ಮಂಗಳೂರು | ಜೂ.26ರಂದು ಕೆನರಾ ಹೈಸ್ಕೂಲ್ ಅಸೋಸಿಯೇಶನ್‌ನಿಂದ ಗುರುನಮನ

Update: 2022-06-23 07:02 GMT

ಮಂಗಳೂರು, ಜೂ.23: ಶತಮಾನ ಪರಂಪರೆಯ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟವಾದ ‘ಗುರುನಮನ’ ಕಾರ್ಯಕ್ರಮವನ್ನು ಜೂ.26ರಂದು ಬೆಳಗ್ಗೆ 9:30ಕ್ಕೆ ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಸಂಸ್ಥೆಯ ಹಳೆ ವಿದ್ಯಾರ್ಥಿ, ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆನರಾ ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿಗಳು ಮತ್ತು ಸಂಸ್ಥೆಗಳ ವಿವಿಧ ಸಂಘಗಳ ಸಹಯೋಗದಲ್ಲಿ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ನಡೆಸಲಿದ್ದೇವೆ. ಸುಮಾರು ನೂರಕ್ಕೂ ಅಧಿಕ ಶಿಕ್ಷಕರು, ಶಿಕ್ಷಕರೇತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಸಂಸ್ಥೆಯಲ್ಲಿ ಈಗ ಲಭ್ಯವಿರುವ ದಾಖಲೆಗಳನ್ನು ಆದರಿಸಿ ಆಮಂತ್ರಣ ಪತ್ರ ನೀಡಲಾಗಿದೆ. ದಾಖಲೆಗಳ ಪ್ರಕಾರ ನಿವೃತ್ತ ಶಿಕ್ಷಕಿ 84 ವರ್ಷದ ಮಾಲತಿ ಎಂಬವರು ಅತ್ಯಂತ ಹಿರಿಯರು ಎಂದು ನಾವು ಗುರುತಿಸಿದ್ದೇವೆ. ಅವರು ಸಹಿತ ಬಹುತೇಕರು ನಮ್ಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದರಂತೆ ಸಂಸ್ಥೆಯ ಹಳೆ ವಿದ್ಯಾರ್ಥಿಗಳು ಕೂಡಾ ಭಾಗವಹಿಸಬೇಕು ಎಂದು ಅವರು ತಿಳಿಸಿದ್ದಾರೆ.

ಸಂಸ್ಥೆಯ ಹಳೆ ವಿದ್ಯಾರ್ಥಿ ಗೋಪಾಲಕೃಷ್ಣ ಭಟ್ ಮಾತನಾಡಿ, ನಮ್ಮ ಸ್ವಯಂಸೇವಕರು ಕಾರ್ಯಕ್ರಮಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮ ಶಿಕ್ಷಣ ಕ್ಷೇತ್ರದಲ್ಲಿ ಒಂದು ವಿನೂತನ ಕಾರ್ಯಕ್ರಮ ಆಗಲಿದೆ ಎಂಬ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.

ಕೆನರಾ ಹೈಸ್ಕೂಲ್ ಅಸೋಸಿಯೇಶನ್‌ನ ಗೌರವ ಕಾರ್ಯದರ್ಶಿ ರಂಗನಾಥ್ ಭಟ್, ಹಳೆ ವಿದ್ಯಾರ್ಥಿ ಸುಧೀರ್ ಭಕ್ತ, ಕೆನರಾ ಹೈಸ್ಕೂಲ್ ಅಸೋಸಿಯೇಶನ್‌ನ ಪಿಆರ್‌ಒ ಉಜ್ವಲ ಮಲ್ಯ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News