ಯುನಿವೆಫ್ ಕುದ್ರೋಳಿ ವತಿಯಿಂದ ಇಲ್ಹಾಮ್ ರಫೀಕ್ ಗೆ ಸನ್ಮಾನ

Update: 2022-06-23 13:29 GMT

ಮಂಗಳೂರು : ಯುನಿವೆಫ್ ಕರ್ನಾಟಕ ಎಜುಕೇಶನ್ ಫೋರಂ ನ ಕುದ್ರೋಳಿ ಶಾಖೆಯ ವತಿಯಿಂದ ೨೦೨೧ ನೇ ಸಾಲಿನ ಪಿ.ಯು.ಸಿ. ಪರೀಕ್ಷೆಯಲ್ಲಿ 99.5% ಅಂಕಗಳೊಂದಿಗೆ ಕರ್ನಾಟಕ ರಾಜ್ಯಕ್ಕೇ 2ನೇ ಸ್ಥಾನ ಪಡೆದ ಕುದ್ರೋಳಿಯ ಮುಹಮ್ಮದ್ ರಫೀಕ್ ಮತ್ತು ಮೊಯಿಝತುಲ್ ಕುಬ್ರಾ ದಂಪತಿಯ ಪುತ್ರಿ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ಇಲ್ಹಾಮ್ ರಫೀಕ್ ರನ್ನು ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.

ಕುದ್ರೋಳಿ ಕಾರ್ಪೋರೇಟರ್ ಶಂಸುದ್ದೀನ್ ರವರು ಇಲ್ಹಾಮ್ ರ ಸಾಧನೆ ಕುದ್ರೋಳಿಗೊಂದು ಹೆಮ್ಮೆಯ ಕಿರೀಟ ಎಂದು ಶ್ಲಾಘಿಸಿದರು. ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮಾತನಾಡಿ, ಮುಸ್ಲಿಮ್ ಸಮುದಾಯದ ಶಿಕ್ಷಣ ಮಟ್ಟ ಸುಧಾರಣೆ ಹಾಗೂ ಆ ಮೂಲಕ ಸಾಮಾಜಿಕ ಪರಿವರ್ತನೆ ಯುನಿವೆಫ್ ಕರ್ನಾಟಕದ ಗುರಿ. ಇಲ್ಹಾಮ್ ರಂಥ ವಿದ್ಯಾರ್ಥಿಗಳು ಈ ಸಮುದಾಯದ ಆಶಾಕಿರಣ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಇಲ್ಹಾಮ್ "ನಿರಂತರ ಪ್ರಯತ್ನ, ಆತ್ಮವಿಶ್ವಾಸ ಮತ್ತು ದೇವರ ಮೇಲಿನ ಅಚಲ ವಿಶ್ವಾಸ ಇವು ನನ್ನ ಯಶಸ್ಸಿನ ಸೂತ್ರ. ಸಾಧನೆಯ ಹಾದಿಯಲ್ಲಿ ನನ್ನ ಹೆತ್ತವರ ಮತ್ತು ಶಿಕ್ಷಕರ ಸತತ ಬೆಂಬಲ ನನಗೆ ಪ್ರೇರಣೆ" ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯ ತಂದೆ ಮುಹಮ್ಮದ್ ರಫೀಕ್, ತಾತ ಜನಾಬ್ ಅಮೀರುದ್ದೀನ್, ಕುದ್ರೋಳಿ ಶಾಖಾ ಅಧ್ಯಕ್ಷ ವಕಾಝ್ ಅರ್ಶಲನ್ ಉಪಸ್ಥಿತರಿದ್ದರು.

ಸಯೀದ್ ಅಹ್ಮದ್ ಕಿರ್ ಅತ್ ಪಠಿಸಿದರು. ಕಾರ್ಯದರ್ಶಿ ಸೈಫುದ್ದೀನ್ ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News