ರಾಷ್ಟ್ರಪತಿ, ಪ್ರಧಾನಿ ಬಂದರಷ್ಟೇ ರಸ್ತೆ ದುರಸ್ತಿ ಕೈಗೊಳ್ಳುತ್ತೀರಾ?: ಬಿಡಿಎ ವಿರುದ್ಧ ಹೈಕೋರ್ಟ್ ಅಸಮಾಧಾನ

Update: 2022-06-23 15:40 GMT
ಫೈಲ್ ಚಿತ್ರ

ಬೆಂಗಳೂರು, ಜೂ.23: ಬೆಂಗಳೂರಿಗೆ ಪ್ರಧಾನಮಂತ್ರಿ, ರಾಷ್ಟ್ರಪತಿ ಬಂದರಷ್ಟೇ ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳುತ್ತೀರಾ? ಅವರು ಬರಲಿಲ್ಲ ಎಂದರೇ ಸರಿಪಡಿಸುವುದಿಲ್ಲವಾ? ಎಂದು ಪ್ರಶ್ನಿಸಿರುವ ಹೈಕೋರ್ಟ್, ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ(ಬಿಡಿಎ)ದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಜತೆಗೆ ನ್ಯಾಯಾಲಯದ ಆದೇಶಕ್ಕೆ ಬೆಲೆ ಕೊಡುವುದನ್ನೂ ಅರಿಯಿರಿ ಎಂದು ಕಿವಿಮಾತು ಹೇಳಿದೆ.

ವಿಶ್ವೇಶ್ವರಯ್ಯ ಬಡಾವಣೆ ನಿವೇಶನಕ್ಕೆ ಮೂಲ ಸೌಕರ್ಯ ಕಲ್ಪಿಸದ ಹಿನ್ನೆಲೆ ಪಿ.ಶಾರದಮ್ಮ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ವಿಭಾಗೀಯ ನ್ಯಾಯಪೀಠ, ನಗರದ ರಸ್ತೆ ಗುಂಡಿಗಳನ್ನು ತಕ್ಷಣವೇ ಮುಚ್ಚಬೇಕೆಂದು ಆದೇಶ ಮಾಡಿದರೂ ಹಲವು ನೆಪಗಳನ್ನು ಹೇಳಿ ಸುಮ್ಮನಾಗುತ್ತೀರಿ. ಆದರೆ, ಜೂ.20ರಂದು ನಗರಕ್ಕೆ ಪ್ರಧಾನಿಗಳು ಬರುತ್ತಾರೆ ಎಂದು ತಿಳಿದ ತಕ್ಷಣವೇ 23 ಕೋಟಿ ರೂ.ಖರ್ಚು ಮಾಡಿ ರಸ್ತೆಗಳನ್ನು ದುರಸ್ತಿಗೊಳಿಸಿದ್ದೀರಿ. ಪ್ರತಿಬಾರಿ ಬೇರೆ ಬೇರೆ ಮಾರ್ಗವಾಗಿ ಪ್ರಧಾನಿ ಬಂದರೆ ಉತ್ತಮ. ಅವರ ಸಂತೃಪ್ತಿಗಾದರೂ ರಸ್ತೆಗಳನ್ನು ದುರಸ್ತಿಗೊಳಿಸಬಹುದು ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ. 

ಪ್ರಧಾನಿ ಮೋದಿ ಅವರ ಭೇಟಿಯ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿಗಾಗಿ ಬಿಡಿಎ ಕೋಟ್ಯಂತರ ರೂ.ಖರ್ಚು ಮಾಡಿದ್ದು, ಕಳಪೆ ಕಾಮಗಾರಿಯಿಂದಾಗಿ ರಸ್ತೆ ಕೇವಲ ಮೂರೇ ದಿನಕ್ಕೆ ಕಿತ್ತುಹೋಗಿದೆ. ವಿಶ್ವೇಶ್ವರಯ್ಯ ಬಡಾವಣೆ ನಿವೇಶನಕ್ಕೆ 2 ವಾರದಲ್ಲಿ ಸೌಕರ್ಯ ಒದಗಿಸಿ ಎಂದು ಬಿಡಿಎಗೆ ನ್ಯಾಯಪೀಠವು ಸೂಚನೆ ನೀಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News