​ನಾನು ಯಾಕಾದರೂ ಆಹಾರಕ್ಕೆ ಉಗುಳುತ್ತೇನೆ: ಅಪಪ್ರಚಾರದಿಂದ ಅವಮಾನಿತನಾದ ಪಾಪ್ ಕಾರ್ನ್ ಮಾರಾಟಗಾರ ನವಾಝ್‌​ ಪ್ರಶ್ನೆ

Update: 2022-06-21 16:04 GMT
Photo: thenewsminute.com

ಬೆಂಗಳೂರು: ಮುಸ್ಲಿಮ್‌ ವ್ಯಾಪಾರಿಗಳು ಆಹಾರಕ್ಕೆ ಉಗುಳುತ್ತಾರೆ ಎಂಬ ಕಪೋಲಕಲ್ಪಿತ ಅಪಪ್ರಚಾರಕ್ಕೆ ಬಲಿಯಾದ ವ್ಯಕ್ತಿಯೊಬ್ಬರು, ಮುಸ್ಲಿಂ ಪಾಪ್‌ಕಾರ್ನ್‌ ಮಾರಾಟಗಾರನ ಮೇಲೆ ಆಹಾರಕ್ಕೆ ಉಗುಳಿದ ಬಗ್ಗೆ ಆರೋಪಿಸಿ, ಆತನನ್ನು ಮುಜುಗರಕ್ಕೀಡಾಗಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಲಾಲ್‌ಭಾಗ್ ನ ಉದ್ಯಾನವನದ ಸಮೀಪ ಸಣ್ಣದೊಂದು ಗಾಡಿಯನ್ನಿಟ್ಟುಕೊಂಡು ಪಾಪ್‌ಕಾರ್ನ್‌ ವ್ಯಾಪಾರ ಮಾಡುತ್ತಿದ್ದ ನವಾಝ್‌ ಬಗ್ಗೆ ಅಲ್ಲೇ ಜಾಗಿಂಗ್‌ ಮಾಡುತ್ತಿದ್ದ ಮಧ್ಯವಯಸ್ಕ ವ್ಯಕ್ತಿಯೋರ್ವ ಬಂದು, "ಈತ ಎಣ್ಣೆಗೆ ಉಗುಳುತ್ತಿದ್ದಾನೆ" ಎಂದು ರಂಪಾಟ ಮಾಡಿ ಜನರನ್ನು ಒಟ್ಟುಗೂಡಿಸಿದಾಗ ಅಲ್ಲೇನಾಗುತ್ತದೆ ಎಂಬುವುದರ ಅರಿವು ನವಾಝ್‌ ಗೆ ಇರಲಿಲ್ಲ.

ಬೆಳಗಿನ ವಾಕಿಂಗ್ ಮಾಡುವವರು ಮತ್ತು ಜಾಗಿಂಗ್ ಮಾಡುವವರನ್ನು ಸೆಳೆಯಲು ಹೆಸರುವಾಸಿಯಾಗಿರುವ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ನಲ್ಲಿ ಜೂನ್ 11 ರ ಶನಿವಾರದಂದು ಮುಂಜಾನೆ ಪಾಪ್‌ಕಾರ್ನ್ ತಯಾರಿಸಲು ತಯಾರಿ ನಡೆಸುತ್ತಿದ್ದ ನವಾಜ್ ಪಾಷಾ ಅವರಿಗೆ ಅದು ಅತ್ಯಂತ ಕೆಟ್ಟ ದಿನವಾಗಿತ್ತು. ನವಾಜ್ ತನ್ನ ಕೈಯಿಂದ ಎಣ್ಣೆ ಪ್ಯಾಕೆಟ್ ಅನ್ನು ಹರಿದು ಖಾಲಿ ಎಣ್ಣೆ ಬಾಟಲಿಯನ್ನು ತುಂಬುವಾಗ ಪ್ಯಾಕೇಜಿಂಗ್‌ ನ ಹರಿದ ತುಂಡನ್ನು ತನ್ನ ಬಾಯಿಯಲ್ಲಿಟ್ಟಿದ್ದ, ಬಳಿಕ ಅದನ್ನು ಉಗುಳಿದ್ದ ಕೂಡಾ.

ಈ ಮಧ್ಯೆ, ಜಾಗಿಂಗ್‌ಗೆಂದು ಬಂದ ಮಧ್ಯವಯಸ್ಕ ವ್ಯಕ್ತಿಯೊಬ್ಬರು ನವಾಝ್ ನನ್ನು ದೂರದಿಂದ ಗಮನಿಸುತ್ತಿದ್ದರು, ಬಿಳಿ ಕುರ್ತಾ ಮತ್ತು ಪೈಜಾಮವನ್ನು ಧರಿಸಿದ್ದ ನವಾಝ್‌ ಬಳಿ ಬಂದ ಮಧ್ಯವಯಸ್ಕ ವ್ಯಕ್ತಿ ಆತನ ಹೆಸರನ್ನು ಕೇಳಿದ್ದಾರೆ. "ನನ್ನ ಹೆಸರು ನವಾಝ್" ಎಂದು ಕೇಳಿದ ತಕ್ಷಣ ಆ ವ್ಯಕ್ತಿ "ನೋಡಿ, ಈ ಮುಸ್ಲಿಂ ಹುಡುಗ ಮೂರು ಬಾರಿ ಎಣ್ಣೆಯಲ್ಲಿ ಉಗುಳಿದ್ದಾನೆ" ಎಂದು ರಂಪಾಟ ಮಾಡಿ ಗುಂಪು ಸೇರಿದಿದ್ದಾರೆ. 

“ನಾನು ಉಗುಳಿಲ್ಲ, ನಾನು ಉಗುಳಿದ್ದೇನೆಯೇ ಇಲ್ಲವೇ ಎಂದು ನೀವೇ ಪರಿಶೀಲಿಸಿ ಎಂದು ತಾನು ಪರಿಪರಿಯಾಗಿ ಬೇಡಿಕೊಂಡರೂ ಅಲ್ಲಿರುವವರು ಯಾರೂ ಕೇಳಲು ತಯಾರಿರಲಿಲ್ಲ. ನನ್ನನ್ನು ಮಾತನಾಡಲು ಬಿಡಲೂ ಅವರಿಗೆ ಇಷ್ಟವಿರಲಿಲ್ಲ" ಎಂದು ನವಾಝ್‌ thenewsminute ಜೊತೆಗೆ ತಮ್ಮ ಕರಾಳ ಅನುಭವ ಹಂಚಿಕೊಂಡಿದ್ದಾರೆ. 
 
"ಆ ಮಧ್ಯವಯಸ್ಸಿನ ವ್ಯಕ್ತಿ ನನಗೆ ಹೊಡೆಯಲು ಹತ್ತಿರ ಬಂದರು, ಆದರೆ ಅದೃಷ್ಟವಶಾತ್, ಅವರು ನನ್ನನ್ನು ಹೊಡೆಯಲಿಲ್ಲ‌, ಆದರೆ, ಅವರು ನಾನು ಉಗುಳಿದ್ದೇನೆಂದು ಸುಳ್ಳು ಹೇಳುತ್ತಾ, ದೂಷಿಸುತ್ತಲೇ ಇದ್ದರು" ಎಂದು ನವಾಝ್ ಹೇಳುತ್ತಾರೆ.  

“ನಾನು ಆಹಾರದಲ್ಲಿ ಏಕೆ ಉಗುಳುತ್ತೇನೆ? ನಾವು ಇದನ್ನು ನಮ್ಮ ಶತ್ರುಗಳೊಂದಿಗೆ ಸಹ ಮಾಡುವುದಿಲ್ಲ. ನಾನು, ನನ್ನ ಸ್ನೇಹಿತರು, ಮಕ್ಕಳು, ನಾವೆಲ್ಲರೂ ಪಾಪ್ ಕಾರ್ನ್ ತಿನ್ನುತ್ತೇವೆ; ಹಾಗಿರುವಾಗ ನಾನು ಎಣ್ಣೆಯಲ್ಲಿ ಏಕೆ ಉಗುಳುತ್ತೇನೆ?" ನವಾಜ್ ಕೇಳಿದ್ದಾರೆ. 

ಲಾಲ್‌ಬಾಗ್ ಬಳಿ ಗಸ್ತು ತಿರುಗುತ್ತಿದ್ದ ಸಿದ್ದಾಪುರದ ಕಾನ್‌ಸ್ಟೆಬಲ್ ಒಬ್ಬರು ವಿಷಯ ತಿಳಿದು ಸ್ಥಳಕ್ಕಾಗಮಿಸಿ, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ನವಾಝ್‌ನನ್ನು ವಶಕ್ಕೆ ಪಡೆದಿದ್ದರು. ನವಾಝ್‌ನ ಕಾಲರ್‌ ಹಿಡಿದು ಎಳೆದೊಯ್ದ ಪೊಲೀಸರು ಎಣ್ಣೆ ಬಾಟಲಿಯನ್ನು ಸಹ ವಶಪಡಿಸಿಕೊಂಡಿದ್ದರು. "ನನ್ನನ್ನು ನಡೆಸಿಕೊಂಡ ರೀತಿ ಮತ್ತು ಮಾಧ್ಯಮದ ಪ್ರಸಾರದಿಂದ ನಾನು ಅವಮಾನ ಮತ್ತು ಮುಜುಗರ ಅನುಭವಿಸಿದೆ" ಎಂದು ನವಾಜ್ ಹೇಳಿದ್ದಾರೆ.

“ನಾನು ಮುಸ್ಲಿಂ ಎಂಬ ಕಾರಣಕ್ಕೆ ಅವರು ನನಗೆ ಹೀಗೆ ಮಾಡಿದ್ದಾರೆ. ನನ್ನ ಹೆಸರು ಕೇಳಿದ ನಂತರವೇ ಆ ವ್ಯಕ್ತಿ ಸಮಸ್ಯೆ ಸೃಷ್ಟಿಸಿದ್ದಾನೆ. ನಾನು ಬೇರೆ ಹೆಸರು, ಹಿಂದೂ ಹೆಸರು ಹೇಳಿದ್ದರೆ ಅವರು ನನ್ನನ್ನು ಬಿಟ್ಟು ಬಿಡುತ್ತಿದ್ದರು” ಎಂದು ನವಾಝ್ ಅಭಿಪ್ರಾಯಪಡುತ್ತಾರೆ. ಇದಕ್ಕೆ ಪೂರಕವಾಗಿ ಆ ಮಧ್ಯವಯಸ್ಕ ವ್ಯಕ್ತಿ ಅಲ್ಲಿ ನೆರೆದಿರುವವರೊಂದಿಗೆ ನವಾಝ್‌ ಬಗ್ಗೆ ಆರೋಪ ಹೊರಿಸುವಾಗ ಆತ ಮುಸ್ಲಿಂ ಎಂಬುದನ್ನು ಉಲ್ಲೇಖಿಸಿದ್ದಾರೆ. 

 ಹೆಚ್ಚಿನ ವಿಚಾರಣೆಗಾಗಿ ಆತನನ್ನು ಸಿದ್ದಾಪುರ ಠಾಣೆಗೆ ಕರೆದೊಯ್ದಿದ್ದು, ನವಾಜ್ ಆರೋಪಗಳನ್ನು ನಿರಾಕರಿಸಿದ್ದಾರೆ. ಪೊಲೀಸರು ಪಾಪ್ ಕಾರ್ನ್ ಯಂತ್ರವನ್ನೂ ವಶಪಡಿಸಿಕೊಂಡು ಠಾಣೆಗೆ ಕೊಂಡೊಯ್ದಿದ್ದಾರೆ.

ಆರೋಪಿಸಿದ ಮಧ್ಯವಯಸ್ಕ ವ್ಯಕ್ತಿ, ನವಾಝ್ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸ್ ಠಾಣೆಗೆ ಬರಲು ನಿರಾಕರಿಸಿದ್ದರಿಂದ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಡಿದ್ದಾರೆ. ಸೆಕ್ಷನ್ 269, 270, 272, ಮತ್ತು 273 ರ ಅಡಿಯಲ್ಲಿ ನವಾಝ್ ಮೇಲೆ ಆರೋಪ ಹೊರಿಸಿದ್ದಾರೆ. ಸೆಕ್ಷನ್ 269 ಮತ್ತು 270 ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಯ ಮೇಲೆ ಪರಿಣಾಮ ಬೀರುವ ಅಪರಾಧಗಳಿಗೆ ಮತ್ತು ಜೀವಕ್ಕೆ ಅಪಾಯಕಾರಿಯಾದ ರೋಗಗಳ ಸೋಂಕನ್ನು ಹರಡುವ ನಿರ್ಲಕ್ಷ್ಯದ ಕೃತ್ಯಗಳಿಗೆ ದಂಡ ವಿಧಿಸಲು ಬಳಸಲಾಗುವ ವಿಧಿಗಳಾಗಿವೆ. ಸೆಕ್ಷನ್ 272 ಮತ್ತು 273 ಮಾರಾಟಕ್ಕೆ ಉದ್ದೇಶಿಸಿರುವ ಆಹಾರ ಅಥವಾ ಪಾನೀಯದಲ್ಲಿ ಕಲಬೆರಕೆ ಮಾಡಿದ ಶಿಕ್ಷೆಯನ್ನು ಸೂಚಿಸುತ್ತವೆ.

ಬಳಿಕ ನವಾಝ್ ರನ್ನು ಆತನ ನೆರೆಹೊರೆಯವರಾದ ಅಜ್ಮಲ್ ಸಹಾಯದಿಂದ ಪೊಲೀಸ್ ಠಾಣೆಯ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ನವಾಝ್ ವಿರುದ್ಧದ ಆರೋಪಗಳನ್ನು ಕೈಬಿಡುವಂತೆ ಅಜ್ಮಲ್ ಪೊಲೀಸರ ಮನವೊಲಿಸಲು ಪ್ರಯತ್ನಿಸಿದ್ದರಾದರೂ, ಪೊಲೀಸರು ನಿರಾಕರಿಸಿದ್ದಾರೆ. "ಇದು ದೊಡ್ಡ ವಿಷಯವಾಗಿದೆ, ಮಾಧ್ಯಮಗಳಲ್ಲಿದೆ, ನವಾಝ್ ವಿರುದ್ಧ ಪ್ರಕರಣ ದಾಖಲಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ." ಎಂದು ಪೊಲೀಸರು ಹೇಳಿರುವುದಾಗಿ ವರದಿಯಾಗಿದೆ. 

ನವಾಜ್‌ನ ಬಂಧನದ ವಿಷಯ ತಿಳಿದ ಆತನ ತಾಯಿ ಮತ್ತು ಮಗಳು ಸಿದ್ದಾಪುರ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಕಡಿಮೆ ರಕ್ತದೊತ್ತಡ ಮತ್ತು ಫಿಟ್ಸ್‌ ರೋಗಿಯಾದ ನವಾಝ್ ತಾಯಿ, ಪೊಲೀಸ್ ಕ್ವಾರ್ಟರ್ಸ್‌ನ ಹೊರಗೆ ಮರದ ಕೆಳಗೆ ಕುಳಿತು ಅಳುತ್ತಾ ಇಡೀ ದಿನ ತಿನ್ನಲು ನಿರಾಕರಿಸಿದ್ದರು. ಜೂನ್ 14ರ ಮಂಗಳವಾರದಂದು ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರ ಮಟ್ಟಿಗೆ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು.

ನವಾಝ್ ರಿಗೆ ಅವರ ಮೇಲೆ ಯಾವ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ, ಅಥವಾ ಅವರು ಪಾವತಿಸಬೇಕಾದ ದಂಡದ ಬಗ್ಗೆ ತಿಳಿದಿಲ್ಲ. ಇದಲ್ಲದೆ, ಲಾಲ್‌ಬಾಗ್‌ಗೆ ಭೇಟಿ ನೀಡದಂತೆ ಅವರಿಗೆ ಸೂಚಿಸಲಾಗಿದೆ. ತಾನು ಪೊಲೀಸರ ಕರೆಗಾಗಿ ಕಾಯುತ್ತಿದ್ದೇನೆ ಮತ್ತು ಸದ್ಯಕ್ಕೆ ವಕೀಲರ ಬಗ್ಗೆ ಅಥವಾ ನ್ಯಾಯಾಲಯದ ಪ್ರಕ್ರಿಯೆಗಳ ಬಗ್ಗೆ ತಿಳಿದಿಲ್ಲ ಎಂದು ನವಾಝ್‌ ಹೇಳಿದ್ದಾರೆ.

ತನ್ನ ತಂದೆಯನ್ನು ಕಳೆದುಕೊಂಡಿರುವ ಮನೆಯ ಏಕೈಕ ಆಧಾರಸ್ಥಂಭವಾಗಿರುವ ನವಾಝ್ ಗುತ್ತಿಗೆದಾರನ ಬಳಿ ಕೆಲಸ ಮಾಡುತ್ತಾರೆ, ಪಾಪ್‌ಕಾರ್ನ್ ಮಾರಾಟದಿಂದ ಗಳಿಸಿದ 40% ಹಣವನ್ನು ಅವರ ಗುತ್ತಿಗೆದಾರರಿಗೆ ಹಸ್ತಾಂತರಿಸಬೇಕು. ಅವರು ಹೋಟೆಲ್‌ಗಳು ಮತ್ತು ನಿವಾಸಗಳಲ್ಲಿ ನಡೆಯುವ ಸ್ಥಳೀಯ ಕಾರ್ಯಕ್ರಮಗಳಲ್ಲಿ ನಿಯಮಿತ ಪೂರೈಕೆದಾರರೂ ಆಗಿದ್ದಾರೆ. ಆದರೆ ಅವರು ಅಶುಚಿತ್ವದ ಆರೋಪಕ್ಕೆ ಗುರಿಯಾಗಿರುವುದು ಇದೇ ಮೊದಲು ಎಂದು ಹೇಳಿದ್ದಾರೆ. 

“ಈಗ, ಗ್ರಾಹಕರು ಯಾವುದಾದರೂ ಕಾರ್ಯಕ್ರಮಕ್ಕೆ ನನ್ನನ್ನು ಕರೆದರೆ ನಾನು ಏನು ಮಾಡಬೇಕು? ಏಕೆಂದರೆ ನನ್ನ ಬಳಿ ನನ್ನ ಯಂತ್ರ ಇನ್ನೂ ಇಲ್ಲ? ನಾನು ವ್ಯಾಪಾರವನ್ನು ಕಳೆದುಕೊಳ್ಳುತ್ತೇನೆ, ”ಎಂದು ನವಾಝ್ ಹೇಳಿದ್ದಾರೆ.

ನವಾಝ್‌ ರನ್ನು ವಶಕ್ಕೆ ಪಡೆಯುತ್ತಿರುವ ಮಾಧ್ಯಮ ವಿಡಿಯೋ ವರದಿಯೊಂದು ಟ್ವಿಟರಿನಲ್ಲಿ ವೈರಲ್‌ ಆಗಿದ್ದು, #ThookJihad (ಉಗುಳು ಜಿಹಾದ್) ಹ್ಯಾಷ್‌ಟ್ಯಾಗ್‌ನೊಂದಿಗೆ ಹಲವು ಬಲಪಂಥೀಯರು ಇದನ್ನು ಹಂಚಿಕೊಂಡಿದ್ದರು.
ಇದೀಗ ದಿ ನ್ಯೂಸ್‌ ಮಿನಿಟ್‌ ಮೂಲಕ ಕಥೆಯ ಇನ್ನೊಂದು ಆಯಾಮವು ತೆರೆದುಕೊಂಡಿದ್ದು, ಹಲವರು ನವಾಝ್‌ಗೆ ಆಗಿರುವ ಅನ್ಯಾಯದ ವಿರುದ್ಧ ಮಾತನಾಡಿದ್ದಾರೆ. ʼಆರೋಪಿಸಿರುವ ವ್ಯಕ್ತಿ ದೂರು ನೀಡಲೂ ಮುಂದೆ ಬಂದಿಲ್ಲ, ಯಾವುದೇ ಸಾಕ್ಷಿಯಿಲ್ಲ, ಆದರೂ ನವಾಝ್‌ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ, ಹೇಗೆ?ʼ ಎಂದು ಹಲವು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಈ ನಡುವೆ ಹಲವು ಬಲಪಂಥೀಯರು, ಆತ ಪಾಪ್‌ ಕಾರ್ನ್‌ ಗೆ ಮೂತ್ರ ಮಾಡಿದ್ದಾನೆ ಎಂದು ಸಾಮಾಜಿಕ ತಾಣದಲ್ಲಿ ಪೋಸ್ಟ್‌ ಮಾಡುತ್ತಾ ಅಪಪ್ರಚಾರಕ್ಕೆ ಮತ್ತಷ್ಟು ಬೆಂಕಿ ಹಚ್ಚುತ್ತಿದ್ದಾರೆ. ಸದ್ಯ ಜಾಮೀನು ಸಿಕ್ಕಿದರೂ ತಮ್ಮ ವ್ಯಾಪಾರ ಮುಂದುವರಿಸುವುದರ ಕುರಿತು ಅವರು ಚಿಂತಾಕ್ರಾಂತರಾಗಿದ್ದಾರೆ.

ಕೃಪೆ: thenewsminute.com

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News