ಸ್ವಚ್ಛತಾ ಕಾರ್ಮಿಕರನ್ನು ಖಾಯಂಗೊಳಿಸುವಂತೆ ಜು.1ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ

Update: 2022-06-23 18:29 GMT

ಬೆಂಗಳೂರು, ಜೂ.23: ಸ್ವಚ್ಛತಾ ಕಾರ್ಮಿಕರನ್ನು ಖಾಯಂಗೊಳಿಸಲು ಹಾಗೂ ಅವರ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಜು.1ರಿಂದ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಸಫಾಯಿ ಕರ್ಮಚಾರಿ ಪೌರ ಕಾರ್ಮಿಕರ ಸಂಘಟನೆಗಳ ಜಂಟಿ ಹೋರಾಟ ಸಮಿತಿ ಕರೆ ನೀಡಿದೆ. 

ಗುರುವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಸಮಿತಿಯ ರಾಜ್ಯಾಧ್ಯಕ್ಷ ಮೈಸೂರು ನಾರಾಯಣ ಅವರು, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಾದ ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಸ್ವಚ್ಛತಾ ಕೆಲಸವನ್ನು ಹೊರ ಗುತ್ತಿಗೆಗೆ ನೀಡಲಾಗಿದೆ. ಗುಲಾಮಿ ಪದ್ಧತಿಯಿಂದ ಕಾರ್ಮಿಕರು ನಿರಂತರವಾಗಿ ಷೋಷಣೆಗೆ ಒಳಗಾಗಿದ್ದಾರೆ. ಹಾಗಾಗಿ ಈ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ, ಎಲ್ಲಾ ಕಾರ್ಮಿಕರನ್ನು ಖಾಯಂ ಮಾಡಬೇಕು ಎಂದು ಆಗ್ರಹಿಸಿದರು. 

2016-17ರಲ್ಲಿ ಕಾಂಗ್ರೆಸ್ ಸರಕಾರವು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಗುತ್ತಿಗೆ ಪದ್ಧತಿ ರದ್ದುಪಡಿಸಿ ಎಲ್ಲಾ ಸ್ವಚ್ಛತಾ ಕಾರ್ಮಿಕರನ್ನು ಖಾಯಂ ಮಾಡುವ ನಿರ್ಣಯ ತೆಗೆದುಕೊಂಡಿತು. ಆದರೆ ಪೌರಾಡಳಿತ ನಿರ್ದೇಶನಾಲಯದ ಅಧಿಕಾರಿಗಳು, ಸಚಿವ ಸಂಪುಟದ ನಿರ್ಣಯವನ್ನು ಯಥಾವತ್ತಾಗಿ ಅನುಷ್ಠಾನ ಮಾಡಲಿಲ್ಲ. ಆದರೆ ಪೌರಕಾರ್ಮಿಕರ ಬದುಕುಗಳನ್ನು ನಾಶ ಮಾಡುವಂತಹ ನಿಯಮಗಳನ್ನು ಜಾರಿ ಮಾಡಿದರು. ಆ ನಿಯಮಗಳ ಅಡಿಯಲ್ಲಿ ಕಸ ಗುಡಿಸುವವರು, ಕಸವನ್ನು ಮನೆಗಳಿಂದ ಸಂಗ್ರಹಿಸುವವರು, ಟ್ರಾಕ್ಟರ್-ಲಾರಿ ಅಥವಾ ಆಟೋಗಳಿಗೆ ತುಂಬುವವರನ್ನು ಲೋಡರ್, ಕಸ ಸಾಗಿಸುವವರನ್ನು ಚಾಲಕರು, ಮತ್ತು ಒಳಚರಂಡಿಗಳಲ್ಲಿ ಸ್ವಚ್ಛ ಮಾಡುವವರು ಯು.ಜಿ.ಡಿ ವರ್ಕರ್  ಎಂದು ಕಾರ್ಮಿಕರನ್ನು ವಿಂಗಡಿಸಲಾಗಿದೆ. ಈ ವಿಂಗಡಣೆಯ ಅನುಸಾರ ಅಧಿಕಾರಿಗಳು ಪೊರಕೆ ಹಿಡಿದು ಕಸ ಗುಡಿಸುವವರನ್ನು ಮಾತ್ರ ಪೌರಕಾರ್ಮಿಕರೆಂದು ಪರಿಗಣಿಸಿ ಬೇರೆ ಕಾರ್ಮಿಕರನ್ನು ಪ್ರತ್ಯೇಕಗೊಳಿಸಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. 

ಹಾಗೆಯೇ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಮಹಿಳಾ ಕಾರ್ಮಿಕರಿಗೆ ಶೌಚಾಲಯ, ಕುಡಿಯುವ ನೀರು, ಹೆರಿಗೆ ರಜೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಕಾರ್ಮಿಕರಿಗಾಗಿ ಜಾರಿಮಾಡುವ ಗೃಹಭಾಗ್ಯ ಯೋಜನೆಯನ್ನು ಎಲ್ಲಾ ಪೌರಕಾರ್ಮಿಕರಿಗೆ ಸಿಗುವಂತೆ ನೋಡಿಕೊಳ್ಳಬೇಕು. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣಕಾಸಿನ ನೆರವನ್ನು ನೀಡಬೇಕು. 60 ವರ್ಷ ನಂತರ ನಿವೃತ್ತಿಯಾಗುವ ಸ್ವಚ್ಛತಾ ಕಾರ್ಮಿಕರಿಗೆ 10 ಲಕ್ಷ ಪರಿಹಾರ ನೀಡಬೇಕು ಮತ್ತು ಮಾಸಿಕ 5 ಸಾವಿರ ಪಿಂಚಣಿ ಕೊಡಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News