ರೋಹಿತ್ ಚಕ್ರತೀರ್ಥರನ್ನು ಸನ್ಮಾನಿಸಿದರೆ ತಕ್ಕ ಪಾಠ: ಕುದ್ರೋಳಿ ದೇವಾಲಯದ ಕೋಶಾಧಿಕಾರಿ ಪದ್ಮರಾಜ್ ಎಚ್ಚರಿಕೆ

Update: 2022-06-24 14:48 GMT

ಮಂಗಳೂರು : ರಾಜ್ಯದ 10ನೆ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಿಂದ ಬ್ರಹ್ಮಶ್ರೀ ನಾರಾಯಾಣ ಗುರು ಅವರ ವಿಚಾರವನ್ನು ಕೈ ಬಿಟ್ಟ ಪಠ್ಯಪುಸ್ತಕರ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥರನ್ನು ಆಡಳಿತ ಪಕ್ಷದ ಶಾಸಕರೊಬ್ಬರ ಅಧ್ಯಕ್ಷತೆಯ ಸೇವಾಂಜಲಿ ಟ್ರಸ್ಟ ಮೂಲಕ ‘ನಾಗರಿಕ ಸನ್ಮಾನ’ ಕಾರ್ಯಕ್ರಮ ಆಯೋಜಿಸಿದರೆ ತಕ್ಕ ಪಾಠ ಕಲಿಸಲಾಗುವುದು ಎಂದು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯದ ಕೋಶಾಧಿಕಾರಿ ಪದ್ಮರಾಜ್ ಆರ್. ಎಚ್ಚರಿಕೆ ನೀಡಿದ್ದಾರೆ.

‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು ಬ್ರಹ್ಮಶ್ರೀ ನಾರಾಯಣ ಗುರು, ಬಸವಣ್ಣ, ಕುವೆಂಪು, ಕಯ್ಯಾರ ಕಿಂಞಣ್ಣ ರೈ ಮುಂತಾದ ಮಹನೀಯರ ವಿಷಯವನ್ನು ಪಠ್ಯದಿಂದ ಕೈ ಬಿಡಲಾಗಿದೆ. ಇದರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳು ವ್ಯಕ್ತವಾಗಿದೆ. ಜನರ ಆಕ್ರೋಶವನ್ನು ತಣಿಸುವ ಸಲುವಾಗಿ ರಾಜ್ಯ ಸರಕಾರ ತೇಪೆ ಹಚ್ಚುವ ಕೆಲಸ ಮಾಡುತ್ತಿವೆ.

ಇಂತಹ ಸಂದರ್ಭದಲ್ಲೇ ಆಡಳಿತ ಪಕ್ಷದ ಶಾಸಕರೊಬ್ಬರು ಅಧ್ಯಕ್ಷರಾಗಿರುವ ಸೇವಾಂಜಲಿ ಟ್ರಸ್ಟ್ ಮೂಲಕ ‘ನಾಗರಿಕ ಸನ್ಮಾನ’ ಆಯೋಜಿಸಿರುವುದು ಮತ್ತು ಮಂಗಳೂರು ವಿವಿಯ ಕುಲಪತಿ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವುದು ಅಚ್ಚರಿ ಹುಟ್ಟಿಸಿದೆ. ರೋಹಿತ್ ಚಕ್ರತೀರ್ಥರ ವಿರುದ್ಧ ನಾಡಿನೆಲ್ಲೆಡೆ ವಿರೋಧ ವ್ಯಕ್ತವಾಗುತ್ತಿರುವ ಈ ಸಂದರ್ಭ ಇದೆಲ್ಲಾ ಬೇಕಿತ್ತಾ? ಇವರ ಮನಸ್ಸಿನಲ್ಲಿ ಏನಿದೆ ಎಂಬುದು ಇದರಿಂದಲೇ ತಿಳಿಯಬಹುದಾಗಿದೆ ಎಂದು ಪದ್ಮರಾಜ್ ಆರ್. ಆಕ್ರೋಶ ವ್ಯಕ್ತಪಡಿಸಿದರು.

ಒಂದು ಪಕ್ಷದಲ್ಲಿರುವ ಬಿಲ್ಲವ ಸಮಾಜದ ನಾಯಕರ ಮೂಲಕ ಹೇಳಿಕೆ ಕೊಡಿಸಿ ಸಮಾಜದಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ. ಈ ಮಧ್ಯೆ ಆಡಳಿತ ಪಕ್ಷದ ಓರ್ವ ಶಾಸಕರು, ವಿವಿ ಕುಲಪತಿಯು ಇಂತಹ ತಪ್ಪು ಕೆಲಸ ಮಾಡಬಾರದು. ನಾರಾಯಣ ಗುರುವಿನ ಪಾಠ ಕೈಬಿಟ್ಟ ಬಗ್ಗೆ ನಾಡಿನ 60 ಲಕ್ಷ ಮಂದಿ ಬಿಲ್ಲವರು, ಈಡಿಗರು ತೀವ್ರ ಅಸಮಾಧಾನದಲ್ಲಿದ್ದಾರೆ ಮತ್ತು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಆದ ತಪ್ಪನ್ನು ಸರಿಪಡಿಸುವ ಬದಲು ಮತ್ತೆ ಮತ್ತೆ ಅದೇ ತಪ್ಪನ್ನು ಮಾಡಿದರೆ ಬಿಲ್ಲವರು ಮಾತ್ರವಲ್ಲ ಈಗಾಗಲೆ ಪಠ್ಯಪುಸ್ತಕದ ವಿಚಾರವಾಗಿ ಅಸಮಾಧಾನದಲ್ಲಿರುವ ಬಂಟರು, ಬಸವಣ್ಣ ಮತ್ತು ಕುವೆಂಪು ಅವರ ಅಭಿಮಾನಿಗಳು ತಕ್ಕ ಪಾಠ ಕಲಿಸಲಿದ್ದಾರೆ, ಅದಕ್ಕೆ ಸಿದ್ಧರಾಗಿರಿ ಎಂದು ಎಚ್ಚರಿಕೆ ನೀಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News