×
Ad

ಬೆಂಗಳೂರು: ಶೈಕ್ಷಣಿಕ ಸಂಸ್ಥೆಗಳ ಮೇಲೆ ಐಟಿ ದಾಳಿ

Update: 2022-06-23 23:03 IST

ಬೆಂಗಳೂರು, ಜೂ.23: ತೆರಿಗೆ ಪಾವತಿಸದೇ ವಂಚಿಸಿದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ಬೆಂಗಳೂರಿನ ಕೆಲ ಪ್ರತಿಷ್ಠಿತ ಖಾಸಗಿ ಶೈಕ್ಷಣಿಕ ಸಂಸ್ಥೆಗಳು ಸೇರಿ ಅದರ ಆಡಳಿತ ಮಂಡಳಿಯ ಸದಸ್ಯರ ಮನೆಗಳ ಮೇಲೂ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. 

ಬಾಗಲೂರಿನಲ್ಲಿರುವ ರೇವಾ ಶಿಕ್ಷಣ ಸಂಸ್ಥೆ, ದಿವ್ಯಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್, ಹುಣಸಮಾರಹಳ್ಳಿಯ ಕೃಷ್ಣದೇವರಾಯ ಇನ್ಸ್ಟಿಟ್ಯೂಷನ್ ಸೇರಿ ಸರ್ಚ್ ವಾರೆಂಟ್ ಪಡೆದು 70ಕ್ಕೂ ಹೆಚ್ಚು ಕಡೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.

ವಿದ್ಯಾ ಸಂಸ್ಥೆಗಳು ಅಷ್ಟೇ ಅಲ್ಲದೇ ಶೈಕ್ಷಣಿಕ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರ ಮನೆ ಮೇಲೂ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ. ಸುಮಾರು ಎಪ್ಪತ್ತು ವಾಹನಗಳಲ್ಲಿ ಬಂದ ಕರ್ನಾಟಕ ಗೋವಾ ವಲಯದ 250ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಶಿಕ್ಷಣ ಸಂಸ್ಥೆಗಳಿಗೆ ಶಾಕ್ ನೀಡಿದ್ದಾರೆ. ದಾಳಿ ಕುರಿತಂತೆ ಹೆಚ್ಚಿನ ವಿವರ ನೀಡಲು ಐಟಿ ಅಧಿಕಾರಿಗಳು ನಿರಾಕರಿಸಿದ್ದಾರೆ.

ವಿದೇಶಿ ವಿದ್ಯಾರ್ಥಿಗಳಿಂದ ನಿಗದಿಗಿಂತ ಹೆಚ್ಚಿನ ಶುಲ್ಕ ಸಂಗ್ರಹ ಮಾಡಿರುವುದು, ಸರಕಾರದ ನಿಯಮಾವಳಿಗಳನ್ನು ಮೀರಿ ಪೇಮೆಂಟ್ ಕೋಟಾ ಸೀಟ್‍ಗಳನ್ನು ಮ್ಯಾನೇಜ್‍ಮೆಂಟ್‍ಗಳು ಬ್ಲಾಂಕಿಂಗ್ ಮಾಡಿ ಹೆಚ್ಚಿಸಿರುವ ಆರೋಪಗಳ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.

ಇದಲ್ಲದೇ ಅಕ್ರಮವಾಗಿ ಸಂಗ್ರಹಿಸಲಾದ ಹಣದ ಮಾಹಿತಿ ಐಟಿಗೆ ಒದಗಿಸದೆ ತೆರಿಗೆ ವಂಚನೆ ಮಾಡಿರುವ ದಾಖಲೆ ಪತ್ರಗಳ ಪರಿಶೀಲನೆ ನಡೆಸಲಾಗಿದೆ. ಕೆಲ ದಿನಗಳ ಹಿಂದಷ್ಟೇ  ಐಟಿ ಅಧಿಕಾರಿಗಳು ಎಂಬೆಸ್ಸಿ ಗ್ರೂಪ್ ಮೇಲೆ 30ಕ್ಕೂ ಹೆಚ್ಚು ಕಡೆ ಅಲ್ಲದೇ ರಿಯಲ್ ಎಸ್ಟೇಟ್ ಉದ್ಯಮಿಗಳು, ಬಿಲ್ಡರ್ ಗಳ ಮನೆ ಮೇಲೂ ದಾಳಿ ನಡೆಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News