ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆಯಾಗಿ ಬಂದ 22 ಕೋಟಿ ರೂ ಚೆಕ್‌ ಬೌನ್ಸ್‌ !

Update: 2022-06-20 15:45 GMT

ಹೊಸದಿಲ್ಲಿ: ಅಯೋಧ್ಯೆಯ ವಿವಾದಿತ ರಾಮ ಜನ್ಮಭೂಮಿ ಆವರಣದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನೇತೃತ್ವದಲ್ಲಿ ನಡೆಸಲಾದ ದೇಣಿಗೆ ಅಭಿಯಾನದ ಮೂಲಕ ಬಂದ ಸುಮಾರು 22 ಕೋಟಿ ರೂ ಮೌಲ್ಯದ ಚೆಕ್‌ ಬೌನ್ಸ್‌ ಆಗಿದೆ ಎಂದು indianexpress ವರದಿ ಮಾಡಿದೆ. 

ಟ್ರಸ್ಟ್ ಖಾತೆಗಳ ಜಿಲ್ಲಾವಾರು ಲೆಕ್ಕಪರಿಶೋಧನೆ ನಡೆಯುತ್ತಿರುವುದರಿಂದ ಇದುವರೆಗೆ ಸಂಗ್ರಹಿಸಲಾದ ಒಟ್ಟು ಮೊತ್ತದ ಅಂಕಿಅಂಶವು ತಾತ್ಕಾಲಿಕವಾಗಿದೆ. ಬೌನ್ಸ್ ಆಗಿರುವ ಚೆಕ್‌ಗಳನ್ನು ಪ್ರತ್ಯೇಕಿಸಿ ಹೊಸ ಆಡಿಟ್ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ ಟ್ರಸ್ಟ್ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. 

“ಚೆಕ್‌ಗಳು ಬೌನ್ಸ್ ಆದ ಕಾರಣವನ್ನು ಖಚಿತಪಡಿಸಿಕೊಳ್ಳಲು ಪರಿಶೀಲಿಸಲಾಗುತ್ತಿದೆ. ತಾಂತ್ರಿಕ ಕಾರಣಗಳಿಂದಾಗಿ ಬೌನ್ಸ್ ಆಗಿರುವ ಚೆಕ್‌ಗಳನ್ನು ಸಂಬಂಧಪಟ್ಟ ಬ್ಯಾಂಕ್‌ನ ಒಪ್ಪಿಗೆ ಪಡೆದ ನಂತರ ಮತ್ತೆ ಪ್ರತಿನಿಧಿಸಲಾಗುತ್ತದೆ" ಎಂದು ಟ್ರಸ್ಟ್‌ನ ಸದಸ್ಯರೊಬ್ಬರು ಹೇಳಿದ್ದಾರೆ.

ಜನವರಿ 14, 2021 ರಂದು ದೇವಾಲಯದ ಟ್ರಸ್ಟ್ ಮತ್ತುವಿಶ್ವ ಹಿಂದೂ ಪರಿಷತ್‌ ವತಿಯಿಂದ 44 ದಿನಗಳ ನಿಧಿ ಸಂಗ್ರಹ ಅಭಿಯಾನವನ್ನು ಪ್ರಾರಂಭಿಸಲಾಗಿತ್ತು. ಫೆಬ್ರವರಿ 28, 2021 ರ ವೇಳೆಗೆ ದೇವಸ್ಥಾನಕ್ಕಾಗಿ 2100 ಕೋಟಿ ರೂಪಾಯಿಗಳ ಸಂಗ್ರಹವಾಗಿತ್ತು. ಕಳೆದ ವರ್ಷ ಜೂನ್‌ವರೆಗೆ ದೇವಾಲಯದ ಟ್ರಸ್ಟ್ ಖಾತೆಗೆ ಜನರ ದೇಣಿಗೆ ಮೂಲಕ ಒಟ್ಟು 3,200 ಕೋಟಿ ರೂ. ಸಂಗ್ರಹವಾಗಿತ್ತು.  

ದೇಣಿಗೆಯ ಮೇಲೆ ನಿಗಾ ವಹಿಸುವ ತಂಡದ ವರದಿಯ ಪ್ರಕಾರ, ಒಟ್ಟು 5400 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತ ಸಂಗ್ರಹಗೊಂಡಿದ್ದು, ಅದರಲ್ಲಿ 2235.97 ಕೋಟಿ ರೂ.ಗಳನ್ನು ಕೂಪನ್ ಮತ್ತು ರಸೀದಿಗಳ ಮೂಲಕ ಸ್ವೀಕರಿಸಲಾಗಿದೆ, 2753.97 ಕೋಟಿ ರೂ. ಡಿಜಿಟಲ್ ಹಣಕಾಸು ವ್ಯವಹಾರದ ಮೂಲಕ ಸಂಗ್ರಹಿಸಲಾಗಿತ್ತು.

ಜೊತೆಗೆ ದೇಣಿಗೆ ಸಂಗ್ರಹಿಸಲು ಸುಲಭವಾಗಲು 10, 100 ಮತ್ತು 1000 ರೂಗಳ ದೇಣಿಗೆ ಕೂಪನ್‌ಗಳನ್ನು ಟ್ರಸ್ಟ್‌ ಮುದ್ರಿಸಿತ್ತು. ಟ್ರಸ್ಟ್ ವರದಿ ಪ್ರಕಾರ, 10 ರೂ.ಗಳ ಕೂಪನ್ ಮೂಲಕ ರೂ.30.99 ಕೋಟಿ, ರೂ.100 ಕೂಪನ್ ಮೂಲಕ ರೂ.372.48 ಕೋಟಿ ಮತ್ತು ರೂ.1000 ಕೂಪನ್ ಮೂಲಕ ರೂ.225.46 ಕೋಟಿಗಳನ್ನು ಸಂಗ್ರಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News