ಬೆಂಗಳೂರು: ಅಗ್ನಿಪಥ್ ಯೋಜನೆ ವಿರೋಧಿಸಿ ಯುವ ಕಾಂಗ್ರೆಸ್ ಸದಸ್ಯರಿಂದ ರಾಜಭವನಕ್ಕೆ‌ ಮುತ್ತಿಗೆ ಯತ್ನ

Update: 2022-06-24 12:30 GMT

ಬೆಂಗಳೂರು, ಜೂ.24: ದೇಶದ ಯುವಕರಲ್ಲಿ ಅಶಾಂತಿಯನ್ನು ಮೂಡಿಸುತ್ತಿರುವ ಕೇಂದ್ರ ಸರಕಾರದ ಅವೈಜ್ಞಾನಿಕ ಅಗ್ನಿಪಥ್ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿ ಯುವ ಕಾಂಗ್ರೆಸ್ ಸದಸ್ಯರು ಶುಕ್ರವಾರ ರಾಜಭವನ ಮುತ್ತಿಗೆ ಚಳುವಳಿ ನಡೆಸಿ, ಆಕ್ರೋಶ ಹೊರಹಾಕಿದರು.

ನಗರದ ಫ್ರೀಡಂಪಾರ್ಕ್ ಮೈದಾನದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಬಿಜೆಪಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಅಗ್ನಿಪಥ್ ಯೋಜನೆಯನ್ನು ಕೈ ಬಿಡುವಂತೆ ಒತ್ತಾಯಿಸಿದರು.
‘ಬಿಜೆಪಿ ಸರಕಾರದ ಅಗ್ನಿಪಥ್ ಯೋಜನೆ ಯುವಕರ ಭವಿಷ್ಯಕ್ಕೆ ಮಾರಕವಾಗಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅದನ್ನು ಜಾರಿಗೊಳಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇದು ದೇಶದಲ್ಲಿ ದ್ವೇಷ ರಾಜಕಾರಣವನ್ನು ಹಾಗೂ ಅಭದ್ರತೆ ಸೂಚಿಸುತ್ತಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು. 

‘ಅಗ್ನಿಪಥ ಯೋಜನೆ ಅವೈಜ್ಞಾನಿಕವಾಗಿದ್ದು, ನಾಲ್ಕು ವರ್ಷಕ್ಕೆ ಮಾತ್ರ ಸೇನೆಗೆ ನೇಮಕಾತಿ ಮಾಡಲಾಗುತ್ತಿದೆ. ನಾಲ್ಕು ವರ್ಷ ಸೇನೆಯಿಂದ ಹೊರಬಂದ ಬಳಿಕ ಅವರಿಗೆ ಪಿಂಚಣಿ ಇರುವುದಿಲ್ಲ. ಬಳಿಕ ಅಗ್ನಿವೀರರ ಭವಿಷ್ಯ ಏನು’ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
‘ಕೇಂದ್ರ ಸರಕಾರವು ಇದಕ್ಕೂ ಮುನ್ನ ಕೃಷಿ ಕಾಯ್ದೆ ಮೂಲಕ ದೇಶದ ಅನ್ನದಾತ ರೈತರನ್ನು ಬಲಿ ಕೊಡಲು ಸಂಚು ರೂಪಿಸಿತ್ತು. ಈಗ ಅಗ್ನಿಪಥ್ ಎಂಬ ಅವೈಜ್ಞಾನಿಕ ಯೋಜನೆ ಮುನ್ನಲೆಗೆ ತಂದು ದೇಶದ ಯುವಕರ ಭವಿಷ್ಯದ ಬಲಿ ಕೊಡಲು ಚಿಂತಿಸುತ್ತಿದೆ’ ಎಂದು ಪ್ರತಿಭಟನಾಕಾರರು ದೂರಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಕೃಷ್ಣ ಅಲ್ವಾರ್, ನಲಪಾಡ್ ಸೇರಿದಂತೆ ಪ್ರಮುಖರಿದ್ದರು.

ಸೈನ್ಯವೂ ಖಾಸಗೀಕರಣ

ಅಗ್ನಿಪಥ್ ಯೋಜನೆ ಜಾರಿಯಿಂದ ದೇಶದ ಯುವಕರು ಅತಂತ್ರರಾಗುತ್ತಾರೆ. ಈಗಾಗಲೇ ಸರಕಾರಿ ಒಡೆತನದ ರೈಲ್ವೆ, ವಿಮಾನ ನಿಲ್ದಾಣ, ಬ್ಯಾಂಕ್ ಹಾಗೂ ಇತರೆ ವಲಯವನ್ನು ಖಾಸಗಿಯವರಿಗೆ ವ್ಯವಸ್ಥಿತವಾಗಿ ಒಪ್ಪಿಸಲಾಗಿದೆ. ಈಗ ಬಿಜೆಪಿ ಸರಕಾರ ಸೈನ್ಯದ ನೇಮಕಾತಿಯನ್ನೂ ಖಾಸಗೀಕರಣ ಮಾಡಲು ಹೊರಟಿದೆ. ಕೇಂದ್ರ ಸರಕಾರವು ದೇಶದ ಗಡಿ ಕಾಯುವ ಸೈನಿಕರ ಹಿತ ಕಾಪಾಡುವ ಬದಲು ಅವರನ್ನು ಅವಮಾನಿಸಲು ಹೊರಟಿದೆ. ಅಗ್ನಿಪಥ ಯೋಜನೆಯನ್ನು ಕೈಬಿಟ್ಟು, ಈಗಿರುವ ಸೇನಾ ನೇಮಕಾತಿ ಯೋಜನೆ ಅಡಿಯಲ್ಲಿಯೇ ನೇಮಕಾತಿ ನಡೆಸಬೇಕು. ಇಲ್ಲವಾದಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗುತ್ತದೆ.

-ಮಹಮ್ಮದ್ ನಲಪಾಡ್, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News