ಯೋಗಾಭ್ಯಾಸದಿಂದ ಜೀವನೋತ್ಸಾಹ ಪಡೆಯಬಹುದಾಗಿದೆ: ಡಾ. ಸಾತಪ್ಪ

Update: 2022-06-21 12:11 GMT

ಮಂಗಳೂರು: ಯೋಗವೆನ್ನುವುದು ಕೇವಲ ಆಸನಕ್ಕೆ ಮಾತ್ರ ಸೀಮಿತವಾಗಿಲ್ಲ ಇದರ ಹೊರತಾಗಿ ಪ್ರಾಣಾಯಾಮ ಧ್ಯಾನ-ಪ್ರತ್ಯಾಹಾರ-ಧಾರಣ ಇತ್ಯಾದಿ ಅಷ್ಟಾಂಗಯೋಗವಿದೆ. ಬುದ್ಧಿಯು ಹೇಳಿರುವುದನ್ನು ಮನಸ್ಸು ಕೇಳಬೇಕಿದ್ದರೆ ಅದು ಯೋಗದಿಂದ ಮಾತ್ರ ಸಾಧ್ಯವಿದೆ. ದೈನಂದಿನ ಯೋಗಾಭ್ಯಾಸದಿಂದ ನರವ್ಯೂಹ ನಿಯಂತ್ರಣ ಹಾಗೂ ನರದೌರ್ಬಲ್ಯದ  ನಿವಾರಣೆಯೊಂದಿಗೆ ನಿರಂತರ ಜೀವನೋತ್ಸಾಹ ಪಡೆಯಬಹುದಾಗಿದೆ ಎಂದು ಕುಂದಾಪುರದ ಪತಂಜಲಿ ಆರೋಗ್ಯಧಾಮದ ವೈದ್ಯರಾದ ಡಾ. ಸಾತಪ್ಪ ಹೇಳಿದರು.

ಅವರು ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯ ಮತ್ತು ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕರಾದ ದೋಮ ಚಂದ್ರಶೇಖರ್ ಮಾತನಾಡಿ ಯೋಗವೆನ್ನುವುದು ಕಲೆ, ವಿಜ್ಞಾನ, ಆಧ್ಯಾತ್ಮ, ವ್ಯಾಯಾಮ ಇತ್ಯಾದಿಯಾಗಿ ನಾನಾ ರೂಪ ಪಡೆದಿದೆ. ಮನಸ್ಸಿನ ಮಾತನ್ನು ನಾಲಿಗೆ ಕೇಳಬೇಕಿದ್ದರೆ ಮನಸ್ಸು ನಿಯಂತ್ರಣದಲ್ಲಿರಬೇಕು. ಮನುಷ್ಯ ಮನಸ್ಸಿನ  ಮೇಲೆ ನಿಯಂತ್ರಣ ಪಡೆಯಬೇಕಿದ್ದರೆ ಯೋಗ ಅಗತ್ಯವಿದೆ ಎಂದರು.

ಬಿ.ಎಡ್ ಕಾಲೇಜಿನ ಪ್ರಾಂಶುಪಾಲರಾದ ಸಿದ್ದಪ್ಪ ಕೆ.ಎಸ್ ಶುಭಾಶಂಸನೆ ನುಡಿಗಳನ್ನಾಡಿದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ಫಿರ್ದೋಸ್, ಡಾ. ಶಮೀರ್, ಅಶ್ವಿನಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯೋಗ ಸಂದೇಶ ಸಾರುವ  ವಿವಿಧ ವಿನ್ಯಾಸದಲ್ಲಿ ರಚಿಸಿದ ಹಣ್ಣು -ತರಕಾರಿ ಪ್ರದರ್ಶನ ಮತ್ತು ಯೋಗ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಪ್ರಶಿಕ್ಷಣಾರ್ಥಿಗಳಾದ ಸಂಧ್ಯಾ ನಿರೂಪಿಸಿದರು, ರೀಮಾ ಸ್ವಾಗತಿಸಿದರು, ಸುಧಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News