ಶಿಥಿಲಾವಸ್ಥೆಯ ನೆಪ: ಬಳಕುಂಜೆ - ಪಲಿಮಾರು ಸೇತುವೆ ಬಂದ್
► ಸೇತುವೆ ಶೀಘ್ರ ದುರಸ್ತಿ ಅಥವಾ ಹೊಸ ಸೇತುವೆ ನಿರ್ಮಿಸಲು ಗ್ರಾಮಸ್ಥರ ಆಗ್ರಹ ► ನ್ಯಾಯವಾದಿ ಉಳೆಪಾಡಿ, ಮುನೀರ್ ಕಾಟಿಪಳ್ಳ ನೇತೃತ್ವದ ನಿಯೋಗ ಸ್ಥಳಕ್ಕೆ ಭೇಟಿ
ಮುಲ್ಕಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಂಪರ್ಕ ಕೊಂಡಿಯಾಗಿರುವ ಲೋಕೋಪಯೋಗಿ ಇಲಾಖೆ 45 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಬಳ್ಕುಂಜೆ - ಪಲಿಮಾರು ಸೇತುವೆ ಸಂಚಾರಕ್ಕೆ ಮುಚ್ಚಿ ಎರಡು ವರ್ಷ ಕಳೆದಿದ್ದು, ತಕ್ಷಣ ಸೇತುವೆಯ ದುರಸ್ತಿ ಅಥವಾ ಹೊಸ ಸೇತುವೆ ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸ್ಥಳೀಯರ ವಿನಂತಿಯಂತೆ ಹೋರಾಟಗಾರ ಮುನೀರ್ ಕಾಟಿಪಳ್ಳ, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ, ಶ್ರೀನಾಥ್ ಕುಲಾಲ್ ನೇತೃತ್ವದ ನಿಯೋಗವು ಸೋಮವಾರ ಶಾಂಭವಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಪ್ರಸ್ತುತ ಶಿಥಿಲಾವಸ್ಥೆಯಲ್ಲಿರುವ ಬಳ್ಕುಂಜೆ - ಪಲಿಮಾರು ಸೇತುವೆ ಪರಿಶೀಲನೆ ನಡೆಸಿತು.
ಈ ಸೇತುವೆ ದುರ್ಬಲಗೊಂಡಿದೆ ಎಂಬ ಕಾರಣ ಮುಂದಿಟ್ಟು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾಡಳಿತ ಲೋಕೋಪಯೋಗಿ ಇಲಾಖೆಗೆ ಸೇರಿದ ಈ ಪ್ರಮುಖ ರಸ್ತೆಯ ಸೇತುವೆಯನ್ನು ಮುಚ್ಚಿಸಿದೆ. ಲಘು ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ಒದಗಿಸಿದೆ. ಸೇತುವೆಯಲ್ಲಿ ಘನವಾಹನ ಓಡಾಟ ನಿರ್ಬಂಧಿಸುವ ಆದೇಶ ಹೊರಡಿಸುವ ಸಂದರ್ಭ ಈ ಸೇತುವೆಯನ್ನು ಶೀಘ್ರ ದುರಸ್ತಿಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುವ, ಅದೇ ಸಂದರ್ಭ ಹೊಸ ಸೇತುವೆ ನಿರ್ಮಿಸುವ ಕುರಿತು ಉಲ್ಲೇಖಿಸಲಾಗಿದೆ ಎಂದು ಜಿಲ್ಲಾಡಳಿತದ ಆದೇಶವನ್ನು ನೆನಪಿಸಿದ ನಿಯೋಗವು ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಿ ಎರಡು ವರ್ಷ ಕಳೆದರೂ ಸೇತುವೆಯ ದುರಸ್ತಿಯನ್ನೂ ನಡೆಸಿಲ್ಲ, ಹೊಸ ಸೇತುವೆ ನಿರ್ಮಾಣದ ಪ್ರಕ್ರಿಯೆಯೂ ಆರಂಭಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿತು.
ಕಿನ್ನಿಗೋಳಿ ಇನ್ನಾ ನಡುವಿನ ಗ್ರಾಮಗಳಾದ ಪಲಿಮಾರು, ಬಳ್ಕುಂಜೆ, ಕರ್ನಿರೆ ಸಹಿತ ಹಲವು ಊರಿನ ಗ್ರಾಮಸ್ಥರು ತೀರಾ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪ್ರಯಾಣಿಕರ ಬಸ್ಸುಗಳ ಓಡಾಟವನ್ನು ನಿರ್ಬಂಧಿಸಿರುವುದರಿಂದ ವಿದ್ಯಾರ್ಥಿಗಳು ಹತ್ತಾರು ಕಿ.ಮೀ. ಸುತ್ತಿಬಳಸಿ ಶಾಲಾ ಕಾಲೇಜುಗಳಿಗೆ ತಲುಪುತ್ತಿದ್ದಾರೆ. ಕಾರ್ಮಿಕರು, ದುಡಿಯುವ ಜನರು ದುಬಾರಿ ದರ ತೆತ್ತು ಆಟೋಗಳಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಒಟ್ಟಾರೆ ಇವರ ಕಷ್ಟ ಇಲ್ಲಿ ಕೇಳುವವರಿಲ್ಲ. ಸೇತುವೆ ದಕ್ಷಿಣ ಕನ್ನಡ ಜಿಲ್ಲಾಡಳಿತದ ಅಧೀನದಲ್ಲಿ ಇರುವುದರಿಂದ ಅಪರ ಜಿಲ್ಲಾಧಿಕಾರಿಗಳಲ್ಲಿ ವಿಚಾರಿಸಿದರೆ ದುರಸ್ತಿ, ಹೊಸ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ಯಾವುದೇ ಬೆಳವಣಿಗೆಗಳು ನಡೆದಿಲ್ಲ ಎಂದು ಉತ್ತರಿಸಿದರು ಎಂದು ನಿಯೋಗ ತಿಳಿಸಿದೆ.
ಬಸ್ಸು ಸಹಿತ ಘನವಾಹನಗಳ ಓಡಾಟಕ್ಕೆ ಅವಕಾಶ ಆಗದಂತೆ ಲಘುವಾಹನಗಳ ಸಂಚಾರಕ್ಕೆ ಮಾತ್ರ ಸ್ಥಳಾವಕಾಶ ನೀಡಿ ಸೇತುವೆಗೆ ಅಡ್ಡಲಾಗಿ ಕಲ್ಲುಗಳನ್ನು ಕಟ್ಟಿದ್ದರೂ, ಮಿನಿ ಲಾರಿಗಳಲ್ಲಿ ಅತಿ ಭಾರದ ಕೆಂಪು ಕಲ್ಲುಗಳ ಸಾಗಾಟ, ಮರಳು ಸಾಗಾಟ ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತಿದೆ. ಇದಕ್ಕಿಂತ ಕಡಿಮೆ ಭಾರದ ಪ್ರಯಾಣಿಕರ ಬಸ್ಸುಗಳಿಗೆ ಮಾತ್ರ ಅವಕಾಶ ನಿರಾಕರಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಇದೇ ರೀತಿಯಲ್ಲಿ ಬಿರುಕುಗಳು ಕಂಡು ಬಂದ ಅಡ್ಡೂರು, ಪೊಳಲಿ ಸೇತುವೆ, ಮರವೂರು ಸೇತುವೆಗಳಲ್ಲಿ ದುರಸ್ತಿ ನಡೆಸಿ ವಾಹನ ಸಂಚಾರಕ್ಕೆ ಅವಕಾಶ ಒದಗಿಸಲಾಗಿತ್ತು. ಕೂಳೂರು ಕಮಾನು ಸೇತುವೆಯನ್ನೂ ಮುಚ್ಚಿ ತಾತ್ಕಾಲಿಕವಾಗಿ ಸಂಚಾರಕ್ಕೆ ಅವಕಾಶ ಕೊಡಲಾಗಿದೆ. ಅದೇ ಸಂದರ್ಭದಲ್ಲಿ ಇಲ್ಲೆಲ್ಲಾ ಹೊಸ ಸೇತುವೆಯ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಫಲಿಮಾರು ಬಳ್ಕುಂಜೆಯಲ್ಲಿ ಮಾತ್ರ ದುರಸ್ತಿಯೂ ಇಲ್ಲ, ಹೊಸ ಸೇತುವೆಯೂ ಇಲ್ಲ, ಸಂಚಾರವೂ ಇಲ್ಲ ಎಂಬಂತಾಗಿದೆ. ಈ ಸೇತುವೆಯ ಎರಡೂ ಬದಿಗಳಲ್ಲಿ ಬಿಜೆಪಿ (ಕಾಪು, ಮೂಲ್ಕಿ ಮೂಡಬಿದ್ರೆ ಕ್ಷೇತ್ರ ಗಳು) ಶಾಸಕರು ಇದ್ದಾರೆ. ಅವರುಗಳು ಎರಡು ವರ್ಷಗಳಾದರು ಈ ಸೇತುವೆಯ ಕುರಿತು ಗಮನ ಹರಿಸಿಲ್ಲ, ಸ್ಥಳೀಯವಾಗಿ ವಿರೋಧ ಪಕ್ಷ ಆಗಿರುವ ಕಾಂಗ್ರೆಸ್ ನ ಮುಖಂಡರೂ ಈ ಗ್ರಾಮಸ್ಥರ ಸಮಸ್ಯೆಯ ಕುರಿತು ಧ್ವನಿ ಎತ್ತಿಲ್ಲ ಎಂದು ದೂರಿದ್ದಾರೆ.
ಇಲ್ಲಿನ ಸಮಸ್ಯೆಗಳ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದು ಜಿಲ್ಲಾಡಳಿತದ ಗಮನಕ್ಕೆ ತರಲಾಗಿದ್ದು, ಸಂಬಂಧ ಪಟ್ಟ ಅಧಿಕಾರಿಗಳ ಬಳಿ ನಿಯೋಗ ತೆರಳುವುದು. ಹೊಸ ಸೇತುವೆ ನಿರ್ಮಾಣವಾಗುವವರೆಗೆ ಈಗಿರುವ ಸೇತುವೆಯನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂಬ ಗ್ರಾಮಸ್ಥರ ಬೇಡಿಕೆಯ ಜೊತೆ ನಿಲ್ಲುವುದಾಗಿ ನಿಯೋಗವು ನಿರ್ಧರಿಸಿದೆ.
ಹೋರಾಟ, ಪ್ರತಿಭಟನೆ ಅಗತ್ಯಬಿದ್ದಲ್ಲಿ ಸಮಾನ ಮನಸ್ಕರ ಬೆಂಬಲ ಪಡೆದು ಗ್ರಾಮಸ್ಥರ ನೇತೃತ್ವದಲ್ಲಿ ಮುಂದುವರಿಯುವುದು ಎಂದು ನಿಯೋಗವು ಗ್ರಾಮಸ್ಥರ ಸಮ್ಮುಖದಲ್ಲಿ ನಡೆಸಿದ ಸಭೆಯಲ್ಲಿ ನಿರ್ಧರಿಸಿತು.
ಸೇತುವೆ ಮುಚ್ಚಿರುವ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಸೇತುವೆಯ ಒಂದು ಪಿಲ್ಲರ್ ಮುರಿದಿದೆ. ಹಾಗಾಗಿ ಘನ ವಾಹನ ಸಂಚಾರ ನಿಷೇಧಿಸಲಾಗಿದೆ. ಇಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು. ಹೊಸ ಸೇತುವೆ ಮಾಡುವವರೆಗೆ ಅದನ್ನು ಮುಚ್ಚಿ ಸಾವಿರಾರು ಗ್ರಾಮಸ್ಥರಿಗೆ ತೊಂಡರೆ ನೀಡುವ ಬದಲು ಶಿಥಿಲಾವಸ್ಥೆಯಲ್ಲಿರುವ ಸೇತುವೆಯನ್ನು ದುರಸ್ತಿ ಮಾಡಿಕೊಡಬೇಕು. ಇಲ್ಲಿನ ಸ್ಥಳೀಯರಿಗೆ ತುರ್ತು ಆರೋಗ್ಯ ಸಮಸ್ಯೆಗಳಿಗೆ ಮಣಿಪಾಲ ಕೆಎಂಸಿಯನ್ನು ಆಶ್ರಯಿಸುತ್ತಿದ್ದಾರೆ. ಶಿಕ್ಷಣಕ್ಕಾಗಿ ಮಣಿಪಾಲ, ನಿಟ್ಟೆ ವಿವಿಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವವರೇ ಹೆಚ್ಚು. ಪ್ರಸ್ತುತ ಸೇತುವೆ ಮುಚ್ಚಿರುವುದರಿಂದ ಹಲವು ಕಿ.ಮೀ. ಸುತ್ತುವರಿದು ಕಿನ್ಮಿಗೋಳಿ, ಮುಲ್ಕಿಯಾಗಿ ಮಣಿಪಾಲಕ್ಕೆ ಹೋಗಬೇಕಾಗಿದೆ. ಈ ಸಮಸ್ಯೆಯಿಂದಾಗಿ ಉಡುಪಿ- ಮಂಗಳೂರು ಬಸ್ ಸಂಚಾರ ನಿಲ್ಲಿಸಲಾಗಿದ್ದು, ಎರಡೂ ಕಡೆಯ ಬಸ್ಗಳು ಸೇತುವೆಯ ಇಕ್ಕೆಲದಲ್ಲಿ ಪ್ರಯಾಣಿಕರನ್ನು ಇಳಿಸಿ ಹಿಂದಿರುಗುತ್ತಿದೆ. ಇದರಿಂದಾಗಿ ಈ ಭಾಗದ ವಿದ್ಯಾರ್ಥಿಗಳು, ಕೂಲಿ ಕೆಲಸಗಾರರು ಸೇರಿದಂತೆ ಎಲ್ಲಾ ವರ್ಗದವರಿಗೆ ತೊಂದರೆಗಳಾಗುತ್ತಿದೆ. ಶೀಘ್ರವಾಗಿ ಕುಸಿದಿರುವ ಒಂದು ಪಿಲ್ಲರ್ ಸರಿಪಡಿಸಬೇಕು ಅಥವಾ ಕೈಗಾರಿಕೆಗಳಿಗಾಗಿ ಕಾಯದೆ ಹೊಸ ಸೇತುವೆ ನಿರ್ಮಾಣ ಮಾಡಬೇಕು.
-ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ