ಬಿಜೆಪಿ ಕಚೇರಿ-ಕೇಶವಕೃಪದಲ್ಲಿ ಬಿಬಿಎಂಪಿ ವಾರ್ಡ್ ಮರುವಿಂಗಡನೆ ಪ್ರಕ್ರಿಯೆ: ರಾಮಲಿಂಗಾರೆಡ್ಡಿ ಆರೋಪ

Update: 2022-06-24 12:52 GMT

ಬೆಂಗಳೂರು, ಜೂ.24: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ವಾರ್ಡ್ ಮರು ವಿಂಗಡಣೆ ಪ್ರಕ್ರಿಯೆಯೂ ಬಿಜೆಪಿ ಪಕ್ಷದ ಕಚೇರಿ, ಕೇಶವಕೃಪ, ಬಿಜೆಪಿ ಸಂಸದರು, ಶಾಸಕರ ಕಚೇರಿಯಲ್ಲಿ ನಿಗದಿ ಮಾಡಲಾಗಿದೆ. ಇವರು ಕೊಟ್ಟ ವರದಿಗೆ ಬಿಬಿಎಂಪಿ ಮುಖ್ಯ ಆಯುಕ್ತರು ಮುದ್ರೆ ಒತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದರು.

ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಾರ್ಡ್ ಮರುವಿಂಗಡಣೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿಯ ಯಾವ ಪಾತ್ರವೂ ಇಲ್ಲ. ಜಂಟಿ ಆಯುಕ್ತರು, ಆಯುಕ್ತರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ ಎಂದು ದೂರಿದರು.

ವಾರ್ಡ್ ಮರುವಿಂಗಡನೆಯ ವರದಿಯಲ್ಲಿ 11 ಸಭೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ವಾರ್ಡ್ ಮರುವಿಂಗಡನೆ ಶೇ.100ರಷ್ಟು ವೈಜ್ಞಾನಿಕವಾಗಿ ಆಗಿಲ್ಲ. ಬೇಕಾದರೆ ನೀವು ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಅಧಿಕಾರಿಗಳ ಬಳಿ ಹೋಗಿ ನೀವು ವಾರ್ಡ್ ಮರುವಿಂಗಡಣೆ ಮಾಡಿದ್ದೀರಾ ಎಂದು ಕೇಳಿ ನೋಡಿ. ಎಲ್ಲರೂ ನಮಗೆ ಆ ಬಗ್ಗೆ ಗೊತ್ತಿಲ್ಲ ಅಂತಲೇ ಹೇಳುತ್ತಾರೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಬಿಬಿಎಂಪಿಗೆ ಈಗ ಚುನಾವಣೆ ನಡೆದರೆ ಕಾಂಗ್ರೆಸ್ ಪಕ್ಷಕ್ಕೆ ಕಷ್ಟವಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಯನ್ನು ಇಂದಲ್ಲ ನಾಳೆ ಮಾಡಲೇಬೇಕು. ಇದನ್ನು ಎಷ್ಟು ವರ್ಷ ಮುಂದಕ್ಕೆ ಹಾಕಲು ಸಾಧ್ಯ? ಆದರೆ ವಾಸ್ತವ ಸ್ಥಿತಿ ಏನಾಗಿದೆ ಎಂದು ಹೇಳುತ್ತಿದ್ದೇನೆ. ನೀವು ಇದನ್ನು ಪರಿಶೀಲಿಸಬೇಕಾದರೆ ಅಧಿಕಾರಿಗಳನ್ನೇ ಕೇಳಿ ಎಂದರು.

ಈ ಮರುವಿಂಗಡಣೆ ಪ್ರಕ್ರಿಯೆ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಮಲಿಂಗಾರೆಡ್ಡಿ, ಸದ್ಯ ನಮಗೆ ವಾರ್ಡ್ ಮರುವಿಂಗಡಣೆ ಪ್ರತಿ ಸಿಗಬೇಕು. ನಂತರ ಅವುಗಳನ್ನು ಪರಿಶೀಲಿಸಿ ಆಕ್ಷೇಪಣೆ ವ್ಯಕ್ತಪಡಿಸುತ್ತೇವೆ. ಅದಾದ ನಂತರ ನ್ಯಾಯಾಲಯದ ಮೆಟ್ಟಿಲೇರುವ ವಿಚಾರ. ಅವರು ಎಲ್ಲವನ್ನು ಸರಿಯಾಗಿ ಮಾಡಿದ್ದರೆ ನಾವು ಒಪ್ಪುತ್ತೇವೆ. ಇಲ್ಲದಿದ್ದರೆ ಆಕ್ಷೇಪಣೆ ಹಾಕುತ್ತೇವೆ. ನಂತರ ಏನು ಮಾಡಬೇಕು ಎಂದು ನಿರ್ಧರಿಸುತ್ತೇವೆ ಎಂದರು.

ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ವಾರ್ಡ್ ಹೆಚ್ಚಳ ಮಾಡಿಕೊಂಡು, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ವಾರ್ಡ್ ಕಡಿಮೆ ಮಾಡಿರುವ ತಂತ್ರಗಾರಿಕೆ ಏನು ಎಂದು ಸುದ್ದಿಗಾರರು ಕೇಳಿದಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರ ತಂತ್ರಗಾರಿಕೆ ಬಗ್ಗೆ ನೀವು ಅವರನ್ನೇ ಕೇಳಬೇಕು. ಅವರು ಕ್ಷೇತ್ರ ಹೆಚ್ಚಾಗಿ ಮಾಡಿಕೊಂಡರೆ ಗೆಲ್ಲುತ್ತೇವೆ ಎಂದು ಭಾವಿಸಿದ್ದಾರೆ. ಇತ್ತೀಚೆಗೆ ನಡೆದ ಪರಿಷತ್ ಚುನಾವಣೆಯನ್ನೇ ನೋಡಿ. ನಮ್ಮದು ಒಂದೇ ಒಂದು ಸ್ಥಾನ ಇಲ್ಲದಿದ್ದರೂ 2 ಸ್ಥಾನ ಗೆದ್ದಿದೇವೆ. ಏನೇ ಮಾಡಿದರೂ ಬದಲಾವಣೆ ಗಾಳಿ ಬೀಸಿದರೆ ಎಲ್ಲರೂ ಉದುರಿ ಹೋಗುತ್ತಾರೆ ಎಂದು ತಿಳಿಸಿದರು.

ನೂತನ ವಾರ್ಡ್‍ಗಳ ಪಟ್ಟಿ ನೋಡಿದೆ. ಗಡಿಯ ಕುರಿತು ಸ್ಪಷ್ಟತೆ ಸಿಗುತ್ತಿಲ್ಲ. ಇದನ್ನು ಸರಕಾರ ಮುಗುಮ್ಮಾಗಿ ಇಟ್ಟಿದೆ. ನನ್ನ ಕ್ಷೇತ್ರದಲ್ಲಿರುವ ವಾರ್ಡ್‍ಗಳ ಪಟ್ಟಿ ನೋಡಿದ ನಂತರ ನನಗೆ ನನ್ನ ಕ್ಷೇತ್ರದ ವ್ಯಾಪ್ತಿ ಅಂದಾಜು ಸಿಗುತ್ತಿಲ್ಲ. ಇದರ ಪ್ರತಿ ಸಿಕ್ಕ ನಂತರ ನಮ್ಮ ಕ್ಷೇತ್ರದ ವ್ಯಾಪ್ತಿ ಎಷ್ಟಿದೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ನಂತರ ನಾವು ಎಲ್ಲೆಲ್ಲಿ ಲೋಪದೋಷಗಳಿವೆಯೋ ಆ ವಿಚಾರದಲ್ಲಿ ಆಕ್ಷೇಪವನ್ನು ಸಲ್ಲಿಸುತ್ತೇವೆ ಎಂದು ರಾಮಲಿಂಗಾರೆಡ್ಡಿ ಹೇಳಿದರು. 

ಈ ಹಿಂದೆ ಮರುವಿಂಗಡಣೆಯನ್ನು ಪಾಲಿಕೆಯಲ್ಲಿ ಮಾಡದೇ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಮಾಡುತ್ತಿದ್ದರು. ಈ ಬಾರಿ ಪಾಲಿಕೆ ಮುಖ್ಯ ಆಯುಕ್ತರನ್ನು ಮರುವಿಂಗಡಣೆ ಸಮಿತಿ ಮುಖ್ಯಸ್ಥರನ್ನಾಗಿ ಮಾಡಿ ಉಳಿದಂತೆ ಇಬ್ಬರು ಹಿರಿಯ ಅಧಿಕಾರಿಗಳನ್ನು ಸಂಚಾಲಕರನ್ನಾಗಿ ಮಾಡಿದ್ದಾರೆ. ಈ ಹಿಂದೆ ಮರು ವಿಂಗಡಣೆ ಮಾಡುವಾಗ ಒಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೆ ಅಲ್ಲಿ ಕಂದಾಯ ಕಚೇರಿಗೆ ರವಾನಿಸಿ, ಅಲ್ಲಿ ಅಧಿಕಾರಿಗಳು ಕೂತು ಮಾನದಂಡಗಳ ಆಧಾರದ ಮೇಲೆ ಗಡಿ ನಿಗದಿ ಮಾಡಿ, ಜನಸಂಖ್ಯೆ ಪ್ರಮಾಣ ನಿರ್ಧರಿಸಿ ನಂತರ ಅವರು ತಮ್ಮ ವರದಿ ಸಲ್ಲಿಸುತ್ತಿದ್ದರು ಎಂದು ಅವರು ತಿಳಿಸಿದರು. 

ಹೀಗೆ 198 ವಾರ್ಡ್‍ಗಳಿಂದಲೂ ವರದಿಗಳು ಬರುತ್ತಿದ್ದವು. ನಂತರ ಜಿಲ್ಲಾಧಿಕಾರಿಗಳು ಈ ವರದಿಗಳನ್ನು ಪರಿಶೀಲಿಸುತ್ತಿದ್ದರು. ಆದರೆ ಈ ಬಾರಿ ಕಂದಾಯ ಕಚೇರಿಗಳಿಗೆ ಇದು ಬರಲೇ ಇಲ್ಲ. ಪಾಲಿಕೆಯ ಯಾವ ಅಧಿಕಾರಿಗಳ ಗಮನಕ್ಕೂ ಬರಲಿಲ್ಲ ಎಂದು ರಾಮಲಿಂಗಾರೆಡ್ಡಿ ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News