ಆಲೀಗಢ: ಪೊಲೀಸ್ ಪಥಸಂಚಲನಕ್ಕೆ 'ಬುಲ್ಡೋಝರ್'!

Update: 2022-06-21 02:02 GMT
(TOI Photo)

ಆಗ್ರಾ: ಆದಿತ್ಯನಾಥ್ ಸರ್ಕಾರದ ಕಠಿಣ ಕ್ರಮದ ಸಂಕೇತವಾದ ಬುಲ್ಡೋಝರ್ ಬಹುಶಃ ಮೊಟ್ಟಮೊದಲ ಬಾರಿಗೆ ಪೊಲೀಸ್ ಪಥಸಂಚಲನದಲ್ಲಿ ಕಾಣಿಸಿಕೊಂಡಿದೆ ಎಂದು timesofindia.com ವರದಿ ಮಾಡಿದೆ.

ಅಗ್ನಿಪಥ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಂಕೇತವಾಗಿ ಸೋಮವಾರ ನಡೆದ ಪಥಸಂಚಲನದಲ್ಲಿ ಬುಲ್ಡೋಝರ್ ಕೂಡಾ ಸೇರಿತ್ತು.

ಪಥಸಂಚಲನದಲ್ಲಿ ಬುಲ್ಡೋಝರ್ ಬಳಸಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದರೂ, ಪಥಸಂಚಲನದ ವಿಡಿಯೊ ಹಾಗೂ ಫೋಟೊಗಳಲ್ಲಿ ಬುಲ್ಡೋಝರ್ ಸ್ಪಷ್ಟವಾಗಿ ಕಾಣಿಸುತ್ತಿದೆ. "ಪ್ರತಿಯೊಬ್ಬರೂ ನೋಡಬೇಕು ಎನ್ನುವ ಸಲುವಾಗಿ ಪೊಲೀಸ್ ವಾಹನಗಳ ಜತೆ ಬುಲ್ಡೋಝರ್ ಕೂಡಾ ಬಳಸಲಾಗಿತ್ತು" ಎಂದು ಸ್ಥಳೀಯರು ಸ್ಪಷ್ಟಪಡಿಸಿದ್ದಾರೆ.

"ಬುಲ್ಡೋಝರ್ ಪೊಲೀಸ್ ವಾಹನದ ಭಾಗವಾಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ" ಎಂದು ಅಲೀಗಢ ಎಸ್‍ಎಸ್‍ಪಿ ಕಲಾನಿಧಿ ನೈತಾಜಿ ಹೇಳಿದ್ದಾರೆ. ಆದರೆ ಗ್ರಾಮೀಣ ಎಸ್ಪಿ ಪಲಾಶ್ ಬನ್ಸಾಲ್ ಅವರು ಈ ವಿಚಾರದಲ್ಲಿ ಗೊಂದಲ ಇದೆ ಎಂದು ಹೇಳಿದ್ದಾರೆ. ಅವುಗಳನ್ನು ಬಳಸುವ ಯಾವುದೇ ಉದ್ದೇಶ ನಮಗಿಲ್ಲ ಎಂದು ಅವರು ಸಮುಜಾಯಿಷಿ ನೀಡಿದ್ದಾರೆ.

ಪೊಲೀಸರು ಪಥಸಂಚಲನ ನಡೆಸಿದ ಗೋಮಾತ ಚೌಕದಲ್ಲಿ ಅಂಗಡಿ ಹೊಂದಿರುವ ಸ್ಥಳೀಯ ನಿವಾಸಿಯೊಬ್ಬರು, "ಎರಡು ದಿನಗಳ ಹಿಂದೆ ಹಿಂಸಾತ್ಮಕ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಬಹುಶಃ ಪೊಲೀಸರು ಸಾರ್ವಜನಿಕರಲ್ಲಿ ಭಯ ಹುಟ್ಟಿಸಲು ಬಯಸಿದ್ದಾರೆ. ಅವರು ಬುಲ್ಡೋಝರ್ ಸುತ್ತ ಅಡ್ಡಾಡುತ್ತಿದ್ದಾರೆ. ಯಾವುದೇ ತೆರವು ಕಾರ್ಯಾಚರಣೆ ನಡೆಯಲಿಲ್ಲ. ಪೊಲೀಸರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ ಬಳಿಕ ಎಲ್ಲ ಅಂಗಡಿಗಳನ್ನು ಮುಚ್ಚಲಾಯಿತು" ಎಂದು ವಿವರ ನೀಡಿದರು.

ಸೌಂದರ್ಯ ಸಾಧನಗಳ ಮಳಿಗೆ ಹೊಂದಿರುವ ರಾಹುಲ್ ಕುಮಾರ್ ಅವರ ಪ್ರಕಾರ, "ಪೊಲೀಸರು ಸುಮಾರು ಎರಡು ಗಂಟೆ ಕಾಲ ಬುಲ್ಡೋಝರ್ ಜತೆಗೆ ಇದ್ದರು. ಬುಲ್ಡೋಝರ್ ನಿಶ್ಚಿತವಾಗಿ ಪೊಲೀಸ್ ವಾಹನಗಳ ಗುಂಪಿನಲ್ಲಿತ್ತು"

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News