ಕೋವಿಡ್ ಹೊರೆಯ ನೆಪದಲ್ಲಿ ಎನ್‌ಸಿಇಆರ್‌ಟಿ ಪಠ್ಯಪುಸ್ತಕದಿಂದ ಜಾತಿ ತಾರತಮ್ಯದ ಉಲ್ಲೇಖಗಳಿಗೆ ಕತ್ತರಿ!

Update: 2022-06-20 18:32 GMT

 ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ)ಯ ‘ವಿಷಯವನ್ನು ತರ್ಕಬದ್ಧಗೊಳಿಸಲು’ ಮತ್ತು ಕೋವಿಡ್ ಸಾಂಕ್ರಾಮಿಕದ ಬಳಿಕ ವಿದ್ಯಾರ್ಥಿಗಳ ಮೇಲಿನ ಪಠ್ಯದ ಹೊರೆಯನ್ನು ‘ತಗ್ಗಿಸಲು’ ಎನ್‌ಸಿಇಆರ್‌ಟಿಯ ತಜ್ಞರ ಸಮಿತಿಯು ಪಠ್ಯಪುಸ್ತಕಗಳಿಂದ ಜಾತಿ ತಾರತಮ್ಯ, ಜಾತಿ ವಿರೋಧಿ ಆಂದೋಲನ ಮತ್ತು ಸಾಹಿತ್ಯದ ಹಲವಾರು ಮೂಲಭೂತ ಉಲ್ಲೇಖಗಳನ್ನು ಕೈಬಿಟ್ಟಿದೆ. 2002ರ ಗುಜರಾತ್ ದಂಗೆಗಳು, ತುರ್ತು ಪರಿಸ್ಥಿತಿ, ಜವಾಹರಲಾಲ ನೆಹರೂ ಅವರ ಅಣೆಕಟ್ಟುಗಳ ನಿರ್ಮಾಣದ ದೂರದೃಷ್ಟಿ, ದೇಶದ್ರೋಹ ಕಾನೂನು ಮತ್ತು ನಕ್ಸಲ್‌ವಾದ ಒಳಗೊಂಡಂತೆ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಿಂದ ಕೈಬಿಡಲಾದ ಇತರ ಪ್ರಮುಖ ವಿಷಯಗಳು ಮತ್ತು ಪರಿಷ್ಕರಣೆಗಳ ಸರಣಿಯಲ್ಲಿ ಈ ಉಲ್ಲೇಖಗಳು ಸೇರಿವೆ.

ಈ ಪೈಕಿ ಅತ್ಯಂತ ಹೆಚ್ಚಿನ ಬದಲಾವಣೆಗಳನ್ನು ಕಂಡಿರುವುದು 12ನೇ ತರಗತಿಯ ಸಮಾಜಶಾಸ್ತ್ರ ಪಠ್ಯಪುಸ್ತಕ. ಜಾತಿ ವ್ಯವಸ್ಥೆ, ಹಿಂದೆ ಮತ್ತು ಸಮಕಾಲೀನ ಭಾರತದಲ್ಲಿ ಅದರ ಪರಿಣಾಮ ಕುರಿತು ಹಲವಾರು ಅಧ್ಯಾಯಗಳನ್ನು ಒಳಗೊಂಡಿದ್ದ ಹಿಂದಿನ ಪಠ್ಯಪುಸ್ತಕಗಳಿಂದ ಜಾತಿ ವಿರೋಧಿ ಆಂದೋಲನದ ಅತ್ಯಂತ ಪ್ರಮುಖ ಐತಿಹಾಸಿಕ ಅಂಶಗಳನ್ನು ಕೈಬಿಡಲಾಗಿದೆ. ಉದಾಹರಣೆಗೆ 12ನೇ ತರಗತಿಯ ‘ಸಾಂಸ್ಕೃತಿಕ ಬದಲಾವಣೆ’ ಅಧ್ಯಾಯದಿಂದ ಮುಕ್ತಾಬಾಯಿಯ ಉಲ್ಲೇಖ ಮತ್ತು ತನ್ನ 13ನೇ ವಯಸ್ಸಿನಲ್ಲಿ ಹಿಂದೂ ಧರ್ಮವನ್ನು ತಿರಸ್ಕರಿಸಿ ಅವರು ರಚಿಸಿದ್ದ ತೀವ್ರಗಾಮಿ ಕವನವನ್ನು ತೆಗೆಯಲಾಗಿದೆ.

ದಲಿತ ಮಾಂಗ್ ಸಮುದಾಯಕ್ಕೆ ಸೇರಿದ ಮುಕ್ತಾಬಾಯಿ ಅಥವಾ ಮುಕ್ತಾ ಸಾಳ್ವೆ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ಮೊದಲ ಕೆಲವು ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದರು. ಹಿಂದೂ ಧರ್ಮವನ್ನು ತಿರಸ್ಕರಿಸಿ ದಲಿತರಲ್ಲಿ ಹೆಚ್ಚುತ್ತಿದ್ದ ಧ್ವನಿಗೆ ಉದಾಹರಣೆಯಾಗಿ ಸಾಳ್ವೆಯವರ ಕವನವನ್ನು ಪಠ್ಯಪುಸ್ತಕದಲ್ಲಿ ಉಲ್ಲೇಖಿಸಲಾಗಿತ್ತು.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಎನ್‌ಸಿಇಆರ್‌ಟಿಯ ಆಗಿನ ನಿರ್ದೇಶಕ ಶ್ರೀಧರ ಶ್ರೀವಾಸ್ತವ ಅವರ ನಿರ್ದೇಶದ ಮೇರೆಗೆ ಪಠ್ಯಪುಸ್ತಕದಲ್ಲಿಯ ಮೊದಲಿನ ಉಲ್ಲೇಖಗಳನ್ನು ಕೈಬಿಡಲಾಗಿದೆ. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುವುದು ಅನಿವಾರ್ಯವಾಗಿದೆ ಎಂಬ ಕಾರಣವನ್ನು ಶ್ರೀವಾಸ್ತವ ನೀಡಿದ್ದರು.
 ‘ಜಾತಿ ಆಧಾರಿತ ಚಳವಳಿಗಳು’ ಎಂಬ ಇನ್ನೊಂದು ಅಧ್ಯಾಯದಿಂದ ಜಾತಿ ವಿರೋಧಿ ಚಳವಳಿಯ ಇಬ್ಬರು ಪ್ರವರ್ತಕರಾದ ಫುಲೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರುಗಳನ್ನು ಕೈಬಿಡಲಾಗಿದೆ. ಮೂಲ ಅಧ್ಯಾಯದಲ್ಲಿ ಉಲ್ಲೇಖಿಸಲಾಗಿದ್ದ ಮೂರು ದೊಡ್ಡ ಪ್ಯಾರಾಗಳು ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಬ್ರಾಹ್ಮಣ ವಿರೋಧಿ ಚಳವಳಿಯ ಬಗ್ಗೆ ಪ್ರಸ್ತಾವಿಸಿದ್ದವು.
1970ರ ದಶಕದಲ್ಲಿ ಅಮೆರಿಕ ಸಂಜಾತೆ ಭಾರತೀಯ ಸಮಾಜವಿಜ್ಞಾನಿ ಮತ್ತು ಜಾತಿ ವಿರೋಧಿ ಹೋರಾಟಗಾರ್ತಿ ಗೇಲ್ ಒಮ್ವೆಟ್ ಅವರು ತನ್ನ ‘ಅಂಬೇಡ್ಕರ್ ಮತ್ತು ನಂತರ: ಭಾರತದಲ್ಲಿ ದಲಿತ ಚಳವಳಿ’ ಪ್ರಬಂಧಕ್ಕಾಗಿ ಅನುವಾದಿಸಿದ್ದ ಈ ಮರಾಠಿ ಗೀತೆಯೊಂದಿಗೆ ಅಧ್ಯಾಯವು ಆರಂಭಗೊಂಡಿತ್ತು.
ಸ್ವಾಭಿಮಾನದ ಸೂರ್ಯ ಜ್ವಾಲೆಯಾಗಿ ಸಿಡಿದಿದ್ದಾನೆ
ಅದು ಈ ಜಾತಿಗಳನ್ನು ಸುಟ್ಟು ಹಾಕಲಿ

ಅದು ಈ ದ್ವೇಷದ ಗೋಡೆಗಳನ್ನು ಒಡೆಯಲಿ, ಧ್ವಂಸಗೊಳಿಸಲಿ ಅದು ಯುಗಯುಗಗಳ ಈ ಅಂಧ ಪದ್ಧತಿಯನ್ನು ನಾಶಗೊಳಿಸಲಿ
ಎದ್ದೇಳಿ ಜನರೇ, ಎದ್ದೇಳಿ
ಅಧ್ಯಾಯವು ಮೊದಲು ದಲಿತ ಲೇಖಕರ ಕವಿತೆಗಳನ್ನು ಚರ್ಚಿಸುವ ಮೂಲಕ ಜಾತಿ ವಿರೋಧಿ ಬರವಣಿಗೆಗಳಲ್ಲಿ ತೊಡಗಿಕೊಳ್ಳಲು ವಿದ್ಯಾರ್ಥಿಗಳನ್ನು ಉತ್ತೇಜಿಸಿತ್ತು. ಈಗಿನ ಪಠ್ಯಪುಸ್ತಕದಿಂದ ಈ ಚಟುವಟಿಕೆಗಳನ್ನು ಕೈಬಿಡಲಾಗಿದೆ.
ಇತ್ತೀಚಿನ ಅಳಿಸುವಿಕೆಗಳೊಂದಿಗೆ ಸಮಿತಿಯು ಜಾತಿಯ ಅಸ್ತಿತ್ವವನ್ನು ಮತ್ತು ಸಮಕಾಲೀನ ಸಮಾಜದ ಮೇಲೆ ಅದರ ಪ್ರಭಾವವನ್ನು ಗೌಣವಾಗಿಸಲು ಪ್ರಯತ್ನಿಸಿದೆ. ಜಾತಿ ಪಂಚಾಯತ್‌ಗಳ ಕುರಿತ ಅತ್ಯಂತ ಸುಸಂಗತ ಚರ್ಚೆಗಳನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ. ಅಧ್ಯಾಯದಲ್ಲಿ ಮುಸ್ಲಿಮರಲ್ಲಿಯೂ ಇಂತಹ ಜಾತಿ ಪಂಚಾಯತ್‌ಗಳ ಬಗ್ಗೆ ಚರ್ಚಿಸಲಾಗಿತ್ತು. ಅದನ್ನೂ ತೆಗೆದುಹಾಕಲಾಗಿದೆ.
ಆಸಕ್ತಿಯ ವಿಷಯವೆಂದರೆ ಜಾತಿ ದೌರ್ಜನ್ಯಗಳು ಮತ್ತು ಜಾತಿ ತಾರತಮ್ಯದ ಉಲ್ಲೇಖಗಳನ್ನು ಮಾತ್ರ ಪಠ್ಯದಿಂದ ಕೈಬಿಟ್ಟಿರುವುದಲ್ಲ. ಪಠ್ಯಪುಸ್ತಕದ ಒಂದು ವಿಭಾಗವು ಜಾತಿಯ ಸುತ್ತ ಮೇಲ್ಜಾತಿಗಳ ಆತಂಕಗಳನ್ನು ನಿರ್ಲಿಪ್ತವಾಗಿ ಪ್ರಸ್ತಾವಿಸಿತ್ತು. ‘ದಲಿತರು ಮತ್ತು ಇತರ ಹಿಂದುಳಿದ ವರ್ಗಗಳ ಹೆಚ್ಚುತ್ತಿರುವ ಗೋಚರತೆಯು ಮೇಲ್ವರ್ಗಗಳಲ್ಲಿ ಆತಂಕದ ಭಾವನೆ ಮೂಡಲು ಕಾರಣವಾಗಿತ್ತು. ಸಮಾಜಶಾಸ್ತ್ರಜ್ಞರಾಗಿ ಇಂತಹ ಭಾವನೆ ಅಸ್ತಿತ್ವದಲ್ಲಿದೆ ಎನ್ನುವುದನ್ನು ನಾವು ಗುರುತಿಸುವ ಅಗತ್ಯವಿದೆ ಮತ್ತು ಇಂತಹ ಭಾವನೆ ಎಷ್ಟರ ಮಟ್ಟಿಗೆ ಪ್ರಾಯೋಗಿಕ ಸಂಗತಿಗಳ ಮೇಲೆ ನೆಲೆಗೊಂಡಿದೆ ಎನ್ನುವುದನ್ನು ನಾವು ಪರಿಶೀಲಿಸಬೇಕಿದೆ. ತಥಾಕಥಿತ ಮೇಲ್ಜಾತಿಗಳ ಹಿಂದಿನ ತಲೆಮಾರುಗಳು ಜಾತಿಯನ್ನು ಆಧುನಿಕ ಭಾರತದ ಜೀವಂತ ವಾಸ್ತವ ಎಂದು ಏಕೆ ಭಾವಿಸಿರಲಿಲ್ಲ ಎಂದೂ ನಾವು ಕೇಳುವ ಅಗತ್ಯವಿದೆ’ ಎಂದು ಅಧ್ಯಾಯದಲ್ಲಿ ವಿವರಿಸಲಾಗಿತ್ತು.
ಅತ್ಯಂತ ಶೋಷಿತ, ಡಿನೋಟಿಫೈಡ್ ಬುಡಕಟ್ಟುಗಳಲ್ಲಿ ಒಂದಾದ ಪರ್ದಿ ಸಮುದಾಯದ ಏಕೈಕ ಉಲ್ಲೇಖವನ್ನು 12ನೇ ತರಗತಿಯ ಸಮಾಜಶಾಸ್ತ್ರ ಪಠ್ಯಪುಸ್ತಕದಿಂದ ಕೈಬಿಡಲಾಗಿದೆ.
ಗುಜರಾತಿನಲ್ಲಿಯ ಜೀತದಾಳು ಪದ್ಧತಿ ಮತ್ತು ಜಾತಿ ಆಚರಣೆಯ ಪರಿಣಾಮಗಳ ಉಲ್ಲೇಖವನ್ನು ಪಠ್ಯಪುಸ್ತಕದಿಂದ ತೆಗೆಯಲಾಗಿದೆ.
ಭಾರತೀಯ ಪ್ರಜಾಪ್ರಭುತ್ವ,ಸಂವಿಧಾನದ ಪೀಠಿಕೆ ಮತ್ತು ಸಂವಿಧಾನ ಸಭೆಯಲ್ಲಿನ ಕಲಾಪಗಳನ್ನು ಚರ್ಚಿಸಿದ್ದ ಅಧ್ಯಾಯಗಳ ಹಲವಾರು ಭಾಗಗಳನ್ನು ಕೈಬಿಡಲಾಗಿದೆ ಅಥವಾ ಸಂಕ್ಷಿಪ್ತಗೊಳಿಸಲಾಗಿದೆ. ಒಬಿಸಿ ಮೀಸಲಾತಿಯನ್ನು ಪಡೆಯಲು ನಡೆಸಿದ್ದ ಹೋರಾಟಗಳನ್ನು ಚರ್ಚಿಸಿದ ಇಡಿಯ ಭಾಗವನ್ನೇ ಕೈಬಿಡಲಾಗಿದೆ. ಇತರ ತರಗತಿಗಳ ರಾಜಕೀಯ ವಿಜ್ಞಾನ ಪಠ್ಯಪುಸ್ತಕಗಳು ಇಂತಹುದೇ ವಿಷಯಗಳನ್ನು ಒಳಗೊಂಡಿವೆ ಎಂಬ ಕಾರಣವನ್ನೊಡ್ಡಿ ಈ ಅಳಿಸುವಿಕೆಗಳನ್ನು ಮಾಡಲಾಗಿದೆ.
ದೇಶದ್ರೋಹ: ಎಂಟನೇ ತರಗತಿಯ ರಾಜಕೀಯ ವಿಜ್ಞಾನ ಪಠ್ಯಪುಸ್ತಕದಲ್ಲಿಯ ‘ಕಾನೂನುಗಳನ್ನು ಅರ್ಥೈಸಿಕೊಳ್ಳುವಿಕೆ’ ಅಧ್ಯಾಯದಡಿ ವಸಾಹತುಶಾಹಿ ಯುಗದ ಕಾನೂನುಗಳ ನಿರಂಕುಶತೆಯನ್ನು ಚರ್ಚಿಸಲು ದೇಶದ್ರೋಹ ಕಾನೂನನ್ನು ನಿದರ್ಶನವಾಗಿ ಉಲ್ಲೇಖಿಸಲಾಗಿತ್ತು. ಇದನ್ನು ಕೈಬಿಡಲಾಗಿದೆ.
ನಕ್ಸಲ್ ಚಳವಳಿ: 10 ಮತ್ತು 12ನೇ ತರಗತಿಗಳ ಪಠ್ಯಪುಸ್ತಕಗಳಲ್ಲಿದ್ದ ನಕ್ಸಲ್ ಚಳವಳಿಯ ಉಲ್ಲೇಖಗಳನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ. 12ನೇ ತರಗತಿಯ ರಾಜಕೀಯ ವಿಜ್ಞಾನ ಪಠ್ಯಪುಸ್ತಕದಲ್ಲಿಯ ‘ಕ್ರೈಸಿಸ್ ಆಫ್ ಡೆಮಾಕ್ರಟಿಕ್ ಆರ್ಡರ್’ ಅಧ್ಯಾಯದಡಿ 1967ರ ರೈತ ದಂಗೆಯನ್ನು ವ್ಯಾಪಕವಾಗಿ ಚರ್ಚಿಸಲಾಗಿತ್ತು. ಕಮ್ಯುನಿಸ್ಟ್ ನಾಯಕ ಚಾರು ಮಜುಮ್ದಾರ್ ಅವರ ಉಲ್ಲೇಖದೊಂದಿಗೆ ಇದನ್ನೂ ಈಗ ಪಠ್ಯಪುಸ್ತಕದಿಂದ ಕೈಬಿಡಲಾಗಿದೆ.
ಗುಜರಾತ್ ದಂಗೆಗಳು: ಇತರ ಬದಲಾವಣೆಗಳ ಪೈಕಿ ಸಮಿತಿಯು 12ನೇ ತರಗತಿಯ ರಾಜಕೀಯ ವಿಜ್ಞಾನ ಪಠ್ಯಪುಸ್ತಕದಿಂದ 2002ರ ಗುಜರಾತ್‌ದಂಗೆಗಳ ಪ್ರತಿಯೊಂದೂ ಉಲ್ಲೇಖವನ್ನು ತೆಗೆದುಹಾಕಿದೆ. ‘ಸ್ವಾತಂತ್ರದ ಬಳಿಕ ಭಾರತದಲ್ಲಿ ರಾಜಕೀಯ’ಅಧ್ಯಾಯದಲ್ಲಿ ಗುಜರಾತ್ ದಂಗೆಗಳನ್ನು ವಿವರವಾಗಿ ಚರ್ಚಿಸಲಾಗಿತ್ತು. ಘಟನೆಗಳ ಕಾಲಾನುಕ್ರಮಣಿಕೆಯ ಜೊತೆಗೆ ಅಧ್ಯಾಯವು ದಂಗೆಗಳ ನಿರ್ವಹಣೆಯ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಟೀಕೆಯನ್ನೂ ಒಳಗೊಂಡಿತ್ತು.
ಗುಜರಾತ್‌ನಂತಹ ಘಟನೆಗಳು ರಾಜಕೀಯ ಉದ್ದೇಶಗಳಿಗಾಗಿ ಧಾರ್ಮಿಕ ಭಾವನೆಗಳನ್ನು ಬಳಸುವುದರಲ್ಲಿರುವ ಅಪಾಯಗಳ ಬಗ್ಗೆ ನಮಗೆ ಎಚ್ಚರಿಕೆ ನೀಡುತ್ತವೆ, ಇದು ಪ್ರಜಾಸತ್ತಾತ್ಮಕ ರಾಜಕೀಯಕ್ಕೆ ಬೆದರಿಕೆಯೊಡ್ಡಿದೆ ಎಂದು ಅಧ್ಯಾಯದಲ್ಲಿ ಹೇಳಲಾಗಿತ್ತು. ಇದನ್ನೀಗ ಕೈಬಿಡಲಾಗಿದೆ. 2002ರ ದಂಗೆಗಳನ್ನು ಉಲ್ಲೇಖಿಸಿದ್ದ 12ನೇ ತರಗತಿಯ ಸಮಾಜಶಾಸ್ತ್ರ ಪಠ್ಯಪುಸ್ತಕದಲ್ಲಿಯೂ ಇಂತಹುದೇ ಬದಲಾವಣೆಗಳನ್ನು ಮಾಡಲಾಗಿದೆ.
ತುರ್ತು ಪರಿಸ್ಥಿತಿ: ಇಂದಿರಾ ಗಾಂಧಿ ಅವರ ಸರಕಾರದಿಂದ ತುರ್ತು ಸ್ಥಿತಿ ಹೇರಿಕೆಯನ್ನು ಚರ್ಚಿಸಿದ್ದ ಅಧ್ಯಾಯಗಳನ್ನೂ ನಾಟಕೀಯವಾಗಿ ಮೊಟಕುಗೊಳಿಸಲಾಗಿದೆ. ಅಳಿಸಿ ಹಾಕಲಾಗಿರುವ ಭಾಗವು ಮಾಧ್ಯಮಗಳನ್ನು ನಿಭಾಯಿಸಿದ್ದ ರೀತಿ, ರಾಜಕೀಯ ಕಾರ್ಯಕರ್ತರ ಬಂಧನಗಳು ಮತ್ತು ಪುರುಷರಿಗೆ ಬಲವಂತದ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಳ ಬಗ್ಗೆ ಚರ್ಚಿಸಿತ್ತು. ಈ ಎಲ್ಲವನ್ನೂ ಈಗ ಪಠ್ಯಪುಸ್ತಕದಿಂದ ಕೈಬಿಡಲಾಗಿದೆ.

ಕೃಪೆ: thewire.in

Writer - ಸುಕನ್ಯಾ ಶಾಂತ

contributor

Editor - ಸುಕನ್ಯಾ ಶಾಂತ

contributor

Similar News