ಬುದ್ಧನ ಕಾಲದಿಂದ ಇಂದಿನವರೆಗಿನ ಶೋಷಿತರ ಕಥನ

Update: 2022-06-24 07:15 GMT

ಪ್ರೊ. ಎಚ್.ಟಿ.ಪೋತೆ ಅವರ ಹೊಸ ಕಾದಂಬರಿಯ ಹೆಸರು ‘ಮಹಾಬಿಂದು’. ಹನ್ನೆರಡು ಅಧ್ಯಾಯಗಳಿರುವ ಇಡೀ ಕಾದಂಬರಿ ಫ್ಲ್ಯಾಷ್‌ಬ್ಯಾಕ್ ಹಿನ್ನೆಲೆಯಲ್ಲೇ ನಡೆಯುತ್ತದೆ. ಇಡೀ ಜಗತ್ತು ಕೊರೋನ ಸೋಂಕು ರೋಗದಿಂದ ನರಳುತ್ತಾ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಹಾದುಹೋಗುತ್ತಿದ್ದಾಗ ಕಾದಂಬರಿಯ ಮುಖ್ಯ ಪಾತ್ರದಾರಿ ಪ್ರೊ.ರಾವ್ ಅವರ ಸಹೋದ್ಯೋಗಿ ಕೊರೋನಕ್ಕೆ ತುತ್ತಾಗುತ್ತಾರೆ. ಲಾಕ್‌ಡೌನ್ ಇದ್ದ ಕಾರಣ ಗೆಳೆಯನ ಸಾವಿಗೂ ಹೋಗಲಾರದೇ ರಾವ್ ನೋವಿನಿಂದ ತೊಳಲಾಡುತ್ತಾರೆ. ರಾತ್ರಿ ನಿದ್ದೆ ಬರದೆ ಅರ್ಧ ಓದಿ ಬಿಟ್ಟಿದ್ದ ‘ಬುದ್ಧ ಮತ್ತು ಆತನ ದಮ್ಮ’ ಪುಸ್ತಕ ತೆಗೆದುಕೊಂಡು ಓದಲು ಕುಳಿತುಕೊಳ್ಳುತ್ತಾರೆ. ಮಹಾಬಿಂದು ಕಾದಂಬರಿಯ ಮೊದಲ 35 ಪುಟಗಳಲ್ಲಿ ಬುದ್ಧ ಚರಿತ್ರೆಯ ಸಾರಾಂಶ ಅನಾವರಣಗೊಂಡಿದೆ.

ಕಾಲೇಜ್ ಮುಚ್ಚಿದ್ದ ಕಾರಣ ಮರುದಿನ ರಾವ್ ಬುದ್ಧ ವಿಹಾರದ ಮುಂದೆ ಬಂದು ನಿಂತುಕೊಳ್ಳುತ್ತಾರೆ. ಅಲ್ಲಿ ಅವರಿಗೆ ಸಮಾಜದಲ್ಲಿ ನಡೆಯುವ ತಾರತಮ್ಯಗಳ ಬಗೆಗಿನ ನೂರಾರು ಪ್ರಶ್ನೆಗಳು ಎದುರುಗೊಳ್ಳುತ್ತವೆ. ಮುಖ್ಯವಾಗಿ ಸವರ್ಣೀಯ ಜಾತಿಗಳ ಜನರು ಶೂದ್ರ-ಅತಿಶೂದ್ರ ಜನರ ವಿರುದ್ಧ ನಡೆಸುವ ಜಾತಿ ನಿಂದನೆ, ಅಸ್ಪಶ್ಯತೆ, ಮೇಲು-ಕೀಳು ದಬ್ಬಾಳಿಕೆಗಳು. ರಾವ್ ನಿಧಾನವಾಗಿ ಧ್ಯಾನಮಂದಿರದ ಒಳಗೆ ಬಂದು ಕಣ್ಣುಮುಚ್ಚಿ ಕುಳಿತುಕೊಳ್ಳುತ್ತಾರೆ. ಶಾಂತ ವಾತಾವರಣ, ತಂಪಾದ ಗಾಳಿಯಿಂದಾಗಿ ಅವರಿಗೆ ಮಂಪರು ಬಂದಿದ್ದು ಗೊತ್ತಾಗಲೇ ಇಲ್ಲ. 

ರಾವ್ ಎದುರಿಗೆ ಹೊಸ ಜಗತ್ತೊಂದು ತೆರೆದುಕೊಳ್ಳುತ್ತದೆ... ಇಡೀ ಜಗತ್ತೇ ಕೊರೋನದಿಂದ ತತ್ತರಿಸಿಹೋಗಿರುವ ಸಮಯದಲ್ಲಿ ಚಿಕ್ಕ ಮಕ್ಕಳಿಬ್ಬರು ಎದುರಿಗೆ ಹೆಜ್ಜೆ ಹಾಕುತ್ತಾ ಬರುತ್ತಿದ್ದು...ರಾವ್ ಕಣ್ಣರಳಿಸಿ ನೋಡುತ್ತಾರೆ? ಅವರು ಬೇರೆ ಯಾರೂ ಅಲ್ಲ. ತಥಾಗತರು ಮತ್ತು ಆನಂದಭಿಕ್ಕು... ‘ಬುದ್ಧಂ ಶರಣಂ ಗಚ್ಛಾಮಿ, ದಮ್ಮಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ’, ತ್ರಿಸರಣ ಪಂಚಶೀಲದ ದನಿ ಅನುರಣನಗೊಳ್ಳುತ್ತದೆ. ಇಬ್ಬರೂ ರಾವ್ ಮುಂದೆ ಬಂದು ನಿಂತುಕೊಳ್ಳುತ್ತಾರೆ... ರಾವ್ ಮತ್ತು ತಥಾಗತ-ಆನಂದನ ನಡುವೆ ಸುದೀರ್ಘ ಪ್ರಶ್ನೆಗಳು...ಉತ್ತರಗಳು ಒಂದು ಅನುಸಂಧಾನ ರೂಪದಲ್ಲಿ ನಡೆಯುತ್ತದೆ. ಬುದ್ಧಚರಿತೆ... ಸಾಮ್ರಾಟ್ ಅಶೋಕನು ಕಳಿಂಗ ಯುದ್ಧದ ನಂತರ ಅಹಿಂಸಾವಾದಿಯಾಗಿ ತಾನಾಳುತ್ತಿದ್ದ ಪ್ರದೇಶಗಳಲ್ಲೆಲ್ಲ ಬೌದ್ಧ ಸ್ತೂಪಗಳನ್ನು ಕಟ್ಟಿಸಿದ್ದು, ಮೌರ್ಯ ವಂಶದ ಬೌದ್ಧ ಚಕ್ರವರ್ತಿ ಬೃಹದೃಥನಲ್ಲಿ ದಂಡಾಧಿಕಾರಿಯಾಗಿದ್ದ ಪುಷ್ಯಮಿತ್ರ ಶುಂಗ ಎನ್ನುವ ಬ್ರಾಹ್ಮಣ ಬೃಹದ್ರಥನನ್ನು ಕೊಲೆ ಮಾಡಿದ್ದು... ಪೇಶ್ವೆಗಳ ಅಟ್ಟಹಾಸ, ಪೇಶ್ವೆಗಳನ್ನು ಸೋಲಿಸಿದ ಮಹಾರ್ ಬೆಟಾಲಿಯನ್‌ನ ಸಿದ್ಧನಾಕನ ವಿಷಯ ಬರುತ್ತವೆ. ಆಶೋಕನು ತನ್ನ ಮಕ್ಕಳಾದ ಮಹೀಂದ್ರ ಮತ್ತು ಸಂಘಮಿತ್ರೆಯರನ್ನು ಶ್ರೀಲಂಕಾಗೆ ದಮ್ಮ ಪ್ರಸಾರಕ್ಕಾಗಿ ಕಳಿಸಿದ್ದು, ಶ್ರೀಲಂಕಾದ ರಾಜ ದೇವನಾಂಪ್ರಿಯ ತಿಸ್ಸನು ನಲವತ್ತು ಸಾವಿರ ಅನುಯಾಯಿಗಳೊಂದಿಗೆ ಬೌದ್ಧ ದಮ್ಮಕ್ಕೆ ಪರಿವರ್ತನೆಯಾದ ವಿಷಯಗಳು ಬರುತ್ತವೆ. 

ನಾಗಾರ್ಜುನ, ಬೌದ್ಧ ವಿಶ್ವವಿದ್ಯಾನಿಲಯಗಳ ಬಗ್ಗೆಯೂ ವಿವರಗಳು ಬರುತ್ತವೆ. ತಥಾಗತನಿಂದ ಅಂಗುಲಿಮಾಲನ ಪರಿವರ್ತನೆ, ಸುನೀತನೆಂಬ ಅಸ್ಪಶ್ಯ ಭಿಕ್ಕುವಾಗಿದ್ದು, ಉಪಾಲಿ ಎಂಬ ಕ್ಷೌರಿಕನನ್ನು ಶಾಕ್ಯರ ಸಂಘಕ್ಕೆ ಸೇರಿಸಿಕೊಂಡಿದ್ದು, ಸಾರಿಪುತ್ರ ಮತ್ತು ಮೊಗ್ಗಲ್ಲಾನ ಎಂಬ ಬ್ರಾಹ್ಮಣ ಯುವಕರು ಬೌದ್ಧ ಭಿಕ್ಕುಗಳಾಗಿದ್ದು, ಮಹಾದೇವನೆಂಬ ಬೌದ್ಧ ಭಿಕ್ಕು ಮಹಿಷಾಮಂಡಲಕ್ಕೆ (ಇಂದಿನ ಮೈಸೂರು ಪ್ರಾಂತ) ಬಂದು ಪ್ರಚಾರ ಮಾಡಿದ ವಿಷಯಗಳು ಬರುತ್ತವೆ. ವಚನಕಾರರ ಅನೇಕ ವಚನಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಹಾಗೆಯೇ ಕಬೀರದಾಸ, ಪುರಂದರದಾಸ, ಕನಕದಾಸ, ಸರ್ವಜ್ಞ ಕೀರ್ತನೆಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ. ಜ್ಯೋತಿಬಾ ಫುಲೆ-ಸಾವಿತ್ರಿಬಾ ಫುಲೆ ಅವರ ಬಗ್ಗೆಯೂ ಉಲ್ಲೇಖಗಳಿವೆ. ಅಂಬೇಡ್ಕರ್ ಅವರ ಹೋರಾಟಗಳ ಬಗ್ಗೆ ಸಂಕ್ಷಿಪ್ತವಾಗಿ ಹೇಳಲಾಗಿದೆ. ಇದೊಂದು ರೀತಿಯಲ್ಲಿ ಬುದ್ಧನ ಕಾಲದಿಂದ ಇಂದಿನವರೆಗಿನ ಶೋಷಿತರ ಕಥೆಯಾಗಿದೆ. ಅದರ ಜೊತೆಜೊತೆಗೆ ಶೋಷಿತರ ಪರವಾಗಿ ಉಚ್ಚಜಾತಿಗಳ ವಿರುದ್ಧ ಹೋರಾಡಿದವರ ಯಶೋಗಾಥೆಗಳೂ ಅನಾವರಣಗೊಂಡಿವೆ.

 ಸ್ವಾತಂತ್ರ್ಯ ಚಳವಳಿಗಳು-ಚಳವಳಿಗಾರರ ಕೊಡುಗೆಯನ್ನೂ ಪ್ರಸ್ತಾಪಿಸಲಾಗಿದೆ. ಕೊರೋನ ಸಮಸ್ಯೆಯಿಂದ ಪ್ರಾರಂಭವಾಗುವ ಕಾದಂಬರಿ ಕೊನೆಯಲ್ಲಿ ಹೀಗೆ ಕೊನೆಗೊಳ್ಳುತ್ತದೆ. ‘ಜಾತಿಯ ಹೆಸರಲ್ಲಿ ವಿದ್ಯೆ ನಿರಾಕರಿಸಿದ್ದಲ್ಲದೆ ಏಕಲವ್ಯನ ಹೆಬ್ಬೆರಳು ತೆಗೆದುಕೊಂಡರು. ಹೆಂಡತಿಯ ಶೀಲ ಶಂಕಿಸಿ ಮಗನಿಂದ ತಾಯಿಯ ಹತ್ಯೆ ಮಾಡಿಸಿದರು. ವಿಪ್ರನ ಮಾತು ಕೇಳಿ ಶಂಬೂಕನ ಜೀವತೆಗೆದರು. ಬೌದ್ಧ ತತ್ವಾನುಯಾಯಿ ಬಲಿ ಚಕ್ರವರ್ತಿಯನ್ನು ರಾಕ್ಷಸ ರಾಜನೆಂದು ಹೇಳಿ ಅವಮಾನಿಸಿ ಕುಟಿಲ ನೀತಿಯಿಂದ ಬಲಿ ಪಡೆದರು. ಬೌದ್ಧ ದಮ್ಮದ ವಿರುದ್ಧ ಕುತಂತ್ರ ಮೆರೆದರು. ಲಿಂಗಾಯಿತ ಧರ್ಮ, ಬಸವ ತತ್ವಗಳು ಸಹ ವಂಚನೆಗೆ ಒಳಗಾದವು. ಗಾಂಧಿ ಹತ್ಯೆಯೂ ಒಂದು ದುರಂತ. ಸಂಗೊಳ್ಳಿ ರಾಯಣ್ಣ, ಸಿಂಧೂರ ಲಕ್ಷ್ಮಣ ಮೋಸಗಾರರ ಕುತಂತ್ರಕ್ಕೆ ಬಲಿಯಾದರು. ಇವೆಲ್ಲ ಬಹುತ್ವವನ್ನು ವಿರೋಧಿಸಿದ ತತ್ವಗಳಲ್ಲದೆ ಮತ್ತೇನು...? ಕಾದಂಬರಿಯಲ್ಲಿ ಮುಖ್ಯವಾಗಿ ಮೂರು ವಿಷಯಗಳನ್ನು ಗಮನಿಸಬಹುದು. ಬುದ್ಧ ಮತ್ತು ಬೌದ್ಧ ದಮ್ಮದ ಬಗೆಗಿನ ಸಾರಾಂಶ, ವಚನ ಸಾಹಿತ್ಯ ಮತ್ತು ಕೆಲವು ಮುಖ್ಯ ವಚನಕಾರರ ವಚನಗಳು. ದೇಶದ ಅಭಿವೃದ್ಧಿಗೆ ಅಂಬೇಡ್ಕರ್ ಅವರ ಕೊಡುಗೆ. ಇದರ ಜೊತೆಗೆ ಇನ್ನೂ ಅನೇಕ ವಿಷಯಗಳು ಕಾದಂಬರಿಯಲ್ಲಿ ಬರುತ್ತವೆ. ಪೋತೆಯವರ ಅಪಾರ ಓದು ಮತ್ತು ಜ್ಞಾನ ಈ ಕೃತಿಯಲ್ಲಿ ಅನಾವರಣಗೊಂಡಿದ್ದು ಓದುಗರೆಲ್ಲ ಗಮನಿಸಬಹುದಾದ ಕೃತಿಯಾಗಿದೆ. ಕೃತಿಗೆ ಹಾದಿಮನಿ ಟಿ.ಎಫ್. ಅವರ ಮುಖಪುಟ ಇನ್ನಷ್ಟು ಮೆರಗು ನೀಡಿದೆ.


ಕೃತಿ: ಮಹಾಬಿಂದು (ಕಾದಂಬರಿ)

ಲೇಖಕರು: ಪ್ರೊ. ಎಚ್.ಟಿ.ಪೋತೆ 

ಮುಖಬೆಲೆ: ಬೆಲೆ-195 ರೂ. 

ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು

Writer - ಡಾ.ಎಂ. ವೆಂಕಟಸ್ವಾಮಿ

contributor

Editor - ಡಾ.ಎಂ. ವೆಂಕಟಸ್ವಾಮಿ

contributor

Similar News