ಯೆನೆಪೋಯ ವಿಶ್ವವಿದ್ಯಾಲಯ - ಡೆಂಟ್ ಕೇರ್ ಡೆಂಟಲ್ ಲ್ಯಾಬ್ ಪ್ರೈ.ಲಿ. ನಡುವೆ ಒಡಂಬಡಿಕೆಗೆ

Update: 2022-06-22 17:30 GMT

ಕೊಣಾಜೆ: ದಂತ ಕ್ಷೇತ್ರದ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಭಾರತವು ವಿಶ್ವದಲ್ಲಿಯೇ ದಂತ ಸೇವೆಯಲ್ಲಿ ಕ್ರಾಂತಿಕಾರಿ ಬೆಳವಣಿಗೆಯೊಂದಿಗೆ ಮುನ್ನಡೆಯುತ್ತಿದೆ ಎಂದು ಡೆಂಟಲ್ ಕೇರ್ ಲ್ಯಾಬ್ ಪ್ರೈವೇಟ್ ಲಿಮಿಟೆಡ್ ನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಜಾನ್ ಕುರೈಕೋಸೆ ಅವರು ಹೇಳಿದರು.

ಬುಧವಾರ ಯೆನೆಪೋಯ ಸ್ವಾಯತ್ತ ವಿಶ್ವವಿದ್ಯಾಲಯ ಹಾಗೂ ಡೆಂಟ್ ಕೇರ್ ಡೆಂಟಲ್ ಲ್ಯಾಬ್ ಪ್ರೈ ಲಿಮಿಟೆಡ್ ನ ನಡುವೆ ಒಡಂಬಡಿಕೆ ಪತ್ರಕ್ಕೆ ಸಹಿ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ದಂತ ಕ್ಷೇತ್ರಕ್ಕೆ ಸಂಬಂಧಿಸಿದ ಅಂತರಾಷ್ಟ್ರೀಯ ಮಟ್ಟದ  ತರಬೇತಿ ಸಂಸ್ಥೆಗಳು, ನುರಿತ ದಂತ ತಂತ್ರಜ್ಞರ ಅಗತ್ಯತೆಗಳು ಹೆಚ್ಚುತ್ತಿದ್ದು, ಇಂತಹ ಯೋಜನೆಯೊಂದಿಗೆ ಡೆಂಟ್ ಕೇರ್ ಡೆಂಟಲ್ ಲ್ಯಾಬ್ ಪ್ರೈ.ಲಿ ಕಾರ್ಯಾಚರಿಸುತ್ತಾ ಯೆನೆಪೋಯ ಪರಿಗಣಿತ ವಿ.ವಿ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದರು.

ಪಠ್ಯಕ್ಕಿಂತ ಪ್ರಯೋಗಾಲಯಗಳ ಹೆಚ್ಚಿನ ಬಳಕೆಯಂತಹ ತರಬೇತಿಯನ್ನು ವಿದ್ಯಾರ್ಥಿಗಳಿಗೆ ಸಂಸ್ಥೆ ನೀಡಲಿದ್ದು, ಅಂತರಾಷ್ಟ್ರೀಯವಲಯದಲ್ಲಿ ಬೇಡಿಕೆಯುಳ್ಳ, ದುಬಾರಿ ಎಂಡಿಟಿ ಕೋರ್ಸುಗಳನ್ನೂ ಶೀಘ್ರವೇ ಸಂಸ್ಥೆ ಆರಂಭಿಸುವ ಯೋಜನೆಯನ್ನು ಹೊಂದಿದೆ ಎಂದರು.

ಯೇನೆಪೋಯ ವಿವಿಯ ಸಹ ಕುಲಾಧಿಪತಿ ಪರ್ಹಾದ್ ಯೆನೆಪೋಯ ಅವರು ಮಾತನಾಡಿ, ಇತರೆ ಸಂಸ್ಥೆಗಳ ಜತೆಗಿ‌ನ ಒಡಂಬಡಿಕೆಯಿಂದ ವಿಶ್ವದಾದ್ಯಂತ ಇರುವ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳಿಗೆ ಸಹಕಾರಿಯಾಗುವುದು. ಈ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗ ಗಳಿಕೆಯೂ ಸಾಧ್ಯ. ಯೆನೆಪೋಯ ಸಂಸ್ಥೆ ಪದವೀಧರರ ಜೀವನ ಸದೃಢಗೊಳಿಸುವ ಉದ್ದೇಶದಿಂದ ಅಂತರಾಷ್ಟ್ರೀಯ ಮಾನ್ಯತೆಯುಳ್ಳ ಸಂಸ್ಥೆಗಳ ಜತೆಗಿನ ಒಡಂಬಡಿಕೆಗಳನ್ನು ಮುಂದುವರಿಸುತ್ತಾ ಬಂದಿದೆ. ಕೌಶಲ್ಯಗಳ ಜತೆಗೆ ಮಾನವೀಯತೆಯನ್ನು ಮೈಗೂಡಿಸಿಕೊಂಡು ಯಶಸ್ವಿ ಜೀವನ ನಡೆಸುವುದೇ ಯೇನೆಪೋಯ ಸಂಸ್ಥೆಯ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಯೆನೆಪೋಯ ವಿವಿಯ ಕುಲಸಚಿವ ಡಾ.ಗಂಗಾಧರ ಸೋಮಯಾಜಿ ಉಪಸ್ಥಿತರಿದ್ದರು. ಯೆನೆಪೋಯ ಡೆಂಟಲ್ ಕಾಲೇಜ್ ಡೀನ್ ಡಾ. ಅಖ್ತರ್ ಹುಸೈನ್ ಸ್ವಾಗತಿಸಿದರು. ಕಾರ್ಯಕ್ರಮ ಸಂಘಟಕಿ ಡಾ. ಮಲ್ಲಿಕಾ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ಹಸನ್ ಸರ್ಫ್ರಾಝ್ ಸನ್ಮಾನಿತರನ್ನು ಪರಿಚಯಿಸಿದರು. ಯೆನೆಪೋಯ ಅಲೈಡ್ ಹೆಲ್ತ್ ಸೈನ್ಸ್ ನ ಡೀನ್ ಡಾ. ಸುನೀತಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News