉದ್ಯೋಗಿಗಳು ದಶಕಗಳ ಹೋರಾಟದ ಮೂಲಕ ಪಿಂಚಣಿ ಯೋಜನೆಗಳು ಸೇರಿದಂತೆ ಪಡೆದುಕೊಂಡಿದ್ದ ಹಕ್ಕುಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸಿವೆ. ಈಗ ಸರಕಾರವು ಈ ಕ್ರೂರ ಶೋಷಣೆಯನ್ನು ಸಶಸ್ತ್ರ ಪಡೆಗಳಿಗೂ ವಿಸ್ತರಿಸಲು ಹವಣಿಸುತ್ತಿದೆ. ಆದರೆ ಇಲ್ಲಿ ಪ್ರಮುಖ ಹೆಚ್ಚುವರಿ ಅಂಶವೊಂದಿದೆ. ಈ ಯುವಜನರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸಶಸ್ತ್ರ ಪಡೆಗಳಿಗೆ ಸೇರುತ್ತಾರೆ. ಅವರು ವೆಚ್ಚಗಳಿಗೆ ಕಾರಣರಾಗುತ್ತಾರೆ ಎಂದು ಭಾವಿಸುವುದು ನಾಚಿಕೆಗೇಡಿನ ವಿಷಯವಾಗಿದೆ. 

ಅಗ್ನಿಪಥ್ ಸಶಸ್ತ್ರ ಪಡೆಗಳ ಒಂದು ವಿಭಾಗದ ಗುತ್ತಿಗೆಕರಣವಲ್ಲದೆ ಬೇರೇನೂ ಅಲ್ಲ. ಇದು ಜನರಲ್‌ಗಳು ಮತ್ತು ಅಧಿಕಾರಿಗಳನ್ನು ಬಾಧಿಸುವುದಿಲ್ಲ. ನಾಲ್ಕು ವರ್ಷಗಳ ಬಳಿಕ ಸೇವೆಯಿಂದ ಕಿತ್ತೊಗೆಯಲ್ಪಡುವವರು ಅಗ್ನಿವೀರರು, ಭಾರತದ ಕಿಸಾನರ ಮಕ್ಕಳು. ನಾಲ್ಕು ವರ್ಷಗಳ ಅವಧಿಯ ಬಳಿಕ ಅಗ್ನಿವೀರರಿಗೆ ಸುಮಾರು 10.5 ಲ.ರೂ.ಗಳ ಸೇವಾನಿಧಿ ದೊರೆಯುತ್ತದೆ ಎಂದು ದೊಡ್ಡದಾಗಿ ಬಿಂಬಿಸಲಾಗುತ್ತಿದೆ, ವಾಸ್ತವದಲ್ಲಿ ಇದರಲ್ಲಿ ಅರ್ಧದಷ್ಟು ಮೊತ್ತವನ್ನು ಅವರ ವೇತನಗಳಿಂದಲೇ ಕಡಿತ ಮಾಡಲಾಗುತ್ತದೆ. 

ಹಾನಿಯನ್ನು ನಿಯಂತ್ರಿಸುವ ಕ್ರಮವಾಗಿ ಸರಕಾರವು ರಕ್ಷಣಾ ಪಿಎಸ್‌ಯುಗಳಲ್ಲಿ ಮತ್ತು ಇತರ ಸರಕಾರಿ ಕ್ಷೇತ್ರಗಳಲ್ಲಿ ಅಗ್ನಿವೀರರಿಗೆ ಶೇ.10ರಷ್ಟು ಉದ್ಯೋಗ ಮೀಸಲಾತಿಯನ್ನು ಒದಗಿಸುವುದಾಗಿ ಪ್ರಕಟಿಸಿದೆ. ಸರಕಾರದ ನೇಮಕಾತಿಗಳ ನೀರಸ ದಾಖಲೆಯನ್ನು ಗಮನಿಸಿದರೆ ಇಂತಹ ಭರವಸೆಗೆ ಹೆಚ್ಚಿನ ವಿಶ್ವಾಸಾರ್ಹತೆಯಿಲ್ಲ. ಸರಕಾರಿ ಕ್ಷೇತ್ರಗಳಲ್ಲಿ ಈಗಾಗಲೇ ಐದು ಲಕ್ಷಕ್ಕೂ ಅಧಿಕ ಹುದ್ದೆಗಳು ವರ್ಷಗಳಿಂದಲೂ ಖಾಲಿಯಾಗಿಯೇ ಇವೆ! ಅಲ್ಲದೆ ಸಾರ್ವಜನಿಕ ಆಸ್ತಿಗಳು ಮಾರಾಟವಾಗುತ್ತಿರುವುದರಿಂದ ಮತ್ತು ಸರಕಾರಿ ಸೇವೆಗಳ ಖಾಸಗೀಕರಣ ಹೆಚ್ಚುತ್ತಿರುವುದರಿಂದ ಲಭ್ಯ ಹುದ್ದೆಗಳ ಸಂಖ್ಯೆಯು ಕಡಿಮೆಯಾಗುತ್ತಲೇ ಹೋಗುತ್ತದೆ.

ಪ್ರಾಥಮಿಕವಾಗಿ ಸರಕಾರವು ನಮ್ಮ ಯೋಧರಿಗೆ ಉದ್ಯೋಗದ ಭದ್ರತೆ ಅಥವಾ ಪಿಂಚಣಿ ಸೌಲಭ್ಯಗಳನ್ನು ಖಚಿತಪಡಿಸಲು ತನ್ನ ಬಳಿ ಹಣಕಾಸು ಇಲ್ಲ ಎಂದು ಹೇಳುತ್ತಿದೆ. ಆದರೆ ಸಂಪನ್ಮೂಲಗಳ ಕ್ರೋಡೀಕರಣಕ್ಕೆ ಮಾರ್ಗಗಳಿಲ್ಲ ಎಂದಲ್ಲ. ಸರಕಾರವು ತನ್ನ ಸ್ನೇಹಿ ಕಾರ್ಪೊರೇಟ್ ಸಂಸ್ಥೆಗಳ ಬೃಹತ್ ಲಾಭಗಳನ್ನು ರಕ್ಷಿಸಲು ಎಷ್ಟೊಂದು ಬದ್ಧವಾಗಿದೆ ಎಂದರೆ ಅದು ಹಲವಾರು ತೆರಿಗೆ ರಿಯಾಯಿತಿಗಳ ಮೂಲಕ ಅವುಗಳಿಗೆ ಅಸಾಮಾನ್ಯ ಔದಾರ್ಯವನ್ನು ವಿಸ್ತರಿಸುವುದನ್ನು ಮುಂದುವರಿಸಿದೆ. 

ಇಂತಹ ವಿಪರೀತ ಅಸಮಾನತೆಗಳ ದೇಶದಲ್ಲಿ, ಅದೂ ಭಾರತವು ಈಗಿನ ದಯಾಪರ ಆಡಳಿತದಡಿ ಶತಕೋಟ್ಯಾಧೀಶರನ್ನು ಉತ್ಪಾದಿಸುತ್ತಿರುವ ವಿಶ್ವದ ಮೂರನೇ ದೊಡ್ಡ ರಾಷ್ಟ್ರ ಎಂಬ ದಾಖಲೆಯನ್ನು ಹೊಂದಿರುವಾಗ, ಭಾರತೀಯ ಶತಕೋಟ್ಯಧೀಶರು ತಮ್ಮ ಸಂಚಿತ ಸಂಪತ್ತಿಗೆ ಇನ್ನೂ 700 ಶತಕೋಟಿ ಡಾಲರ್‌ಗಳನ್ನು ಸೇರಿಸಿರುವಾಗ ಆದ್ಯತಾ ಕ್ಷೇತ್ರಗಳಿಗೆ ಸಂಪನ್ಮೂಲಗಳನ್ನು ಕ್ರೋಡೀಕರಿಸಲು ಖಂಡಿತವಾಗಿಯೂ ಮಾರ್ಗಗಳಿವೆ. ಕುಬೇರ ಪುತ್ರರ ಮೇಲೆ ತೆರಿಗೆಗಳನ್ನು ಹೇರುವುದಕ್ಕಿಂತ ಇಂತಹ ಅನ್ಯಾಯದ ನಿಬಂಧನೆಗಳನ್ನು ಹೇರುವ ಮೂಲಕ ನಮ್ಮ ಯುವಜನರ ದೌರ್ಬಲ್ಯ ಮತ್ತು ಉದ್ಯೋಗಕ್ಕಾಗಿ ಅವರ ಹತಾಶೆಯನ್ನು ಶೋಷಿಸುವುದು ಸುಲಭವಾಗಿದೆ!
 
ಅಗ್ನಿವೀರರಿಗೆ ಅನ್ಯಾಯದ ಹೊರತಾಗಿ ಗುತ್ತಿಗೆ ಯೋಧರನ್ನು ಆಧರಿಸಿದ ಸೇನೆಯು,ಅವರು ಎಷ್ಟೇ ಧೈರ್ಯ ಮತ್ತು ಬದ್ಧತೆಯನ್ನು ಹೊಂದಿದ್ದರೂ ಹೋರಾಟದ ಪಡೆಗಳ ನಿರಂತರತೆ, ಸುಸ್ಥಿರ ಕೌಶಲ್ಯಾಭಿವೃದ್ಧಿ ಮತ್ತು ಸಶಸ್ತ್ರ ಪಡೆಗಳ ನೈತಿಕ ಸ್ಥೈರ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಇವೆಲ್ಲವೂ ರಾಷ್ಟ್ರೀಯ ಭದ್ರತೆಗೆ ಹಾನಿಕಾರಕವಾಗಲಿವೆ. ತಜ್ಞರು ಮತ್ತು ನಿವೃತ್ತ ಸೇನಾಧಿಕಾರಿಗಳು ಈ ಬಗ್ಗೆ ಪದೇಪದೇ ಕಳವಳಗಳು ಮತ್ತು ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ,ಆದರೆ ಸರಕಾರವು ಈ ಅನುಭವದ ಮತ್ತು ವಿವೇಕದ ಧ್ವನಿಗಳಿಗೆ ಕಿವಿಯಾಗುತ್ತಿಲ್ಲ. ಹಲವರು ಪ್ರತಿಪಕ್ಷಗಳು,ಸರಕಾರದ ಮಿತ್ರಪಕ್ಷಗಳು ಅಗ್ನಿಪಥ್ ಯೋಜನೆಯನ್ನು ವಿರೋಧಿಸಿವೆ. ತಮಿಳುನಾಡು,ಕೇರಳ ಮತ್ತು ರಾಜಸ್ಥಾನಗಳಂತಹ ಹಲವಾರು ರಾಜ್ಯ ಸರಕಾರಗಳು ಮತ್ತು ಹಲವಾರು ಸಂಸದರು ಕೇಂದ್ರ ಸರಕಾರಕ್ಕೆ ಅಧಿಕೃತ ಪತ್ರಗಳನ್ನು ಬರೆದು ಯೋಜನೆಯನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಭಾರತದ ಹಿತಾಸಕ್ತಿಯಿಂದ ಯೋಜನೆಯನ್ನು ಹಿಂದೆಗೆದುಕೊಳ್ಳಲೇಬೇಕಿದೆ.

‘ಜೈ ಜವಾನ್,ಜೈ ಕಿಸಾನ್ ’ಎಂಬ ಹೆಮ್ಮೆಯ ಘೋಷಣೆಯನ್ನು ಮೋದಿ ಸರಕಾರವು ‘ಹಾಯ್ ರೆ ಕಿಸಾನ್,ರೋ ರಹಾ ಜವಾನ್ (ಬಡ ರೈತ,ಅಳುವ ಯೋಧ)’ ಆಗಿ ಪರಿವರ್ತಿಸಿದೆ. ಎಂತಹ ದ್ರೋಹ!?

ಕೃಪೆ:ndtv.com

Writer - ಬೃಂದಾ ಕಾರಟ್‌ (ndtv.com)

contributor

Editor - ಬೃಂದಾ ಕಾರಟ್‌ (ndtv.com)

contributor

Similar News