ಏಕನಾಥ್ ಶಿಂದೆ ಪಕ್ಷಾಂತರ ನಿಷೇಧ ಕಾಯ್ದೆಯಿಂದ ಹೇಗೆ ಪಾರಾಗಬಹುದು?

Update: 2022-06-24 06:31 GMT

ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ವಿರುದ್ಧ ಬಂಡಾಯದ ನೇತೃತ್ವ ವಹಿಸಿರುವ ಸಚಿವ ಏಕನಾಥ್ ಶಿಂದೆಯವರು 40 ಶಾಸಕರು ತನ್ನೊಂದಿಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಬಂಡುಕೋರರ ಗುಂಪು 55 ಸದಸ್ಯಬಲದ ಶಿವಸೇನೆ ಶಾಸಕಾಂಗ ಪಕ್ಷದ 33 ಶಾಸಕರನ್ನು ಮತ್ತು ರಾಜ್ಯ ಸರಕಾರವನ್ನು ಬೆಂಬಲಿಸಿರುವ ಏಳು ಪಕ್ಷೇತರ ಶಾಸಕರನ್ನು ಒಳಗೊಂಡಿದೆ ಎಂದು ವರದಿಗಳು ಹೇಳಿವೆ.

ಸಂವಿಧಾನದಡಿ ಪಕ್ಷಾಂತರ ನಿಷೇಧ ಕಾಯ್ದೆಯ ಬಿಸಿಯನ್ನು ತಪ್ಪಿಸಿಕೊಳ್ಳಲು ಬಂಡುಕೋರ ಗುಂಪು ಪಕ್ಷದ ಒಟ್ಟು ಶಾಸಕರ ಕನಿಷ್ಠ ಮೂರನೇ ಎರಡರಷ್ಟು ಜನರನ್ನು ಒಳಗೊಂಡಿರಬೇಕು.
ಹಾಲಿ 287 ಸದಸ್ಯಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 106 ಶಾಸಕರನ್ನು ಹೊಂದಿದೆ. ಶಿಂದೆಯವರ ಬಂಡಾಯಕ್ಕೆ ಮುನ್ನ ಶಿವಸೇನೆ ಸದನದಲ್ಲಿ 55 ಶಾಸಕರನ್ನು ಹೊಂದಿತ್ತು. ಎನ್‌ಸಿಪಿಯ 53 ಮತ್ತು ಕಾಂಗ್ರೆಸ್‌ನ 44 ಶಾಸಕರು ಸೇರಿಕೊಂಡು ಆಡಳಿತ ಮಹಾ ವಿಕಾಸ್ ಅಘಾಡಿ (ಎಂವಿಎ)ಯ ಬಲವನ್ನು 152ಕ್ಕೆ ಹೆಚ್ಚಿಸಿದ್ದರು.

ಏನಿದು ಪಕ್ಷಾಂತರ ನಿಷೇಧ ಕಾಯ್ದೆ ಮತ್ತು ಏನದರ ಉದ್ದೇಶ?
 ಪಕ್ಷಾಂತರ ನಿಷೇಧ ಕಾಯ್ದೆಯು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಜಿಗಿಯುವ ವ್ಯಕ್ತಿಗತ ಸಂಸದರು/ಶಾಸಕರನ್ನು ದಂಡಿಸುತ್ತದೆ. ಅದು ಪಕ್ಷಾಂತರಕ್ಕಾಗಿ ದಂಡನೆಯನ್ನು ಆಹ್ವಾನಿಸದೆ ಸಂಸದರು/ಶಾಸಕರ ಗುಂಪು ಇನ್ನೊಂದು ರಾಜಕೀಯ ಪಕ್ಷದಲ್ಲಿ ವಿಲೀನಗೊಳ್ಳಲು ಅವಕಾಶ ನೀಡುತ್ತದೆ. ಪಕ್ಷಾಂತರಕ್ಕೆ ಉತ್ತೇಜಿಸಿದ್ದಕ್ಕಾಗಿ ಅಥವಾ ಪಕ್ಷಾಂತರಿ ಶಾಸಕರನ್ನು ಸೇರಿಸಿಕೊಂಡಿದ್ದಕ್ಕಾಗಿ ರಾಜಕೀಯ ಪಕ್ಷಗಳನ್ನು ಈ ಕಾಯ್ದೆಯು ದಂಡಿಸುವುದಿಲ್ಲ. 1985ರಲ್ಲಿ ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗ ಸಂಸತ್ತು ಸಂವಿಧಾನದ 10ನೇ ಪರಿಚ್ಛೇದಕ್ಕೆ ಈ ನಿಬಂಧನೆಗಳನ್ನು ಸೇರಿಸಿತ್ತು.
ಶಾಸಕರು ಪಕ್ಷನಿಷ್ಠೆಯನ್ನು ಬದಲಿಸುವುದನ್ನು ನಿರುತ್ತೇಜಿಸುವ ಮೂಲಕ ಸರಕಾರಗಳಿಗೆ ಸ್ಥಿರತೆಯನ್ನು ತರುವುದು ಪಕ್ಷಾಂತರ ನಿಷೇಧ ಕಾಯ್ದೆಯ ಉದ್ದೇಶವಾಗಿದೆ. 1967ರ ಸಾರ್ವತ್ರಿಕ ಚುನಾವಣೆಗಳ ಬಳಿಕ ಪಕ್ಷಾಂತರಿ ಶಾಸಕರಿಂದಾಗಿ ಹಲವಾರು ರಾಜ್ಯ ಸರಕಾರಗಳು ಉರುಳಿದ್ದ ಹಿನ್ನೆಲೆಯಲ್ಲಿ ಈ ಕಾಯ್ದೆಯನ್ನು ತರಲಾಗಿತ್ತು.

ಯಾವುದು ಪಕ್ಷಾಂತರ? ನಿರ್ಧರಿಸುವ ಅಧಿಕಾರಿ ಯಾರು?
ಕಾಯ್ದೆಯು ಮೂರು ಸನ್ನಿವೇಶಗಳನ್ನು ಒಳಗೊಂಡಿದೆ.
ಮೊದಲನೆಯದು ರಾಜಕೀಯ ಪಕ್ಷವೊಂದರ ಟಿಕೆಟ್‌ನಲ್ಲಿ ಆಯ್ಕೆಯಾದ ಶಾಸಕರು ಸ್ವಯಂಪ್ರೇರಿತರಾಗಿ ಆ ಪಕ್ಷದ ಸದಸ್ಯತ್ವವನ್ನು ತೊರೆದಾಗ ಅಥವಾ ಸದನದಲ್ಲಿ ಪಕ್ಷದ ಆದೇಶಕ್ಕೆ ವಿರುದ್ಧವಾಗಿ ಮತ ಚಲಾಯಿಸಿದಾಗ.
10ನೇ ಪರಿಚ್ಛೇದವು ಮೂಲದಲ್ಲಿ ಪಕ್ಷದ ಒಟ್ಟು ಬಲದ ಮೂರನೇ ಒಂದಕ್ಕಿಂತ ಕಡಿಮೆ ಶಾಸಕರು ಪಕ್ಷದಿಂದ ಪ್ರತೇಕವಾದ ಅಥವಾ ಶಾಸಕಾಂಗ ಪಕ್ಷದ ಮೂರನೇ ಎರಡಕ್ಕಿಂತ ಕಡಿಮೆ ಶಾಸಕರು ಇನ್ನೊಂದು ಪಕ್ಷದಲ್ಲಿ ವಿಲೀನಗೊಂಡ ಪ್ರಕರಣಗಳಲ್ಲಿ ಶಾಸಕರನ್ನು ಅನರ್ಹಗೊಳಿಸುವ ನಿಬಂಧನೆಯನ್ನು ಹೊಂದಿತ್ತು. 2003ರಲ್ಲಿ ತಿದ್ದುಪಡಿಯನ್ನು ತಂದು ಮೂರನೇ ಒಂದರಷ್ಟು ಪ್ರತ್ಯೇಕತೆಯ ನಿಯಮವನ್ನು ತೆಗೆದುಹಾಕಲಾಗಿತ್ತು.
ಎರಡನೇ ಸನ್ನಿವೇಶವು ಸದನಕ್ಕೆ ಪಕ್ಷೇತರನಾಗಿ ಆಯ್ಕೆಯಾದ ಸಂಸದ/ಶಾಸಕ ಬಳಿಕ ರಾಜಕೀಯ ಪಕ್ಷವೊಂದನ್ನು ಸೇರಿದಾಗ ಉದ್ಭವಿಸುತ್ತದೆ.
ಮೂರನೇ ಸನ್ನಿವೇಶವು ನಾಮಕರಣ ಗೊಂಡ ಶಾಸಕರಿಗೆ ಸಂಬಂಧಿಸಿದೆ. ಇಂತಹ ಶಾಸಕರ ಪ್ರಕರಣದಲ್ಲಿ, ಅವರು ಸದನಕ್ಕೆ ನೇಮಕಗೊಂಡ ಆರು ತಿಂಗಳೊಳಗೆ ರಾಜಕೀಯ ಪಕ್ಷವನ್ನು ಸೇರಬೇಕು ಮತ್ತು ನಂತರ ಸೇರುವಂತಿಲ್ಲ ಎಂದು ಕಾಯ್ದೆಯು ನಿರ್ದಿಷ್ಟಪಡಿಸಿದೆ.
ಈ ಯಾವುದೇ ಸನ್ನಿವೇಶಗಳಲ್ಲಿ ಕಾಯ್ದೆಯ ಉಲ್ಲಂಘನೆಯು ಪಕ್ಷಾಂತರಕ್ಕಾಗಿ ಶಾಸಕನ ದಂಡನೆಗೆ ಕಾರಣವಾಗುತ್ತದೆ. ಶಾಸಕಾಂಗ ಸದನಗಳ ಅಧ್ಯಕ್ಷರು (ಸ್ಪೀಕರ್, ಸಭಾಪತಿ) ಇಂತಹ ಪ್ರಕರಣಗಳನ್ನು ನಿರ್ಧರಿಸುವ ಅಧಿಕಾರವನ್ನು ಹೊಂದಿರುತ್ತಾರೆ.
ಶಾಸಕರು ಸ್ಪೀಕರ್ ಅಥವಾ ಸಭಾಪತಿಗಳ ನಿರ್ಧಾರಗಳನ್ನು ಉನ್ನತ ನ್ಯಾಯಾಲಯಗಳಲ್ಲಿ ಪ್ರಶ್ನಿಸಬಹುದು ಎನ್ನುವುದನ್ನು ಸರ್ವೋಚ್ಚ ನ್ಯಾಯಾಲಯವು ಎತ್ತಿಹಿಡಿದಿದೆ.

ಪಕ್ಷಾಂತರ ನಿಷೇಧ ಕಾಯ್ದೆಯು ಸರಕಾರಗಳ ಸ್ಥಿರತೆಯನ್ನು ಖಚಿತಪಡಿಸಿದೆಯೇ?
ಅಷ್ಟೇನೂ ಇಲ್ಲ.
ತಮ್ಮ ಶಾಸಕರು ನಿಷ್ಠೆ ಬದಲಿಸುವುದನ್ನು ಅಥವಾ ವಿರೋಧಿ ಪಕ್ಷದ ಅಥವಾ ತನ್ನದೇ ಪಕ್ಷದ ವಿರೋಧಿ ಬಣದ ಪಾಲಾಗುವುದನ್ನು ತಡೆಯಲು ಪಕ್ಷಗಳು ಅವರನ್ನು ರೆಸಾರ್ಟ್‌ಗಳಲ್ಲಿ ಪ್ರತ್ಯೇಕವಾಗಿ ಇರಿಸಿದ್ದ ಹಲವಾರು ನಿದರ್ಶನಗಳಿವೆ.
ಹಾಲಿ ಪ್ರಕರಣದಲ್ಲಿ ಶಿಂದೆಯವರು ಶಾಸಕರನ್ನು ಮೊದಲು ಗುಜರಾತಿಗೆ ಮತ್ತು ನಂತರ ಅಸ್ಸಾಮಿಗೆ ಕರೆದುಕೊಂಡು ಹೋಗಿದ್ದಾರೆ. ಇವೆರಡೂ ಬಿಜೆಪಿ ಆಡಳಿತದ ರಾಜ್ಯಗಳಾಗಿವೆ.

ಪಕ್ಷಾಂತರ ನಿಷೇಧ ಕಾಯ್ದೆಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲೂ ಪಕ್ಷಗಳಿಗೆ ಸಾಧ್ಯವಿದೆ.
2019ರಲ್ಲಿ ಗೋವಾದಲ್ಲಿ ಕಾಂಗ್ರೆಸ್‌ನ 15 ಶಾಸಕರ ಪೈಕಿ 10 ಶಾಸಕರು ತಮ್ಮ ಶಾಸಕಾಂಗ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು. ಅದೇ ವರ್ಷ ರಾಜಸ್ಥಾನದಲ್ಲಿ ಬಿಎಸ್‌ಪಿಯ ಆರು ಶಾಸಕರು ತಮ್ಮ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ಮತ್ತು ಸಿಕ್ಕಿಮ್‌ನಲ್ಲಿ ಸಿಕ್ಕಿಮ್ ಡೆಮಾಕ್ರಟಿಕ್ ಫ್ರಂಟ್‌ನ 15 ಶಾಸಕರ ಪೈಕಿ 10 ಶಾಸಕರು ಬಿಜೆಪಿಯನ್ನು ಸೇರಿದ್ದರು.

ಕಾಯ್ದೆಯ ಸುಧಾರಣೆಗೆ ಸಲಹೆಗಳನ್ನು ನೀಡಲಾಗಿದೆಯೇ?
ಕಾಯ್ದೆಯು ವಿಫಲಗೊಂಡಿದೆ ಎಂದು ಹೇಳಿರುವ ಕೆಲವು ವ್ಯಾಖ್ಯಾನಕಾರರು, ಅದನ್ನು ತೆಗೆದುಹಾಕುವಂತೆ ಶಿಫಾರಸು ಮಾಡಿದ್ದಾರೆ.
ಅವಿಶ್ವಾಸ ಸೂಚನೆಗಳಲ್ಲಿ ಸರಕಾರಗಳನ್ನು ರಕ್ಷಿಸಲು ಮಾತ್ರ ಈ ಕಾಯ್ದೆಯ ಬಳಕೆಯಾಗಬೇಕು ಎಂದು ಮಾಜಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಸೂಚಿಸಿದ್ದಾರೆ. ಹೆಚ್ಚಿನ ಸಲ ತಾರತಮ್ಯ ಧೋರಣೆಯನ್ನು ವಹಿಸುವ ಸದನಗಳ ಅಧ್ಯಕ್ಷರು ಪಕ್ಷಾಂತರ ಪ್ರಕರಣಗಳನ್ನು ನಿರ್ಧರಿಸುವ ಅಧಿಕಾರಿಗಳಾಗಬಾರದು ಎಂದು ಚುನಾವಣಾ ಆಯೋಗವು ಸಲಹೆ ನೀಡಿದೆ.
ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರು ಪಕ್ಷಾಂತರ ಪ್ರಕರಣಗಳ ವಿಚಾರಣೆ ನಡೆಸಬೇಕೆಂದು ಇತರ ಕೆಲವರು ವಾದಿಸಿದ್ದಾರೆ.
ಪಕ್ಷಾಂತರ ಪ್ರಕರಣಗಳನ್ನು ಚುರುಕಾಗಿ ಮತ್ತು ನಿಷ್ಪಕ್ಷವಾಗಿ ನಿರ್ಧರಿಸಲು ಉನ್ನತ ನ್ಯಾಯಾಂಗದ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಧಿಕರಣವೊಂದನ್ನು ಸಂಸತ್ತು ಸ್ಥಾಪಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಕಳೆದ ವರ್ಷ ಹೇಳಿತ್ತು.

 ಕೃಪೆ: indianexpress.com

Writer - ಚಕ್ಷು ರಾಯ್

contributor

Editor - ಚಕ್ಷು ರಾಯ್

contributor

Similar News