ಅಗ್ನಿವೀರರಿಗೆ ಉದ್ಯೋಗದ ಭರವಸೆ ನೀಡಿದ ಉದ್ಯಮಿ ಆನಂದ್ ಮಹೀಂದ್ರಾಗೆ ಪ್ರಶ್ನೆಗಳ ಸುರಿಮಳೆ

Update: 2022-06-21 17:37 GMT

ಹೊಸದಿಲ್ಲಿ, ಜೂ.21: ಉದ್ಯಮಿ ಆನಂದ್ ಮಹೀಂದ್ರಾ ‘ಅಗ್ನಿವೀರ’ರಿಗೆ ಉದ್ಯೋಗದ ಭರವಸೆ ನೀಡಿದ ಬೆನ್ನಲ್ಲೇ, ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಪ್ರಶ್ನೆಗಳ ಸುರಿಮಳೆಯಾಗಿದ್ದು, ಈ ಹಿಂದೆ ನಿವೃತ್ತ ಯೋಧರಿಗೆ ನಿಮ್ಮ ಸಂಸ್ಥೆಯಲ್ಲಿ ಉದ್ಯೋಗಾವಕಾಶ ನೀಡಿದ್ದೀರಾ ಎಂದು ಹಲವರು ಪ್ರಶ್ನಿಸಿದ್ದಾರೆ.

‘ಅಗ್ನಿಪಥ’ ವಿರೋಧಿಸಿ ದೇಶದಾದ್ಯಂತ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವಂತೆಯೇ, ಈ ಅವಕಾಶವನ್ನು ಮಹೀಂದ್ರಾ ಸಮೂಹಸಂಸ್ಥೆ ಸ್ವಾಗತಿಸುತ್ತದೆ ಮತ್ತು ಈ ಯೋಜನೆಯಡಿ ತರಬೇತಿ ಪಡೆದಿರುವ ಜನರನ್ನು ನೇಮಿಸಿಕೊಳ್ಳಲು ಬಳಸುತ್ತದೆ ಎಂದು ಆನಂದ್ ಮಹೀಂದ್ರಾ ಸೋಮವಾರ ಘೋಷಿಸಿದ್ದರು.ಅಗ್ನಿಪಥ ಯೋಜನೆ ವಿರೋಧಿಸಿ ನಡೆದಿರುವ ಹಿಂಸಾಚಾರದಿಂದ ದುಃಖವಾಗಿದೆ. ಅಗ್ನಿವೀರರು ಗಳಿಸುವ ಶಿಸ್ತು ಮತ್ತು ಕೌಶಲ್ಯಗಳು ಅವರನ್ನು ಅತ್ಯುತ್ತಮ ಉದ್ಯೋಗಿಗಳನ್ನಾಗಿ ಮಾಡುತ್ತದೆ ಎಂದು ಈ ಯೋಜನೆಯನ್ನು ಕಳೆದ ವರ್ಷ ಪ್ರಸ್ತಾವಿಸಿದಾಗಲೇ ನಾನು ಹೇಳಿದ್ದೆ. ಅಂತಹ ತರಬೇತಿ ಪಡೆದ ಸಮರ್ಥ ಯುವಕರನ್ನು ನೇಮಿಸಿಕೊಳ್ಳುವ ಅವಕಾಶವನ್ನು ಮಹೀಂದ್ರಾ ಸಂಸ್ಥೆ ಸ್ವಾಗತಿಸುತ್ತದೆ ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದರು. ‘ಅಗ್ನಿವೀರರನ್ನು ನೇಮಿಸಿಕೊಳ್ಳುವ ಅವಕಾಶವನ್ನು ಆರ್ಪಿಜಿ ಸಮೂಹ ಸಂಸ್ಥೆಯೂ ಸ್ವಾಗತಿಸುತ್ತದೆ’ ಎಂದು ಸಂಸ್ಥೆಯ ಅಧ್ಯಕ್ಷ ಹರ್ಷ ಗೊಯೆಂಕಾ ಇದೇ ಸಂದರ್ಭ ಟ್ವೀಟ್ ಮಾಡಿದ್ದರು.

 ಮಹೀಂದ್ರಾ ಅವರ ಹೇಳಿಕೆಯನ್ನು ಹಲವರು ಶ್ಲಾಘಿಸಿದ್ದರೆ, ನಿವೃತ್ತ ಸೇನಾಧಿಕಾರಿಗಳ ಸಹಿತ ಹಲವರು ‘ಇದುವರೆಗೆ ಮಹೀಂದ್ರಾ ಸಮೂಹ ಸಂಸ್ಥೆ ಎಷ್ಟು ನಿವೃತ್ತ ಸೇನಾಧಿಕಾರಿಗಳನ್ನು ನೇಮಿಸಿಕೊಂಡಿದೆ’ ಎಂದು ಪ್ರಶ್ನಿಸಿದ್ದಾರೆ.ಈ ಹೊಸ ಯೋಜನೆಯವರೆಗೆ ಯಾಕೆ ಕಾಯಬೇಕಿತ್ತು? ಇದುವರೆಗೆ ಮಹೀಂದ್ರಾ ಸಂಸ್ಥೆ ಪ್ರತೀ ವರ್ಷ ನಿವೃತ್ತಿಗೊಳ್ಳುತ್ತಿರುವ ಮತ್ತು 2ನೇ ವೃತ್ತಿಜೀವನ ಆರಂಭಿಸಲು ಹತಾಶ ಪ್ರಯತ್ನ ನಡೆಸುತ್ತಿರುವ ಸಾವಿರಾರು ಅತ್ಯುತ್ತಮ ನುರಿತ ಮತ್ತು ಶಿಸ್ತಿನ ಮಾಜಿ ಸೈನಿಕರ ಬಗ್ಗೆ ಗಮನ ನೀಡಿದೆಯೇ? ಈ ಬಗ್ಗೆ ನಿಮ್ಮ ಸಮೂಹ ಸಂಸ್ಥೆಯಿಂದ ಅಂಕಿಅಂಶ ಪಡೆಯುವುದು ಒಳಿತು’ ಎಂದು ಭಾರತೀಯ ನೌಕಾಪಡೆಯ ಮಾಜಿ ಮುಖ್ಯಸ್ಥ ಅರುಣ್ ಪ್ರಕಾಶ್ ಪ್ರತಿಕ್ರಿಯಿಸಿದ್ದಾರೆ.

ನೌಕಾಪಡೆಯ ನಿವೃತ್ತ ಮುಖ್ಯಸ್ಥರು ಕೇಳಿದ ಅಂಕಿಅಂಶ ದೊರಕಬಹುದೇ ಆನಂದ್ ಸರ್, ಈ ರೀತಿಯ ಭರವಸೆಯನ್ನು ಕೇಳುತ್ತಾ 40 ವರ್ಷ ಸೇವೆ ಸಲ್ಲಿಸಿ ನಿವೃತ್ತನಾಗಿದ್ದೇನೆ ’ ಎಂದು ಭಾರತೀಯ ವಾಯುಪಡೆಯ ನಿವೃತ್ತ ಏರ್ವೈಸ್ ಮಾರ್ಷಲ್ ಮನ್ಮೋಹನ್ ಬಹಾದುರ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News