ನಿರುದ್ಯೋಗ ಬಿಕ್ಕಟ್ಟು ಮತ್ತು ಅಗ್ನಿಪಥ ಬಂಡಾಯ

Update: 2022-06-23 06:22 GMT

‘‘ಗಲಭೆ ಎನ್ನುವುದು ಧ್ವನಿಯಿಲ್ಲದವರ ಭಾಷೆ’’ ಎಂಬುದಾಗಿ ಡಾ. ಮಾರ್ಟಿನ್ ಲೂಥರ್ ಕಿಂಗ್ ಹೇಳಿದ್ದಾರೆ. ಈ ತಕ್ಷಣದ, ಯೋಜಿತವಲ್ಲದ ಮತ್ತು ಹಿಂಸಾತ್ಮಕ ಪ್ರತಿಭಟನೆಗಳು ಭಾರತದ ಕೋಟ್ಯಂತರ ಯುವಕರ ಅದುಮಿಡಲ್ಪಟ್ಟ ಆಕ್ರೋಶದ ಸ್ಫೋಟವೇ ಆಗಿದೆ. ನಿರುದ್ಯೋಗಕ್ಕೂ ಸಂಘರ್ಷ ಮತ್ತು ಹಿಂಸೆಗೂ ನೇರ ಸಂಬಂಧವಿದೆ. ಭಾರತದ ಯುವಜನರಲ್ಲಿ ಆಕ್ರೋಶ ಹೆಚ್ಚುತ್ತಿರುವಂತೆಯೇ ಇಂತಹ ಸಂಘರ್ಷಗಳು ಹೆಚ್ಚೆಚ್ಚು ನಡೆಯುತ್ತವೆ. ಹಾಗಾಗಿ, ಅಗ್ನಿಪಥ್ ಬಂಡಾಯವನ್ನು ಹತ್ತಿಕ್ಕುವಲ್ಲಿ ಸರಕಾರ ಯಶಸ್ವಿಯಾದರೂ, ಬೆಂಕಿ ಆರುವುದಿಲ್ಲ. ಸಮಸ್ಯೆಯನ್ನು ಪರಿಹರಿಸುವುದು ಬಿಡಿ, ಅದನ್ನು ಪ್ರಸ್ತಾಪಿಸಲು ಕೂಡ ರಾಜಕೀಯ ವೇದಿಕೆ ಸಿಗದ ಕಾರಣ ಸಮಸ್ಯೆಯು ಜಟಿಲಗೊಳ್ಳುತ್ತಾ ಸಾಗುತ್ತದೆ.

ಭಾರತ ಸರಕಾರವು ಜೂನ್ 14ರಂದು ಸೈನಿಕರ ಭರ್ತಿಗಾಗಿ ‘ಅಗ್ನಿಪಥ್’ ಯೋಜನೆಯನ್ನು ಘೋಷಿಸಿತು. ಈ ಯೋಜನೆಯ ಪ್ರಕಾರ, ಪ್ರತಿ ವರ್ಷ ಹದಿನೇಳೂವರೆಯಿಂದ 21 ವರ್ಷದವರೆಗಿನ 45,000ದಿಂದ 50,000 ಮಂದಿಯನ್ನು ಸೇನೆಗೆ ಸೇರಿಸಿಕೊಳ್ಳಲಾಗುತ್ತದೆ. ಅವರ ಸೇವಾವಧಿ ನಾಲ್ಕು ವರ್ಷ. ಸೇವಾವಧಿಯ ಕೊನೆಯಲ್ಲಿ ಅವರ ಪೈಕಿ ನಾಲ್ಕನೇ ಒಂದು ಭಾಗವನ್ನು ಉಳಿಸಿಕೊಂಡು ಸೇನಾ ಪಡೆಗಳಿಗೆ ಖಾಯಂ ಆಗಿ ಸೇರ್ಪಡೆಗೊಳಿಸಲಾಗುತ್ತದೆ. ಈ ಯೋಜನೆಯ ಒಂದು ಪ್ರಮುಖ ಉದ್ದೇಶವೆಂದರೆ, ಸೇನಾ ಪಿಂಚಣಿ ಬಜೆಟ್ ಮತ್ತು ಖಾಯಂ ಸೈನಿಕರ ಗಾತ್ರವನ್ನು ಕಡಿಮೆ ಮಾಡುವುದು. ಈ ಯೋಜನೆಯು ಸೇನೆಯ ವೃತ್ತಿಪರತೆ ಮತ್ತು ಸಿದ್ಧತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳುತ್ತದೆ ಎಂಬುದಾಗಿ ಹಲವು ಸೇನಾ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಈ ಯೋಜನೆಯು ಸೇನಾ ಪಡೆಗಳನ್ನು ಗುತ್ತಿಗೆ ನೌಕರರನ್ನಾಗಿಸುತ್ತದೆ ಮತ್ತು ಸಮಾಜವನ್ನು ಹೆಚ್ಚೆಚ್ಚು ಸೇನಾಮಯಗೊಳಿಸುತ್ತದೆ ಎಂಬುದಾಗಿ ಆರೋಪಿಸಲಾಗಿದೆ. ಅದೂ ಅಲ್ಲದೆ, ಈ ಯೋಜನೆಯು ನೇಮಕಾತಿಗೊಂಡ ಶೇ. 75 ಮಂದಿಯನ್ನು ಅವರ 21-25ನೇ ವರ್ಷದಲ್ಲಿ ಕೆಲಸದಿಂದ ತೆಗೆದುಹಾಕುವುದರಿಂದ ನಿರುದ್ಯೋಗ ಸಮಸ್ಯೆಯೂ ಬಿಗಡಾಯಿಸಬಹುದು ಎನ್ನಲಾಗಿದೆ.

ಯೋಜನೆಯ ಘೋಷಣೆಯಾದ ಒಂದು ದಿನದ ಬಳಿಕ, ಬಿಹಾರ ಮತ್ತು ಉತ್ತರಪ್ರದೇಶದಲ್ಲಿ ಬೃಹತ್ ಪ್ರತಿಭಟನೆಗಳು ಮತ್ತು ದೊಂಬಿ ನಡೆದವು. ಲಕ್ಷಾಂತರ ವಿದ್ಯಾರ್ಥಿಗಳು, ಅದರಲ್ಲೂ ಮುಖ್ಯವಾಗಿ ಸೇನಾ ಪಡೆಗಳಿಗೆ ನೇಮಕಾತಿಯನ್ನು ಎದುರುನೋಡುತ್ತಿದ್ದವರು ಯೋಜನೆಯ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದರು. ಪ್ರತಿಭಟನೆಯು ಕ್ಷಿಪ್ರವಾಗಿ ಉತ್ತರ ಭಾರತಕ್ಕೆ ಹರಡಿತು ಮತ್ತು ಅಂತಿಮವಾಗಿ ಇಡೀ ದೇಶವನ್ನು ವ್ಯಾಪಿಸಿತು. ಹೆಚ್ಚಿನ ಸ್ಥಳಗಳಲ್ಲಿ, ಅದರಲ್ಲೂ ಮುಖ್ಯವಾಗಿ ಬಿಹಾರದಲ್ಲಿ ಪ್ರತಿಭಟನೆಗಳು ಹಿಂಸೆಗೆ ತಿರುಗಿದವು. ರೈಲುಗಳಿಗೆ ಬೆಂಕಿ ಹಚ್ಚಲಾಯಿತು, ಬಿಜೆಪಿ ಕಚೇರಿಗಳು ಮತ್ತು ಪಕ್ಷದ ಶಾಸಕರ ಮನೆಗಳ ಮೇಲೆ ದಾಳಿ ನಡೆಯಿತು. ಬಹುಷಃ, ಸೇನೆಗೆ ಸೇರುವುದಕ್ಕಾಗಿ ವರ್ಷಗಳಿಂದ ಸಿದ್ಧತೆಗಳನ್ನು ನಡೆಸಿದ್ದ ಮತ್ತು 2019ರ ಬಳಿಕ ಸೇನಾ ನೇಮಕಾತಿ ನಡೆಯದ ಕಾರಣ ಆಕ್ರೋಶಗೊಂಡಿದ್ದ ಯುವಕರು ಈ ಯೋಜನೆಯನ್ನು ಇಷ್ಟಪಡಲಿಲ್ಲ.

ಈ ನಡುವೆ, ಸರಕಾರವು ನಿರೀಕ್ಷೆಯಂತೆಯೇ ಯೋಜನೆಯ ಪ್ರಯೋಜನಗಳನ್ನು ವಿವರಿಸುವುದಕ್ಕಾಗಿ ಪ್ರಚಾರ ಅಭಿಯಾನಕ್ಕೆ ಮೊರೆಹೋಯಿತು. ಯೋಜನೆಯ ಲಾಭಗಳನ್ನು ವಿವರಿಸಿ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಲಾಯಿತು ಮತ್ತು ಮಂತ್ರಿಗಳು ಪತ್ರಿಕಾಗೋಷ್ಠಿಗಳನ್ನು ಕರೆದರು. ಸಶಸ್ತ್ರ ಪಡೆಗಳ ಮುಖ್ಯಸ್ಥರು ಯೋಜನೆಯನ್ನು ಅನಮೋದಿಸಿ ಮತ್ತು ಸರಕಾರವನ್ನು ಬೆಂಬಲಿಸಿ ಹೇಳಿಕೆಗಳನ್ನು ಬಿಡುಗಡೆ ಮಾಡಿದರು ಮತ್ತು ಸಂದರ್ಶನಗಳನ್ನು ನೀಡಿದರು.

ಇಷ್ಟು ಮಾಡಿದರೂ ಯಾವುದೇ ಪರಿಣಾಮವಾಗದಾಗ, ಸರಕಾರ ಯೋಜನೆಯ ಫಲಾನುಭವಿಗಳಿಗೆ ಹೆಚ್ಚುವರಿ ಸೌಲಭ್ಯಗಳನ್ನು ಘೋಷಿಸಲು ಆರಂಭಿಸಿತು. ರಕ್ಷಣಾ ಸಚಿವಾಲಯ (ಭಾರತೀಯ ತಟರಕ್ಷಣಾ ಪಡೆ, ನಾಗರಿಕ ರಕ್ಷಣಾ ಹುದ್ದೆಗಳು ಮತ್ತು ರಕ್ಷಣೆಗೆ ಸಂಬಂಧಿಸಿದ ಸಾರ್ವಜನಿಕ ವಲಯದ ಉದ್ದಿಮೆಗಳು), ಗೃಹ ಸಚಿವಾಲಯ (ಕೇಂದ್ರೀಯ ಸಶಸ್ತ್ರ ಮೀಸಲು ಪಡೆಗಳು ಮತ್ತು ಅಸ್ಸಾಮ್ ರೈಫಲ್ಸ್), ಕ್ರೀಡಾ, ನಾಗರಿಕ ವಾಯುಯಾನ ಹಾಗೂ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವಾಲಯಗಳಲ್ಲಿರುವ ಹುದ್ದೆಗಳಲ್ಲಿ ಅಗ್ನಿವೀರರಿಗೆ ಮೀಸಲಾತಿ ಮತ್ತು ವಯೋಮಿತಿ ಸಡಿಲಿಕೆಯನ್ನು ಕೇಂದ್ರ ಸರಕಾರವು ಘೋಷಿಸಿತು. ಅಗ್ನಿವೀರರಿಗೆ ಮೀಸಲಾತಿಗಳನ್ನು ನೀಡುವಂತೆ ಹಣಕಾಸು ಸಚಿವೆ ಬ್ಯಾಂಕ್‌ಗಳಿಗೆ ಕರೆ ನೀಡಿದರು. ಅಗ್ನಿವೀರರಿಗೆ ಮೀಸಲಾತಿಗಳನ್ನು ನೀಡುವುದಾಗಿ ಮಧ್ಯಪ್ರದೇಶ ಮುಂತಾದ ರಾಜ್ಯಗಳೂ ಘೋಷಿಸಿದವು. ರಾಜ್ಯ ಪೊಲೀಸ್ ಪಡೆಯಲ್ಲಿ ಮಾಜಿ ಸೈನಿಕರಿಗೆ ನೀಡಲಾಗುತ್ತಿದ್ದ ಶೇ. 10 ಮೀಸಲಾತಿಯನ್ನು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ವರ್ಷದ ಆರಂಭದಲ್ಲಿ ರದ್ದುಪಡಿಸಿದ್ದರು.

ಇದೂ ಉದ್ರಿಕ್ತ ಸೇನಾಕಾಂಕ್ಷಿಗಳನ್ನು ಸಮಾಧಾನಪಡಿಸಲು ವಿಫಲವಾದಾಗ, ಪ್ರತಿಭಟನಾಕಾರರ ವಿರುದ್ಧ ಬೆದರಿಕೆಗಳು ಮತ್ತು ಎಚ್ಚರಿಕೆಗಳನ್ನು ಹೊರಡಿಸಲಾಯಿತು. ಪ್ರಚಾರ ಅಭಿಯಾನದ ಹೊರತಾಗಿಯೂ, ಪ್ರತಿಭಟನೆಗಳು ದೇಶಾದ್ಯಂತ ಮುಂದುವರಿದಿವೆ.

ಕೆಲವು ತಿಂಗಳುಗಳ ಮೊದಲು, 2022 ಜನವರಿಯಲ್ಲಿ ರೈಲ್ವೇ ನೇಮಕಾತಿ ಪರೀಕ್ಷಾ ಆಕಾಂಕ್ಷಿಗಳು ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದರು. ಬಿಹಾರ ಮತ್ತು ಉತ್ತರಪ್ರದೇಶದಾದ್ಯಂತ ಸಾವಿರಾರು ವಿದ್ಯಾರ್ಥಿಗಳು ಏಕಕಾಲದಲ್ಲಿ ಬೀದಿಗಿಳಿದಿದ್ದರು. ರೈಲ್ವೇ ನೇಮಕಾತಿ ಮಂಡಳಿ ನಡೆಸುತ್ತಿರುವ ಪರೀಕ್ಷೆಗಳಲ್ಲಿ ಅವ್ಯವಹಾರಗಳು ನಡೆಯುತ್ತಿವೆ ಎನ್ನುವುದು ಅವರ ಆರೋಪವಾಗಿತ್ತು. ಇಂತಹ ಒಂದು ರೈಲ್ವೇ ಪರೀಕ್ಷೆಯಲ್ಲಿ 35,000 ಹುದ್ದೆಗಳಿಗಾಗಿ 1.2 ಕೋಟಿಗೂ ಅಧಿಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆ ಪ್ರತಿಭಟನೆಯನ್ನು ಸರಕಾರ ಅಮಾನುಷವಾಗಿ ಹತ್ತಿಕ್ಕಿತು. ಅಲಹಾಬಾದ್ ಮತ್ತು ಪಾಟ್ನಾಗಳಲ್ಲಿ ಪೊಲೀಸರು ಹಾಸ್ಟೆಲ್‌ಗಳಿಗೆ ನುಗ್ಗಿ ವಿದ್ಯಾರ್ಥಿಗಳನ್ನು ಬೆತ್ತದಿಂದ ಥಳಿಸಿದರು ಮತ್ತು ಹಲವಾರು ವಿದ್ಯಾರ್ಥಿಗಳನ್ನು ಬಂಧಿಸಿದರು. ರೈಲ್ವೇ ನೇಮಕಾತಿ ಮಂಡಳಿಯೂ ಸುತ್ತೋಲೆಯೊಂದನ್ನು ಹೊರಡಿಸಿ ಯಾವುದೇ ರೀತಿಯ ಪ್ರತಿಭಟನೆಗಳಲ್ಲಿ ಭಾಗವಹಿಸದಂತೆ ವಿದ್ಯಾರ್ಥಿಗಳನ್ನು ಬೆದರಿಸಿತು.

ಈ ಪ್ರತಿಭಟನೆಗಳಿಗೆ ಮುಖ್ಯವಾಹಿನಿಯ ಮಾಧ್ಯಮಗಳು ಮತ್ತು ಜನಸಾಮಾನ್ಯರ ಪ್ರತಿಕ್ರಿಯೆ ನಕಾರಾತ್ಮಕವಾಗಿತ್ತು. ಆದರೆ, ಈ ಪ್ರತಿಭಟನೆಗಳ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ. ಅಗ್ನಿಪಥ್ ಪ್ರತಿಭಟನಾಕಾರರನ್ನು ಕೊಳ್ಳಿಯಿಡುವವರು ಮತ್ತು ದೊಂಬಿಕೋರರು ಎಂಬುದಾಗಿ ಬಣ್ಣಿಸುವ ಮೊದಲು, ಅವರ ಸಮಸ್ಯೆಗಳು ಮತ್ತು ಅಹವಾಲುಗಳನ್ನು ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ. ಅಗ್ನಿಪಥ್ ಯೋಜನೆಯ ವಿರುದ್ಧ ನಡೆದ ಪ್ರತಿಭಟನೆ, ರೈಲ್ವೇ ನೇಮಕಾತಿ ಮಂಡಳಿಯ ಅವ್ಯವಹಾರಗಳ ವಿರುದ್ಧ ನಡೆದ ಪ್ರತಿಭಟನೆ ಅಥವಾ ಇತ್ತೀಚಿನ ವರ್ಷಗಳಲ್ಲಿ ನಡೆದ ಹತ್ತಾರು ವಿದ್ಯಾರ್ಥಿ ಪ್ರತಿಭಟನೆಗಳ ತಕ್ಷಣದ ಕಾರಣ ಭಿನ್ನವಾಗಿರಬಹುದು. ಆದರೆ, ಅವುಗಳು ಒಂದಕ್ಕೊಂದು ಸಂಬಂಧವಿಲ್ಲದ ಪ್ರತಿಭಟನೆಗಳಲ್ಲ. ಮುಖ್ಯವಾಗಿ ಆ ಪ್ರತಿಭಟನೆಗಳನ್ನು ನಿರುದ್ಯೋಗ ಬಿಕ್ಕಟ್ಟಿನ ವಿರುದ್ಧ ಬೃಹತ್ ಆಂದೋಲನದ ಒಂದು ಭಾಗವೆಂಬುದಾಗಿ ನೋಡಬೇಕಾಗಿದೆ.

2014ರಲ್ಲಿ ಅಧಿಕಾರಕ್ಕೆ ಬರುವ ಮೊದಲು, ನರೇಂದ್ರ ಮೋದಿಯವರ ಪ್ರಚಾರದ ಕೇಂದ್ರ ಬಿಂದು ನಿರುದ್ಯೋಗ ಸಮಸ್ಯೆಯೇ ಆಗಿತ್ತು. ಪ್ರತೀ ವರ್ಷ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆಯನ್ನು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಮೋದಿ ನೀಡಿದ್ದರು. ಆದರೆ, ಅವರ ಮೊದಲ ಅವಧಿಯ ಕೊನೆಯ ಹೊತ್ತಿಗೆ ಸಮಸ್ಯೆ ಮತ್ತಷ್ಟು ಉಲ್ಬಣಿಸಿತು. 2018ರಲ್ಲಿ, ಸಿಬ್ಬಂದಿ ನೇಮಕಾತಿ ಆಯೋಗದ ಪರೀಕ್ಷೆಗಳಲ್ಲಿ ನಡೆಯುತ್ತಿದೆಯೆನ್ನಲಾದ ಅವ್ಯವಹಾರಗಳ ಬಗ್ಗೆ ಬೃಹತ್ ಪ್ರತಿಭಟನೆಗಳು ನಡೆದವು. ನೇಮಕಾತಿ ವಿಳಂಬ, ಪರೀಕ್ಷೆಗಳಲ್ಲಿ ನಡೆಯುತ್ತಿದೆಯೆನ್ನಲಾದ ಅವ್ಯವಹಾರಗಳು ಮತ್ತು ನಿರುದ್ಯೋಗಕ್ಕೆ ಸಂಬಂಧಿಸಿದ ಇತರ ವಿಷಯಗಳಲ್ಲಿ ಇನ್ನಷ್ಟು ಪ್ರತಿಭಟನೆಗಳು ನಡೆದವು. ಆದರೆ, ನಿರುದ್ಯೋಗ ಬಿಕ್ಕಟ್ಟನ್ನು ನಿಭಾಯಿಸಲು ಮೋದಿ ಸರಕಾರ ಅನುಸರಿಸುತ್ತಿರುವುದು ‘ಸಬ್ ಚಂಗಾ ಸಿ (ಎಲ್ಲಾ ಸರಿಯಾಗಿದೆ)’ ಮಾದರಿಯನ್ನು. ಅದು ನಿರುದ್ಯೋಗ ಸಮಸ್ಯೆಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ನಿರ್ಲಕ್ಷಿಸುತ್ತದೆ, ನಿರಾಕರಿಸುತ್ತದೆ ಮತ್ತು ಹತ್ತಿಕ್ಕುತ್ತದೆ ಹಾಗೂ ‘ಅಚ್ಛೇ ದಿನ್’ ಚಾಲ್ತಿಯಲ್ಲಿದೆ ಎಂದು ಹೇಳಿಕೊಳ್ಳುತ್ತದೆ. 2019ರಲ್ಲಿ, ಸೋರಿಕೆಯಾದ ಎನ್‌ಎಸ್‌ಎಸ್‌ಒ ವರದಿಯೊಂದು ನಿರುದ್ಯೋಗ ಪ್ರಮಾಣವು 45 ವರ್ಷಗಳಲ್ಲೇ ಗರಿಷ್ಠ ಪ್ರಮಾಣದಲ್ಲಿದೆ ಎಂದು ಹೇಳಿತು. ಆದರೆ ಆ ವರದಿಯನ್ನು ಹತ್ತಿಕ್ಕಲಾಯಿತು ಹಾಗೂ ಮುಂದಿನ ಎನ್‌ಎಸ್‌ಎಸ್‌ಒ ಸಮೀಕ್ಷೆಗಳನ್ನೇ ನಿಲ್ಲಿಸಲಾಯಿತು. ಸುಳ್ಳು ಅಚ್ಛೇ ದಿನ್ ಚಿತ್ರಣವನ್ನು ಬಿಂಬಿಸಲು ಪ್ರಚಾರ ಮತ್ತು ಆಯ್ದ ಅಂಕಿ-ಸಂಖ್ಯೆಗಳನ್ನು ಬಳಸಿಕೊಳ್ಳಲಾಯಿತು. ಸಂದರ್ಶನವೊಂದರಲ್ಲಿ ಮೋದಿಗೆ ನಿರುದ್ಯೋಗ ಸಮಸ್ಯೆಯ ಕುರಿತು ಪ್ರಶ್ನೆಯೊಂದನ್ನು ಕೇಳಲಾಯಿತು. ಅವರು ನಿರುದ್ಯೋಗ ಸಮಸ್ಯೆ ಎನ್ನುವುದೇ ಇಲ್ಲ ಎಂದು ಘೋಷಿಸಿದರು. ಅಷ್ಟೇ ಅಲ್ಲ, ಸುದ್ದಿ ವಾಹಿನಿಗಳ ಸ್ಟುಡಿಯೋಗಳ ಎದುರು ಪಕೋಡ ಮಾರುವುದು ಮತ್ತು ಅದರಿಂದ ದಿನಕ್ಕೆ 200 ರೂಪಾಯಿ ಗಳಿಸುವುದು ಉದ್ಯೋಗ ಎನಿಸುವುದಿಲ್ಲವೇ ಎಂಬ ಪ್ರಶ್ನೆಯನ್ನೂ ಕೇಳಿದರು.

ನಿರುದ್ಯೋಗ ಸಮಸ್ಯೆಯು ದಿನದಿಂದ ದಿನಕ್ಕೆ ಹದಗೆಡುತ್ತಿದ್ದರೂ, ಸಮಸ್ಯೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಯಾವುದೇ ಕ್ರಮಗಳನ್ನು ಸರಕಾರ ತೆಗೆದುಕೊಳ್ಳಲಿಲ್ಲ. ಬದಲಿಗೆ, ನಿರುದ್ಯೋಗ ಸಮಸ್ಯೆ ಎನ್ನುವುದೇ ಇಲ್ಲ ಎನ್ನುವುದನ್ನು ಪ್ರತಿಪಾದಿಸುವುದನ್ನು ಮುಂದುವರಿಸಿತು. 2016 ಮತ್ತು 2022ರ ನಡುವಿನ ಅವಧಿಯಲ್ಲಿ, ಉದ್ಯೋಗ-ಜನಸಂಖ್ಯೆ ಅನುಪಾತವು ಶೇ. 43.5ದಿಂದ ಶೇ. 37ಕ್ಕೆ ಕುಸಿಯಿತು. ಉದ್ಯೋಗಸ್ಥರ ಸಂಖ್ಯೆ 46 ಲಕ್ಷಕ್ಕೆ ಕುಸಿಯಿತು. ತಕ್ಕಮಟ್ಟಿನ ಉದ್ಯೋಗವನ್ನಾದರೂ ಪಡೆಯಲು ಅಸಾಧ್ಯವಾದಾಗ ಹತಾಶೆಗೊಂಡ ಯುವ ಸಮುದಾಯ ಕೆಲಸ ಹುಡುಕುವುದನ್ನೇ ನಿಲ್ಲಿಸಿತು. ಕಾರ್ಮಿಕ ಶಕ್ತಿಯ ಪಾಲ್ಗೊಳ್ಳುವಿಕೆಯು ಶೇ. 48ರಿಂದ 40ಕ್ಕೆ ಕುಸಿಯಿತು. 2017 ಮತ್ತು 2022ರ ನಡುವಿನ ಅವಧಿಯಲ್ಲಿ ಎರಡು ಕೋಟಿಗೂ ಅಧಿಕ ಮಹಿಳೆಯರು ಕೆಲಸ ತೊರೆದರು. ಕಾಲೇಜುಗಳಿಂದ ಪದವಿ ಪಡೆದುಕೊಂಡವರ ನಿರುದ್ಯೋಗ ಪ್ರಮಾಣವು ಶೇ. 20ಕ್ಕೆ ಏರಿತು. ಆದರೆ, ಅದೇ ಹೊತ್ತಿನಲ್ಲಿ 24 ಲಕ್ಷಕ್ಕೂ ಅಧಿಕ ಹುದ್ದೆಗಳು ಸರಕಾರದ ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳು ಹಾಗೂ ಶಿಕ್ಷಣ ಕ್ಷೇತ್ರ, ಆರೋಗ್ಯ ಕ್ಷೇತ್ರ, ಪೊಲೀಸ್ ಮತ್ತು ಸೇನೆಯಲ್ಲಿ ಖಾಲಿ ಬಿದ್ದಿವೆ ಎಂಬುದಾಗಿ ಸ್ವತಃ ಸರಕಾರದ ಅಂಕಿ-ಸಂಖ್ಯೆಗಳೇ ಹೇಳಿವೆ. ಕೆಲವು ಅಂಕಿ-ಸಂಖ್ಯೆಗಳ ಪ್ರಕಾರ, ರಾಜ್ಯ ಸರಕಾರಗಳ ಹುದ್ದೆಗಳು ಸೇರಿದಂತೆ ಖಾಲಿ ಬಿದ್ದಿರುವ ಒಟ್ಟು ಉದ್ಯೋಗಗಳ ಸಂಖ್ಯೆ 60 ಲಕ್ಷವನ್ನೂ ಮೀರಬಹುದು.

2016ರಲ್ಲಿ ಮೋದಿ ಸರಕಾರವು ದೊಡ್ಡ ಮೊತ್ತದ ಮುಖ ಬೆಲೆಯ ಬ್ಯಾಂಕ್ ನೋಟ್‌ಗಳನ್ನು ಅಮಾನ್ಯೀಕರಣಗೊಳಿಸಿತು. ಅದರ ಬೆನ್ನಿಗೆ ಸರಿಯಾದ ಯೋಜನೆಯೇ ಇಲ್ಲದೆ ಜಿಎಸ್‌ಟಿಯನ್ನು ಜಾರಿಗೊಳಿಸಿತು. ಈ ಎರಡು ಆಘಾತಗಳು ಭಾರತದ ಅನೌಪಚಾರಿಕ ಕ್ಷೇತ್ರ ಮತ್ತು ಸಣ್ಣ ಉದ್ದಿಮೆಗಳನ್ನು ನಾಶಗೊಳಿಸಿತು. 2019ರಲ್ಲಿ ಕೊರೋನ ವೈರಸ್ ಸಾಂಕ್ರಾಮಿಕವು ದಾಳಿ ನಡೆಸಿತು ಹಾಗೂ ಸರಕಾರ ನಾಲ್ಕು ಗಂಟೆಗಳ ಮೊದಲು ಸೂಚನೆ ಕೊಟ್ಟು ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿತು. ಲಕ್ಷಾಂತರ ಕೆಲಸಗಾರರು ನಿರುದ್ಯೋಗಿಗಳಾದರು. ಆದರೂ, ಸರಕಾರ ಅವರಿಗೆ ಯಾವುದೇ ನೆರವು ನೀಡಲಿಲ್ಲ. ಕೆಲಸಗಳನ್ನು ಕಳೆದುಕೊಂಡ ಜನರ ಆದಾಯ ಮೂಲವೂ ಬತ್ತಿಹೋಯಿತು. ಲಕ್ಷಾಂತರ ಜನರು ಬಡತನ ರೇಖೆಯ ಕೆಳಗೆ ಜಾರಿದರು ಹಾಗೂ ಹಸಿವೆಯನ್ನು ಎದುರಿಸಿದರು. 2018 ಮತ್ತು 2020ರ ನಡುವೆ ನಿರುದ್ಯೋಗ ಮತ್ತು ಸಾಲದಿಂದಾಗಿ 25,000ಕ್ಕೂ ಅಧಿಕ ಮಂದಿ ಆತ್ಮಹತ್ಯೆ ಮಾಡಿಕೊಂಡರು. ತಿಂಗಳ ಸಂಬಳದ ಕೆಲಸಗಳು ಮತ್ತು ಕೈಗಾರಿಕೆಗಳಲ್ಲಿನ ಉದ್ಯೋಗಗಳ ಸಂಖ್ಯೆಯೂ ಕಡಿಮೆಯಾಯಿತು, ವೇತನವೂ ಕಡಿಮೆಯಾಯಿತು. ನಿರುದ್ಯೋಗ ಪ್ರಮಾಣವು ದಾಖಲೆಯ ಶೇ. 24ಕ್ಕೆ ಏರಿತು.

ದೇಶವು ಬಿಕ್ಕಟ್ಟನ್ನು ಎದುರಿಸುತ್ತಿರುವ ಸನ್ನಿವೇಶದ ಲಾಭವನ್ನು ಪಡೆದುಕೊಂಡ ಸರಕಾರವು ಸಾರ್ವಜನಿಕ ಕ್ಷೇತ್ರದ ಉದ್ಯಮಗಳನ್ನು ಖಾಸಗೀಕರಣಗೊಳಿಸಿತು ಮತ್ತು ಕಾರ್ಮಿಕ ಕಾನೂನುಗಳನ್ನು ಕಾರ್ಪೊರೇಟ್ ಕಂಪೆನಿಗಳ ಪರವಾಗಿ ಸಡಿಲಿಸಿತು. ಆದರೆ, ಅದೇ ವೇಳೆ, ಚುನಾವಣೆಗಳಲ್ಲಿ ಪೊಳ್ಳು ಭರವಸೆಗಳನ್ನು ನೀಡುವುದನ್ನು ಬಿಜೆಪಿ ಮುಂದುವರಿಸಿತು. 2020ರಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ, 19 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆಯನ್ನು ಪಕ್ಷ ನೀಡಿತು. 2022ರ ಉತ್ತರಪ್ರದೇಶ ಚುನಾವಣೆಯಲ್ಲೂ ಪ್ರತಿಯೊಂದು ಕುಟುಂಬಕ್ಕೆ ಒಂದು ಉದ್ಯೋಗ ನೀಡುವುದಾಗಿ ಭರವಸೆ ನೀಡಿತು.

ಪೊಳ್ಳು ಭರವಸೆಗಳು, ಭರವಸೆಗಳನ್ನು ಈಡೇರಿಸದೆ ವಂಚನೆ, ಭರವಸೆಯಿಲ್ಲದ ಅಸ್ಪಷ್ಟ ಭವಿಷ್ಯ ಮತ್ತು ‘ಅಚ್ಛೇ ದಿನ’ದ ಕೊನೆಯಿಲ್ಲದ ಪ್ರಚಾರದಿಂದ ರೋಸಿಹೋಗಿರುವ ಯುವಜನರನ್ನು ಒಂದು ರೀತಿಯ ಅಶಾಂತಿಯ ಭಾವನೆ ಆವರಿಸಿರುವುದು ಸ್ಪಷ್ಟ. ಮುಖ್ಯವಾಹಿನಿಯ ಮಾಧ್ಯಮಗಳು ‘ಅಚ್ಛೇ ದಿನ’ದ ಸುಳ್ಳು ಮುಖವಾಡವನ್ನು ಸೃಷ್ಟಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದವು ಹಾಗೂ ಆ ಮೂಲಕ ಸರಕಾರಕ್ಕೆ ಸಹಾಯ ಮಾಡಿದವು. ನಿರುದ್ಯೋಗ ಸಮಸ್ಯೆಯನ್ನು ಹತ್ತಿಕ್ಕಿದವು ಮತ್ತು ಆ ವಿಷಯಕ್ಕೆ ಸಂಬಂಧಿಸಿದ ಯಾವುದೇ ಗಂಭೀರ ಚರ್ಚೆಗಳು ಮುನ್ನೆಲೆಗೆ ಬಾರದಂತೆ ನೋಡಿಕೊಂಡವು.

‘‘ಗಲಭೆ ಎನ್ನುವುದು ಧ್ವನಿಯಿಲ್ಲದವರ ಭಾಷೆ’’ ಎಂಬುದಾಗಿ ಡಾ. ಮಾರ್ಟಿನ್ ಲೂಥರ್ ಕಿಂಗ್ ಹೇಳಿದ್ದಾರೆ. ಈ ತಕ್ಷಣದ, ಯೋಜಿತವಲ್ಲದ ಮತ್ತು ಹಿಂಸಾತ್ಮಕ ಪ್ರತಿಭಟನೆಗಳು ಭಾರತದ ಕೋಟ್ಯಂತರ ಯುವಕರ ಅದುಮಿಡಲ್ಪಟ್ಟ ಆಕ್ರೋಶದ ಸ್ಫೋಟವೇ ಆಗಿದೆ. ನಿರುದ್ಯೋಗಕ್ಕೂ ಸಂಘರ್ಷ ಮತ್ತು ಹಿಂಸೆಗೂ ನೇರ ಸಂಬಂಧವಿದೆ. ಭಾರತದ ಯುವಜನರಲ್ಲಿ ಆಕ್ರೋಶ ಹೆಚ್ಚುತ್ತಿರುವಂತೆಯೇ ಇಂತಹ ಸಂಘರ್ಷಗಳು ಹೆಚ್ಚೆಚ್ಚು ನಡೆಯುತ್ತವೆ. ಹಾಗಾಗಿ, ಅಗ್ನಿಪಥ್ ಬಂಡಾಯವನ್ನು ಹತ್ತಿಕ್ಕುವಲ್ಲಿ ಸರಕಾರ ಯಶಸ್ವಿಯಾದರೂ, ಬೆಂಕಿ ಆರುವುದಿಲ್ಲ. ಸಮಸ್ಯೆಯನ್ನು ಪರಿಹರಿಸುವುದು ಬಿಡಿ, ಅದನ್ನು ಪ್ರಸ್ತಾಪಿಸಲು ಕೂಡ ರಾಜಕೀಯ ವೇದಿಕೆ ಸಿಗದ ಕಾರಣ ಸಮಸ್ಯೆಯು ಜಟಿಲಗೊಳ್ಳುತ್ತಾ ಸಾಗುತ್ತದೆ. ಹಾಗಾಗಿ, ನಿರುದ್ಯೋಗಕ್ಕೆ ಸಂಬಂಧಿಸಿದ ಇನ್ನೊಂದು ಬೃಹತ್ ಪ್ರಮಾಣದ ಹಿಂಸಾತ್ಮಕ ಪ್ರತಿಭಟನೆ ಯಾವಾಗ ಬೇಕಾದರೂ ಸಂಭವಿಸಬಹುದು.

ಇಂದು, ನಿರುದ್ಯೋಗ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಲು ಯುವಕರಿಗೆ ಹಿಂಸಾರಹಿತ ವೇದಿಕೆಯೊಂದನ್ನು ಒದಗಿಸಬಲ್ಲ ಚಳವಳಿಯೊಂದರ ಅಗತ್ಯ ಭಾರತಕ್ಕಿದೆ. ಇಂತಹ ಚಳವಳಿಯು ಸರಕಾರಿ ಉದ್ಯೋಗ ಪರೀಕ್ಷೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ವ್ಯಾಪ್ತಿಯನ್ನು ಮೀರಿ ಹೋಗಬೇಕು. ಖಾಸಗಿ ಕ್ಷೇತ್ರದ ಶೋಷಕ ಕೆಲಸಗಳು ಮತ್ತು ಅತಿ ಕಡಿಮೆ ವೇತನದ ಸಮಸ್ಯೆಯನ್ನೂ ಈ ಚಳವಳಿಯು ತನ್ನ ವ್ಯಾಪ್ತಿಗೆ ತೆಗೆದುಕೊಳ್ಳಬೇಕು. ರೈತರಿಗೆ ನೀಡುವ ಕನಿಷ್ಠ ಬೆಂಬಲ ಬೆಲೆ ಹಾಗೂ ಗುತ್ತಿಗೆ ಮತ್ತು ದಿನಗೂಲಿ ನೌಕರರ ಕನಿಷ್ಠ ವೇತನದ ಬಗ್ಗೆಯೂ ಅದು ಗಮನಹರಿಸಬೇಕು. ಆಹಾರ ಪೂರೈಕೆ ಕಂಪೆನಿಗಳು, ಇ-ಕಾಮರ್ಸ್ ಕಂಪೆನಿಗಳು ಮತ್ತು ಕ್ಯಾಬ್ ಕಂಪೆನಿಗಳಿಗೆ ಕೆಲಸ ಮಾಡುತ್ತಿರುವ ತಾತ್ಕಾಲಿಕ ಕೆಲಸಗಾರರ ಶೋಷಣೆಯ ಬಗ್ಗೆ ಅದು ನಿಗಾ ಇಡಬೇಕು. ಉದ್ಯೊಗಿಗಳ ಸಮೂಹದಲ್ಲಿ ಮಹಿಳೆಯರು ಮತ್ತು ಹಿಂದುಳಿದ ವರ್ಗಗಳ ಕಡಿಮೆ ಪ್ರಾತಿನಿಧ್ಯದ ವಿಷಯಗಳನ್ನು ಅದು ಚರ್ಚಿಸಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಈ ಚಳವಳಿಯು ಜನರಲ್ಲಿ, ಅದರಲ್ಲೂ ಮುಖ್ಯವಾಗಿ ಮೋದಿ ಸರಕಾರದಿಂದ ಧೈರ್ಯಕಳೆದುಕೊಂಡ ಯುವಜನರಲ್ಲಿ ಭವಿಷ್ಯದ ಬಗ್ಗೆ ಭರವಸೆಯನ್ನು ಮರುತುಂಬಬೇಕು.

ಕೃಪೆ: countercurrents.org

Writer - ರಿಶಿ ಆನಂದ್

contributor

Editor - ರಿಶಿ ಆನಂದ್

contributor

Similar News