ಜೂ.25ರಂದು ರೋಹಿತ್ ಚಕ್ರತೀರ್ಥ ನಾಗರಿಕ ಸನ್ಮಾನ ಕಾರ್ಯಕ್ರಮ; ಮುತ್ತಿಗೆ ಹಾಕಲು ದೇಶಪ್ರೇಮಿ ಸಂಘಟನೆಗಳ ಒಕ್ಕೂಟ ನಿರ್ಧಾರ

Update: 2022-06-24 12:30 GMT

ಮಂಗಳೂರು : ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ನಾರಾಯಣ ಗುರು, ಕುವೆಂಪು, ಬಾಬಾ ಸಾಹೇಬ್ ಅಂಬೇಡ್ಕರ್, ಕಯ್ಯಾರ ಕಿಂಞ್ಞಣ್ಣ ರೈ ಮುಂತಾದ ಖ್ಯಾತನಾಮರನ್ನು ಅವಮಾನಿಸಿದ, ಸಾಮಾಜಿಕ ಜಾಲತಾಣಗಳಲ್ಲಿ ಮಹಾನ್ ಚೇತನರು, ಸಾಹಿತಿ ಬರಹಗಾರರನ್ನು ಹೀನವಾಗಿ ನಿಂದಿಸುವ ರೋಹಿತ್ ಚಕ್ರತೀರ್ಥನಿಗೆ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆಯ ಸೇವಾಂಜಲಿ ಟ್ರಸ್ಟ್ ಸಹಯೋಗದಲ್ಲಿ ನಾಗರಿಕ ಸನ್ಮಾನ ಏರ್ಪಡಿಸಿರುವುದು ಹಾಗೂ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿವಿ ಕುಲಪತಿ ಯಡಪಡಿತ್ತಾಯ ವಹಿಸಿರುವುದಕ್ಕೆ ‘ದೇಶಪ್ರೇಮಿ ಸಂಘಟನೆಗಳ ಒಕ್ಕೂಟ’ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಈ ಸನ್ಮಾನ ಕಾರ್ಯಕ್ರಮವನ್ನು ರದ್ದುಪಡಿಸಬೇಕು ಒತ್ತಾಯಿಸಿದ್ದು, ಜೂ.25ರಂದು ಸಮಾನ ಮನಸ್ಕ ಸಂಘಟನೆಗಳು ನಾಗರಿಕರ ಸಹಯೋಗದೊಂದಿಗೆ ಬೃಹತ್ ಮೆರವಣಿಗೆಯಲ್ಲಿ ತೆರಳಿ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ನಗರದ ವಿಕಾಸ ಕಚೇರಿಯಲ್ಲಿ ಶುಕ್ರವಾರ ನಡೆದ ’ದೇಶಪ್ರೇಮಿ ಸಂಘಟನೆಗಳ ಒಕ್ಕೂಟ’ದ ತುರ್ತು ಸಭೆ ನಿರ್ಧರಿಸಿದೆ.

ನಾಡಿನ ಇತಿಹಾಸವನ್ನು ವಿಕೃತವಾಗಿ ತಿರುಚಲು, ಶ್ರೇಣೀಕೃತ ಜಾತಿ ಶ್ರೇಷ್ಟತೆಯನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಿರುವ ರೋಹಿತ್ ಚಕ್ರತೀರ್ಥ ವಿರುದ್ಧ ಕರ್ನಾಟಕದ ಉದ್ದಗಲಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ನಾರಾಯಣ ಗುರು, ಕಯ್ಯಾರ ಕಿಂಞ್ಞಣ್ಣ ರೈಗಳ ಮಹತ್ವವನ್ನು ಪಠ್ಯಪುಸ್ತಕದಲ್ಲಿ ಗೌಣಗೊಳಿಸಲು ಯತ್ನಿಸಿರುವುದು ಕರಾವಳಿ ಜಿಲ್ಲೆಗಳಲ್ಲೂ ಅಸಮಾಧಾನಕ್ಕೆ ಕಾರಣವಾಗಿದೆ. ಎಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್ ಮಂಗಳೂರಿನಲ್ಲಿ ಚಕ್ರತೀರ್ಥಗೆ ನಾಗರಿಕ ಸನ್ಮಾನ ಏರ್ಪಡಿಸಿರುವುದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವಿ ಕುಲಪತಿ ವಹಿಸಲು ಒಪ್ಪಿರುವುದು ಮಂಗಳೂರಿನ ನಾಗರಿಕರನ್ನು ತಲೆ ತಗ್ಗಿಸುವಂತೆ ಮಾಡಿದೆ. ವಿವಿ ಕುಲಪತಿ ಯಡಪಡಿತ್ತಾಯರು ನಾರಾಯಣ ಗುರು, ಕುವೆಂಪು, ಅಂಬೇಡ್ಕರ್ ವಿರೋಧಿಯಾಗಿರುವ ಚಕ್ರತೀರ್ಥರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು, ನಾಗರಿಕ ಸನ್ಮಾನವನ್ನು ಆಯೋಜಕರು ರದ್ದುಗೊಳಿಸಬೇಕು ಎಂದು ಸಭೆ ಆಗ್ರಹಿಸಿದೆ.

ಜೂ.25ರ ಸಂಜೆ 4.30ಕ್ಕೆ ಸಿಟಿ ಸೆಂಟರ್ ಮಾಲ್ ಸಮೀಪ ಸಮಾನ ಮನಸ್ಕ ಸಂಘಟನೆಗಳು, ನಾಗರಿಕರು ಒಟ್ಟು ಸೇರಿ ಅಲ್ಲಿಂದ ಕಾರ್ಯಕ್ರಮ ನಡೆಯುವ ಡೊಂಗರಕೇರಿ ಕೆನರಾ ಹೈಸ್ಕೂಲ್‌ಗೆ ಮೆರವಣಿಗೆಯಲ್ಲಿ ತೆರಳಲು ಸಭೆ ನಿರ್ಧರಿಸಿದೆ.

ಡಿವೈಎಫ್‌ಐ ರಾಜ್ಯಾಧ್ಯಕ್ಷ  ಮುನೀರ್ ಕಾಟಿಪಳ್ಳ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಎ.ಜಿ ಹೆಗ್ಡೆ, ದಲಿತ ನಾಯಕ ಎಂ. ದೇವದಾಸ್, ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್, ಸಿಪಿಎಂ ಮುಖಂಡ ಯಾದವ ಶೆಟ್ಟಿ, ಕಾಂಗ್ರೆಸ್ ಮುಖಂಡ ಪ್ರಕಾಶ್ ಸಾಲ್ಯಾನ್, ಸಿಐಟಿಯು ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಸಾಮರಸ್ಯ ಮಂಗಳೂರಿನ ಮಂಜುಳಾ ನಾಯಕ್, ಸಮರ್ಥ್ ಭಟ್, ಕಾರ್ಪೊರೇಟರ್ ಲತೀಫ್ ಕಂದಕ್, ಡಿವೈಎಫ್‌ಐ ಮುಖಂಡರಾದ ಬಿಕೆ ಇಮ್ತಿಯಾಝ್,  ಸಂತೋಷ್ ಬಜಾಲ್, ಮನೋಜ್ ವಾಮಂಜೂರು, ಯುವ ಕಾಂಗ್ರೆಸ್‌ನ ಇಸ್ಮಾಯಿಲ್, ಫಯಾಝ್, ಜೆಡಿಎಸ್ ಮುಖಂಡರಾದ ಸುಮತಿ ಎಸ್. ಹೆಗ್ಡೆ, ಅಲ್ತಾಫ್ ತುಂಬೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News